29-07-2021 ರಂದು ಸಂಘದ ಕೇಂದ್ರ ಕಾರ್ಯಾಲಯ ಯಾದವಸ್ಮತಿಯಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು 2020-21 ನೇ ಸಾಲಿನ SSLC ಮಕ್ಕಳಿಗೆ ಸಂಘದ ವತಿಯಿಂದ ಆಯೋಜಿಸಿದ ಪೋನ್-ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಸಂಪನ್ಮೂಲ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾ ಖಜಾಂಚಿಗಳಾದ ಶ್ರೀ ಹರಿದಾಸ್ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್ಟರವರು ಗಣ್ಯರ ಪರಿಚಯ ಮಾಡಿ ಸ್ವಾಗತಿಸಿದರು. ವೇದವ್ಯಾಸರು ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಸ್ತಾವಿಕ ನುಡಿಯಲ್ಲಿ ಸಂಘ ಬೆಳೆದು ಬಂದ ಹಾದಿ, ಸಂಘದ ಕಾರ್ಯಕ್ರಮಗಳು ಮತ್ತು ಧ್ಯೇಯೋದ್ದೇಶಗಳನ್ನು ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ.ಜೋಷಿಯವರು ವಿವರಿಸಿದರು.
ಮುಖ್ಯ ವಕ್ತಾರರಾಗಿ ಸಂಸ್ಕೃತ ಭಾರತಿ, ಬೆಂಗಳೂರಿನ ಅಖಿಲ ಭಾರತ ಕಾರ್ಯದರ್ಶಿಗಳಾದ ಶ್ರೀಯುತ ಸತ್ಯನಾರಾಯಣರವರು ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಜವಾಬ್ದಾರಿಯನ್ನು ತಿಳಿಸುತ್ತಾ, ಭಗವದ್ಗೀತೆಯ 12 ನೇ ಅಧ್ಯಾಯದಲ್ಲಿ ಬರುವ ದ್ವೇಷ, ಅಸೂಯೆ ರಹಿತ ಸಮಾಜದಲ್ಲಿ ಸಾಮರಸ್ಯದ ಬದುಕನ್ನು ನಡೆಸುವ ಎಲ್ಲರಲ್ಲೂ ದಯೆ, ಪ್ರೀತಿ, ವಿಶ್ವಾಸವನ್ನು ಹೊಂದಿ ಜೀವಿಸುವ ಬಗೆಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕೆಂದು ತಿಳಿಸಿದರು.
ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಗಂಗಪ್ಪರವರು ಪೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿದ ಬಗ್ಗೆ ತಿಳಿಸಿದರು. ಪೋನ್ ಇನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸಂಪನ್ಮೂಲ ಶಿಕ್ಷಕರನ್ನು ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾರ್ಯಾಲಯ ಪ್ರಮುಖರು, ಹಿರಿಯ ಮಾರ್ಗದರ್ಶಕರು ಆದ ಶ್ರೀಯುತ ಜಿ.ಎಸ್.ಕೃಷ್ಣಮೂರ್ತಿಯವರು ಗುರುವಂದನಾ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಬೆಂಗಳೂರು ವಿಭಾಗ ಪ್ರಮುಖರಾದ ಶ್ರೀ ಮಲ್ಲಿಕಾರ್ಜುನ. ಜಿ.ಕೂಡಗಿಯವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ವಂದಿಸಿದರು. ಬೆಂಗಳೂರು ಉತ್ತರ ವಲಯ-3ರ ಕಾರ್ಯದರ್ಶಿ ಶ್ರೀ ಎಂ.ವಿ.ಗಂಗಾಧರರವರು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ : ಎಂ.ವಿ.ಗಂಗಾಧರ