ಗುರುವಂದನಾಚರಣೆ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ|
ಗುರು ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರುವೇ ನಮಃ||

ಸೃಷ್ಟಿ, ರಕ್ಷಣೆ, ಶಿಕ್ಷೆ ಇವುಗಳನ್ನು ಸಮನ್ವಯಗೊಳಿಸುವ ಪರಬ್ರಹ್ಮ ಶಕ್ತಿಯುಳ್ಳ ಗುರುವಿಗೆ ವಂದಿಸುತ್ತಾ, ಈ ಶ್ಲೋಕದ ಅರ್ಥವನ್ನು ಸಾಕಾರಗೊಳಿಸಿದ ವೇದಗಳ ಗುರುವಾದ ವ್ಯಾಸ, ರಾಮನ ಗುರುವಾದ ವಸಿಷ್ಠ, ಯೋಗದ ಗುರುವಾದ ಪತಂಜಲಿ, ಭಗವದ್ಗೀತೆಯ ಗುರುವಾದ ಶ್ರೀಕೃಷ್ಣ, ಗಣಿತಶಾಸ್ತ್ರದ ಗುರುವಾದ ಆರ್ಯಭಟ, ವಿವೇಕಾನಂದರ ಗುರುವಾದ ರಾಮಕೃಷ್ಣ ಪರಮಹಂಸ, ಸಂಗೀತದ ಗುರುವಾದ ತ್ಯಾಗರಾಜ, ತತ್ತ್ವಶಾಸ್ತ್ರದ ಗುರುವಾದ ಸ್ಯಾಕ್ರಟಿಸ್, ವಿಜ್ಞಾನದ ಗುರುವಾದ ಐನ್‌ಸ್ಟೇನ್ ಮತ್ತು ಸಮಾಜಕ್ಕೆ ಗುರುವಾದ ಮಹಾತ್ಮಗಾಂಧಿ ಮುಂತಾದ ಅನೇಕ ಮಹಾನ್ ಗುರುಗಳ ಆದರ್ಶಗಳನ್ನು ನೆನೆಯುತ್ತಾ, ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಆಚರಿಸುವ ಗುರುವಂದನಾ ದಿನದಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘವು ಫೇಸ್‌ಬುಕ್ ಲೈವ್ ಮೂಲಕ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸರ್ವ ಶಿಕ್ಷಕರನ್ನುದ್ದೇಶಿಸಿದ ಶಿಕ್ಷಣ ತಜ್ಞರು, ಕರುಣಾಳು ಬಾ ಬೆಳಕೆ ಲೇಖಕರಾದ ಶ್ರೀ ಗುರುರಾಜ ಕರ್ಜಗಿಯವರ ಮಾತಿನ ಸಾರಾಂಶ ಇಲ್ಲಿದೆ.

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಾಲಾಕಯಾ
ಚಕ್ಷುರುಂಮಿಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ
ಅಜ್ಞಾನದಲ್ಲಿ ಸಿಲುಕಿಕೊಂಡಾಗ ಜ್ಞಾನದ ಶಲಾಕೆಯಿಂದ ನಮ್ಮ ಕಣ್ಣುಗಳನ್ನು ತೆರೆಸುವಂತಹ ಗುರುವಿಗೆ ನನ್ನ ನಮಸ್ಕಾರ.

ನಮ್ಮ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯಂತ ಮಹತ್ತರವಾದ ಸ್ಥಾನವಿದೆ. ಒಬ್ಬ ಗುರು ತನ್ನ ಶಿಷ್ಯನ ಸರ್ವೋಭ್ಯೋದಯವನ್ನೇ ಗುರಿಯಾಗಿಸಿಕೊಂಡಿರುತ್ತಾನೆ ಎಂಬುದಕ್ಕೆ ವಿಶ್ವಾಮಿತ್ರ- ರಾಮಲಕ್ಷ್ಮಣರು, ಕೃಷ್ಣ- ಅರ್ಜುನ, ವರುಣ, ಭೃಹು, ವರುಣ, ಶ್ವೇತಕೇತು, ಯಜ್ಞವಲ್ಕ್ಯ, ಜನಕ, ಸಾಕ್ರಟೀಸ್, ಪ್ಲೇಟೋ ಸಮರ್ಥ ರಾಮದಾಸ್- ಶಿವಾಜಿ, ರಾಮಕೃಷ್ಣ ಪರಮ ಹಂಸ- ಸ್ವಾಮಿ ವಿವೇಕಾನಂದ, ಶಿವಸುಬ್ರಹ್ಮಣ್ಯ ಅಯ್ಯರ್- ಎಪಿಜೆ ಅಬ್ದುಲ್ ಕಲಾಂ ಮುಂತಾದವರನ್ನು ಕಾಣಬಹುದು. ಪ್ರಸ್ತುತ ಸಮಾಜದಲ್ಲಿ ಶಿಕ್ಷಕರಾದವರೆಲ್ಲಾ ಗುರುವಾಗಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಗುರುವಿಗೂ ಶಿಕ್ಷಕರಿಗೂ ವ್ಯತ್ಯಾಸವಿದೆ.

ಅವೆಂದರೆ-
🔷 ಶಿಕ್ಷಕ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರೆ, ಒಬ್ಬ ಗುರು ವಿದ್ಯಾರ್ಥಿಗಳ ಉತ್ತರವನ್ನೇ ಪ್ರಶ್ನೆಯನ್ನಾಗಿ ಮಾರ್ಪಡಿಸುತ್ತಾನೆ.
🔷 ಶಿಕ್ಷಕ ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಾಯ ಮಾಡಿದರೆ, ಗುರು ವಿದ್ಯಾರ್ಥಿಗಳ ಬೆಳವಣಿಗೆಗೆ ಅವರನ್ನೇ ಜವಾಬ್ದಾರ ರನ್ನಾಗಿ ಮಾಡುತ್ತಾನೆ.
🔷 ಒಬ್ಬ ಶಿಕ್ಷಕ ವಿದ್ಯಾರ್ಥಿಗಳ ಬುದ್ಧಿಯನ್ನು ಚುರುಕುಗೊಳಿಸಿದರೆ ಗುರು ವಿದ್ಯಾರ್ಥಿಗಳ ಮನಸ್ಸನ್ನು ತೆರೆಯುತ್ತಾನೆ.
🔷 ಶಿಕ್ಷಕ ವಿದ್ಯಾರ್ಥಿಗಳ ಮನಸ್ಸನ್ನು ಮುಟ್ಟಿದರೆ, ಒಬ್ಬ ಗುರು ವಿದ್ಯಾರ್ಥಿಗಳ ಆತ್ಮ ಪ್ರಜ್ಞೆಯನ್ನು ಚುರುಕುಗೊಳಿಸುತ್ತಾನೆ.

ಒಬ್ಬ ಶಿಕ್ಷಕ ಗುರುವಾಗಿ ಪರಿವರ್ತಿಸುವ ಈ ಹಂತಗಳಲ್ಲಿ ಬೆಳೆದು ಹೋಗಲು ಸುಲಭವಿಲ್ಲದಿದ್ದರೂ, ಶಿಕ್ಷಕರು ತಮ್ಮ ವೃತ್ತಿಪರ ಜೀವನದುದ್ದಕ್ಕೂ ಬದಲಾವಣೆಗಳಿಗೆ ಒಳಗಾಗುತ್ತಾ ಬದಲಾವಣೆ ಗಳನ್ನು ಕಂಡುಕೊಳ್ಳುತ್ತಾ ಸಾಗಿದರೆ ಅದು ಅಸಾಧ್ಯವೇನಿಲ್ಲ.

ಶಿಕ್ಷಕ ತನ್ನ ವೃತ್ತಿಪರ ಜೀವನದಲ್ಲಿ ಉನ್ನತ ಮಟ್ಟಕ್ಕ್ಕೆ ಸಾಗಬೇಕಾದರೆ ಪ್ರಾರಂಭದ ಹಂತದಲ್ಲಿ ತರಗತಿಗೆ ಹೋಗುವ ಮುನ್ನ ಉತ್ತಮ ವಿಷಯ ಸಂಗ್ರಹ ಹಾಗೂ ವಿಷಯದ ಮೇಲಿನ ಹಿಡಿತದಿಂದ ಕೂಡಿದ ಪೂರ್ವ ಸಿದ್ಧತೆಯನ್ನು ಮತ್ತು ಕಲಿಕಾ ಸಾಮಗ್ರಿಯ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು. ತರಗತಿಯಲ್ಲಿ ಕೇಳಿ ಕಲಿಯುವ, ನೋಡಿ ಕಲಿಯುವ, ಓದಿ ಬರೆದು ಕಲಿಯುವ ಹಾಗೂ ಮಾಡಿ ಕಲಿಯುವ ವಿದ್ಯಾರ್ಥಿಗಳಿರುವುದರಿಂದ ಕಲಿಕಾ ಸಾಮಗ್ರಿ ಅತ್ಯಗತ್ಯವಾಗಿರುತ್ತದೆ. ಭಾರತದ ಏಕೈಕ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸರ್.ಸಿ.ವಿ ರಾಮನ್‌ರವರು ತಮ್ಮ ಒಂದು ತಾಸಿನ ತರಗತಿಯಲ್ಲಿ ಬೆಳಕಿನ ವಕ್ರೀಭವನದ ಪಾಠವನ್ನು ಬೋಧಿಸಲು ರಸ್ತೆಯಲ್ಲಿ ಸತ್ತ ದೀಪದ ಹುಳುವಿನ ರಕ್ಕೆಯನ್ನು ಸಂಗ್ರಹಿಸಿಕೊಂಡ ಘಟನೆಯಲ್ಲಿ ಒಬ್ಬ ಪೂರ್ವ ಯೋಜಿತ ಸಿದ್ಧತೆ ಹಾಗೂ ಕಲಿಕಾ ಸಾಮಗ್ರಿಯ ಮಹತ್ವ ಎಂಥದ್ದು ಎಂಬುದನ್ನು ಕಾಣಬಹುದು.

ಶಿಕ್ಷಕ ತನ್ನ ಉಡುಪಿನ ಬಗೆಗೆ ಎಚ್ಚರದಿಂದಿರಬೇಕು. ಏಕೆಂದರೆ ವಿದ್ಯಾರ್ಥಿಗಳಿಗೆ ಮೊದಲು ಶಿಕ್ಷಕ ಕಾಣಿಸುತ್ತಾನೆ, ನಂತರ ಕೇಳಿಸುತ್ತಾನೆ. ಶಿಕ್ಷಕ ಮಂದಸ್ಮಿತನಾಗಿರಬೇಕು. ಶಿಕ್ಷಕ ನಗುಮೊಗದಿ ತರಗತಿಗೆ ಪ್ರವೇಶಿಸಿದಾಗ ಅದು ಆತನ ಪೂರ್ವ ಸಿದ್ಧತೆಯಲ್ಲಿನ ವಿಶ್ವಾಸ ಹಾಗೂ ವಿದ್ಯಾರ್ಥಿಗಳ ಮೇಲಿರುವ ಪ್ರೀತಿಯನ್ನು ಬಿಂಬಿಸುತ್ತದೆ.

ಶಿಕ್ಷಕ ಸೃಜನಶೀಲನಾಗಿರುವುದರ ಜೊತೆಗೆ ತನ್ನ ತರಗತಿಯಲ್ಲಿ your class should be flexible enough for learning to happen and not too flexible to be chaotic ಎಂಬಂತಹ ವಾತಾವರಣವನ್ನು ಸೃಷ್ಟಿಸಿ, ಲವಲವಿಕೆಯಿಂದ ಹಾಗೂ ಸೃಜನಾತ್ಮಕವಾಗಿ ಬೋಧಿಸಿದಂತಹ ವಿಷಯವು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.

Provisional teacher ಅಂದರೆ ಎರಡನೆ ಹಂತದ ಶಿಕ್ಷಕ. ಇವರು ಧನಾತ್ಮಕತೆಯ ಮನೋಭಾವವನ್ನು ಹೊಂದಿರಬೇಕು. ಸದಾ ಸಮಾಜದಲ್ಲಿನ ಧನಾತ್ಮಕ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿ, ಪುಷ್ಟೀಕರಿಸಿದಾಗ ಬೆಳೆಯುವ ಮನಸ್ಸಿನಲ್ಲಿ ಕೀಳರಿಮೆ ಕಳೆದು, ಆತ್ಮವಿಶ್ವಾಸ, ಸದ್ವಿಚಾರ, ಸದ್ಯೋಚನೆಗಳನ್ನು ಬಲಗೊಳಿಸಬಹುದು.

ವೇದವ್ಯಾಸರು ತಮ್ಮ ಶಿಷ್ಯವೃಂದದಲ್ಲಿ ಭೇದಭಾವವನ್ನು ಕಾಣದೆ ಅವರವರ ಸಾಮರ್ಥ್ಯದ ಆಧಾರದ ಮೇಲೆ ಮೂರು ಪಂಗಡಗಳನ್ನಾಗಿ ವಿಂಗಡಿಸಿದ್ದರು. ಮೊದಲನೆಯದಾಗಿ ಉತ್ತಮಾಧಿಕಾರಿಗಳು- ಅವರ ಅಧ್ಯಯನ ಶ್ರುತಿ, ಅದರ ಫಲ ನಾರಿಕೇಳ ಫಲ, ಎರಡನೆಯದಾಗಿ ಮಧ್ಯಮಾಧಿಕಾರಿಗಳು- ಅವರ ಅಧ್ಯಯನ ಸ್ಮೃತಿ (ಇತಿಹಾಸ), ಅದರ ಫಲ ಕದಳೀಪಳ, ಮೂರನೆಯದಾಗಿ ಕನಿಷ್ಟಾಧಿಕಾರಿಗಳು- ಅವರ ಅಧ್ಯಯನ ಪುರಾಣಗಳು, ಅದರ ಫಲ ದ್ರಾಕ್ಷಾಫಲವನ್ನು ನೀಡಿದಂತೆ, ಇಂದಿನ ಶಿಕ್ಷಕರೂ ಕೂಡ ತಮ್ಮ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡದೆ ಅವರವರ ಬುದ್ಧಿಮತ್ತೆ ಹಾಗೂ ಕಲಿಕಾವೇಗದ ಅನುಗುಣವಾಗಿ ಬೋಧಿಸುತ್ತಾ ಸಮಾನದೃಷ್ಟಿಕೋನವನ್ನು ಹೊಂದಿರಬೇಕು.

ಮೂರನೇ ಹಂತದಲ್ಲಿ veteran teacher ಅಂದರೆ ಅನುಭವ ಶಿಕ್ಷಕರನ್ನು ಕಾಣಬಹುದು. ಈ ಹಂತದಲ್ಲಿ ಶಿಕ್ಷಕ ಅತ್ಯಂತ ಸೂಕ್ಷ್ಮಮತಿಯಾಗಿರಬೇಕು. ವಿದ್ಯಾರ್ಥಿಗಳನ್ನು ತಿದ್ದಿ ತೀಡುವ ಬರದಲ್ಲಿ ಅವರ ಮನಸ್ಸು ಘಾಸಿಗೊಳ್ಳುವಂತೆ ನಿಂದಿಸದೆ, ಅತ್ಯಂತ ಸೂಕ್ಷ್ಮವಾಗಿ ಅರಿವನ್ನು ಮೂಡಿಸುವಂತಿರಬೇಕು. ಶಿಕ್ಷಕ ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಯಾಗಿ ಬಿಂಬಿತವಾಗುವುದರಿಂದ ಆತ ತರಗತಿಯಲ್ಲಾಗಲೀ, ಸಮಾಜದಲ್ಲಾಗಲೀ ತನ್ನ ನಡೆ-ನುಡಿ, ಅಭ್ಯಾಸಗಳ ಬಗ್ಗೆ ಬಹು ಎಚ್ಚರದಿಂದಿರಬೇಕು.

ನಾಲ್ಕನೇ ಹಂತದಲ್ಲಿ ಬರುವುದು Transformative teacher ಅಂದರೆ ಪರಿವರ್ತನೆ ತರುವಂತಹ ಶಿಕ್ಷಕ ಈ ಹಂತದಲ್ಲಿ ಶಿಕ್ಷಕ ತನ್ನ ವೃತ್ತಿಪರ ಜೀವನದುದ್ದಕ್ಕೂ ವೈವಿಧ್ಯಮಯ ಅನುಭವಗಳನ್ನು ಪಡೆದು, ಅಪಾರವಾದ ವಿಷಯಜ್ಞಾನವನ್ನು ಕ್ರೋಢೀಕರಿಸಿ ಜೊತೆಗೆ ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿಕೊಂಡಾಗ ಪ್ರತಿ ತರಗತಿಗಳಲ್ಲೂ ದೇಶದ ಭವಿಷ್ಯದ ಭರವಸೆಗಳನ್ನು ಹುಟ್ಟುಹಾಕಬಹುದು.

ಒಟ್ಟಾರೆ ಒಬ್ಬ ಶಿಕ್ಷಕ ಪರಿವರ್ತನೆ ತರುವಂತಹ ಶಿಕ್ಷಕ ನಾಗಬೇಕಾದರೆ ನಾಲ್ಕು ಹಂತಗಳಲ್ಲಿ ಸಾಗಬೇಕಾಗುತ್ತದೆ.
🔷 ಮೊದಲನೆಯದಾಗಿ ಶಿಕ್ಷಕ Unconsciously incompetent – ಅಂದರೆ ಅರಿವಿಲ್ಲದೆ ಅಸಮರ್ಥರಾಗಿರುವಂತಹ ಹಂತ.
🔷 ಎರಡನೆಯದಾಗಿ ಶಿಕ್ಷಕ Consciously incompetent  ಅಂದರೆ ತನ್ನ ವಿಷಯ ಅಸಮರ್ಥತೆಯ ಬಗ್ಗೆ ಅರಿವುಂಟಾಗುವ ಹಂತ.
🔷 ಮೂರನೆಯದಾಗಿ ಶಿಕ್ಷಕ Consciously competent – ಅಂದರೆ ತನ್ನ ವಿಷಯ ಸಾಮರ್ಥ್ಯದ ಬಗೆಗೆ ಅರಿವು ಮೂಡಿಸಿಕೊಳ್ಳುವ ಹಂತ.
🔷 ನಾಲ್ಕನೆಯದಾಗಿ ಶಿಕ್ಷಕ Unconsciouslycompetent – ಅಂದರೆ ತನಗೆ ಅರಿವಿಲ್ಲದೆ ಸಮಗ್ರ ವಿಷಯದಲ್ಲಿ ಸಮರ್ಥವಾಗುವ ಹಂತ.

ಹೀಗೆ ಒಬ್ಬ ಶಿಕ್ಷಕ Transformative teacher ಅಂದರೆ ಪರಿವರ್ತನಾ ಶಿಕ್ಷಕನಾಗುವುದನ್ನೇ ಆದರ್ಶವನ್ನಾಗಿ ಇಟ್ಟುಕೊಂಡು ಪ್ರತಿ ಹೆಜ್ಜೆಯಲ್ಲಿ ಬದಲಾವಣೆ ಹೊಂದುತ್ತಾ, ವಿಷಯ ಜ್ಞಾನ ಹಾಗೂ ಮನಃಶುದ್ಧಿಯಿಂದ ಮೇಲಿನ ನಾಲ್ಕು ಹಂತಗಳನ್ನು ಪೂರ್ಣಗೊಳಿಸಿದಾಗ ಸಮಾಜದಲ್ಲಿರುವ ಶಿಕ್ಷಕನ ಸ್ಥಾನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ.

ಪ್ರಶ್ನೋತ್ತರದ ಸಮಯದಲ್ಲಿ ಶಿಕ್ಷಕರಾದ ಬಸವರಾಜುರವರ ಪ್ರಶ್ನೆ- ಪ್ರಸ್ತುತ ಕೋವಿಡ್-೧೯ನ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರನ ಪಾತ್ರವೇನು?

ಇಡೀ ಜಗತ್ತಿಗೆ ಹರಡಿರುವ ಕೊರೊನ ವೈರಸ್‌ನಿಂದಾಗಿ ಮಕ್ಕಳ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಶಿಕ್ಷಕರು ಆನ್‌ಲೈನ್ ತರಗತಿ ಅಥವಾ ದೂರವಾಣಿಯ ಮೂಲಕ ಪೋಷಕರನ್ನು, ವಿದ್ಯಾರ್ಥಿಗಳನ್ನು ತಮ್ಮ ಸಂಪರ್ಕ ದಲ್ಲಿಟ್ಟುಕೊಳ್ಳುವುದರ ಮೂಲಕ ವಿಷಯಾತ್ಮಕ ಮತ್ತು ಭಾವನಾತ್ಮಕ ಸಂಬಂಧ ಸಡಿಲಗೊಳ್ಳುವಂತೆ ಕಾರ್ಯ ನಿರ್ವಹಿಸಿಸಬೇಕು.

ಕೊನೆಯದಾಗಿ ಶಿಕ್ಷಕ ಗುರುವಾಗಿ ಪರಿವರ್ತನೆಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನವು ದೇವರ ಆಶೀರ್ವಾದದೊಂದಿಗೆ ಸಾಕಾರಗೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.

Highslide for Wordpress Plugin