ಒಂದು ಸಾಮಾನ್ಯವಾದ ಕಲ್ಲನ್ನು ಅತ್ಯುತ್ತಮವಾದ ಶಿಲ್ಪಿ ಸುಂದರವಾದ ಮೂರ್ತಿಯನ್ನಾಗಿ ಕೆತ್ತಬಲ್ಲ. ಹಾಗೆಯೇ ಸಾಧಾರಣವಾದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದು ಅಸಾಧಾರಣ ವ್ಯಕ್ತಿಯನ್ನಾಗಿಸಿ, ಅತ್ಯುನ್ನತವಾದ ಸ್ಥಾನಕ್ಕೆ ಏರಿಸಬಲ್ಲ ಶಕ್ತಿ ನಮ್ಮ ಶಿಕ್ಷಕರಿಗಿರುತ್ತದೆ. ಅಂಥ ಶಿಕ್ಷಕರಿಗಾಗಿಯೇ ಶಿಕ್ಷಕ ಸಂಘದ 31ನೆಯ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ನನಗೆ ತುಂಬ ಸಂತೋಷವಾಗಿದೆ ಎಂದು ಪ್ರೊ|| ಎನ್.ವಿ ರಘುರಾಮ್ ಅವರು ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಕುರಿತು ಮಾತನಾಡುತ್ತಾ ತಿಳಿಸಿದರು.
ಬೆಂಗಳೂರಿನ ಜಯನಗರದ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ 31 ನೆಯ ಪ್ರತಿಭಾ ಪುರಸ್ಕಾರವನ್ನು 7-8-2016 ರಂದು ಏರ್ಪಡಿಸಲಾಗಿತ್ತು. ಸಮಾರಂಭದ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು. ಪ್ರೊ|| ಎನ್.ವಿ ರಘುರಾಮ್ ಅವರು ಯೋಗ ವಿಶ್ವವಿದ್ಯಾಲಯ ವ್ಯಾಸ ಇಂಟರ್ನ್ಯಾಷನಲ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಅಮೆರಿಕಾದ ಯೋಗಭಾರತಿ ಯ ಚೇರ್ಮನ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ರಪಂಚದ 50 ಕ್ಕಿಂತ ಹೆಚ್ಚು ದೇಶಗಳಲ್ಲಿ ಭಾರತೀಯ ತತ್ತ್ವಶಾಸ್ತ್ರ, ಆಧ್ಯಾತ್ಮ ಹಾಗೂ ಯೋಗವನ್ನು ಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕ್ರಮ, ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಯೋಗಶ್ರೀ ಪ್ರೊ|| ಎನ್.ವಿ ರಘುರಾಮ ಅವರು ಮಾತನಾಡುತ್ತಾ ಕಲಿಕೆಯ ಬಗ್ಗೆ ತಿಳಿಸಿದರು. ಶ್ರೀ ರಾಮಕೃಷ್ಣ ಪರಮಹಂಸರೇ ನಾನು ಬದುಕಿರುವವರೆಗೆ ಕಲಿಯುತ್ತೇನೆ. ಎಂದು ಹೇಳಿದ್ದಾರೆ. ಇನ್ನು ಸಾಮಾನ್ಯವಾದ ನಾವು ಕಲಿಯುವುದಕ್ಕೆ ಕೊನೆಯುಂಟೆ? ಎಂದು ಪ್ರಶ್ನಿಸಿದರು. ನಿವೇದಿತಾ, ವಿವೇಕಾನಂದ, ಅಂಬೇಡ್ಕರರನ್ನು ಶತಮಾನಗಳ ನಂತರವೂ ನಾವು ನೆನಪಿಸಿಕೊಳ್ಳುತ್ತೇವೆ. ಏಕೆಂದರೆ ಅವರು ಸಮಾಜ, ದೇಶಕ್ಕಾಗಿ ಬದುಕಿದವರು. ಸೃಷ್ಟಿಯು ಸರ್ವಸ್ವವನ್ನು ನೀಡಿದರೂ ಏನನ್ನೂ ನಿರೀಕ್ಷಿಸುವುದಿಲ್ಲ. ಆದರೆ ಮಾನವ ಸ್ವಾರ್ಥಿಯಾಗುತ್ತಿದ್ದಾರೆ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಾತಿನಂತೆ ಪಡೆದದ್ದಕಿಂತ ಹೆಚ್ಚು ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳೋಣ. ಭಾರತದ ಸಂಸ್ಕೃತಿ- ಪರಂಪರೆಗಳು ಜಗತ್ತಿನ ಎಲ್ಲ ಜನರನ್ನು ಆಕರ್ಷಿಸುತ್ತಿವೆ. ನಾವು ಅವುಗಳ ಬಗ್ಗೆ ಅಭಿಮಾನವನ್ನು ಹೊಂದಿ ಸ್ವಾಭಿಮಾನದಿಂದ ಬದುಕೋಣ ಎಂದು ಕರೆನೀಡಿದರು.
ಕರ್ನಾಟಕ ರಾಜ್ಯ ಮಾದ್ಯಮಿಕ ಶಿಕ್ಷಕ ಸಂಘ ಬೆಂಗಳೂರು ದಕ್ಷಿಣ ಜಿಲ್ಲೆಯ 31ನೆಯ ಪ್ರತಿಭಾ ಪುರಸ್ಕಾರದಲ್ಲಿ 300 ಶಿಕ್ಷಕರ ಮಕ್ಕಳೂ ಸೇರಿದ್ದರು. ಅವರಿಗೆ ಸುಂದರವಾದ ಸ್ಮರಣಫಲಕ, ಪ್ರಶಸ್ತಿಪತ್ರ, ಮೌಲ್ಯಯುತವಾದ ಪುಸ್ತಕಗಳನ್ನು ವಿತರಿಸಲಾಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಜ್ಯಾಧ್ಯಕ್ಷರಾಗಿರುವ ಶ್ರೀ ಶಿವಾನಂದ ಸಿಂಧನಕೇರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಮಾತನಾಡುತ್ತಾ ಶಿಕ್ಷಕ ಸಂಘದ ಉದ್ದೇಶಗಳು, ಸಂಘದ ಸಾಧನೆಗಳ ಕುರಿತು ತಿಳಿಸಿದರು. ಸ್ವಾಮಿ ವಿವೇಕಾನಂದರು, ಶಿವಾಜಿ, ವೀರಸಾವರ್ಕರ್, ಮದನ್ ಮೋಹನ ಮಾಲವೀಯ ಮುಂತಾದ ಸಮೃದ್ಧ ಭಾರತದ ಸುಪುತ್ರರ ಸೇವಾಮನೋಭಾವದ ಬಗ್ಗೆ ತಿಳಿಸಿದರು.
ಶಿಕ್ಷಕ ಸಂಘದ ಪೋಷಕರಾಗಿರುವ ಶ್ರೀ ಹೆಚ್. ನಾಗಭೂಷಣರಾವ್ ಅವರು ಪ್ರತಿಭಾಪುರಸ್ಕಾರದ ವಿಶೇಷತೆ, ಮಹತ್ವದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘದ ಮಹಾಪೋಷಕರು ಎಲ್ಲ ಮಕ್ಕಳಿಗೆ ಪ್ರತಿಜ್ಞೆಯನ್ನು ಬೋಧಿಸಿ ಆಶೀರ್ವಾದ ಮಾಡಿದರು. ಶಿಕ್ಷಕ ಸಂಘದ ಅಖಿಲಭಾರತ ಮಹಿಳಾ ಪ್ರಮುಖರಾಗಿರುವ ಶ್ರೀಮತಿ ಆರ್. ಸೀತಾಲಕ್ಷ್ಮಿಯವರು ಎಲ್ಲ ದಾನಿಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರು. ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರಾಗಿರುವ ಶ್ರೀ.ವಿ. ರಾಜು ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿ ಸರ್ವರನ್ನು ಸ್ವಾಗತಿಸಿದರು. ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಶ್ರೀ ಬಿ.ಎ. ಸುರೇಂದ್ರ ಅವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಜಿಲ್ಲೆಯ ಖಜಾಂಚಿಯಾಗಿರುವ ಶ್ರೀಮತಿ ಜಿ.ಎನ್. ವಾಸುಕಿಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಚಿ|| ಅನಂತ್ ಪ್ರಾರ್ಥನೆ ಮಾಡಿದರು. ಕು|| ಸಿರಿ ವಂದೇಮಾತರಂ ಹಾಡಿದಳು. ಶಿಕ್ಷಕ ಸಂಘದ ರಾಜ್ಯ ಖಜಾಂಚಿಗಳಾಗಿರುವ ಶ್ರೀ ಜೆ.ಎಂ. ಜೋಶಿಯವರು, ರಾಜ್ಯದ, ಬೆಂಗಳೂರು ಉತ್ತರ ಜಿಲ್ಲೆಯ ಹಲವು ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಾಲಾ ಪ್ರಥಮಿಗರು, ದಿವ್ಯಾಂಗರು, ಶಿಕ್ಷಕರು, ಮುಖ್ಯಶಿಕ್ಷಕರು, ಹಿತೈಷಿಗಳು, ದಾನಿಗಳು ಪೋಷಕರಿಂದ ಸಭೆಯು ತುಂಬಿ ತುಳುಕುತ್ತಿತ್ತು.
ಸ್ವಾಮಿ ವಿವೇಕಾನಂದ ಶಿಷ್ಯರಲ್ಲಿ ಒಬ್ಬರಾಗಿರುವ ಸೋದರಿ ನಿವೇದಿತಾ ಅವರು ಜನಿಸಿ 150 ವರ್ಷಗಳಾಗಿರುವುದರಿಂದ ಈ ಸಮಾರಂಭವನ್ನು ಸೋದರಿ ನಿವೇದಿತಾ ಅವರಿಗೆ ಅರ್ಪಿಸಲಾಯಿತು.