ದಿನಾಂಕ 19-10-2025 ರಂದು ಜಯನಗರ ಬಡಾವಣೆಯಲ್ಲಿರುವ ಪ್ರಸನ್ನ ಕಲ್ಯಾಣಮಂಟಪದಲ್ಲಿ ಮಾನ್ಯ. ಕೃ.ನರಹರಿಯವರ ವೈಕುಂಠಸಮಾರಾಧನೆಯ ಪ್ರಯುಕ್ತ ಅವರ ಕುಟುಂಬದವರು ದಿವಂಗತರ ಆತ್ಮೀಯ ಬಳಗವನ್ನು ಆಹ್ವಾನಿಸಲಾಗಿತ್ತು. ಉಪಸ್ಥಿತರಾಗಿದ್ದ ಕೃ.ನರಹರಿಯವರ ಅಭಿಮಾನಿಗಳ ಕಡೆಯಿಂದ ಕೆಲವು ಹಿರಿಯರು ತಮ್ಮೊಂದಿಗಿನ ಅವರ ಒಡನಾಟವನ್ನು ಸ್ಮರಿಸುತ್ತ… ನುಡಿನಮನಗಳನ್ನು ಅರ್ಪಿಸಿದರು.



ಶ್ರೀ ತಿಪ್ಪೇಸ್ವಾಮಿಯವರು ಮಾತನಾಡುತ್ತ ನರಹರಿಯವರು ಸಂಘದ ನಿರ್ದೇಶನಕ್ಕೆ ಅನುಸಾರವಾಗಿಯೇ ಮೂರು ಬಾರಿ ಶಾಸಕರಾಗಿ ಶಿಕ್ಷಕ ಸಮುದಾಯಕ್ಕೆ, ಶಿಕ್ಷಣಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಕುರಿತು ಹೇಳುತ್ತ.. ಸ್ವಂತಕ್ಕಾಗಿ ಏನನ್ನೂ ಬಯಸದ, ನಿರೀಕ್ಷಿಸದ ಅವರ ನಿಸ್ವಾರ್ಥ ವ್ಯಕ್ತಿತ್ವ ಸಮಾಜಸೇವೆಯಲ್ಲಿ ತೊಡಗಿದ ತಮ್ಮಂತಹ ಹಲವಾರು ಕಾರ್ಯಕರ್ತರಿಗೆ ಸದಾಕಾಲವೂ ಮಾರ್ಗದರ್ಶನ ಮಾಡುತ್ತಿದ್ದರೆಂದು ಕೃತಜ್ಞತೆಯನ್ನು ಸಲ್ಲಿಸಿದರು.
ಹಿರಿಯ ಸಂಸ್ಕೃತ ವಿದ್ವಾಂಸರಾದ ಶ್ರೀ ಕೋಟೆಮನೆ ರಾಮಚಂದ್ರಭಟ್ ಅವರು ಚನ್ನೇನಹಳ್ಳಿಯಲ್ಲಿರುವ ಜನಸೇವಾಕೇಂದ್ರವೆಂಬ ಶಿಕ್ಷಣ ಕೇಂದ್ರವು ಒಂದು ಆದರ್ಶ ಸಂಸ್ಥೆಯಾಗಿ ಬೆಳೆಯುವಲ್ಲಿ ಕೃ.ನರಹರಿಯವರ ಅಮೂಲ್ಯ ಕೊಡುಗೆಯನ್ನು ಸ್ಮರಿಸುತ್ತ, ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಕರಲ್ಲಿಯೂ ಸಹ ಮೌಲ್ಯಪ್ರಜ್ಞೆಯ ಅಗತ್ಯವನ್ನು ನರಹರಿಯವರು ಯಾವಾಗಲೂ ಹೇಳುತ್ತಿದ್ದರೆಂಬುದನ್ನೂ ಸಹ ಸ್ಮರಿಸುತ್ತ, ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ಕೃ.ನರಹರಿಯವರಿಗಿಂತ ಹಲವು ವರ್ಷಗಳೇ ಕಿರಿಯರಾದರೂ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಹೆಚ್.ನಾಗಭೂಷಣರಾವ್ ಸಂಘದ ಕಾರ್ಯನಿಮಿತ್ತ ದೇಶದ ಅನೇಕ ಸ್ಥಳಗಳಿಗೆ ಅವರೊಂದಿಗೆ ಪ್ರಯಾಣ ಮಾಡಿದ್ದ ಸಂದರ್ಭಗಳನ್ನು ನೆನಪು ಮಾಡಿಕೊಂಡರು. ಕೃ.ನರಹರಿಯವರಲ್ಲಿದ್ದ ಹೊಂದಾಣಿಕೆಯ ಸ್ವಭಾವ ಸದಾ ನೆನಪಿಡುವಂತಹುದು. ಅನೇಕ ಸಂದರ್ಭಗಳಲ್ಲಿ ತಮಗೆ ಅತಿ ಅವಶ್ಯಕವಾದ ಆಹಾರ ಪದಾರ್ಥಗಳನ್ನೂ ಸಹ ಜೊತೆಯಲ್ಲಿದ್ದವರಿಗೆ ಬೇಡವೆನಿಸಿದಲ್ಲಿ ತಾವೂ ತ್ಯಜಿಸುತ್ತಿದ್ದರಂತೆ. ಅವರು ಯಾರಿಗೂ, ಯಾವಾಗಲೂ ನೋವು ಮಾಡದವರು, ಅತಿ ಶಿಸ್ತಿನ, ಸಮಯಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದವರು. ಯಾವುದೇ ಕೆಲಸವನ್ನಾದರೂ, ಯಾರಿಗಾದರೂ ಕಲಿಸುವಾಗ ಅವರಲ್ಲಿರುತ್ತಿದ್ದ ತಾಳ್ಮೆ ಅನುಕರಣೀಯ. ಸಂಘದ ಆದೇಶಗಳನ್ನು ಕಣ್ಣುಮುಚ್ಚಿ ಪಾಲಿಸುತ್ತಿದ್ದವರು. ಮೌಲ್ಯಶಿಕ್ಷಣದ ಬಗ್ಗೆ, ನಮ್ಮ ಇತಿಹಾಸದ ಬಗ್ಗೆ ಅವರಿಗೆ ಅಪಾರ ಕಾಳಜಿ ಇತ್ತು.
ಕುಟುಂಬದ ಪರವಾಗಿ ಶ್ರೀ ಕೃಷ್ಣಪ್ರಸಾದ್ರವರು ನರಹರಿಯವರ ಒಳ್ಳೆಯ ಗುಣಗಳನ್ನು ನೆನಪಿಸಿಕೊಂಡರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
