ಸಂಘಟನೆಯೂ ಕೂಡ ನಮ್ಮ ಮಗುವಿನಂತೆ ಎಂದು ಯೋಚಿಸಿ, ಹಗಲಿರುಳು ಅದರ ಬಗ್ಗೆಯೇ ಯೋಚಿಸಬೇಕೆಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಸಂಘದ ಸಚಿವರಾದ ಶ್ರೀ ಮೋಹನ್ ಪುರೋಹಿತ್ರವರು ದಿನಾಂಕ 27-9-2021 ರಂದು ಗುಜರಾತ್ ಮಹಿಳಾ ಸಂವರ್ಗದಿಂದ ನಡೆದ ಆನ್ಲೈನ್ ಮಹಿಳಾ ಅಭ್ಯಾಸವರ್ಗದಲ್ಲಿ ಹೇಳಿದರು.
ಯಾವುದೇ ಒಂದು ಸಂಘಟನೆಯ ಶಕ್ತಿ ಸಂಘಟನೆಯ ಸದಸ್ಯರ ಸಂಖ್ಯೆಯ ಮೇಲೆ ನಿಂತಿದೆ. ಸದಸ್ಯತ್ವವೆಂಬುದು ಸಂಘಟನೆಯ ತಳಹದಿಯ ಇಟ್ಟಿಗೆಯಿದ್ದಂತೆ, ಹೇಗೆ ಒಂದು ಮನೆಗೆ ತಳಹದಿಯು ಗಟ್ಟಿಯಾಗಿರಬೇಕಾಗುತ್ತದೆಯೋ ಅದೇ ರೀತಿ ಸದಸ್ಯತ್ವವು ಹೆಚ್ಚಿರಬೇಕು. ಸದಸ್ಯತಾ ಅಭಿಯಾನದಲ್ಲಿ ನಿಮಗೆ ಮೂರು ರೀತಿಯ ಶಿಕ್ಷಕರು ಸಿಗುತ್ತಾರೆ- 1. ಮೊದಲನೇಯವರು ಪೂರ್ಣ ಸಂಘಟನೆಗೆ ಸಮರ್ಪಿತರಾದವರು. ಸಂಘಟನೆಯ ಕಾರ್ಯವೈಖರಿಯಿಂದ ಸಂತುಷ್ಟರಾದವರು. ಅವರು ನಿಮಗೆ ಯಾವುದೇ ಪ್ರಶ್ನೆ ಮಾಡದೇ ಸದಸ್ಯರಾಗುತ್ತಾರಲ್ಲದೇ ತಮ್ಮ ವಿದ್ಯಾಲಯದ ಇನ್ನಿತರರು ಸದಸ್ಯರಾಗುವಂತೆ ಕೋರುವರು. 2. ಸಂಘಟನೆಯ ಕಾರ್ಯವೈಖರಿ ಬಗ್ಗೆ ಅಲ್ಪಸ್ವಲ್ಪ ಜ್ಞಾನ ಹೊಂದಿದವರು. ಇಂತಹವರಿಗೆ ನೀವು ಪ್ರೀತಿ ಮತ್ತು ಸ್ನೇಹದಿಂದ ಸಂಘಟನೆಯು ಶಿಕ್ಷಕರ ಹಿತದಲ್ಲಿ ಯಾವ ಕಾರ್ಯಗಳನ್ನು ಮಾಡಿದೆ, ಮಾಡುತ್ತಿದೆ ಎಂಬುದನ್ನು ಸವಿವರವಾಗಿ ಹೇಳಬೇಕು ಮತ್ತು ಸದಸ್ಯರನ್ನಾಗಿ ಮಾಡಬೇಕು. ೩. ಮೂರನೇಯವರು ಸಂಘಟನೆಯ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಉಳ್ಳವರು. ಇವರಿಗೆ ಕೆರೆಯ ಹೊರಗಡೆ ನಿಂತು ನೋಡಿದರೆ ಹೇಗೆ ಆಳ ತಿಳಿಯುವುದಿಲ್ಲವೋ, ಅದೇ ರೀತಿ ನೀವು ಸಂಘಟನೆಯ ಹೊರಗಿನಿಂದ ನೋಡಿದರೆ ಸಂಘಟನೆಯ ಕಾರ್ಯವೈಖರಿ ಅರ್ಥವಾಗುವುದಿಲ್ಲ. ಆದ್ದರಿಂದ ನೀವು ಸದಸ್ಯರಾಗಿ ಸಂಘಟನೆಯ ಕಾರ್ಯವೈಖರಿಯನ್ನು ಅರ್ಥೈಸಿಕೊಳ್ಳಬೇಕು ಎಂದು ತಿಳಿಹೇಳಿ ಸದಸ್ಯರಾನ್ನಾಗಿ ಮಾಡಬೇಕು. ಹಗಲು-ರಾತ್ರಿಯೂ ಸಂಘಟನೆಯ ಬಗ್ಗೆಯೇ ಯೋಚಿಸುತ್ತಿರಬೇಕು ಹಾಗೂ ಸಂಘಟನೆಯ ವಿಸ್ತಾರ ಮಾಡಬೇಕು ಎಂದು ಹೇಳಿದರು.
ಸಂಘಟನೆಯನ್ನು ಗಟ್ಟಿಗೊಳಿಸಲು ನಿರಂತರವಾದ ಕಾರ್ಯ, ಅನುಶಾಸನ, ಸಂಘಟನೆಯ ವಿಚಾರಧಾರೆಗಳೊಂದಿಗೆ ನಡೆಯುವುದು ಅತ್ಯಂತ ಅವಶ್ಯಕವೆಂದು ಗುಜರಾತ್ ಶೈಕ್ಷಿಕ ಸಂಘದ ಸಂಘಟನಾ ಮಂತ್ರಿಗಳಾದ ಶ್ರೀ ಘನಶ್ಯಾಮ ಭಾಯಿ ಪಟೇಲ್ರವರು ಹೇಳಿದರು. ಈ ವರ್ಷವು ಗುಜರಾತ್ ರಾಷ್ಟ್ರೀಯ ಶೈಕ್ಷಿಕ ಸಂಘವು 4200 ಗ್ರೇಡ್ ಪೇ, ಸಿಸಿಸಿ ಯ ಪರೀಕ್ಷೆಗಳು, ಶಿಕ್ಷಕರಿಗಾಗಿ ನಡೆಸಬೇಕೆಂದಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ ರದ್ದತಿ ಇಂತಹ ಅನೇಕ ವಿಚಾರಗಳಲ್ಲಿ ಸಫಲತೆಯನ್ನು ಪಡೆದಿದೆ. ಇದರ ಪರಿಣಾಮವೇ ಈ ವರ್ಷ ೧೫೦೦೦೦ ಸದಸ್ಯರನ್ನು ನಮ್ಮ ಸಂಘಟನೆಯಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಯಿತು. ಈ ವರ್ಷದ ಸದಸ್ಯತಾ ಅಭಿಯಾನವು ಸಂಪೂರ್ಣವಾಗಿ ಸಫಲತೆಯನ್ನು ಹೊಂದಿದೆ ಎಂದು ಹೇಳಿದರು. ಮೊದಲು ರಾಜ್ಯ ಸ್ತರದ ತಂಡವು ಜಿಲ್ಲಾ ಮಟ್ಟದಲ್ಲಿ ತಂಡವನ್ನು ಕಟ್ಟುವಲ್ಲಿ ಪ್ರಯತ್ನಿಸುವುದು. ನಂತರ ಜಿಲ್ಲಾ ತಂಡದ ಜೊತೆ ತಾಲ್ಲೂಕು ಹಂತದ ತಂಡದ ರಚನೆ ಮಾಡುವುದು, ಜಿಲ್ಲಾ ಮತ್ತು ತಾಲ್ಲೂಕು ತಂಡಗಳ ಸಹಾಯದಿಂದ ಪ್ರತಿ ಶಾಲೆಗೆ ತಲುಪುವ ಯೋಜನೆಯನ್ನು ಹಾಕಿಕೊಂಡಿದ್ದರಿಂದಲೇ ನಮಗೆ ಸಫಲತೆ ದೊರೆತಿದೆ ಎಂದು ಹೇಳಿದರು.
ಗುಜರಾತ್ ಸಂಘದ ಮಹಿಳಾ ಸಂವರ್ಗವೂ ಕೂಡ ನಿರಂತರವಾಗಿ ಸದಸ್ಯತಾ ಅಭಿಯಾನದಲ್ಲಿ ಕೈಜೋಡಿಸಿದ್ದರಿಂದಲೇ ಈ ಬಾರಿ ಒಂದೂವರೆ ಲಕ್ಷದವರೆಗೆ ಸದಸ್ಯತ್ವ ಮಾಡಲು ಸಾಧ್ಯವಾಯಿತು. ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಪ್ರತಿ ವಿದ್ಯಾಲಯದವರೆಗೆ ನಮ್ಮ ಕಾರ್ಯ ವಿಸ್ತಾರವನ್ನು ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.