ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ – ಬೀದರ್

ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದರು. ನಗರದ ಸರಸ್ವತಿ ಶಾಲೆಯ ಗಿರಿಜಾ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ೨೦೨೬ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಕಲಂ ೩೭೧(ಜೆ) ತಿದ್ದುಪಡಿ ಕಾಯ್ದೆ ಪರಿಣಾಮಕಾರಿ ಅನುಷ್ಠಾನ, ಪದೋನ್ನತಿ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯನಾಗಿದ್ದ ಅವಧಿಯಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದೆ ಎಂದು ಸ್ಮರಿಸಿದರು.

ಮಾಧ್ಯಮಿಕ ಶಿಕ್ಷಕ ಸಂಘ ಎಲ್ಲ ಶಿಕ್ಷಕರ ಸಂಘಗಳಿಗೆ ತಾಯಿ ಬೇರು ಇದ್ದಂತೆ. ಶಿಕ್ಷಕರ ಹಿತ ರಕ್ಷಣೆಯೇ ಸಂಘದ ಧ್ಯೇಯವಾಗಿದೆ ಎಂದು ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷ ಸಂದೀಪ್ ಬೂದಿಹಾಳ್ ಹೇಳಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ನಾಗರಾಜ ಕರ್ಪೂರ, ಪ್ರಾಚಾರ್ಯ ಶಿವಾನಂದ ಸಿಂಧನಕೇರಾ, ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಮಂಗಲಗಿ, ಕಲಬುರಗಿ ವಿಭಾಗೀಯ ಪ್ರಮುಖ ಚಂದ್ರಶೇಖರ ಪಾಟೀಲ, ಕಲಬುರಗಿ ಅಧ್ಯಕ್ಷ ಸಂಜುಕುಮಾರ ಪಾಟೀಲ, ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ, ರಾಜ್ಯ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ ರಾಗಾ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಗಣಪತಿ ಸೋಲಪುರೆ, ಶಿವಕುಮಾರ ಉಪ್ಪೆ, ಸೂರ್ಯಕಾಂತ ಐನಾಪುರೆ, ಮನೋಹರ ಬಿರಾದಾರ, ಸಂತೋಷ್ ಸೋಲಪುರೆ, ಆನಂದ ಜಾಧವ್ ಮತ್ತಿತರರು ಇದ್ದರು. ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದ ಗೌರವ ಸಲಹೆಗಾರ ಬಸವರಾಜ ಸ್ವಾಮಿ ಹೆಡಗಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಪಾಟೀಲ ಸ್ವಾಗತಿಸಿದರು. ಉಪಾಧ್ಯಕ್ಷ ಲಕ್ಷ್ಮಣ ಪೂಜಾರಿ ನಿರೂಪಿಸಿದರು. ಖಜಾಂಚಿ ಸಂತೋಷ್ ಮಂಗಳೂರೆ ವಂದಿಸಿದರು.

Highslide for Wordpress Plugin