ಜಗದ್ಗುರುವಾದ ಶ್ರೀಕೃಷ್ಣನಿಗೆ ಗುರುವಾದ ಸಾಂದೀಪನಿ ಮಹರ್ಷಿಗಳ ಹೆಸರಿನಿಂದ ವಿರಾಜಮಾನವಾದ ಹಾಗೂ ನಮಗೆಲ್ಲರಿಗೂ ಮಹಾಗುರುವಾದ ಶ್ರೀ ಕೃ ನರಹರಿರವರ ಕಾರ್ಯಕ್ಷೇತ್ರವಾದ ಸಾಂದೀಪನ ವಿದ್ಯಾಭವನ, ಶ್ರೀರಾಮಪುರದಲ್ಲಿ 31-7-2021 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ಗುರುವಂದನಾ ಕಾರ್ಯಕ್ರಮವನ್ನು ಕೇಂದ್ರ ಸಂಘದ ನಿರ್ದೇಶನದಂತೆ ಕೋವಿಡ್ ನಿಯಮವನ್ನು ಪಾಲಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರೀಮತಿ ಮಾಯಾಪ್ರಭು, ಜಿಲ್ಲಾ ಖಜಾಂಚಿರವರು ಶಾರದೆಯನ್ನು ಸ್ತುತಿಸಿ ಶುಭಾರಂಭಿಸಿದರು. ಗಣ್ಯರು ದೀಪ ಬೆಳಗಿ ಮಹರ್ಷಿ ವೇದವ್ಯಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷರಾದ ಶ್ರೀ ಸುರೇಂದ್ರರವರು ಸ್ವಾಗತ ಕೋರಿದರು.
ಜಿಲ್ಲಾ ಕಾರ್ಯದರ್ಶಿಗಳಾದ ಡಾ|| ವೆಂಕಟರಮಣ ಭಟ್ಟರವರು ನಿರೂಪಣೆ ಮತ್ತು ಪ್ರಾಸ್ತಾವಿಕವಾಗಿ ಮಾತನಾಡುತ್ತ ಕರ್ನಾಟಕ ರಾಜ್ಯ ಮಾಧ್ಯಮಿಕ ಸಂಘದ ಸಾಧನೆಯ ಹಾದಿ ಮತ್ತು ಕಾರ್ಯಕ್ರಮಗಳ ಕಿರುಪರಿಚಯ ಮಾಡಿ, ಗುರು ವಂದನಾ ಕಾರ್ಯಕ್ರಮದ ಉದ್ದೇಶ, ಔಚಿತ್ಯ ಹಾಗೂ ಮಹತ್ವವನ್ನು ವಿವರಿಸಿದರು. ಮುಖ್ಯ ವಕ್ತಾರರಾಗಿ ಶ್ರೀಮತಿ ಜಿ.ಎನ್ ವಾಸುಕಿ, ರಾಜ್ಯ ಮಹಿಳಾ ಪ್ರಮುಖ್ ಮಾತನಾಡಿ ಮಹರ್ಷಿ ವೇದವ್ಯಾಸರ ಲೋಕೋತ್ತರ ಕೊಡುಗೆಗಳನ್ನು ಸ್ಮರಿಸುತ್ತ, ವ್ಯಾಸರ ಜೀವನ ಸಾಧನೆಗಳನ್ನು ಮನಮಟ್ಟುವಂತೆ ವರ್ಣಿಸಿ, ಪ್ರಸ್ತುತ ಸಂದರ್ಭದಲ್ಲಿ ಗುರುವಂದನೆಯ ಅಗತ್ಯತೆ ಮತ್ತು ಶಿಕ್ಷಕರ ಜವಾಬ್ದಾರಿಗಳನ್ನು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಶ್ರೀ ವಿದ್ಯಾಸಾಗರ, ಕಾರ್ಯದರ್ಶಿಗಳು, ಶ್ರೀ ಸಾಂದೀಪನ ವಿದ್ಯಾಭವನರವರು ಮಾತನಾಡಿ ಗುರುವಂದನಾ ಪವಿತ್ರ ಕಾರ್ಯಕ್ರಮಕ್ಕೆ ತಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ತುಂಬಾ ಸಂತೋಷಪಟ್ಟು, ಬೇರೆ ಬೇರೆ ಪರಂಪರೆಯ ಗುರುಗಳ ಪರಿಚಯಮಾಡಿಸಿ, ಅವರ ಮಾರ್ಗದರ್ಶನದಂತೆ ನಾವೆಲ್ಲರೂ ನಡೆದರೆ ಪ್ರಪಂಚಕ್ಕೆ ಒಳಿತಾಗುವುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಧನಲಕ್ಷ್ಮಿ, ಜಿಲ್ಲಾ ಮಹಿಳಾ ಪ್ರಮುಖರವರು ವಂದನಾರ್ಪಣೆ ಸಲ್ಲಿಸಿದರು.
ವರದಿ : ಶ್ರೀ ವೆಂಕಟರಮಣ ಭಟ್