ಜಾತಿ ಧರ್ಮಗಳಿಗೆ ಜೋತು ಬೀಳದಿರಿ – ಡಾ|| ಬಿ.ಜೆ.ವಿ ವಸಂತಕುಮಾರ್ ಕರೆ

ಮೈಸೂರಿನ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ 2-8-2015 ಭಾನುವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಹಾರಾಣಿ ಪದವಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ|| ಬಿ.ಜಿ.ವಿ ವಸಂತ ಕುಮಾರ್ ಅವರು ಮಾತನಾಡಿ ಗುರುವಿನ ಸ್ಥಾನದಲ್ಲಿರುವವರು ಯಾವುದೇ ಜಾತಿ, ಧರ್ಮಗಳಿಗೆ ಜೋತುಬೀಳದೆ ಎಲ್ಲ ವಿದ್ಯಾರ್ಥಿಗಳನ್ನು ಸಮಾನರಾಗಿ ಕಾಣುವುದು ಮುಖ್ಯ ಎಂದು ತಿಳಿಸಿದರು.

guruvandan--Mysore

ಸಮಾಜಕ್ಕೆ ಉತ್ತಮ ಗುರುವಿನ ಅವಶ್ಯಕತೆಯಿದ್ದು, ಗುರುವಿನ ಸ್ಥಾನದಲ್ಲಿರುವವರು ತಮ್ಮ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಅಧ್ಯಾಪಕರು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡರೆ ಉತ್ತಮ ವಿದ್ಯಾರ್ಥಿಗಳನ್ನು ಹುಟ್ಟು ಹಾಕಬಹುದು ಎಂದು ಸಲಹೆ ನೀಡಿದರು.

ಅಧ್ಯಾಪಕರಾದವರು ಕೇವಲ ಸಂಬಳ ಬಂದಾಗ ಮುಗಳ್ನಗೆ ಬೀರಿದರೆ ಸಾಲದು. ವಿದ್ಯಾರ್ಥಿಯ ಕಲಿಕೆಯ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.

ಇಂದು ವಿಶ್ವವಿದ್ಯಾನಿಲಯಗಳಲ್ಲಿ ಸ್ವಜಾತಿ ಅಧ್ಯಾಪಕರ ಸಂಘಗಳು ಹೆಚ್ಚಾಗಿ ಸ್ಥಾಪನೆಗೊಳ್ಳುತ್ತಿವೆ. ಇದರಿಂದ ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಂತಾಗಿ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಎಸ್. ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ಕುಂದೂರು ಮಠದ ಡಾ|| ಶರತ್‌ಚಂದ್ರ ಸ್ವಾಮಿ ಗುರುವಂದನೆ ಸ್ವೀಕರಿಸಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಸಿಂಧನಕೇರಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿ ನಂಜುಡಸ್ವಾಮಿ. ಉದಯ ರವಿಪ್ರಕಾಶ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ: ಉದಯ ರವಿ ಪ್ರಕಾಶ್

Highslide for Wordpress Plugin