38 ನೆಯ ಪ್ರತಿಭಾ ಪುರಸ್ಕಾರ – ಬೆಂಗಳೂರು ದಕ್ಷಿಣ ಜಿಲ್ಲೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ವತಿಯಿಂದ ದಿನಾಂಕ ೧೦-೮-೨೦೨೫ರಂದು ಸತತವಾದ ೩೮ನೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರು ಎನ್.ಆರ್. ಕಾಲೋನಿಯ ಎ.ಪಿ.ಎಸ್ ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮ ಶ್ರೀಮತಿ ಮಾಯಾಪ್ರಭುರವರಿಂದ ಸರಸ್ವತಿ ವಂದನೆಯೊಂದಿಗೆ ಆರಂಭವಾಗಿ ವೇದಿಕೆಯ ಗಣ್ಯರಿಂದ ಜ್ಯೋತಿ ಬೆಳಗಿಸುವ ಹಾಗೂ ಶಾರದಾಮಾತೆಗೆ ಪುಷ್ಪಾರ್ಚನೆ ಸಲ್ಲಿಸುವ ಮುಖಾಂತರ ಉದ್ಘಾಟಿಸಲ್ಪಟ್ಟಿತು.

ಸಂಘದ ರಾಜ್ಯ ಖಜಾಂಚಿಗಳಾದ ಶ್ರೀ ಸುರೇಂದ್ರರವರು ವೇದಿಕೆ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು ಹಾಗೂ ಆಗಮಿಸಿದ ಪಾಲಕ, ಶಿಕ್ಷಕ, ವಿದ್ಯಾರ್ಥಿಗಳನ್ನು ಮತ್ತು ಸಂಘದ ಪದಾಧಿಕಾರಿಗಳನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ರಾಜ್ಯ ಸಂಘದ ಉಪಾಧ್ಯಕ್ಷರಾದ ಶ್ರೀ.ಎ. ಗಂಗಾಧರಾಚಾರಿ ಇವರ ಪ್ರಾಸ್ತಾವಿಕ ನುಡಿಗಳಲ್ಲಿ ಮಾಧ್ಯಮಿಕ ಶಿಕ್ಷಕ ಸಂಘ ನಡೆದು ಬಂದ ದಾರಿ, ಸಂಘದ ಶೈಕ್ಷಣಿಕ ಚಟುವಟಿಕೆಗಳು, ಶಿಕ್ಷಣ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಘ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಸತತವಾಗಿ ೩೮ ವರ್ಷಗಳ ನಿರಂತರವಾಗಿ ಈ ಪ್ರತಿಭಾ ಪುರಸ್ಕಾರ ನಡೆಸಿಕೊಂಡು ಬರುತ್ತಿರುವ ಬಗ್ಗೆ ಸಭಾ ಗಮನಕ್ಕೆ ತಂದರು. ಈ ಹಿಂದೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಮತ್ತು ಹಿರಿಯರಿಂದ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಮಾರ್ಗದರ್ಶನ ನೀಡಿರುವ ಕುರಿತು ಮಾಹಿತಿ ನೀಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿಯವರಾದ ಶ್ರೀ.ಬಿ.ಎಂ.ಎಸ್. ವೃಷಬೇಂದ್ರ ಸ್ವಾಮಿರವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಮುಂದಿನ ಅವರ ಭವಿಷ್ಯಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಭಾಗವಾದ ಪ್ರತಿಭಾಪುರಸ್ಕಾರ ಅಂಗವಾಗಿ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿಕಲ ಚೇತನ ವಿದ್ಯಾರ್ಥಿಗಳಿಗೆ ಮತ್ತು ಅತೀ ಹೆಚ್ಚು ಅಂಕ ಪಡೆದ ಶಿಕ್ಷಕರ ಮಕ್ಕಳಿಗೆ ಅಲ್ಲದೇ ಹೆಚ್ಚು ಅಂಕ ಪಡೆದ ಶಾಲಾ ಪ್ರಥಮಿಗರಿಗೆ ವೇದಿಕೆಯ ಮೇಲೆ ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು. ವೇದಿಕೆಯ ಗಣ್ಯರು ಈ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ನಂತರ ವೇದಿಕೆ ಹಿರಿಯರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ. ನ.ತಿಪ್ಪೇಸ್ವಾಮಿಯವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿದ್ಯಾರ್ಥಿಗಳು ದೈನಂದಿನ ಜೀವನ ಪದ್ಧತಿಯಲ್ಲಿ ಅನುಸರಿಸಬೇಕಾದ ವಿಚಾರಗಳನ್ನು ಅನೇಕ ಉದಾಹರಣೆಗಳ ಮುಖಾಂತರ ತಿಳಿಸಿ ಹೇಳಿದರು. ಶಿಕ್ಷಣದ ಜೊತೆಗೆ ಸಂಸ್ಕಾರ, ರಾಷ್ಟ್ರೀಯತೆ, ಮಾನವೀಯ ಮೌಲ್ಯಗಳು ಹಾಗೂ ಗುರುಹಿರಿಯರ ಬಗ್ಗೆ ಗೌರವಿಸುವ ಗುಣಗಳನ್ನು ಬೆಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ವೇದಿಕೆಯ ಇನ್ನೋರ್ವ ಅತಿಥಿಗಳಾದ ಡಾ|| ಸಿ.ಎ ವಿಷ್ಣು ಭರತ್ ಆಲಂಪಲ್ಲಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ನಿಮ್ಮ ಮುಂದಿನ ವಿದ್ಯಾಭ್ಯಾಸದ ಮಾರ್ಗಕ್ಕೆ ಇಂದಿನ ಈ ಕಾರ್ಯಕ್ರಮ ಪ್ರೇರಣಾದಾಯಕ ಕಾರ್ಯಕ್ರಮವೆಂದು ತಿಳಿಸಿದರು. ವಿದ್ಯಾರ್ಥಿಗಳ ಭವಿಷ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸಾಧನೆಗೈಯ್ಯುವಂತೆ ಶುಭ ಹಾರೈಸಿದರು ಹಾಗೂ ಮಾಧ್ಯಮಿಕ ಶಿಕ್ಷಕ ಸಂಘ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕಾರ್ಯಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯ ಇನ್ನೋರ್ವ ಅತಿಥಿಗಳಾದ ಶ್ರೀ ಚಂದ್ರಕಾಂತ್ ಕೊನಿದೆಲಾರವರು ತಮ್ಮ ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಳ್ಳುತ್ತಾ ತಾವು ಬೆಳೆದು ಬಂದ ದಾರಿಯ ಬಗ್ಗೆ ಹಾಗೂ ತಮ್ಮ ಸಾಧನೆ ಕುರಿತಂತೆ ಮಾಹಿತಿ ನೀಡಿದರು. ಕಷ್ಟಪಟ್ಟು ಶ್ರದ್ಧೆಯಿಂದ ಮುಂದಿನ ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡಿದಲ್ಲಿ ಯಶಸ್ಸನ್ನು ಸಾಧಿಸಬಹುದೆಂದು ಅನೇಕ ಸಾಧಕರ ಉದಾಹರಣೆಗಳೊಂದಿಗೆ ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಈ ರೀತಿಯ ಅನೇಕ ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಿಕೊಂಡು ಬರುತ್ತಿರುವ ಬಗ್ಗೆ ಸಭಾಗಮನಕ್ಕೆ ತಂದರು. ರಾಷ್ಟ್ರೀಯ ಸಂಘಟನೆಯಾದ ಎಬಿಆರ್‌ಎಸ್‌ಎಂನ ಧ್ಯೇಯ ವಾಕ್ಯದಂತೆ ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕನ ಹಿತಕ್ಕಾಗಿ ಸಮಾಜ, ಇದರಂತೆ ಮಾಧ್ಯಮಿಕ ಶಿಕ್ಷಕ ಸಂಘ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು ಹಾಗೂ ವಿದ್ಯಾರ್ಥಿಗಳಿಗೆ ಭವಿಷ್ಯದ ಕುರಿತು ಶುಭ ಕೋರಿದರು.

ಸಂಘದ ಹಿರಿಯರಾದ ಶ್ರೀಮತಿ ವಾಸುಕಿ ಗುಬ್ಬಿ ರವರು ಈ ಕಾರ್ಯಕ್ರಮದ ಯಶಸ್ವಿಗಾಗಿ ಮಾರ್ಗದರ್ಶನ ಮಾಡುವುದರ ಜೊತೆಗೆ, ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಅಂತಿಮವಾಗಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಶ್ರೀಮುನಿರಾಜುರವರು ಸರ್ವರಿಗೂ ವಂದನಾರ್ಪಣೆಯನ್ನು ಸಲ್ಲಿಸಿದರು. ಒಟ್ಟಾರೆಯಾಗಿ ಎಲ್ಲಾ ಕಾರ್ಯಕರ್ತರ ಶ್ರಮದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್ಟರು ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕೇಂದ್ರ ಕಾರ್ಯಾಲಯದ ಪ್ರಮುಖರಾದ ಶ್ರೀ.ಜೆ.ಎಂ ಜೋಶಿರವರು ಹಾಗೂ ಜಿಲ್ಲಾ ಪ್ರಮುಖರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.

ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

Highslide for Wordpress Plugin