ಪ್ರಭಾರ ಮುಖ್ಯ ಶಿಕ್ಷಕರ ಭತ್ಯೆ ಪ್ರತಿ ತಿಂಗಳು ಪಾವತಿಸಿ- ಕಲಬುರಗಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕ ಡಿಡಿಪಿಐಗೆ ಮನವಿ
ಸರ್ಕಾರಿ ಪ್ರೌಢಶಾಲೆಗಳಲ್ಲಿ ಪ್ರಭಾರ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪ್ರಭಾರ ಭತ್ಯೆಯನ್ನು ಪ್ರತಿ ಮಾಸಿಕ ವೇತನಬಿಲ್ನೊಂದಿಗೆ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕ ಡಿಡಿಪಿಐಗೆ ಮನವಿ ಸಲ್ಲಿಸಿ ಒತ್ತಾಯಿಸಿತು.
ಜಿಲ್ಲೆಯ ಸರಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಮುಖ್ಯಶಿಕ್ಷಕ ಹುದ್ದೆಗೆ ಅದೇ ಶಾಲೆಯ ಹಿರಿಯ ಅರ್ಹ ಶಿಕ್ಷಕರನ್ನು ಪ್ರಭಾರ ಮುಖ್ಯಶಿಕ್ಷಕರನ್ನಾಗಿ ನೇಮಿಸಲಾಗಿದೆ.

ಪ್ರಭಾರ ಮುಖ್ಯಶಿಕ್ಷಕರು ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಹಾಲಿ ಅನುಸರಿಸುತ್ತಿರುವ ಕಾರ್ಯವಿಧಾನದ ಜಟಿಲತೆಯಿಂದಾಗಿ ಹಲವಾರು ಸಂದರ್ಭಗಳಲ್ಲಿ ಪ್ರಭಾರ ಭತ್ಯೆ ಪಡೆಯುವುದು ಬಹಳ ಕಷ್ಟಕರವಾಗಿದೆ. ಈಗಾಗಲೇ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಭಾರ ಪ್ರಾಚಾರ್ಯರಿಗೆ ಸರಕಾರಿ ಆದೇಶದನ್ವಯ ಮಂಜೂರು ಮಾಡಲಾಗುತ್ತಿದೆ.
ಆದ್ದರಿಂದ ಸರಕಾರಿ ಪ್ರೌಢಶಾಲೆಗಳಲ್ಲಿ ಪ್ರಭಾರ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪ್ರಭಾರ ಭತ್ಯೆಯನ್ನು ಪ್ರತಿ ಮಾಸಿಕ ವೇತನ ಬಿಲ್ನೊಂದಿಗೆ ಪಾವತಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲಾಧ್ಯಕ್ಷ ಸಂಜುಕುಮಾರ ಪಾಟೀಲ್, ರಾಜ್ಯ ಕಾರ್ಯದರ್ಶಿ ಮಹೇಶ ಬಸರಕೋಡ, ವಿಭಾಗ ಪ್ರಮುಖ ಚಂದ್ರಶೇಖರ ಪಾಟೀಲ್, ಖಜಾಂಚಿ ದೇವೇಂದ್ರ ಕನ್ನೊಳ್ಳಿ, ರುದ್ರಪ್ಪ ಚಟ್ನಳ್ಳಿ, ಬಾಬರ, ಗುರುಶಾಂತ ಚಿಂಚೋಳಿ ಇದ್ದರು.