ಬೆಂಗಳೂರು ಉತ್ತರ ಜಿಲ್ಲೆ
ದಿ. ೧೯.೭.೨೦೨೫ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ವ್ಯಾಸ ಮಹರ್ಷಿಗಳ ಸ್ಮರಣೆಯಲ್ಲಿ, ಎಲ್ಲಾ ಗುರುಗಳ ನೆನಪಿನಲ್ಲಿ ಗುರುಗಳಿಗೆ ನೀಡುವ ಮಹತ್ತರ ಸ್ಥಾನ, ಅವರು ನಡೆದ ಹಾದಿ, ಗುರುಗಳ ಮೌಲ್ಯ, ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳ ಸಾರ್ಥಕ ಬದುಕಿಗೆ ನೆನಪಿಸುವ ಗುರುವಂದನಾ ಕಾರ್ಯಕ್ರಮವನ್ನು ಮಾಕಳಿ ಬಳಿ ಇರುವ ಹಾರೋಕ್ಯಾತನ ಹಳ್ಳಿಯಲ್ಲಿ ಸ್ಥಾಪಿತವಾಗಿರುವ ಎಂಇಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿಶಿಷ್ಟ ರೀತಿಯಲ್ಲಿ ಶಾಲೆಯ ಆಡಳಿತ ಮಂಡಲಿ, ಶಿಕ್ಷಕರು ಮತ್ತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕರ್ತರೊಂದಿಗೆ ಆಚರಿಸಲಾಯಿತು.

ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಗೀತಾ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಎಲ್ಲಾ ಕಾರ್ಯಕರ್ತರು ಹಾಗೂ ಶಿಕ್ಷಕರು ಸಾಮೂಹಿಕವಾಗಿ ಸರಸ್ವತಿ ವಂದನೆ ನಡೆಸಿಕೊಟ್ಟರು. ಬೆಂಗಳೂರು ಉತ್ತರ ಜಿಲ್ಲೆಯ ಗೌರವಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ.ಜಿ.ಕೂಡಗಿರವರು ವೇದಿಕೆಯ ಮೇಲಿನ ಗಣ್ಯರನ್ನು ಪರಿಚಯಿಸಿ ಸಭೆಯಲ್ಲಿ ಹಾಜರಿದ್ದ ಎಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸಿದರು. ನಂತರ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಪದಾಧಿಕಾರಿಗಳು, ಶಿಕ್ಷಕರು ವ್ಯಾಸಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ವಲಯ-೩ರ ಅಧ್ಯಕ್ಷರಾದ ಶ್ರೀ ಗಂಗಾಧರ.ಎಂ.ವಿರವರು ಉತ್ತಮವಾಗಿ ನಡೆಸಿಕೊಟ್ಟರು. ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆಯ ವಿಭಾಗ ಪ್ರಮುಖರಾದ ಶ್ರೀ ಗಂಗಪ್ಪರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ೧೯೬೫ ರಿಂದ ಶ್ರೀ ಕೃ.ನರಹರಿಯವರ ಮಾರ್ಗದರ್ಶನದಲ್ಲಿ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು.
ಕಾರ್ಯಕ್ರಮದ ಪ್ರಮುಖ ವಕ್ತಾರರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ, ಬೆಂಗಳೂರು ಮಹಾನಗರದ ಪ್ರಚಾರ ಪ್ರಮುಖರು ಆದ ಶ್ರೀಯುತ ಪ್ರಮೋದ್ ಎನ್ ಜಿ ರವರು ಮಹರ್ಷಿ ವೇದ ವ್ಯಾಸರು ಹೇಗೆ ವಿಶ್ವಗುರುಗಳಾದರು ಇಂದಿನ ಗುರು ಪರಂಪರೆ ಹೇಗಿದೆ, ನಮ್ಮ ಜೀವನದ ಗತಿಯು ಕೇವಲ ಹುಟ್ಟಿನಿಂದ ಸಾವಿನ ಕಡೆಗೆ ಅಲ್ಲ, ಕತ್ತಲಿನಿಂದ ಬೆಳಕಿನಡೆಗೆ ಸಾಗುವಂತಿರಬೇಕು ಎಂದು ತಿಳಿಸಿದರು. ಕಲಿಯುವ ಮಾನಸಿಕತೆಯನ್ನು ಇಂದಿನ ವಿದ್ಯಾರ್ಥಿ ಪೀಳಿಗೆಯಲ್ಲಿ ಬೆಳೆಸಬೇಕು, ನನಗೆ ಗೊತ್ತಿಲ್ಲ ಎನ್ನುವುದು ಗೊತ್ತಾದರೆ ಅದು ಜ್ಞಾನದ ಮೊದಲ ಹೆಜ್ಜೆ ಎಂಬುದನ್ನು ಮನದಟ್ಟು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ ಜೋಷಿರವರು ೬೦ ವರ್ಷಗಳಿಂದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಶಿಕ್ಷಣ, ಶಿಕ್ಷಕ, ವಿದ್ಯಾರ್ಥಿ, ಸಮಾಜಕ್ಕಾಗಿ ಯಾವ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು. ರಾಷ್ಟ್ರದೇವೋ ಭವ ಎಂಬ ಉಕ್ತಿಯಂತೆ ನಮ್ಮ ರಾಷ್ಟ್ರಕ್ಕೆ ಹೆಚ್ಚು ಮಹತ್ವ ನೀಡಬೇಕೆಂಬುದನ್ನು ತಿಳಿಸಿಕೊಟ್ಟರು. ಬೆಂಗಳೂರು ಉತ್ತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಿರಣ್ ಕುಮಾರ್ ಎಸ್ ರವರು ವಂದನಾರ್ಪಣೆ ನಡೆಸಿಕೊಟ್ಟರು. ಸಾಮೂಹಿಕ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
– ಶ್ರೀ ಗಂಗಾಧರ.ಎಂ.ವಿ. ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ವಲಯ=೩
ಬೆಂಗಳೂರು ದಕ್ಷಿಣ ಜಿಲ್ಲೆ
ಕ.ರಾ.ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆ ಗುರುವಂದನಾ ಕಾರ್ಯಕ್ರಮವನ್ನು ದಿ.೦೨.೦೮.೨೦೨೫ರ ಶನಿವಾರ ಮಧ್ಯಾಹ್ನ ಕಾಡುಗೋಡಿ ಸ.ಪ್ರೌ.ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರು ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮುನಿರಾಜು ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ವಿಧ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಿಸಿ, ಹಿರಿಯ ಶಿಕ್ಷಕರಾದ ಶ್ರೀ ರಮೇಶ್ ರವರು ವೇದಿಕೆಯಲ್ಲಿನ ಶಿಕ್ಷಕರನ್ನು ಸ್ವಾಗತಿಸಿ ಪರಿಚಯಿಸಿದರು, ಪ್ರಾಸ್ತಾವಿಕವಾಗಿ ಶಿಕ್ಷಕ ಸಂಘದ ಕುರಿತಂತೆ ಹಾಗೂ ಕಾರ್ಯಕ್ರಮದ ಉದ್ದೇಶವನ್ನು ಶ್ರೀ ಮುನಿರಾಜು ರವರು ತಿಳಿಸಿದರು.
ವಿಶೇಷವಾಗಿ ನಮ್ಮ ಸಂಸ್ಕೃತಿಯ “ಗುರು ಪರಂಪರೆ ಹಾಗೂ ಗುರುವಿನ ಮಹತ್ವ”ದ ಕುರಿತಂತೆ ಶ್ರೀ ಗಂಗಾಧರಾಚಾರಿ.ಎ ಇವರು ಸವಿಸ್ತಾರವಾಗಿ ತಿಳಿಸಿದರು ಅಂತಿಮವಾಗಿ ಶ್ರೀಮತಿ ಚಂದ್ರಮ್ಮರವರು ವಂದನಾರ್ಪಣೆಯನ್ನು ಸಲ್ಲಿಸಿದರು, ಶಿಕ್ಷಕರು& ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಮುನಿರಾಜು.ಎಂ, ಅಧ್ಯಕ್ಷರು, ಬೆಂಗಳೂರು ದಕ್ಷಿಣ ಜಿಲ್ಲೆ.
ಯಾದಗಿರಿ
ದಿ. ೦೧.೦೮.೨೦೨೫ ರ ಶುಕ್ರವಾರದಂದು ಸಾಯಂಕಾಲ ೦೪.೩೦ ಘಂಟೆಗೆ ಸರಕಾರಿ ಪ್ರೌಢ ಶಾಲೆ ಕೋಟಗೇರಾ ತಾ. ಜಿ. ಯಾದಗಿರಿ, ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಜಿಲ್ಲಾ ಘಟಕ ಯಾದಗಿರಿ ವತಿಯಿಂದ ಗುರುಪೂರ್ಣಿಮೆ ಮತ್ತು ಮಹಾಭಾರತ ರಚನೆ ಮಾಡಿದ ವೇದವ್ಯಾಸರ ಜನ್ಮದಿನದ ನಿಮಿತ್ಯ ಗುರುವಂದನಾ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ಶಾಲಾ ಶಿಕ್ಷಣ ಪ್ರಮುಖರು ಮತ್ತು ಪ್ರಾಚಾರ್ಯರು ಸರಕಾರಿ ಪದವಿ ಪೂರ್ವ ಕಾಲೇಜು ಚಾಮನಾಳ, ಗೌರವಾನ್ವಿತ ಶ್ರೀ ಶಿವಾನಂದ ಸಿಂಧನಕೇರಾರವರು ಭಾಗವಹಿಸಿ ವೇದವ್ಯಾಸರ ಮತ್ತು ವಿವೇಕಾನಂದರ ಕುರಿತಾಗಿ ಮಾತನಾಡುತ್ತಾ ಗುರುವಿನ ಮಹತ್ವದ ಬಗ್ಗೆ ಅತ್ಯಂತ ಮಾರ್ಮಿಕವಾಗಿ ತಮ್ಮ ಮಾತುಗಳಲ್ಲಿ ವಿವರಿಸಿದರು.

ಶ್ರೀ ಚಂದ್ರಕಾಂತ, ಸಜ್ಜನ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಜಿಲ್ಲಾ ಘಟಕ ಯಾದಗಿರಿ ಸಂಘಟನಾ ಕಾರ್ಯದರ್ಶಿ ಮತ್ತು ಸಮಾಜ ವಿಜ್ಞಾನ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೋಟಗೇರಾ, ಇವರು ಗುರುವಿನ ಗುಲಾಮನಾಗುವ ತನಕ ಮುಕುತಿ ದೊರೆಯದು ಎಂಬ ಪುರಂದರ ದಾಸ ಹೇಳಿಕೆ ಉಲ್ಲೇಖ ಮಾಡುತ್ತಾ ಸುಧೀರ್ಘವಾಗಿ ಗುರು ಪರಂಪರೆ ಕುರಿತಾಗಿ ಉಪನ್ಯಾಸ ನೀಡಿದರು. ಕಾರ್ಯಕ್ರಮ ದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಜಿಲ್ಲಾ ಘಟಕ ಯಾದಗಿರಿ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ನಾಯ್ಕಲ್, ತಾ. ಶಹಾಪುರ, ಜಿ. ಯಾದಗಿರಿ, ಶ್ರೀ ಬಸವರಾಜ. ಎಸ್. ಬಾನರ್, ಕೋಡ್ಲಾರವರು ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ಅಪಾರವಾಗಿ ತೋರುತ್ತಿದ್ದ ಗೌರವದ ಕುರಿತಾಗಿ ಮತ್ತು ಗುರುವಂದನಾ ಕಾರ್ಯಕ್ರಮ ಮಾಡುವ ಮೂಲ ಉದ್ದೇಶದ ಬಗ್ಗೆ ಸವಿವರವಾಗಿ ಹೇಳಿದರು.
ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಜಿಲ್ಲಾ ಘಟಕ ಯಾದಗಿರಿ ಅಧ್ಯಕ್ಷರು ಮತ್ತು ಸರಕಾರಿ ಪ್ರೌಢ ಶಾಲೆ ಕೋಟಗೇರಾ, ತಾ. ಜಿ. ಯಾದಗಿರಿ ಶಾಲೆಯ ಗಣಿತ ಶಿಕ್ಷಕರಾದ ಶ್ರೀ ಪ್ರಕಾಶ. ವಳಾಪೂರರವರು ಪ್ರಾಸ್ತಾವಿಕ ಮಾತನಾಡುತ್ತಾ ಗುರು ಶಿಷ್ಯರ ಸಂಬಂಧದ ಬಗ್ಗೆ ಮತ್ತು ಗುರುಪೂರ್ಣಿಮೆ ಕುರಿತಾಗಿ ವಿವರಿಸಿದರು. ಕಾರ್ಯಕ್ರಮ ದಲ್ಲಿ ಶ್ರೀ ಕಳಸಪ್ಪ. ವಡಗೇರಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ತಾಲೂಕ ಘಟಕ ಗುರುಮಿಠಕಲ್, ಶ್ರೀ ಮಲ್ಲೇಶಪ್ಪ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಸದಸ್ಯರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ತಾಲೂಕ ಘಟಕ ಗುರುಮಿಠಕಲ್, ಶ್ರೀ ಸತ್ಯಮೂರ್ತಿ ವಿಜ್ಞಾನ ಶಿಕ್ಷಕರು, ಶ್ರೀ ಶ್ರೀನಿವಾಸ ಹಿಂದಿ ಶಿಕ್ಷಕರು, ಶ್ರೀ ಸಿದ್ದಪ್ಪ, ಅತಿಥಿ ಶಿಕ್ಷಕರು, ಶ್ರೀ ಸಾಬರೆಡ್ಡಿ ಅತಿಥಿ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೋಟಗೇರಾ, ತಾ. ಜಿ. ಯಾದಗಿರಿ ಮತ್ತು ೦೮ ನೇ ತರಗತಿ ಮತ್ತು ೦೯ ನೇ ತರಗತಿ ಮಕ್ಕಳು ಸರಕಾರಿ ಪ್ರೌಢ ಶಾಲೆ ಕೋಟಗೇರಾ, ತಾ. ಜಿ. ಯಾದಗಿರಿ, ಇವರು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.