ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಡಾ|| ಹೆಚ್.ಎಸ್ ಗಣೇಶ್ ಭಟ್ಟರು ಮಾತನಾಡಿ ಅತಿ ಹೆಚ್ಚು ಅಂಕ ಗಳಿಸುವುದು ಸಾಮಾನ್ಯ ಸಾಧನೆ ಅಲ್ಲ. ಅದರ ಹಿಂದೆ ಪರಿಶ್ರಮ, ತಂದೆ- ತಾಯಿಯರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನಗಳು ಕಾರಣ. ಪ್ರತಿ ವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ನೀಡಿದರು. ಪಾಲಕರಿಗೂ ಕೆಲವು ಸಲಹೆ ನೀಡಿದರು. ಮಕ್ಕಳಿಗೆ ಎಷ್ಟು ಅವಶ್ಯಕತೆಯೋ ಅಷ್ಟೇ ನೀಡಿ ಅತೀ ವೈಭವೀಕರಣ ಬೇಡ ಎಂದರು. ನಮ್ಮ ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಸಬಾರದೆಂದು ಕರೆ ನೀಡಿದರು.
ಕಾರ್ಯಾಲಯ ಪ್ರಮುಖರಾದ ಶ್ರೀ ಜಿ.ಎಸ್ ಕೃಷ್ಣಮೂರ್ತಿಯವರು ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಸಂಘದ ಪೋಷಕರಾದ ಶ್ರೀ. ಹೆಚ್ ನಾಗಭೂಷಣರಾವ್ರವರು ಗುರುವಂದನಾ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಗುರುಕುಲ ಪದ್ಧತಿಗಳು ಗುರು- ಶಿಷ್ಯರ ಸಂಬಂಧ ಹೇಗಿರಬೇಕು ಎಂಬುದನ್ನು ವಿವರಿಸಿದರು.
ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಭಟ್ರವರು 30 ವರ್ಷಗಳಿಂದ ಪ್ರತಿಭಾ ಪುರಸ್ಕಾರವನ್ನು ಆಯೋಜಿಸುವ ಉದ್ದೇಶದ ಬಗ್ಗೆ, ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ಮತ್ತು ಉತ್ತಮ ಪ್ರಜೆಗಳಾಗಿ ಭಾವಿ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಪದವಿ ಪಡೆಯದ ಸಾಧಕರ ಸಾಧನೆಗಳ ಬಗ್ಗೆ ಕೊಂಡಾಡಿದರು.
ದಿನಾಂಕ 5-7-2015 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಶಿಕ್ಷಕರ ಸದನದಲ್ಲಿ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಶಾಲಾ ಪ್ರಥಮಿಗರು ಮತ್ತು ಶೇ. 85 ಕ್ಕಿಂತ ಅಧಿಕ ಅಂಕ ಗಳಿಸಿದ ಶಿಕ್ಷಕರ ಮಕ್ಕಳಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಜಿಲ್ಲೆಯು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಿತ್ತು. ಕಾರ್ಯಕ್ರಮವು ಶ್ರೀಮತಿ ಅರುಣಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಜಿಲ್ಲಾ ಕಾರ್ಯದರ್ಶಿಯಾದ ಶ್ರೀ ಎಸ್.ಜಿ. ತಾಂಬೆಯವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಗಣ್ಯರೆಲ್ಲರೂ ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌ|| ಅಧ್ಯಕ್ಷರಾದ ಶ್ರೀ ಜೆ.ಎಮ್ ಜೋಶಿಯವರು ಪ್ರಾಸ್ತಾವಿಕ ನುಡಿಯಲ್ಲಿ ಸಂಘದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಬಿ.ಕೆ. ವರಲಕ್ಷ್ಮಿಯವರು ವಿದ್ಯಾರ್ಥಿಗಳಿಗೆ ಗುರಿಯನ್ನು ತಲುಪಲು ಹೇಗೆ ಪರಿಶ್ರಮ ಪಡಬೇಕು, ಗುರು-ಹಿರಿಯರನ್ನು ಹೇಗೆ ಕಾಣಬೇಕು ಎಂಬುದನ್ನು ತಿಳಿಸಿದರು. ಕಾರ್ಯಾಧ್ಯಕ್ಷರು ಮತ್ತು ಶಾಸಕರಾದ ಶ್ರೀ ಅರುಣ ಶಹಾಪೂರ ಮಹಿಳಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸೀತಾಲಕ್ಷ್ಮಿಯವರು ಉಪಸ್ಥಿತರಿದ್ದರು. ಶ್ರೀ ನಾರಾಯಣ ಭಟ್, ಶ್ರೀ ಸಿದ್ದೇಗೌಡ, ಶ್ರೀ ಜನಾರ್ಧನ್, ಶ್ರೀ ಚಂದ್ರಮೌಳಿ, ಶ್ರೀ ವಿಜಯ ಕೃಷ್ಣ, ಶ್ರೀ ನಾರಾಯಣ, ಶ್ರೀಮತಿ ಸುಮಂಗಲಾ ಹೆಗಡೆ, ಶಿಕ್ಷಕರ ಮಕ್ಕಳು ಮತ್ತು ಶಾಲಾ ಪ್ರಥಮಿಗರು ಪಟ್ಟಿಗಳನ್ನು ಓದಿದರು. ಅಧ್ಯಕ್ಷರಾದ ಡಾ|| ಸೂಗೂರು ತಿಪ್ಪೇಸ್ವಾಮಿಯವರು ವಂದನಾರ್ಪಣೆ ಮಾಡಿದರು. ಶ್ರೀಮತಿ ಲತಾದೇವಿಯವರು ವಂದೇ ಮಾತರಂ ಗೀತೆ ಹೇಳಿದರು. ಶ್ರೀ ಗಂಗಾಧರ ಕಾರ್ಯಕ್ರಮವನ್ನು ನಿರೂಪಿಸಿದರು. ಉತ್ತರ ಜಿಲ್ಲೆಯ ಸುಮಾರು ೪೦೦ ವಿದ್ಯಾರ್ಥಿಗಳು ಮತ್ತು 100 ಶಿಕ್ಷಕರ ಮಕ್ಕಳು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ನಾರಾಯಣ ಎಲ್.ಜಿ. , ಪದಾಧಿಕಾರಿಗಳು, ಕ.ರಾ.ಮಾ.ಶಿ.ಸಂ, ಬೆಂಗಳೂರು ಉತ್ತರ ಜಿಲ್ಲೆ