ದಿನಾಂಕ : 29-7-2023 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ಆಯೋಜಿಸಿದ್ದ 2022-23 ನೇ ಶೈಕ್ಷಣಿಕ ವರ್ಷದ ಬೆಂಗಳೂರು ಉತ್ತರ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಬಿ.ಬಿ.ಎಂ.ಪಿ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲಾ ಪ್ರಥಮಿಗ ವಿದ್ಯಾರ್ಥಿಗಳು ಹಾಗೂ ಶೇಕಡಾ 85 ಕ್ಕಿಂತಲೂ ಹೆಚ್ಚು ಅಂಕಗಳಿಸಿರುವ ಶಿಕ್ಷಕರ ಮಕ್ಕಳಿಗೆ 36 ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಲ್ಲೇಶ್ವರಂನ ಹಿಮಾಂಶು ಜ್ಯೋತಿ ಕಲಾಪೀಠದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರೊಂದಿಗೆ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವು ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ಆರ್ ಹರಿದಾಸ್ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಜಿ ಕೂಡಗಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು ಪರಿಚಯಿಸಿ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರನ್ನೂ ಆದರದಿಂದ ಸ್ವಾಗತಿಸಿದರು. ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯ ಮಾನ್ಯರು ದೀಪ ಪ್ರಜ್ವಲನವನ್ನು ಮಾಡಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕೋಶಾಧ್ಯಕ್ಷರಾದ ಶ್ರೀ ಜೆ.ಎಂ ಜೋಷಿರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಬೆಳೆದು ಬಂದ ಹಾದಿ ಮತ್ತು ಸಂಘದ ಮುಖಾಂತರ ಶೈಕ್ಷಣಿಕ ವರ್ಷದಲ್ಲಿ ನಡೆಸಲಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು. ಸಂಘದ ಹಿರಿಯ ಮಹಿಳಾ ಪ್ರಮುಖರಾದ ಶ್ರೀಮತಿ ಆರ್.ಸೀತಾಲಕ್ಷ್ಮಿಯವರು ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಉತ್ತರ ವಲಯ-3ರ ಅಧ್ಯಕ್ಷರಾದ ಶ್ರೀಗಂಗಾಧರ ಎಂವಿರವರು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟರು.
2022-23ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಅಪ್ರತಿಮ ವಿದ್ಯಾರ್ಥಿಗಳಾದ ಪ್ರಥಮಿಗರಲ್ಲಿ ಪ್ರಥಮಿಗರನ್ನು ಕರ್ನಾಟಕ ಸರ್ಕಾರದ ಮಲ್ಲೇಶ್ವರಮ ವಿಧಾನ ಸಭಾ ಶಾಸಕರು ಹಾಗೂ ನಿಕಟ ಪೂರ್ವ ಮಾಜಿ ಸಚಿವರಾದ ಶ್ರೀಯುತ ಡಾ|| ಸಿ.ಎನ್ ಅಶ್ವತ್ಥ ನಾರಾಯಣ್ರವರು ಸ್ಮರಣಿಕೆ, ಪುಸ್ತಕ, ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಿದರು. ನಂತರ ತಮ್ಮ ಭಾಷಣದಲ್ಲಿ ಶಿಕ್ಷಣವೇ ಶಕ್ತಿ, ವ್ಯಕ್ತಿತ್ವ, ಜ್ಞಾನವನ್ನು ಗಳಿಸುವ ಸಾಧನ ಆದ್ದರಿಂದ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಷ್ಟ್ರಕ್ಕೆ ನೀಡಿದ ನಮ್ಮ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರಮೋದಿಯವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿರುವ ಮೊದಲನೆಯ ರಾಜ್ಯ ಕರ್ನಾಟಕ ಎಂಬುದನ್ನು ತಿಳಿಸಿ ಎಲ್ಲಾ ಪ್ರತಿಭಾ ಪುರಸ್ಕೃತರನ್ನೂ ಅಭಿನಂದಿಸಿದರು.
ಕರ್ನಾಟಕ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ, ನಿವೃತ್ತ ಐ.ಐ.ಎಸ್ ಅಧಿಕಾರಿಗಳು ಆದ ಶ್ರೀ ಎಂ ಮದನಗೋಪಾಲರವರು ಶೇಕಡಾ ೮೫ಕ್ಕಿಂತ ಹೆಚ್ಚು ಅಂಕ ಗಳಿಸಿದ ಶಿಕ್ಷಕರ ಮಕ್ಕಳಿಗೆ ಸ್ಮರಣಿಕೆ, ಪುಸ್ತಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಿ ಮಾತನಾಡುತ್ತಾ ಇಡೀ ವಿಶ್ವಕ್ಕೆ ನಾಗರೀಕತೆಯನ್ನು, ಸಂಸ್ಕಾರವನ್ನು ಪ್ರಚುರ ಪಡಿಸಿರುವ ರಾಷ್ಟ್ರ ಭಾರತ ಎಂದು ತಿಳಿಸುತ್ತಾ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿವರವಾಗಿ ತಿಳಿಸಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯ ಎಂದು ಹೇಳಿದರು. How to convert Information to knowledge and knowledge to wisdom ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಹಿಮಾಂಶು ಜ್ಯೋತಿ ಕಲಾ ಪೀಠದ ನಿರ್ದೇಶಕರಾದ ಶ್ರೀ ಬಿ.ವಿ ವಿಜಯ ಕುಮಾರ್ರವರು ಮಾತನಾಡುತ್ತಾ ಇಂದಿನ ಶಿಕ್ಷಣ ವ್ಯವಸ್ಥೆ ಯಾವ ರೀತಿ ಇದೆ, ಯಾವ ರೀತಿಯಲ್ಲಿ ಈ ವ್ಯವಸ್ಥೆಯನ್ನು ಉನ್ನತೀಕರಿಸಬೇಕು ಹಾಗೂ ಎಲ್ಲಾ ವಿದ್ಯಾರ್ಥಿಗಳಲ್ಲಿ ಸುಪ್ತವಾದಂತಹ ಜ್ಞಾನ ಅಡಗಿದೆ, ಸಕಾಲದಲ್ಲಿ ಜ್ಞಾನದ ಬೆಳಕನ್ನು ಸಮಾಜಕ್ಕೆ ನೀಡಬೇಕು ಎಂದು ತಿಳಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಎಲ್ಲಾ ಪ್ರತಿಬಾ ಪುರಸ್ಕೃತರನ್ನು ಸ್ಮರಣಿಕೆ, ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಿ ಮಾತನಾಡಿದ ನಿಮ್ಹಾನ್ಸ್ ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ|| ಕೆ.ಎಂ ರಾಜೇಂದ್ರರವರು ಎಲ್ಲ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳೂ ತಮ್ಮ ಪೋಷಕರಿಗೆ, ಶಿಕ್ಷಕರಿಗೆ ಕೃತಜ್ಞರಾಗಿರಬೇಕು, ಪ್ರಕೃತಿಯೊಂದಿಗೆ ಸಮ್ಮಿಲಿತವಾಗಿ ನಾವು ಯಾವ ರೀತಿ ಪರಿಸರ ಪ್ರಕೃತಿಯೊಂದಿಗೆ ಸಮ್ಮಿಲಿತವಾಗಿ ಪರಿಸರ ಪ್ರಜ್ಞೆ ಹೊಂದಿರಬೇಕು ಎಂದು ತಿಳಿಸುತ್ತಾ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಉತ್ತಮವಾದ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಸ್ವಾಗತಾರ್ಹ ಎಂದು ಅಭಿನಂದಿಸಿದರು. ಶಿಕ್ಷಕರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ|| ರೇಖಾ ಜಗದೀಶ್ರವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸೆಂಟ್ ಅಲ್ಫೋನ್ಸಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಅರ್ಷಿದಾ ಬಾನು ಪ್ರತಿಭಾ ಪುರಸ್ಕೃತರ ಪರವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ್ರವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡುತ್ತಾ ಎಲ್ಲಾ ಜನ ಸಾಮಾನ್ಯರನ್ನು, ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಶಿಕ್ಷಣ ವ್ಯವಸ್ಥೆಯನ್ನೂ ತಲುಪುವಂತಹ ಕಾರ್ಯಕ್ರಮಗಳನ್ನು ಸಂಘವು ರೂಪಿಸುತ್ತಿದೆ ಮತ್ತು ಇದಕ್ಕೆ ಕಾರಣಿಕರ್ತರಾದ ಕಾರ್ಯಕರ್ತರುಗಳ ಶ್ರಮವನ್ನು ಅಭಿನಂದಿಸಿದರು. ಬೆಂಗಳೂರು ಉತ್ತರ ವಿಭಾಗದ ಪ್ರಮುಖರಾದ ಶ್ರೀ ಗಂಗಪ್ಪರವರು ವಂದನಾರ್ಪಣೆ ನಡೆಸಿಕೊಟ್ಟರು. ಕುಮಾರಿ ವೇದಶ್ರೀ.ಬಿ.ಎನ್ ರವರು ಸುಶ್ರಾವ್ಯವಾಗಿ ವಂದೇ ಮಾತರಂ ಹಾಡುವುದರೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನವಾಯಿತು.