ಭಾರತವನ್ನು ಮೊದಲು ಕಲಿಸಿ, ಉಳಿದವುಗಳನ್ನು ನಂತರ ಕಲಿಸುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಯಾಗಿದೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ತಿಳಿಸುವುದೇ ಈ ಶಿಕ್ಷಣ ನೀತಿಯ ಗುರಿ ಎಂದು ಕೇಂದ್ರಿಯ ರಾಜ್ಯ ಶಿಕ್ಷಣ ಮಂತ್ರಿಗಳಾದ ಶ್ರೀಯುತ ಸುಭಾಷ್ ಸರಕಾರ್ರವರು ದಿನಾಂಕ 17, 18 ಅಕ್ಟೋಬರ್ 2021 ರ ಎರಡು ದಿನಗಳು ದೆಹಲಿಯ ದೀನ್ದಯಾಳ್ ಉಪಾಧ್ಯಾಯ ಕಾಲೇಜ್ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಂಗೋಷ್ಠಿಯಲ್ಲಿ ತಿಳಿಸಿದರು. ಈ ಸಂಗೋಷ್ಠಿಯ ಮುಖ್ಯ ವಿಷಯ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಕ್ರಿಯಾನ್ವಯನ- ಸವಾಲುಗಳು ಮತ್ತು ಅವಕಾಶಗಳು ಎಂಬುದಾಗಿತ್ತು. ಎರಡು ದಿನಗಳಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ರಾಷ್ಟ್ರೀಯ ಕಾರ್ಯಕಾರಿಣಿ ಬೈಠಕ್ ಹಾಗೂ ಸಾಧಾರಣ ಸಭೆಯು ನಡೆಯಿತು.
ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಧ್ಯೇಯ ವಾಕ್ಯವಾದ ರಾಷ್ಟ್ರದ ಹಿತದಲ್ಲಿ ಶಿಕ್ಷಣ, ಶಿಕ್ಷಣದ ಹಿತದಲ್ಲಿ ಶಿಕ್ಷಕರು, ಶಿಕ್ಷಕರ ಹಿತದಲ್ಲಿ ಸಮಾಜದ ಬಗ್ಗೆ ಹೇಳಿದರು. ಸಂಘಟನೆಯು ವರ್ಷದಲ್ಲಿ ನಡೆಸುವ ನಾಲ್ಕು ಪ್ರಮುಖ ಕಾರ್ಯಕ್ರಮಗಳಾದ ಕರ್ತವ್ಯ ಬೋಧ ದಿವಸ್, ಯುಗಾದಿಯ ಆಚರಣೆ, ಗುರುವಂದನಾ ಹಾಗೂ ಶಿಕ್ಷಕ ಸಮ್ಮಾನಗಳ ವಿವರಣೆ ನೀಡುತ್ತಾ, ಇವೆಲ್ಲಾ ಅತ್ಯುತ್ತಮ ಕಾರ್ಯಗಳಾಗಿವೆ ಎಂದು ಹರ್ಷ ವ್ಯಕ್ತ ಪಡಿಸಿದರು. ಎಬಿಆರ್ಎಸ್ಎಮ್ ನಿಂದ ಪ್ರಕಟಣೆಯಾಗುವ ಶೈಕ್ಷಿಕ ಮಂಥನದ ಬಗ್ಗೆಯೂ ಪ್ರಶಂಸಿಸಿದರು. ಕಾರ್ಯಕ್ರಮವನ್ನು ಆಯೋಜಿಸಿದ ದೀನ್ ದಯಾಳ್ ಕಾಲೇಜಿನ ಬಗ್ಗೆಯೂ ಪ್ರಶಂಸನೀಯ ಮಾತುಗಳನ್ನಾಡುತ್ತಾ ದೀನ್ ದಯಾಳ್ ಉಪಾಧ್ಯಾಯ ಅವರು ಇಡೀ ಜಗತ್ತಿನ ಮುಂದೆ ಏಕಾತ್ಮ ಮಾನವ ಸಿದ್ಧಾಂತವನ್ನು ಇಟ್ಟಿದ್ದಾರೆ. ಶಿಕ್ಷಣವೇ ಮೋಕ್ಷದ ಮಾರ್ಗವೆಂದು ಹೇಳಿದ್ದಾರೆ. ಶಿಕ್ಷಣದ ಮೂಲಕ ಮನುಷ್ಯನ ಸರ್ವಾಂಗೀಣ ವಿಕಾಸವಾಗುತ್ತದೆಂದು ಹೇಳಿದ್ದಾರೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಫಲಪ್ರದವನ್ನಾಗಿ ಮಾಡುವುದು ಶಿಕ್ಷಕರ ಕೈಯಲ್ಲಿಯೇ ಇದೆ ಎಂದು ಹೇಳಿದರು. ಪ್ರೊ. ಬಲರಾಮ್ ಪಾಣಿಜೀ ಯವರು ಮಾತನಾಡಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ಎರಡು ದಿನ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಕಾರ್ಯಕಾರಿಣಿಯಲ್ಲಿ ರಾಜ್ಯಗಳಿಂದ ಬಂದಿದ್ದ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳು ಹಿಂದಿನ ಕಾರ್ಯಕಾರಿಣಿಯ ನಂತರ ಮಾಡಿದ ಕಾರ್ಯಗಳ ವಿವರವನ್ನು ಸಭೆಗೆ ನೀಡಿದರು. ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ನ ಬೌಧ್ಧಿಕ ಪ್ರಮುಖರಾದ ಡಾ|| ಸುನೀಲ್ ಬಾಯಿ ಮೆಹೆತಾಜಿಯವರು ಭಾಗವಹಿಸಿದ್ದರು.
ಮೂರು ವರ್ಷಕ್ಕೆ ನಡೆಯಬೇಕಾಗಿದ್ದ ಸಂಘಟನೆಯ ಚುನಾವಣೆಯನ್ನು ಕೊರೋನ ಸಂಕಷ್ಟದಿಂದ ಒಂದು ವರ್ಷ ಮುಂದೂಡಿದ್ದರಿಂದ ದಿನಾಂಕ ೧೮.೧೦.೨೧ ರಂದು ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಪುನಃ ಜೆ.ಪಿ ಸಿಂಘಾಲ್ ರವರು, ಪ್ರಧಾನ ಕಾರ್ಯದರ್ಶಿಯ ಸ್ಥಾನಕ್ಕೆ ಮೈಸೂರಿನ ಶ್ರೀಶಿವಾನಂದ ಸಿಂಧನಕೇರಾರವರು, ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ ಈ ಹಿಂದೆ ಮಹಿಳಾ ವಿಭಾಗದ ಸಹ ಕಾರ್ಯದರ್ಶಿಯಾಗಿದ್ದ ಕರ್ನಾಟಕದ ಶ್ರೀಮತಿ ಮಮತಾ ಡಿ.ಕೆಯವರು ಸರ್ವಾನುಮತದಿಂದ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಧಾರಣ ಸಭೆಯಲ್ಲಿ ಮೂರು ಪ್ರಸ್ತಾವಗಳನ್ನು ಅನುಮತಿಸಲಾಯಿತು. ೧. ರಾಷ್ಟ್ರೀಯ ಶಿಕ್ಷಣ ನೀತಿಯ ಸಫಲತೆಗಾಗಿ ಸಾಮೂಹಿಕ ಪ್ರಯತ್ನವನ್ನು ಮಾಡುವುದು. ೨. ಸ್ವಾತಂತ್ರ್ಯ ಅಮೃತೋತ್ಸವವು ರಾಷ್ಟ್ರೀಯ ಪುನರ್ನಿಮಾಣದ ಹಬ್ಬವಾಗಬೇಕು. ೩. ಶಿಕ್ಷಣ ಮತ್ತು ಶಿಕ್ಷಕರ ಸಮಸ್ಯೆಗಳನ್ನು ದೂರಮಾಡಲು ತಡಮಾಡದೇ ಇರುವುದು. ಎರಡು ದಿನಗಳು ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಕಾಲೇಜಿನಲ್ಲಿ ನಡೆದ ಸಭೆಯು ಪೂರ್ಣ ಯಶಸ್ವಿಯಾಯಿತು.