ಶಿಕ್ಷಣ ಸಂಕುಲದ ಅಭ್ಯಾಸವರ್ಗ

ಅರ್ಥಶಾಸ್ತ್ರ, ಧರ್ಮಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಂಬಲಿಸುವ ಶಿಕ್ಷಣ ಇರಬೇಕು. ಉನ್ನತ ಶಿಕ್ಷಣ ನೌಕರಿಗಾಗಿ ಅಲ್ಲ. ನಗರಕ್ಕೆ ಬಂದ ವ್ಯಕ್ತಿಗಳು ಹಳ್ಳಿಗೆ ಮುಖ ಮಾಡದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಶಿಕ್ಷಕರು ಅಧ್ಯಯನ ಶೀಲರಾಗಿರಬೇಕು. ಯಾವುದೇ ದೇಶ, ಆ ದೇಶದಲ್ಲಿಯ ಶಿಕ್ಷಕರ ಬೌದ್ಧಿಕ ಮಟ್ಟಕ್ಕಿಂತ ಮೇಲಕ್ಕೆ ಏರಲಾರದು ಎಂದು ಶಿಕ್ಷಣ ಸಂಕುಲದಿಂದ 1-12-2025 ರಂದು ಆಯೋಜಿಸಲಾಗಿದ್ದ ಕನ್ನಡ, ಸಂಸ್ಕೃತ ಮತ್ತು ಇತಿಹಾಸ ವಿಷಯಗಳ ರಾಜ್ಯ ಮಟ್ಟದ ಶಿಕ್ಷಣತಜ್ಞರ ಕಾರ್ಯಾಗಾರದಲ್ಲಿ ಮಾನ್ಯ ಪಿ.ವಿ.ಕೃಷ್ಣಭಟ್ಟರು ನುಡಿದರು. ಮುಂದುವರೆದು ನಾವೆಲ್ಲ ವೈಚಾರಿಕವಾಗಿ ಸದೃಢರಾಗಬೇಕು ಆತ್ಮವಿಶ್ವಾಸ, ದೇಶಪ್ರೇಮ ಮತ್ತು ನಮ್ಮ ಪರಂಪರೆಯನ್ನು ಬೆಳೆಸುವ ಸಂಕಲ್ಪಿತ ಶಿಕ್ಷಣ ನಮ್ಮದಾಗಬೇಕು. ಈ ಉದ್ಘಾಟನಾ ಸಮಾರಂಭ ದೀಪ ಬೆಳಗಿಸುವುದರ ಜೊತೆಗೆ ಸರಸ್ವತಿಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಂದೀಪ ಬೂದಿಹಾಳರವರು ಅತಿಥಿಗಳನ್ನು ಸಭೆಗೆ ಸ್ವಾಗತಿಸಿ, ಪರಿಚಯಿಸಿದರು ಹಾಗೇ ಪ್ರಾಸ್ತಾವಿಕವಾಗಿ ನರಸಪ್ಪನವರು ಮಾತನಾಡಿ ಈ ವಿಷಯತಜ್ಞರ ಕಾರ್ಯಾಗಾರದ ಉದ್ದೇಶವೇನು ಎನ್ನುವುದನ್ನು ಹೇಳಿದರು ಮತ್ತು ಆಶಯದ ನುಡಿಗಳನ್ನು ಮಾತನಾಡುತ್ತ ಭಾಷೆಗಳಾದ ಕನ್ನಡ ಮತ್ತು ಸಂಸ್ಕೃತ ಹಾಗೂ ಇತಿಹಾಸದ ಬೋಧನೆಯ ಮಹತ್ವ ಮತ್ತು ಅವುಗಳನ್ನು ಯಾವ ದೃಷ್ಠಿಕೋನದಿಂದ ನೋಡಬೇಕು ಎನ್ನುವುದರ ಬಗ್ಗೆ ವಿವರಿಸಿದರು. ನಾರಾಯಣ ಭಟ್ಟ ಇವರ ವಂದನಾರ್ಪಣೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ಮುಕ್ತಾಯ ಗೊಂಡಿತು.

ಇನ್ನು ಮುಂದಿನ ಎರಡು ಅವಧಿಯಲ್ಲಿಯ ವಿಷಯ ತಜ್ಞರ ಕಾರ್ಯಾಗಾರಕ್ಕೆ ಮುನ್ನಡೆಸಲು ಕನ್ನಡಕ್ಕೆ ನಾರಾಯಣಭಟ್ಟರು ಸಂಸ್ಕೃತಕ್ಕೆ ವಿ.ಡಿ ಭಟ್ಟರು ಮತ್ತು ಇತಿಹಾಸಕ್ಕೆ ಚಿದಾನಂದಪಾಟೀಲ ಇವರಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಅವಧಿಗಳನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು.

ಭಾಷೆಯ ವಿಷಯಗಳಾದ ಕನ್ನಡ ಮತ್ತು ಸಂಸ್ಕೃತ ವಿಭಾಗಗಳ ಅವಧಿಯನ್ನು ಭಾಷೆಯ ಕಲಿಕೆಯಲ್ಲಿ ಭಾರತೀಯತೆ ಎನ್ನುವ ವಿಷಯವಾಗಿ ನಿವೃತ್ತ ಕುಲಪತಿಗಳಾದ ಮಲ್ಲೇಪುರಂ ವೆಂಕಟೇಶರವರು ತೆಗೆದುಕೊಂಡಿದ್ದರು. ಭಾಷೆಗಳು ಕೇವಲ ಭಾಷೆಗಳಲ್ಲ, ಅವು ಮೌಲ್ಯಾಧಾರ ಭಾಷೆಗಳು ದೇಶದ ಸಂಸ್ಕೃತಿಯನ್ನು ಮತ್ತು ಮಾನವನ ನಾಗರಿಕತೆಯನ್ನು ಪರಿಚಯಿಸುತ್ತವೆ. ಮಾತೃಭಾಷೆ ಜೀವನವನ್ನು ರೂಪಿಸುತ್ತದೆ. ಪ್ರಾಚೀನ ಭಾಷೆಗಳಾದ ಸಂಸ್ಕೃತ ಮತ್ತು ಈ ನೆಲದ ಭಾಷೆ ಹಾಗೂ ನಮ್ಮೆಲ್ಲರನ್ನು ಒಂದುಗೂಡಿಸಿದ ಭಾಷೆ ಕನ್ನಡ. ಇವುಗಳನ್ನು ಬಳಸಿ, ಬೆಳೆಸಿ ಮುಂದಿನ ತಲೆಮಾರಿಗೆ ಬಿಟ್ಟುಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಈ ವೇದಿಕೆಯಲ್ಲಿ ವಿ.ಡಿ.ಭಟ್ಟರು ಸ್ವಾಗತಿಸಿದರು. ಕೊನೆಯಲ್ಲಿ ನೆನಪಿನ ಕಾಣಿಕೆ ಕೊಡುವುದರ ಮೂಲಕ ವಂದಿಸಲಾಯಿತು.

ಇತಿಹಾಸ ವಿಷಯದ ಅವಧಿಯನ್ನು ಡಾ|| ರವೀಂದ್ರಜಿ ಅವರು ಇತಿಹಾಸ ಮತ್ತು ನಮ್ಮ ಅಸ್ಮಿತೆ ಎನ್ನುವ ವಿಷಯವಾಗಿ ಮಾತನಾಡುವಾಗ ರಾಜಶೇಖರ ಇಟಗಿ ಮತ್ತು ಗೀತಾ ಅವರು ವೇದಿಕೆಗೆ ಸ್ವಾಗತಿಸಿ ವಂದಿಸಿದರು. ಡಾ|| ರವೀಂದ್ರಜಿಯವರು ಮಾತನಾಡುತ್ತಾ ಇತಿಹಾಸ ಬೋಧಿಸುವ ಮತ್ತು ಅಧ್ಯಯನ ಮಾಡುವ ದೃಷ್ಠಿಕೋನ ಯಾವುದು? ಸಾಧುವೆ? ಸಾಧನವೆ? ನಮ್ಮ ಶಕ್ತಿಯ ಇತಿಮಿತಿಯಲ್ಲಿ ಇತಿಹಾಸ ನೋಡುವುದಲ್ಲ, ಇಂದು ನೈಜ ಇತಿಹಾಸದ ಮತ್ತು ಸ್ಪಷ್ಟ ಇತಿಹಾಸ ಬೋಧನೆಯ ಅವಶ್ಯಕತೆ ಇದೆ ಎಂದು ಹೇಳುವುದರ ಜೊತೆಯಲ್ಲಿ ತಜ್ಞರ ಜೊತೆಯಲ್ಲಿ ಸಂವಾದವು ನಡೆಯಿತು. ಅದರಲ್ಲಿ ಜಾತ್ಯಾತೀತತೆ, ಧರ್ಮ ಮತ್ತು ಮೋಕ್ಷಗಳ ಬಗ್ಗೆ ನಡೆದ ಚರ್ಚೆಗಳ ಅರ್ಥಪೂರ್ಣವಾಗಿದ್ದವು. ನಂತರದಲ್ಲಿ ಮೂರು ವಿಭಾಗಗಳಲ್ಲಿ ಪ್ರತ್ಯೇಕ ಅವಧಿಗಳು ನಡೆದವು. ಕನ್ನಡ ವಿಷಯದ ಅವಧಿಯಲ್ಲಿ ಭಾಷೆಯಿಂದ ಭವಿಷ್ಯ ಎನ್ನುವ ವಿಷಯವನ್ನು ತಿಳಿಸಲು ಬಂದ ನಿವೃತ್ತ ಕನ್ನಡ ಅಧ್ಯಾಪಕರಾದ ಎಸ್.ಎಸ್ ರಮೇಶ ಅವರನ್ನು ವೇದಿಕೆಗೆ ನಾರಾಯಣಭಟ್ಟರು ಪರಿಚಯಿಸಿದರು. ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಸ್.ರಮೇಶ ಅವರು ಈ ನೆಲದ ಭಾಷೆ ಕನ್ನಡ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕನ್ನಡದಲ್ಲಿ ನಡೆದರೆ ವಿದ್ಯಾರ್ಥಿಗಳಿಗೆ ಅರ್ಥವಾಗುವುದು ಸುಲಭ. ಗ್ರಹಿಕೆ ಮತ್ತು ಅಭಿವ್ಯಕ್ತಿ ಒಂದೇ ಆಗಿರಬೇಕು. ಭಾಷೆ ಇಲ್ಲದಿದ್ದರೆ ಜಗತ್ತು ಕತ್ತಲಾಗುತ್ತದೆ ಎಂದು ವಿವರಿಸಿದರು.

ಸಂಸ್ಕೃತ ಭಾಷೆಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕುಲಸಚಿವರಾದ ರಾಮಕೃಷ್ಣ ಭಟ್ ಇವರು ಸಂಸ್ಕೃತ ವಿಷಯದ ವೇದಿಕೆಯಲ್ಲಿರುವ ಇವರನ್ನು ನಾರಾಯಣ ಭಟ್ ಇವರು ಸಭೆಗೆ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಮಕೃಷ್ಣ ಭಟ್ ಇವರು ಭಾಷೆಯಿಂದ ಭವಿಷ್ಯ ಎನ್ನುವ ವಿಷಯವನ್ನು ಮಾತನಾಡುತ್ತಾ ದೇಶದ ಅಖಂಡತೆ ಮತ್ತು ಏಕತೆ ಭಾಷೆಯಲ್ಲಿ ಅಡಗಿದೆ. ಪ್ರಾಚೀನ ಎಲ್ಲಾ ಸಂಶೋಧನೆಗಾಗಿ ಮತ್ತು ಈ ದೇಶದ ಇತಿಹಾಸ ಸಂಸ್ಕೃತದಲ್ಲಿ ಅಡಗಿದೆ. ಹೀಗಾಗಿ ಸಂಸ್ಕೃತ ಜನಸಾಮಾನ್ಯರ ಭಾಷೆಯಾಗಬೇಕು. ಭಾರತೀಯ ಚಿಂತನೆಗಳು ಸಂಸ್ಕೃತದಲ್ಲಿ ಅಡಗಿವೆ. ಅವುಗಳನ್ನು ಹೊರತೆಗೆಯುವ ಕರ್ತವ್ಯವನ್ನು ಸಂಸ್ಕೃತ ಭಾಷೆಯಲ್ಲಿ ಕಲಿಕೆಯಲ್ಲಿ ಅಡಗಿದೆ ಎಂದು ಹೇಳಿದರು. ಕೊನೆಯಲ್ಲಿ ನೆನಪಿನ ಕಾಣಿಕೆ ನೀಡುವುದರ ಮೂಲಕ ಅಭಿನಂದಿಸಲಾಯಿತು.

ಪಾಶ್ಚಿಮಾತ್ಯರ ಇತಿಹಾಸ ಕೇವಲ ರಾಜಕೀಯ ಅಂಶಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಭಾರತೀಯ ಇತಿಹಾಸ ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿರುವಂತಹದು. ಇಂದು ಓದುತ್ತಿರುವ ಇತಿಹಾಸದಾಚೆಗೂ ಏನಿದೆ ಎಂದು ಹುಡುಕಬೇಕು. ಇತಿಹಾಸಕ್ಕೆ ಮಾನವೀಯ ಸ್ಪರ್ಶ ಇರಬೇಕು. ಮುಗಿಯುವುದು ಇತಿಹಾಸವಲ್ಲ. ಇಂದಿನ ವರ್ತಮಾನ ನಾಳೆಯ ಇತಿಹಾಸ. ಇತಿಹಾಸದಲ್ಲಿ ಸಾಕ್ಷಿಗಳಿಲ್ಲದೆ ಅನೇಕ ಘಟನೆಗಳಿವೆ. ಸಾಕ್ಷಿಇಲ್ಲವೆಂದು ಘಟನೆಯನ್ನು ಮರೆಮಾಚಲು ಆಗದು ಎಂದು ಇತಿಹಾಸ ತಜ್ಞರ ಎರಡನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂಶೋಧಕ ಜಿ.ವಿ. ಹರೀಶ್ ಅವರು ಮಾತನಾಡಿದರು. ಈ ಅವಧಿಯಲ್ಲಿ ಸಂವಾದವು ನಡೆಯಿತು. ಈ ವೇದಿಕೆಯಲ್ಲಿ ಹನುಮಂತ, ಸುನಗ ಮತ್ತು ರೋಜಾರಮಣಿ ಆರ್.ಎಸ್ ಅವರು ಸ್ವಾಗತಿಸಿ ಫಲಪುಷ್ಪವನ್ನು ನೀಡಿದರು. ವಂದನಾರ್ಪಣೆಯಲ್ಲಿ ಜೆ.ಎಂ. ಜೋಷಿ ಮತ್ತು ಚಿದಾನಂದ ಪಾಟೀಲ ಗೌರವ ಸಮರ್ಪಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ತಿಪ್ಪೇಸ್ವಾಮಿ ಆರ್.ಎಸ್‌ಎಸ್ ಪ್ರಚಾರಕರು, ಸಭೆಯನ್ನು ಉದ್ದೇಶಿಸಿ ಸಾಮಾಜಿಕ ಕಳಕಳಿಯ ಬಗ್ಗೆ ವಿವರಿಸಿದರು. ಪ್ಲಾಸ್ಟಿಕ್ ಮುಕ್ತ ವಾತಾವರಣ, ನೀರನ್ನು ಮಿತವಾಗಿ ಬಳಸುವುದು, ಕುಟುಂಬ ಮಿಲನ, ಆದರಾತಿಥ್ಯ, ಸ್ವದೇಶಿ ಚಿಂತನೆ ಮತ್ತು ಸ್ವದೇಶಿ ವಸ್ತುಗಳ ಬಳಕೆ, ಅಸ್ಪೃಶ್ಯತಾ ನಿವಾರಣೆ, ಸಮಾಜದಲ್ಲಿ ಸಾಮರಸ್ಯ ಮುಂತಾದ ಅನೇಕ ಸಂಗತಿಗಳನ್ನು ಎಲ್ಲರಿಗೂ ಮನದಟ್ಟಾಗುವ ಹಾಗೆ ಪ್ರಸ್ತುತ ಪಡಿಸಿದರು. ನಾವೆಲ್ಲರೂ ಶಿಕ್ಷಕರಿದ್ದೇವೆ, ಸಮಾಜದಲ್ಲಿ ಪರಿವರ್ತನೆ ತರುವ ಅಗಾಧವಾದ ಶಕ್ತಿ ಶಿಕ್ಷಕರಿಗಿದೆ. ನಾವೆಲ್ಲರೂ ಈ ನಿಟ್ಟಿನಲ್ಲಿ ಸಂಕಲ್ಪ ಮಾಡೋಣ ಎಂಬುದಾಗಿ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ಸಮಾರೋಪ ಭಾಷಣದಲ್ಲಿ ಶ್ರೀ ರಘುನಂದನ್, ಆರ್‌ಎಸ್‌ಎಸ್ ಪ್ರಚಾರಕರು ಬಹಳ ಅರ್ಥಗರ್ಭಿತವಾಗಿ ಪ್ರಸ್ತುತಪಡಿಸಿದರು.
ಶಿಕ್ಷಣ ತಜ್ಞರಾಗಲು ಮೊದಲ ಮೆಟ್ಟಿಲೇ ಅಧ್ಯಯನ, ಬರವಣಿಗೆ. ಒಂದಲ್ಲಾ ಒಂದು ವಿಷಯವನ್ನು ಆಧರಿಸಿ ಆಳವಾಗಿ ಅಧ್ಯಯನ ಮಾಡಬೇಕು. ತಿಂಗಳಿಗೆ ಒಂದು ಅಥವಾ ಎರಡು ಲೇಖನಗಳನ್ನು ಬರೆಯುವ ಅಭ್ಯಾಸವನ್ನು ರೂಢಿಮಾಡಿಕೊಳ್ಳಬೇಕು. ವರ್ಷಕ್ಕೆ ಒಂದೆರಡು ಸ್ವರಚಿತ ಕೃತಿಗಳನ್ನು ಲೋಕಾರ್ಪಣೆಯಾಗುವಂತೆ ಪ್ರಯತ್ನಿಸಬೇಕು. ನಿರಂತರ ಸಾಧನೆ ಮಾತ್ರ ಜ್ಞಾನ ಸಂಪಾದನೆಗೆ ಸಹಕಾರಿಯಾಗುತ್ತದೆ. ನಮ್ಮ ಪ್ರಾಚೀನ ಪರಂಪರೆಯೂ ಇದನ್ನೇ ಮತ್ತೆ ಮತ್ತೆ ಸಾರುತ್ತಾ ಬಂದಿದೆ. ಅನೇಕ ಸಾಧು ಸಂತರು, ಕವಿಪುಂಗವರು ನಿರಂತರ ಸಾಧನೆಯಲ್ಲಿ ತೊಡಗಿ ಶ್ರೇಷ್ಠ ಸಾಧಕರಾದರು. ಸಾಧನೆ ಇಲ್ಲದೇ ಸಾಧಕರಾಗಲು ಸಾಧ್ಯವಿಲ, ಸಂಶೋಧನೆ ಒಂದು ಉತ್ತಮ ಹವ್ಯಾಸ ಆಗಬೇಕು. ಕೃತಿಗಳನ್ನು ರಚಿಸುವ ಕಾರ್ಯ ಆರಂಭಿಸಿದರೆ ಅಧ್ಯಯನ ತಾನೇ ತಾನಾಗಿ ರೂಪುಗೊಳ್ಳುತ್ತದೆ ಎಂಬುದಾಗಿ ಅನೇಕ ಉದಾಹರಣೆಗಳ ಸಹಿತ ಸಭೆಯಲ್ಲಿರುವ ಸಭಿಕರ ಮನಗೆದ್ದರು.

ಶಿಕ್ಷಣ ಸಂಕುಲದ ನಿರಂತರ ಪ್ರಯತ್ನ ಪರಿಶ್ರಮ ಯೋಜನೆಯ ಫಲವಾಗಿ ಈ ಶಿಕ್ಷಣ ತಜ್ಞರ ಒಂದು ದಿನದ ಕಾರ್ಯಾಗಾರ ತುಂಬಾ ಯಶಸ್ವಿಯಾಗಿ ಸಂಪನ್ನವಾಯಿತು. ಶ್ರೀ ಸಂದೀಪಬೂದಿಹಾಳ, ಶ್ರೀ ಚಿದಾನಂದ ಪಾಟೀಲ, ಶ್ರೀಮತಿ ಡಾ|| ಭಾಗ್ಯಲಕ್ಷ್ಮಿ, ಶ್ರೀ ನರಸಪ್ಪ, ಶ್ರೀ ರಾಮಕೃಷ್ಣ, ಶ್ರೀ ಉಮೇಶ, ಡಾ|| ವೆಂಕಟ್ರಮಣ ಡಿ.ಭಟ್ಟ, ಶ್ರೀ ಜೆ. ಎಂ ಜೋಶಿ, ಶ್ರೀ ನಾರಾಯಣ ಭಟ್ಟ, ಶ್ರೀಮತಿ ವರಲಕ್ಷ್ಮಿ, ಶ್ರೀಮತಿ ಮಾಯಾಪ್ರಭು ಮುಂತಾದ ಅನೇಕ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದರ ಸಂಪೂರ್ಣ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಸಭಾ ಕಾರ್ಯಕ್ರಮ, ಗೋಷ್ಠಿಗಳ ನಿರ್ವಹಣೆ, ಗೌರವ ಸಮರ್ಪಣೆ, ಪ್ರಾರ್ಥನೆ, ಸ್ವಾಗತ, ವಂದನಾರ್ಪಣೆ ಸಂಪನ್ಮೂಲ ವ್ಯಕ್ತಿಗಳ ಆತಿಥ್ಯ, ಊಟೋಪಚಾರ, ಎ.ಬಿ.ವಿ.ಪಿ ಕಾರ್ಯಕರ್ತರ ಸಹಕಾರ ಎಲ್ಲವೂ ಇಲ್ಲಿ ಅತ್ಯಂತ ಸ್ಮರಣೀಯ ಹೆಜ್ಜೆಗಳು.

ಆರ್.ಎಸ್.ಎಸ್ ಪ್ರಚಾರಕರಾದ ಶ್ರೀ ನಂದೀಶರವರ ಮಾರ್ಗದರ್ಶನ ನಿರಂತರವಾಗಿತ್ತು. ಸುಸಜ್ಜಿತ ಸಭಾಂಗಣ, ಕೊಠಡಿಗಳನ್ನು ನೀಡಿದ ಸಂಸ್ಕೃತ ಭಾರತೀ (ಅಕ್ಷರಂ) ಸಂಸ್ಥೆಯ ಪ್ರಮುಖರಿಗೆ ವಂದಿಸುತ್ತಾ ವರದಿಗೆ ಮಂಗಳವನ್ನು ಹೇಳುತ್ತಿದ್ದೇನೆ.

ಭಾರತ ಮಾತಾ ಕೀ ಜೈ

Highslide for Wordpress Plugin