ಶಿಕ್ಷಕರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು – ಸಂಪನ್ಮೂಲ ಶಿಕ್ಷಕ ಶರಣು ಬಿರಾದಾರ ಅಭಿಮತ
ನಗರದ ಅಳಂದ ರಸ್ತೆಯ ಪ್ರೇರಣ ಕೋಚಿಂಗ್ ಕ್ಲಾಸಸ್ನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕಲಬುರ್ಗಿ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಸಂಕಲ್ಪ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಸರ್ಕಾರಿ ಪ್ರೌಢಶಾಲೆಯ ಗೋಳಾ(ಬಿ)ಯ ಇಂಗ್ಲೀಷ್ ಭಾಷಾ ಶಿಕ್ಷಕರಾದ ಶ್ರೀ ಶರಣು ಎಂ. ಬಿರಾದಾರ್ ಮಾತನಾಡುತ್ತಾ ಶಿಕ್ಷಕರು ಸತತ ಅಧ್ಯಯನಶೀಲರಾಗಿರಬೇಕು. ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆಗಳು ಕ್ಷಿಪ್ರಗತಿಯಲ್ಲಿ ಸಾಗಿದ್ದು ಇಂಥ ವಿಷಯಗಳನ್ನು ನಾವು ಮಕ್ಕಳಿಗೆ ತಿಳಿಸಬೇಕಾದರೆ ದಿನಪತ್ರಿಕೆಗಳು ಪುಸ್ತಕಗಳು ಓದಲೇಬೇಕಾದ ಅನಿವಾರ್ಯತೆ ಇದೆ ಎಂದರು. ಜೊತೆಗೆ ಮಹಾನ್ ವ್ಯಕ್ತಿಗಳಾದ ಸ್ವಾಮಿ ವಿವೇಕಾನಂದರ, ಡಾ. ಎ.ಪಿ.ಜೆ ಅಬ್ದುಲ್ ಕಲಾಮರ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ರವರ ಸಾಧನೆಗಳು, ತತ್ವ, ಆದರ್ಶಗಳನ್ನು ಮಕ್ಕಳು ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಲಬುರ್ಗಿ ವಿಭಾಗ ಪ್ರಮುಖ ಚಂದ್ರಶೇಖರ್ ಪಾಟೀಲ್ ಮಾಧ್ಯಮಿಕ ಶಿಕ್ಷಕ ಸಂಘ ಪ್ರತಿ ವರ್ಷ ಈ ಸಂಕಲ್ಪ ದಿನಾಚರಣೆಯನ್ನು ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಆಚರಿಸುತ್ತಿದ್ದು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರು ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ ಆದ್ದರಿಂದ ಶಿಕ್ಷಕರಲ್ಲಿ ಕರ್ತವ್ಯ ಪ್ರಜ್ಞೆ, ವೃತ್ತಿ ಗೌರವ ಹೆಚ್ಚಿಸಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಸಂಜೀವ್ ಕುಮಾರ್ ಪಾಟೀಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ ಶಿವಲಿಂಗಪ್ಪ ಕೂಡ್ಲಿ ವಿವೇಕಾನಂದ ಶ್ರೀಶೈಲ್ ಸಾಲಿಮಠ ಶಂಕರಲಿಂಗ ಕಲಶೆಟ್ಟಿ, ಅನಿಲ ಕುಮಾರ್, ಧೋತ್ರಿ ಪ್ರಶಾಂತ್ ಪಾಟೀಲ, ಚಂದ್ರಕಾಂತ್ ಬಿರಾದಾರ, ಚಂದ್ರಶೇಖರ್ ಗೋಸಲ ಮುಂತಾದವರು ಉಪಸ್ಥಿತರಿದ್ದರು. ರಾಜ್ಯ ಸಹ ಕಾರ್ಯದರ್ಶಿ ಅನಿಲ್ ಕುಮಾರ್ ಬಿರಾದಾರ್ ಇವರು ಶಿಕ್ಷಕರಿಗೆ ಸಂಕಲ್ಪ ಬೋಧನೆಯನ್ನು ಮಾಡಿದರು. ಪ್ರಧಾನ ಕಾರ್ಯದರ್ಶಿ ಶ್ರೀಪಾಲ ಭೋಗಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
– ಚಂದ್ರಶೇಖರ್ ಎಸ್ ಪಾಟೀಲ್, ವಿಭಾಗ ಪ್ರಮುಖರು, ಕಲ್ಬುರ್ಗಿ