ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಕಾರ್ಯಾಗಾರ

ಮೌಲ್ಯಮಾಪನ ಬಹುದೊಡ್ಡ ವಿಚಾರವಾಗಿದ್ದು, ಅದನ್ನು ಬಹು ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ ಎಂದು ಬೆಂಗಳೂರಿನ ಶೇಷಾದ್ರಿಪುರನಲ್ಲಿರುವ ಸಂಘದ ಕಾರ್ಯಾಲಯ ಯಾದವಸ್ಮೃತಿಯಲ್ಲಿ ದಿನಾಂಕ 10-2-2019 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹಿಂದಿ ಶಿಕ್ಷಕರ ಕಾರ್‍ಯಾಗಾರದಲ್ಲಿ ಶೈಕ್ಷಿಕ್ ಮಹಾಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಶಿವಾನಂದ ಸಿಂಧನಕೇರಾರವರು ಹೇಳಿದರು.

ವಂದೇ ಮಾತರಂ ಮತ್ತು ತಾಯಿ ಶಾರದೆಯನ್ನು ನೆನೆಯುತ್ತ ಇಂದಿನ ಶಿಕ್ಷಣ ಮತ್ತು ಶಿಕ್ಷಕರ ಕಾರ್ಯಗಳ ಬಗ್ಗೆ ಮಾತನಾಡುತ್ತಾ, ಇಂದು ಪ್ರೌಢಶಿಕ್ಷಣ ಎಂಬ ಶಬ್ದವನ್ನು ಬಳಸಲಾಗುತ್ತಿದೆ, ಅದು ಪ್ರೌಡಶಿಕ್ಷಣವಲ್ಲ ಮಾಧ್ಯಮಿಕ ಶಿಕ್ಷಣ ಎಂದಾಗಬೇಕು, ಈ ಸಂಘವನ್ನು ಕಟ್ಟಿ ಬೆಳೆಸಿದ ಕೃ ನರಹರಿ ಸರ್‌ರವರು ೫೦ ವರ್ಷಗಳ ಹಿಂದೆಯೇ ಮಾಧ್ಯಮಿಕ ಶಿಕ್ಷಣ ಎಂದು ಹೇಳಿದ್ದನ್ನು ಇಂದು ನಮ್ಮ ರಾಜ್ಯ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಸಂಘವು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಹುದೊಡ್ಡ ಜವಾಬ್ದಾರಿ ನಿರ್ವಹಿಸಿದೆ ಎಂದು ತಿಳಿಸಿದರು ಈ ಕಾರ್ಯಕ್ರಮವು ಸರಿಯಾಗಿ ಬೆಳಿಗ್ಗೆ ೧೦ ಗಂಟೆಗೆ ಶ್ರೀಮತಿ ತ್ರಿವೇಣಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಮಹಿಳಾ ವಿಭಾಗದ ಸಹಕಾರ್ಯದರ್ಶಿ ಯಾಗಿರುವ ಶ್ರೀಮತಿ ಮಮತ ಡಿ.ಕೆ ರವರು ವೇದಿಕೆ ಮೇಲೆ ಇರುವ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು.

ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಚಿದಾನಂದ ಪಾಟೀಲ್‌ರವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಶಿಕ್ಷಕ ಸಂಘದ ಕಾರ್ಯಾಲಯ ಪ್ರಮುಖರಾದ ಶ್ರೀ ಜಿ.ಎಸ್ ಕೃಷ್ಣಮೂರ್ತಿಯವರು ಶಿಕ್ಷಕರಿಗೆ ಸಂಬಳವನ್ನು ಕೈಗೆ ಕೊಡುತ್ತಿದ್ದ ಕಾಲವನ್ನು ನೆನಪಿಸಿಕೊಂಡು ಅದನ್ನು ಚೆಕ್ ಮುಖಾಂತರ ಶಿಕ್ಷಕರ ಕೈ ಸೇರಬೇಕು ಎಂದು ಹೋರಾಡಿದವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದವರು ಮತ್ತು ಅದರಲ್ಲಿ ಸಫಲತೆಯನ್ನು ಸಹ ಪಡೆದೆವು ಎಂದು ಹೇಳಿದರು ಮತ್ತು ಅನೇಕ ಉದಾಹರಣೆಗಳನ್ನು ನೀಡುತ್ತ ಸಂಘ ನಡೆದು ಬಂದ ೫೦ ವರ್ಷಗಳ ಹಾದಿಯನ್ನು ನೆನಪಿಸಿಕೊಂಡರು.

ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್‌ರವರು ಕೃಷ್ಣಮೂರ್ತಿರವರ ಸಾಧನೆಯ ಹಾದಿ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿಯ ಪಡಿಸಿದರು. ಶ್ರೀ ಚಿದಾನಂದ ಪಾಟೀಲ್‌ರವರು ಅಧ್ಯಾಪಕರುಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ತಾವು ಮತ್ತು ಸಂಘವು ಸಕ್ರಿಯವಾಗಿ ಪಾತ್ರ ವಹಿಸುವುದರ ಬಗ್ಗೆ ತಿಳಿಸಿದರು. ಶಿಕ್ಷಕ ಸಂಘದ ಸಹ ಕಾರ್ಯದರ್ಶಿ ಶ್ರೀ ಗಂಗಾಧರಾಚಾರಿಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮದ ಮೊದಲನೇ ಅವಧಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಕಾರ್‍ಯಾಗಾರದ ಎರಡನೇ ಅವಧಿಯು ಶ್ರೀಮತಿ ಗಿರಿಜಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಹಿಂದಿ ವಿಷಯದ ಸಂಪನ್ಮೂಲವ್ಯಕ್ತಿಗಳಾಗಿ ಹೊಳೆನರಸೀಪುರ, ಹಾಸನದ ಶಶಿಧರ್‌ಸಿಂಗ್‌ರವರು ಮೌಲ್ಯಮಾಪನದ ಬಗ್ಗೆ ಸುದೀರ್ಘವಾಗಿ 2 ಗಂಟೆಗಳ ಕಾಲ ತಿಳಿಯಪಡಿಸಿದರು. ಮೊದಲು ಅಧ್ಯಾಪಕರು ಅಧ್ಯಯನವನ್ನು ಹವ್ಯಾಸವನ್ನಾಗಿ ಬೆಳೆಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ವಿಷಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಬಹುದು. ಮೌಲ್ಯಮಾಪನವು ಮಕ್ಕಳಿಗೆ ಅಷ್ಟೇ ಅಲ್ಲ, ಶಿಕ್ಷಕರ ಮೌಲ್ಯಮಾಪನವೂ ಹೌದು ಎಂದು ತಿಳಿಸಿದರು. ಮಧ್ಯಾಹ್ನದ ಭೋಜನದ ನಂತರವು ಶಶಿಧರ್ ಸಿಂಗ್‌ರವರು ಶಿಕ್ಷಕರಿಗೆ ಲಿಂಗ, ವಚನ, ಸಮಾಸ, 5Eಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ನಂತರ ಪುಂಡಲೀಕ್ ಎಸ್. ಜಗದಲೆ ಮತ್ತು ಶ್ರೀಮತಿ ತ್ರಿವೇಣಿ ಶಿಕ್ಷಕರು ನಾವು ಅನೇಕ ಕಾರ್‍ಯಾಗಾರಗಳಲ್ಲಿ ಭಾಗವಹಿಸಿದ್ದೇವೆ, ಆದರೆ ಇಂತಹ ಅತ್ಯುತ್ತಮ ಕಾರ್‍ಯಾಗಾರ ಆಯೋಜನೆ ಕಷ್ಟ. ನಮಗೆ ಇಲ್ಲಿ ಆಗಮಿಸಿರುವುದರಿಂದ ವಿಷಯದ ಬಗ್ಗೆ ಅನೇಕ ಹೊಸ ಮಾಹಿತಿಗಳು ಸಿಕ್ಕಂತಾಗಿದೆ ಎಂದು ತಮ್ಮ ಅನಿಸಿಕೆಯನ್ನೇಳಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶಶಿಧರ್ ಸಿಂಗ್‌ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ನಂತರದ ಅವಧಿಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ಆಗಮಿಸಿದ ಹಿಂದಿ ಶಿಕ್ಷಕರು ತಮ್ಮ ವೃತ್ತಿ ಸಮಸ್ಯೆಗಳನ್ನು ಸಂಘದ ಹಿರಿಯರಿಗೆ ತಿಳಿಸಿದರಲ್ಲದೇ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮಹತ್ತರ ಪಾತ್ರ ವಹಿಸಬೇಕೆಂದು ವಿನಂತಿಸಿಕೊಂಡರು. ಸಂಘದ ಹಿರಿಯರು ಆ ಶಿಕ್ಷಕರಿಗೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತದೆ ಎಂಬ ಭರವಸೆಯನ್ನು ನೀಡಿದರು.

ಸಂಘದ ಮಾರ್ಗದರ್ಶಕರೂ ಹಾಗೂ ಹಿರಿಯರು ಆದ ಶ್ರೀ ಹೆಚ್. ನಾಗಭೂಷಣ್‌ರವರು ಶಿಕ್ಷಕರು ಪಾಠವಷ್ಟೇ ಅಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಮತ್ತು ಉತ್ತಮ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಹೇಳಿದರು. ಸುಮಾರು 14 ಜಿಲ್ಲೆಗಳಿಂದ ಹಿಂದಿ ಬೋಧನಾ ವಿಷಯದಲ್ಲಿ ಆಸಕ್ತ ಹಾಗೂ ಸಕ್ರಿಯ 50 ಹಿಂದಿ ಶಿಕ್ಷಕರು ಈ ಕಾರ್‍ಯಾಗಾರದಲ್ಲಿ ಭಾಗವಹಿಸುವುದರ ಮೂಲಕ ಹಿಂದಿ ವಿಷಯ ಶಿಕ್ಷಕರ ರಾಜ್ಯಮಟ್ಟದ ಕಾರ್ಯಾಗಾರವನ್ನು ಯಶಸ್ವಿಗೊಳಿಸಿದರು.

Highslide for Wordpress Plugin