ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಕರ್ನಾಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ತಿಪ್ಪೇಸ್ವಾಮಿಯವರು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾರತ ಜಗತ್ತಿಗೇ ಗುರು. ಇದು ದೇವ ಭೂಮಿ. ಗಣಿತ, ವಿಜ್ಞಾನ, ಸಾಹಿತ್ಯ, ಆಯುರ್ವೇದ, ಯೋಗ ಮುಂತಾದವುಗಳನ್ನು ಜಗತ್ತಿಗೆ ಕಲಿಸಿಕೊಟ್ಟಿದೆ ಎಂದು ತಿಳಿಸಿದರು. ಅವರು ವೇದವ್ಯಾಸರನ್ನು ಸ್ಮರಿಸುತ್ತಾ ನಮ್ಮ ಗುರುಪರಂಪರೆಯ ಶ್ರೇಷ್ಠತೆಯ ಬಗ್ಗೆ ತಿಳಿಸಿದರು. ಕಬೀರರು ತಮ್ಮ ದೋಹೆಯಲ್ಲಿ ಗುರು ಮತ್ತು ಗೋವಿಂದ ಒಟ್ಟಿಗೆ ಬಂದಾಗ ಮೊದಲು ಗುರುವಿಗೆ, ನಂತರ ದೇವರಿಗೆ ಪ್ರಣಾಮಗಳನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ. ದ್ರೋಣ-ಅರ್ಜುನ, ರಾಮಕೃಷ್ಣ ಪರಮ ಹಂಸರು- ವಿವೇಕಾನಂದರು ಮುಂತಾದ ಗುರುಶಿಷ್ಯರ ಬಗ್ಗೆ ತಿಳಿಸಿದರು. ಸಮರ್ಥ ರಾಮದಾಸರು, ವಿದ್ಯಾರಣ್ಯರು, ಶಂಕರ- ಮಧ್ವ-ರಾಮಾನುಜಾಚಾರ್ಯರಂತಹ ಗುರುಗಳು ಭಾರತದಲ್ಲಿ ಜನಿಸಿದ್ದಾರೆ. ಭಾರತದ ಸಂಸ್ಕೃತಿ ತ್ಯಾಗ ಮತ್ತು ಸೇವೆ. ಅಧ್ಯಾಪಕರಾದ ನಾವೆಲ್ಲ ಆ ಗುರುವಿನ ಮಹಿಮೆಯನ್ನು ಅರಿತು ಆ ಕೌಶಲಗಳನ್ನು, ಮೌಲ್ಯಗಳನ್ನು ಮೈಗೂಡಿಸಿಕೊಳ್ಳೋಣ ಎಂದು ತಿಳಿಸಿದರು.
ದಿನಾಂಕ 1-8-2015 ರಂದು ಬೆಂಗಳೂರು ದಕ್ಷಿಣ ಜಿಲ್ಲೆಯು ಆಚಾರ್ಯ ಪಾಠಶಾಲೆಯಲ್ಲಿ ನಡೆಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಮಾಧ್ಯಮಿಕ ಶಿಕ್ಷಕ ಸಂಘದ ಸಹ ಪ್ರಧಾನ ಕಾರ್ಯದರ್ಶಿಗಳಾಗಿರುವ ಶ್ರೀ ಚಿದಾನಂದ ಪಾಟೀಲರು ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಮಾತನಾಡಿ ಮಾಧ್ಯಮಿಕ ಶಿಕ್ಷಕ ಸಂಘದ ಸಾಧನೆ, ಹೋರಾಟಗಳ ಬಗ್ಗೆ ತಿಳಿಸಿದರು. ಐ.ಸಿ.ಎಸ್ ಉಗ್ರರು ಶಿಕ್ಷಕ ಎಂದು ತಿಳಿದ ಕೂಡಲೇ ಭಾರತೀಯ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಸಂಗತಿಯನ್ನು ಪ್ರಸ್ತಾಪಿಸಿ ಶಿಕ್ಷಕರಿಗೆ ಈಗಲೂ ಗೌರವವಿದೆ ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರಾದ ಶ್ರೀ ವಿ.ರಾಜು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಪರವಾಗಿ ಶ್ರೀಮತಿ ವಿ.ಸೌಭಾಗ್ಯ ಮಾತನಾಡಿ ಶಿಕ್ಷಕ ಸಂಘದ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರ ನೀಡುವುದಾಗಿ ಹೇಳಿದರು. ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ಬಿ.ಎ ಸುರೇಂದ್ರರವರು ವಂದನಾರ್ಪಣೆ ಮಾಡಿದರು. ಶ್ರೀಮತಿ ಎಸ್. ಅರುಣ ಕಾರ್ಯಕ್ರಮದ ನಿರೂಪಣೆ ಮಾಡಿದರು.
ವರದಿ: ವಿ.ರಾಜು. ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷರು