ದಿನಾಂಕ: 16-9-2024 ರ ಸೋಮವಾರ ಬೆಳಿಗ್ಗೆ ೬-೪೫ಕ್ಕೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯ, ಯಾದವಸ್ಮೃತಿಯಿಂದ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ ಜೋಷಿರವರ ಮಾರ್ಗದರ್ಶನದಲ್ಲಿ ಬೆಂಗಳೂರು ವಿಭಾಗ ಪ್ರಮುಖರಾದ ಶ್ರೀ ಗಂಗಪ್ಪ, ಉತ್ತರ ಜಿಲ್ಲೆ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ.ಜಿ ಕೂಡಗಿ, ಕಾರ್ಯದರ್ಶಿ ಶ್ರೀ ಹರಿದಾಸ್ರವರ ನೇತೃತ್ವದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಚಿದಾನಂದ ಪಾಟೀಲ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್ರವರ ಸಹಯೋಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳ ಒಂದು ದಿನದ ಸಹಲ್ ಕಾರ್ಯಕ್ರಮಕ್ಕೆ ಉತ್ತಮವಾದ ವಾಹನದಲ್ಲಿ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ವಲಯ-೩ರ ಅಧ್ಯಕ್ಷರಾದ ಶ್ರೀ ಗಂಗಾಧರ.ಎಂ.ವಿರವರ ಉತ್ತಮ ನಿರೂಪಣೆಯೊಂದಿಗೆ ಜಿಲ್ಲಾ ಕಾರ್ಯದರ್ಶಿ ಹರಿದಾಸ್ರವರು ಪ್ರಾರ್ಥನೆ ನಡೆಸಿಕೊಟ್ಟರು. ಸಹಲ್ನಲ್ಲಿ ಭಾಗವಹಿಸಿದವರೆಲ್ಲರನ್ನೂ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೂಡಗಿರವರು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ವರದಿಯನ್ನು ಶ್ರೀ ಜೆ.ಎಂ ಜೋಷಿರವರು ನೀಡಿದರು. ಸಹಲ್ನಲ್ಲಿ ಭಾಗವಹಿಸಿದ್ದ ಶ್ರೀ ಚಿದಾನಂದ ಪಾಟೀಲ್, ಶ್ರೀನಾರಾಯಣ ಭಟ್ ಹಾಗೂ ಶ್ರೀ ಗಂಗಪ್ಪರವರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ, ಸಹಲ್ನ ಪ್ರಾಮುಖ್ಯತೆ, ಸತ್ಸಂಗ, ಸತ್ಕಾರ್ಯ, ಸಮ್ಮಿಲನದ ಬಗ್ಗೆ ವಿವರಿಸಿದರು. ಬಿಡದಿಯಲ್ಲಿ ಉಪಹಾರವನ್ನು ಸೇವಿಸಿ ನಿಸರ್ಗ ರಮಣೀಯ ರಾಮನಗರದ ರಾಮದೇವರ ಬೆಟ್ಟವನ್ನು ಸಂದರ್ಶಿಸಿದೆವು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಎಲ್ಲಾ ಪದಾಧಿಕಾರಿಗಳು ಚಾರಣದೊಂದಿಗೆ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ರಾಮದೇವರ ಬೆಟ್ಟವನ್ನು ಹತ್ತಿ ದೇವಾಲಯವನ್ನು ವೀಕ್ಷಿಸಿ ಸಂತೋಷದಿಂದ ಬೆಟ್ಟ ಇಳಿದು ದೊಡ್ಡ ಮಳೂರಿನ ಅಪ್ರಮೇಯ ದೇವಸ್ಥಾನ ವೀಕ್ಷಿಸಿ, ಅಂಬೆಗಾಲು ಕೃಷ್ಣನ ದರ್ಶನ ಪಡೆದು ಪುನೀತರಾದೆವು. ಅಪ್ರಮೇಯ ದೇವಸ್ಥಾನದಲ್ಲಿ ಮಧ್ಯಾಹ್ನದ ವಿಶೇಷ ಪ್ರಸಾದವನ್ನು ಸ್ವೀಕರಿಸಿ ನಂತರ ಮದ್ದೂರಿನ ಬಳಿಯಿರುವ ವೈದ್ಯನಾಥಪುರದಲ್ಲಿರುವ ಪುರಾತನ ವೈದ್ಯನಾಥೇಶ್ವರ ದೇವಾಲಯ ಸಂದರ್ಶಿಸಿದೆವು. ಎಲ್ಲಾ ಪದಾಧಿಕಾರಿಗಳು ಅಲ್ಲಿನ ನದಿಯ ಬಳಿ ತೆರಳಿ ನದಿಯ ವೀಕ್ಷಣೆ ಮಾಡಿ ಹಿಂದಿರುಗಿದೆವು.
ವೈದ್ಯನಾಥಪುರದಿಂದ ಶ್ರೀರೇವಣ ಸಿದ್ದೇಶ್ವರ ಬೆಟ್ಟವನ್ನು ಸಂದರ್ಶಿಸಿದೆವು. ಅಲ್ಲಿನ ಶಿಲೆಗಳ ರಮಣೀಯ ದೃಶ್ಯ ಮನಸೂರೆಗೊಳ್ಳುವಂತಿತ್ತು. ಬೃಹತ್ ಶಿಲೆಯ ಕೆಳಗೆ ನಿರ್ಮಿತಗೊಂಡಿರುವ ದೇವಾಲಯವನ್ನು ವೀಕ್ಷಿಸಿ ಅಲ್ಲಿನ ನಿಸರ್ಗದ ಮಧ್ಯೆ ತುಂತುರು ಮಳೆಯಲ್ಲಿ ಪದಾಧಿಕಾರಿಗಳ ಬೈಠಕ್ ಮಾಡಿದೆವು. ಒಂದು ದಿನದ ಸಹಲ್ನಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳೆಲ್ಲರೂ ತಮ್ಮ ಅನುಭವವನ್ನು ಎಲ್ಲರೊಂದಿಗೆ ಸಂತೋಷದಿಂದ ಹಂಚಿಕೊಂಡರು. ನಂತರ ಕೆಂಗಲ್ನಲ್ಲಿರುವ ಪ್ರಸಿದ್ಧವಾದ ಕೆಂಗಲ್ ಹನುಮಂತರಾಯನ ದರ್ಶನ ಪಡೆದು ಪುನೀತರಾದೆವು. ಬೆಂಗಳೂರಿಗೆ ವಾಪಸ್ ಬರುವ ಸಮಯದಲ್ಲಿ ಬಿಡದಿಯಲ್ಲಿ ಚಹಾವನ್ನು ಸೇವಿಸಿ ರಾತ್ರಿ ೮-೩೦ರ ಸಮಯದಲ್ಲಿ ಯಾದವಸ್ಮೃತಿಗೆ ವಾಪಸ್ಸಾದೆವು. ಎಲ್ಲ ಪದಾಧಿಕಾರಿಗಳು ತುಂಬಾ ಲವಲವಿಕೆಯಿಂದ, ಚೈತನ್ಯದಿಂದ ಭಾಗವಹಿಸಿ ಈ ರೀತಿಯ ವಿಶಿಷ್ಟ ಕಾರ್ಯಕ್ರಮಗಳ ಸ್ಪೂರ್ತಿಯನ್ನು ತುಂಬುತ್ತವೆ ಎಂದು ತಿಳಿಸಿದರು. ಈ ರೀತಿ ಒಂದು ದಿನದ ಸಹಲ್ ಕಾರ್ಯಕ್ರಮವು ಯಶಸ್ವಿಯಾಯಿತು.
ವರದಿ : ಗಂಗಾಧರ.ಎಂ.ವಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ವಲಯ-೩