ಶಿಕ್ಷಣ ಸಚಿವರಿಗೆ ಶಾಸಕ ಅರುಣ್ ಶಹಾಪೂರ್ ಅವರ ಪತ್ರಗಳು

Arun

ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಭಟ್, ಕಾರ್ಯಾಧ್ಯಕ್ಷರಾದ ಅರುಣ್ ಶಹಾಪೂರ್ ಶಿಕ್ಷಣ ಸಚಿವರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸುತ್ತಿರುವುದು

ಪತ್ರ : 1 ವಿಷಯ: ಸರ್ಕಾರಿ ಹಾಗೂ ಅನುದಾನಿತ ಪ್ರಕ್ರಿಯೆ ನಿಲ್ಲಿಸುವ ಕುರಿತು
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಅನುದಾನಿತ ಪ್ರೌಢಶಾಲೆಗಳಲ್ಲಿ ಮತ್ತು ಹೆಚ್ಚುವರಿ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವ ಕುರಿತು ಪ್ರಕ್ರಿಯೆ ನಡೆಸಿದ್ದು ಇದು ಬಹಳ ಅವೈಜ್ಞಾನಿಕ ಕ್ರಮವಾಗಿದ್ದು ಪ್ರೌಢಶಾಲೆಗಳಲ್ಲಿ ವಿಷಯವಾರು ವಿಭಾಗಗಳಿಗೆ 70 ವಿದ್ಯಾರ್ಥಿಗಳಿಗೆ 01 ವಿಭಾಗ ಎಂದು ನಿಗದಿಗೊಳಿಸಬೇಕು. ಈ ರೀತಿ ನಿಗದಿಗೊಳಿಸಿದರೆ ಅದರಿಂದ ಆಗಬಹುದಾದ ಸಂಭಾವ್ಯ ಆರ್ಥಿಕ ಹೊರೆ ಎಷ್ಟು ಹಾಗೂ ಶಿಕ್ಷಕರ ಅಗತ್ಯತೆ ಎಷ್ಟು, ಏನವು ಇದರ ಕುರಿತು ಮಾಹಿತಿ ಸಂಗ್ರಹಿಸಿ ಒದಗಿಸಲು ಕೋರುತ್ತೇನೆ.

ಆರ್ಥಿಕ ಇಲಾಖೆಯನ್ನು ಶಿಕ್ಷಣ ಇಲಾಖೆಯು ಪರಿಪರಿಯ ಬೇಡಿಕೆಯ ನಂತರ ಮಂಜೂರು ಮಾಡುವ ಹುದ್ದೆಗಳ ಸಂಖ್ಯೆಯನ್ನು ಆಗಾಗ್ಗೆ ಪ್ರಕಟಿಸುತ್ತಿದ್ದೀರಿ ಆದರೆ ಶಿಕ್ಷಣ ಇಲಾಖೆಯಲ್ಲಿ ಮರಣ, ನಿವೃತ್ತಿ ರಾಜಿನಾಮೆ ……….. ಇತ್ಯಾದಿ ಕಾರಣಗಳಿಂದಾಗಿ ಪ್ರತಿ ವರ್ಷ ಸಹಸ್ರಾರು ಹುದ್ದೆಗಳು ಖಾಲಿಯಾಗಿ ಇಲಾಖೆಯ ಬಳಿಯೇ ಉಳಿಯುತ್ತಿದೆ. ಅವುಗಳಿಗೆ ಇಲಾಖೆ ಹಂತದಲ್ಲಿಯೇ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳದೇ ಮತ್ತೆ ಆರ್ಥಿಕ ಇಲಾಖೆಗೆ ಸಂಪರ್ಕಿಸುವ ಅನುಮತಿಗಾಗಿ ಕಳುಹಿಸುವ ಕಾರ್ಯ ಮಾಡದೇ ಆ ಹುದ್ದೆಗಳನ್ನು ಆರ್ಥಿಕ ಇಲಾಖೆಯಿಂದ ಈಗಾಗಲೇ ಮಂಜೂರಾದ ಹುದ್ದೆಗಳೆಂದು ನಿರ್ಣಯಿಸಿ ಇಲಾಖೆಯಲ್ಲಿ ಅಗತ್ಯವಿರುವ ಶಾಲೆಗಳಿಗೆ ಮಂಜೂರು ಮಾಡಬೇಕು. ಇಲಾಖಾ ಹಂತದಲ್ಲೇ ಮಂಜೂರು ಮಾಡಲು ಚರ್ಚೆ ನಡೆಸಬೇಕು ಹಾಗೂ ಒಂದು ನಿರ್ಣಯ ತೆಗೆದುಕೊಳ್ಳಬೇಕು. ಈಗ ಇದೇ ಹಣಕಾಸು ಇಲಾಖೆಯಿಂದ ಮಂಜೂರಾದ ಆದರೆ ಕಾರ್ಯಭಾರವಿರದ ಕಾರಣ ಹೆಚ್ಚುವರಿ ಖಾಲಿ ಹುದ್ದೆಗಳೆಂದು ಗುರುತಿಸಿ ಇಲಾಖಾ ಹಂತದಲ್ಲಿಯೇ ಸ್ಥಳಾಂತರಿಸಲಾಗುತ್ತಿದೆ ಎಂದು ಎನ್ನಲಾಗುತ್ತಿದೆ. ಆದರೂ ಅನುದಾನಿತ ಶಾಲೆಗಳಲ್ಲಿ ಹೆಚ್ಚುವರಿ ಖಾಲಿ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸಲಾಗುತ್ತಿದೆ. ಅಥವಾ ಕಾರ್ಯಭಾರ ಕೊರತೆಯಾದ ಅನುದಾನಿತ ಶಾಲೆಯಿಂದ ಅನುಮತಿ ಪಡೆದಿರುವ ಈ ಅನುದಾನಿತ ಹುದ್ದೆಯನ್ನು ಕಾರ್ಯಭಾರ ಹೆಚ್ಚಾಗಿರುವ ಹಾಗೂ ಶಿಕ್ಷಕರ ಅಗತ್ಯತೆ ಇರುವ ಈ ಹುದ್ದೆಗಳನ್ನು ರದ್ದು ಮಾಡಲಾಗುತ್ತಿದೆ. ಹಣಕಾಸು ಇಲಾಖೆಯಿಂದ ಮಂಜೂರಾಗಿರುವ ಅನುದಾನಿತ ಹುದ್ದೆಗಳನ್ನು ರದ್ದು ಮಾಡಿ ಮತ್ತೊಂದೆಡೆಗೆ ಅನುದಾನಿತ ಹುದ್ದೆಗಳಿಗಾಗಿ ಹಣಕಾಸಿನ ಕೋರಿಕೆಯನ್ನು ಸಲ್ಲಿಸಿ ಹಣಕಾಸು ಇಲಾಖೆಗೆ ಗೋಗರೆಯುವುದು ವಿಪರ್ಯಾಸದ ಸಂಗತಿಯಾಗಿದೆ.

ಇಲಾಖೆಗೆ ಮಂಜೂರಾಗಿದ್ದ ಹುದ್ದೆಗಳನ್ನು ವಿವೇಚನಾ ರಹಿತವಾಗಿ ಇಲಾಖೆ ಪಾಲು ಮಾಡಿ ವಾಪಸ್ ಅವರಿಗೆ ಗೋಗರೆಯುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಅತಾರ್ಕಿಕವಾಗಿ ಇಲಾಖೆ ನಡೆದುಕೊಂಡು ಹೋಗುತ್ತಿರುವುದು ತಪ್ಪಿಸಲು ಕ್ರಮಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ. ಈ ನಿಟ್ಟಿನಲ್ಲಿ ತಕ್ಷಣ ಸರ್ಕಾರಿ ಹಾಗೂ ಹೆಚ್ಚುವರಿ ಪ್ರಕ್ರಿಯೆ ನಿಲ್ಲಿಸಲು ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ.

ಪತ್ರ : 2 ವಿಷಯ: ಆಂಗ್ಲ ಮಾಧ್ಯಮಿಕ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರಿಗೆ ಸೇವಾ ಭದ್ರತೆ ಹಾಗೂ ವೇತನಾನುದಾನ ಕೊಡುವ ಕುರಿತು
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹಲವು ಆಂಗ್ಲ ಮಾಧ್ಯಮ ಶಾಲೆಗಳು ಹಲವು ದಶಕಗಳಿಂದ ಅತ್ಯುತ್ತಮ ಶಿಕ್ಷಣವನ್ನು ಕೊಡಮಾಡುತ್ತ ಬಂದಿರುವುದು ತಮಗೆ ತಿಳಿದಿರುವ ಸಂಗತಿ. ಆದರೆ ಈ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರಿಗೆ ಸೇವಾ ಭದ್ರತೆ ಹಾಗೂ ವೇತನಾನುದಾನ ಕೊಡುವ ನಿಟ್ಟಿನಲ್ಲಿ ಸರ್ಕಾರ ಇಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಳ್ಳದಿರುವುದು ಸರಿಯಲ್ಲ. ಈ ಶಾಲೆಗಳಿಗೂ ಕನಿಷ್ಠ 1995 ರ ವರೆಗೆ ಆರಂಭವಾಗಿರುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ.

ಪತ್ರ : 3 ವಿಷಯ: (1994-95 ನೇ ಸಾಲಿನ ಮೊದಲು ಆರಂಭವಾಗಿರುವ) ಅನುದಾನರಹಿತ ವಿಭಾಗ/ ವಿಷಯಗಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಕರನ್ನು ಅನುದಾನಕ್ಕೊಳಪಡಿಸುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು 1994-95 ರ ಸಾಲಿನವರಿಗೆ ಅನುದಾನರಹಿತವಾಗಿ ಪ್ರಾರಂಭವಾಗಿದ್ದ ಎಲ್ಲ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಲು ಆದೇಶಿಸಲಾಗಿದೆ ಆದರೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ (1994-95 ನೇ ಸಾಲಿನ ಮೊದಲು ಆರಂಭವಾಗಿರುವ) ಅನುದಾನರಹಿತ ವಿಭಾಗ/ ವಿಷಯಗಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಕರನ್ನು ಅನುದಾನಕ್ಕೊಳಪಡಿಸಲು ಕ್ರಮ ಕೈಗೊಳ್ಳಬೇಕೆಂದು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುವರಿ ವಿಭಾಗಗಳನ್ನು ಆರಂಭಸಲು ಅನುಮತಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ.

Highslide for Wordpress Plugin