ಶೀರ್ಷಿಕೆಯನ್ನು ನೋಡಿದಾಗ ಏನಿದು ಸಮರ್ಥ ಭಾರತ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಭಾರತ ಮೊದಲಿನಿಂದಲೂ ಸಮರ್ಥವೇ. ಭಾರತದ ಸಾಧನೆ, ಸಮರ್ಥತೆಯನ್ನು ಭಾರತೀಯರೇ ಹೇಳುವುದರಲ್ಲಿ ಅತಿಶಯತೆಯೇನೂ ಇಲ್ಲ ಎನ್ನಿಸಬಹುದು. ಆದರೆ ವಿದೇಶೀಯರು ಭಾರತದ ಹಿರಿಮೆಯನ್ನು ಹೇಳುವ ಮೂಲಕ ಭಾರತ ಸಮರ್ಥ ಎಂದರೆ ಅದು ಎಲ್ಲರೂ ಹೆಮ್ಮೆಪಡುವಂತಹುದೇ. ಅಮೆರಿಕದ ಖ್ಯಾತ ಇತಿಹಾಸಕಾರ, ತತ್ವಜ್ಞಾನಿ ವಿಲ್ಡ್ಯುರಾಂಟ್ನ ಮಾತುಗಳನ್ನು ಗಮನಿಸೋಣ.
ಭಾರತ ವಿಶ್ವದ ನಾಗರಿಕತೆಯ ಮಾತೃಭೂಮಿ ಮತ್ತು ಸಂಸ್ಕೃತ ಯುರೋಪಿಯನ್ ಭಾಷೆಗಳ ತಾಯಿ. ನಮ್ಮ ತತ್ವಜ್ಞಾನದ ಮೂಲ ಸ್ರೋತವೂ ಅವಳೇ. ಅರಬ್ಬರ ಮೂಲಕ ಗಣಿತವನ್ನು ಹೇಳಿಕೊಟ್ಟ ಮಾತೆ ಭಾರತಿ. ಬುದ್ಧನ ಮೂಲಕ ಶಾಂತಿಯನ್ನು ಬೋಧಿಸಿದ ಗುರು. ಹಳ್ಳಿಗಳ ಮೂಲಕ ಸ್ವಾವಲಂಬನೆಯನ್ನು ತೋರಿಸಿದ ಮಾರ್ಗದರ್ಶಕಿ ಭಾರತವೇ. ಭಾರತಮಾತೆ ಸತ್ಯವಾಗಿಯೂ ಇಡೀ ವಿಶ್ವದ ಮಾತೆ!
ಮತ್ತೊಬ್ಬ ವಿದೇಶೀ ವಿದ್ವಾಂಸರಾದ ವಿಲಿಯಮ್ ಗಿಲ್ಬರ್ಟ್ ಹೀಗೆ ಹೇಳಿದ್ದಾರೆ ಮಾನವ ಸಂಸ್ಕೃತಿಯ ಇತಿಹಾಸದಲ್ಲಿ, ಎಲ್ಲ ಕ್ಷೇತ್ರಗಳಲ್ಲೂ ಭಾರತದ ಕೊಡುಗೆ ಅಪಾರ. ಗೃಹೋಪಯೋಗಿ ಕೋಳಿ ಸಾಕಣೆ, ಶುದ್ಧ ಅರಗು, ನಿಂಬೆ, ಹತ್ತಿ, ಸಕ್ಕರೆ, ದಾಲ್ಚಿನ್ನಿ, ಮೆಣಸು, ಚದುರಂಗ, ಪೋಲೋನಂತಹ ಕ್ರೀಡೆ, ಸೊನ್ನೆ-ದಶಮಾಂಶ ಪದ್ಧತಿ, ನೀತಿಕಥೆಗಳು ಇನ್ನೂ ಮುಂತಾದ ಅದ್ಭುತ ಕರಕುಶಲ ವಸ್ತುಗಳು ಮತ್ತು ತತ್ವಜ್ಞಾನದ ಚಿಂತನೆಗಳು, ಧಾರ್ಮಿಕ ವಿಚಾರಗಳು-ಇವೆಲ್ಲವೂ ಭಾರತದಿಂದಲೇ ಬಂದಿವೆ.
India what can it teaches ಕೃತಿಯನ್ನು ಪ್ರೊ|| ಮ್ಯಾಕ್ಸ್ಮುಲ್ಲರ್ ಭಾರತದ ಬಗ್ಗೆ ಬರೆದಿರುವುದು: ಇಡೀ ವಿಶ್ವದಲ್ಲಿ ಪ್ರಕೃತಿ ನೀಡಬಹುದಾದ ಎಲ್ಲ ಸಂಪತ್ತು ಸೌಂದರ್ಯಗಳಿಂದ ಕೂಡಿ ಸ್ವರ್ಗಸಮಾನವಾದ ದೇಶವೊಂದಿದ್ದರೆ ಅದು ಭಾರತ. ಮಾನವನ ಬೌದ್ಧಿಕ ಮಟ್ಟ ಅತ್ಯುನ್ನತವಾಗಿದ್ದು, ವಿಜ್ಞಾನದ ಅನೇಕ ಸಂಶಯಗಳಿಗೆ ಪರಿಹಾರ ನೀಡಿದ ದೇಶವಿದ್ದರೆ ಅದು ಭಾರತ. ಜೊತೆಗೆ ತನ್ನ ಪ್ರಭಾವದಿಂದ ಯುರೋಪಿಯನ್ನರ ಸಾಹಿತ್ಯ, ಗ್ರೀಕ್- ರೋಮನ್ನರ ಸಾಹಿತ್ಯವನ್ನು ಪರಿಪೂರ್ಣವಾಗಿ ಬೆಳೆಸಿದ ದೇಶವಿದ್ದರೆ ಅದು ಭಾರತ.
ಇನ್ನು ಪ್ರಸಿದ್ಧ ವಿದ್ವಾಂಸರಾದ ಲಾರ್ಡ್ ಮೆಕಾಲೆ ಕ್ರಿಸ್ತನ ಉಗಮವಾಗುವುದಕ್ಕಿಂತ ಮುಂಚೆ, ಯಾವಾಗ ಯುರೋಪಿಯನ್ನರು ಇನ್ನೂ ಬಣ್ಣ ಬಳಿದುಕೊಂಡು ಕಾಡಿನಲ್ಲಿ ಅಲೆಮಾರಿಗಳಾಗಿ ಬದುಕುತ್ತಿದ್ದರೋ, ಆ ಕಾಲದಲ್ಲಾಗಲೇ ಭಾರತದ ಮೂಲೆ ಮೂಲೆಯಲ್ಲಿಯೂ ನಾಗರಿಕತೆಯ ಔನತ್ಯ ವಿಜೃಂಭಿಸುತ್ತಿತ್ತು.
ಈ ಎಲ್ಲ ಹೇಳಿಕೆಗಳೂ ಭಾರತದ ಹಿರಿಮೆ ಗರಿಮೆಗಳನ್ನು ಸಮರ್ಥಿಸುತ್ತದೆ ನಿಜ. ಆದರೆ ಈಗ ಇದರ ಪ್ರಸ್ತಾಪ ಏಕೆ? ಮೇಲಿನ ಹೇಳಿಕೆಗಳು ವಿದೇಶಿಯರು ಭಾರತದ ಸಾಧನೆಗಳನ್ನು ಗುರುತಿಸಿ, ಭಾರತದತ್ತ ಮುಖಮಾಡುತ್ತಿದ್ದಾರೆ. ಆದರೆ ನಾವು, ವಿಶೇಷವಾಗಿ ಯುವಕರು ಭಾರತದಲ್ಲಿ ವಿದ್ಯೆಯನ್ನು ಗಳಿಸಿ ಪದವೀಧರರಾಗಿ, ಹಣಗಳಿಕೆ ಹಾಗೂ ವಿದೇಶೀ ವ್ಯಾಮೋಹಕ್ಕೆ ಒಳಗಾಗಿ ವಿದೇಶಗಳಲ್ಲಿ ನೆಲೆಸಿ, ತಮ್ಮ ಪ್ರತಿಭೆಯನ್ನು ವಿದೇಶಗಳಿಗೆ ಧಾರೆ ಎರೆಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಅಷ್ಟಕ್ಕೇ ಸೀಮಿತವಾಗದೆ ವಿದೇಶಿಯತೆಯನ್ನೆಲ್ಲಾ ಹೊಗಳುವ, ಭಾರತೀಯತೆಯನ್ನೂ ಮರೆಯುವ, ಕೆಲವೊಮ್ಮೆ ತಿರಸ್ಕಾರ ಭಾವದಿಂದ ಕಾಣುವ ಮನೋಭಾವ ಬೆಳೆಯುತ್ತಿದೆ. ಯುವಜನತೆ ನಮ್ಮ ಸಂಸ್ಕೃತಿಯ, ಸಾಧನೆಗಳ ಸತ್ವ, ಹಿರಿಮೆ-ಗರಿಮೆಗಳ ಪರಿಚಯವನ್ನು ಹೊಂದಿ ಭಾರತದ ಬಗ್ಗೆ ಅಭಿಮಾನವನ್ನು ಹೊಂದುವುದು ಇಂದಿನ ಅಗತ್ಯ. ಇಂತಹ ಒಂದು ಪ್ರಯತ್ನವನ್ನು ಶ್ರೀಯುತ ಚಮನ್ ಲಾಲ್ ಅವರು “India mother of us all” ಚಿಟಟ ಗ್ರಂಥದಲ್ಲಿ ಮಾಡಿದ್ದಾರೆ. ಈ ಗ್ರಂಥವನ್ನೂ ಸಂಗ್ರಹ ರೂಪದಲ್ಲಿ ಕನ್ನಡಕ್ಕೆ ವಿಶ್ವಮಾತೆ ಭಾರತಿ ಕೃತಿಯಲ್ಲಿ ಯುವ ಎಂಜಿನಿಯರಾದ ಶ್ರೀಯುತ ಭೀಮಸೇನ್ ಪುರೋಹಿತ್ ಅವರು ಪರಿಚಯಿಸಿದ್ದಾರೆ.
ಶಿಕ್ಷಕ ಯಾವಾಗಲೂ ಶಿಕ್ಷಕನೇ ತಾನೇ! ವಿಶ್ವಮಾತೆ ಭಾರತಿ ಕೃತಿಯನ್ನು ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಪರಿಚಯಿಸಿ, ತಲುಪಿಸುವ ಚಿಂತನೆಯು ಕೆಲವರು ನಿವೃತ್ತ ಶಿಕ್ಷಕರ ಮನಸ್ಸಿಗೆ ಬಂದಿತು. 2010 ರಲ್ಲಿ ಸ್ಥಾಪಿತವಾದ ಪ್ರತಿಭಾ ವಿಕಾಸ ಪ್ರತಿಷ್ಠಾನ ದ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮರ್ಥ ಭಾರತ ಶೀರ್ಷಿಕೆಯಲ್ಲಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿ 2014 ರಲ್ಲಿ ಸ್ವಾಮಿ ವಿವೇಕಾನಂದರನ್ನು ಕುರಿತಾದ ಮೊದಲ ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷೆಗೆ ದೊರೆತ ಪ್ರೋತ್ಸಾಹದಿಂದಾಗಿ ಸಮರ್ಥ ಭಾರತದ ಎರಡನೆಯ ಪರೀಕ್ಷೆಯನ್ನು ವಿಶ್ವಮಾತೆ ಭಾರತಿ ಕೃತಿಯನ್ನು ಆಧರಿಸಿ ಪ್ರಾಯೋಗಿಕವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಆಯ್ದ 12 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು. 2018 ರ ನವೆಂಬರ್ 17ರಂದು ನಡೆದ ಪರೀಕ್ಷೆಯಲ್ಲಿ 525 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೂರು ಬಹುಮಾನಗಳನ್ನು ರೂ 5೦೦೦/- ಪ್ರಥಮ ಬಹುಮಾನ, ರೂ 3೦೦೦/-ದ ದ್ವಿತೀಯ ಬಹುಮಾನ, ರೂ 2೦೦೦/- ತೃತೀಯ ಬಹುಮಾನವನ್ನು ನೀಡಲಾಯಿತು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ರೂ 5೦೦/- ರ ಸಮಾಧಾನಕರ ಬಹುಮಾನಗಳನ್ನು ಘೋಷಿಸಲಾಯಿತು.
ಬಹುಮಾನ ವಿತರಣಾ ಸಮಾರಂಭವನ್ನು 2019, ಜನವರಿ 19 ರಂದು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಬೆಂಗಳೂರಿನ ರಾಮಕೃಷ್ಣಮಠದ ಸ್ವಾಮಿಜಿ ರಘುರಾಮಾನಂದ ಜಿ ಮಹಾರಾಜ್ರವರು, ಖ್ಯಾತ ದಂತ ವೈದ್ಯರಾದ ಡಾ|| ಗಿರೀಶ್ ರಾವ್ ಹಾಗೂ ಹೆಣ್ಣುಮಕ್ಕಳ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಮಾಲಾ ಅತಿಥಿಗಳಾಗಿ ಪಾಲ್ಗೊಂಡು ಪ್ರತಿಷ್ಠಾನದ ಪ್ರಯತ್ನವನ್ನು ಶ್ಲಾಘಿಸಿ ವಿದ್ಯಾರ್ಥಿಗಳು ಭಾರತೀಯತೆಯ ಪರಿಚಯವನ್ನು ಪಡೆದುಕೊಂಡು ಭಾರತದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹಿತ ನುಡಿದರು.
ವಿಶ್ವಮಾತೆ ಭಾರತಿಗ್ರಂಥವನ್ನು ವಿದ್ಯಾರ್ಥಿಗಳಿಗೆ, ಯುವಕರಿಗೆ ಪರೀಕ್ಷೆಯ ಮೂಲಕ ಪರಿಚಯಿಸಲು ಆಸಕ್ತರಾದ ಶಿಕ್ಷಕರು, ಹೆಚ್ಚಿನ ಮಾಹಿತಿಗಾಗಿ ಪ್ರತಿಭಾ ವಿಕಾಸ ಪ್ರತಿಷ್ಠಾನ, ನಂ 1272, ೨೩ನೇ ಮುಖ್ಯರಸ್ತೆ, 24ನೇ ಅಡ್ಡರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು -560 070 ವಿಳಾಸವನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 9482014280, 7026721999, 080 26718680.