ಹಿಂದಿನ ಕಾಲದಲ್ಲಿ ಋಷಿ ಮುನಿಗಳ ಆಶ್ರಮಗಳೇ ವಿದ್ಯಾಕೇಂದ್ರಗಳಾಗಿರುತ್ತಿದ್ದವು. ಅಲ್ಲಿನ ಋಷಿಮುನಿಗಳು ವಿದ್ಯೆಯ ಜೊತೆಗೆ ನಮ್ಮ ಸಂಸ್ಕೃತಿಯ ಪರಂಪರೆಯನ್ನು ಕಲಿಸುತ್ತಿದ್ದರು. ಅವರ ನಡೆನುಡಿ ಆಚಾರ ವಿಚಾರಗಳು ವಿದ್ಯಾರ್ಥಿಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿದ್ದವು. ವಿದ್ಯೆ ಕಲಿತ ನಂತರ ಗುರುಗಳಿಗೆ ಗುರು ಕಾಣಿಕೆ ಸಲ್ಲಿಸುವ ಸಂಪ್ರದಾಯವೂ ಆಗಿನ ಕಾಲದಲ್ಲಿತ್ತು. ಗುರು ದ್ರೋಣಾಚಾರ್ಯರಿಗೆ ಏಕಲವ್ಯ ತನ್ನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ನೀಡಿದ ದಿನವೂ ಕೂಡ ಗುರು ಪೌರ್ಣಿಮೆ ದಿನವಾಗಿದೆ.
ಬೃಹಸ್ಪತಿ, ದೇವತೆಗಳಿಗೆ ಗುರುವಾಗಿದ್ದರೆ ಶುಕ್ರಾಚಾರ್ಯ ರಾಕ್ಷಸರಿಗೆ ಗುರುವಾಗಿದ್ದ. ಶ್ರೀ ಕೃಷ್ಣ ದೈವ ಸ್ವರೂಪಿಯಾಗಿದ್ದರೂ ಆತನಿಗೂ ಕೂಡ ಬಾಲ್ಯದಲ್ಲಿ ಸಾಂದಿಪನಿ ಋಷಿ ಗುರುವಾಗಿದ್ದ. ರಾಮಲಕ್ಷ್ಮಣರಿಗೆ ವಸಿಷ್ಠ ಮುನಿಗಳು ಗುರುವಾಗಿದ್ದರು. ಅನೇಕ ಸಾಮ್ರಾಜ್ಯ ಸ್ಥಾಪನೆಗೆ ಋಷಿ ಮುನಿಗಳು ಗುರುವಾಗಿದ್ದರು. ಗುರುಶಿಷ್ಯ ಸಂಬಂಧದಲ್ಲಿ ಜಾತಿಯ ಸಾಮರಸ್ಯಕ್ಕೂ ಉದಾಹರಣೆ ನೀಡುವುದಾದರೆ ಶಿಶುನಾಳ ಷರೀಫನಿಗೆ ಕಳಸದ ಗೋವಿಂದ ಭಟ್ಟರು ಗುರುಗಳಾಗಿದ್ದರು ಎಂದು ಉಪನ್ಯಾಸಕ ಡಾ|| ಎಸ್ ಎಸ್ ವೇಣುಗೋಪಾಲ್ ತಮ್ಮ ಉಪನ್ಯಾಸ ಮಾಲಿಕೆಯಲ್ಲಿ ಗುರುಪರಂಪರೆಯ ಅರ್ಥ, ವ್ಯಾಪ್ತಿಯನ್ನು ಸವಿಸ್ತಾರವಾಗಿ ವಿವರಿಸಿದರು.
ಅವರು ಬಳ್ಳಾರಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ತಾಲ್ಲೂಕು ಘಟಕದಿಂದ 30-07-2015 ಗುರುಪೌರ್ಣಿಮೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಎ ಗುಂಡಾಚಾರ್ ಹಿಂದೊಬ್ಬ ಗುರುವಿದ್ದ ಮುಂದೊಂದು ಗುರಿಯಿತ್ತು. ಸಾಗುತ್ತಿತ್ತು ಸಾಗುತ್ತಿತ್ತು ಹುಲಿಗಳ ದಂಡು. ಈಗ ಹಿಂದೊಬ್ಬ ಗುರುವಿಲ್ಲ ಮುಂದೊಂದು ಗುರಿಯಿಲ್ಲ ಸಾಗುತ್ತಿದೆ ಸಾಗುತ್ತಿದೆ ಕುರಿಗಳ ಹಿಂಡು ಎಂಬ ಕವಿವಾಣಿಯನ್ನು ಉದಾಹರಿಸಿದರಲ್ಲದೇ ಜಗತ್ತಿನ ಎಲ್ಲಾ ನಾಗರೀಕತೆಗಳಲ್ಲಿ ಸಿಂಧೂ ಬಯಲಿನ ನಾಗರಿಕತೆ ಜೀವಂತಿಕೆ ಯನ್ನು ಪಡೆದಿದೆ. ಗುರುಪರಂಪರೆ ಆಳವಾಗಿ ನೆಲೆಯೂರಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಗುರುಗಳಾದ ಶ್ರೀಮತಿ. ಎ. ಕುಮುದಿನಿ ನಮ್ಮ ದೇಶದ ಸಂಸ್ಕೃತಿ ಉನ್ನತ ವಾಗಬೇಕಾದರೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ. ಅಂತಹ ಶಿಕ್ಷಣ ನೀಡುವ ಗುರುಗಳಿಗೆ ಗೌರವ ತೋರಿಸುವ ಪರಂಪರೆ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆನೀಡಿದರು. ತಾಲೂಕು ಘಟಕದ ಅಧ್ಯಕ್ಷ ಯು.ರಮೇಶ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ: ಯು. ರಮೇಶ್