ಶಿಕ್ಷಕರಿಗೆ ಸಂಕಲ್ಪ ಏಕೆ -ಹೇಗೆ?

ಜೀವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದವರ ಬಗ್ಗೆ ಒಂದು ನೋಟ ಹರಿಸೋಣ.

ಐ.ಸಿ.ಎಸ್. ಮುಗಿಸಿದ ನಂತರ ಸ್ವಂತ ಏಳಿಗೆಯನ್ನು ಲೆಕ್ಕಿಸದೆ ಆಜಾದ್ ಹಿಂದ್ ಸೇನೆ ಕಟ್ಟಿ, ಪೂರ್ವ ಭಾರತ ಆಕ್ರಮಿಸಿ ಇಂಗ್ಲೀಷರನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ ಸಾವಿರಾರು ಜನರಿಗೆ ಸ್ವಾತಂತ್ರ್ಯದ ಹುಚ್ಚು ಹತ್ತಿಸಿ ನಮ್ಮ ದೇಶವನ್ನು ಸ್ವತಂತ್ರಗೊಳಿಸಿದ ಮಹಾನ್ ಪುರುಷ ಡಾ|| ಸುಭಾಷ್ ಚಂದ್ರ ಬೋಸ್.

ಗಾಂಧಿಜೀಯವರೂ ಇದಕ್ಕೆ ಹೊರತೇನಲ್ಲ. ಖ್ಯಾತ ವಿಜ್ಞಾನಿ- ಭಾರತದ ತಂತ್ರಜ್ಞಾನದ ಜನಕ- ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ತಲೆಯಲ್ಲಿರಿಸಿಕೊಂಡು ದೃಢ ಸಂಕಲ್ಪದಿಂದ ಹೆಜ್ಜೆಯಿರಿಸಿ ಯಶಸ್ಸು ಸಾಧಿಸಿದ ಮಹಾನ್ ವ್ಯಕ್ತಿ ಡಾ|| ಅಬ್ದುಲ್ ಕಲಾಂ.

ಏಕನಿಷ್ಠೆ, ಭವ್ಯಕಲ್ಪನೆ, ಅವಿರತ ಪರಿಶ್ರಮ ಹಾಗೂ ಸಂಘಟನಾ ಕೌಶಲ್ಯವಿರುವ ಶ್ರೀ ಏಕನಾಥ ರಾನಡೆಯವರ ಬಲಿಷ್ಠ, ಧೃಡಿಷ್ಠ ಭಾರತದ ಸ್ವಪ್ನ ಸಾಕಾರಗೊಳಿಸುವ ಉತ್ಕಟ ಇಚ್ಛೆಯ ಫಲವೇ ಕನ್ಯಾಕುಮಾರಿಯರಲ್ಲಿನ ವಿವೇಕಾನಂದ ಕೇಂದ್ರ ಸ್ಥಾಪನೆ ದೇಶದ ಸ್ವಾತಂತ್ರ್ಯ ಒಂದೇ ಅಲ್ಲ. ವಿವಿಧ ಕ್ಷೇತ್ರಗಳಲ್ಲಿ ವೈಯುಕ್ತಿಕ ಹಾಗೂ ಸಾಮಾಜಿಕ ಯಶಸ್ಸು ಪಡೆಯಬೇಕಾದರೆ ನಿರ್ದಿಷ್ಟ ಗುರಿ ತಲುಪುವ ಹಾದಿ ಕಠಿಣವಾದದ್ದೇ. ಆದರೆ ದೃಢನಿರ್ಧಾರದಿಂದ, ಸಂಕಲ್ಪದಿಂದ ಖಂಡಿತ ಕೆಲಸ ಸಾಧಿಸಬಹುದು.

ರಾಮಾಯಣದಲ್ಲಿ ದೃಢ ಸಂಕಲ್ಪದಿಂದ ಹನುಮಂತನು ಸೀತೆಯನ್ನು ತಲುಪಲು ಸಮುದ್ರೋಲ್ಲಂಘನ ಮಾಡಿದನು.

ಆಧ್ಯಾತ್ಮ ಸಾಧನೆಗಾಗಿ ಅನೇಕ ದಾಸಶ್ರೇಷ್ಠರು ಅಚಲ ನಿರ್ಧಾರ ದೃಢ ಸಂಕಲ್ಪಮಾಡಿ ಸಾಮಾಜಿಕ ಬದಲಾವಣೆಯ ಹರಿಕಾರರಾದರು.
ವಿವೇಕಾನಂದರು ಉತ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ನಿಬೋಧ ಏಳಿ ಎಚ್ಚರಗೊಳ್ಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂದು ಸಾರಿ ಹೇಳಿದರು. ಈ ಪ್ರಾಪಂಚಿಕ ಮೋಹ ನಿದ್ರೆಯಿಂದ ಎದ್ದೇಳಿ. ಏಕೆಂದರೆ ಆತ್ಮವು ಸರ್ವಶಕ್ತ, ಸರ್ವಜ್ಞ, ಸರ್ವವ್ಯಾಪಿಯಾದುದು. ಅಂತೆಯೇ ಎದ್ದುನಿಲ್ಲಿ ನಿಮ್ಮ ಆಸ್ಮಿತೆಯನ್ನು ಪ್ರಸ್ಥಾಪಿಸಿ ನಿಮ್ಮ ನಿಜ ಸ್ವರೂಪವನ್ನು ಅರ್ಥಮಾಡಿಕೊಂಡು ಕಾರ್ಯಪ್ರವೃತ್ತರಾಗಿ ಕಾರ್ಯದ ಪಣತೊಡಿರಿ. ಹುಲ್ಲು ಹೊಸೆದು ಹಗ್ಗ ಮಾಡಿದಾಗ ಮದಗಜವನ್ನು ಬಂಧಿಸಬಹುದು ಎಂಬುದನ್ನು ನೆನಪಿಸಿದರು.

ಪ್ರಾಚೀನ ಕಾಲದಿಂದ ಇಲ್ಲಿಯವರೆಗೂ ಉನ್ನತ ಸಾಧನೆಗಾಗಿ ಸಂಕಲ್ಪದ ಅನಿವಾರ್ಯತೆ ಇದೆ.

ಸಂಕಲ್ಪ ಒಂದು ಕಟ್ಟಡದ ಅಡಿಪಾಯವಿದ್ದಂತೆ. ಸುಭದ್ರ ಅಡಿಪಾಯದ ಮೇಲೆ ನಿಂತ ಕಟ್ಟಡ ಸದೃಢವಾಗಿರುತ್ತದೆ.

ದೃಢ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಸಂಕಲ್ಪವೇ ಪೂರಕ.

ಗುರುವಿನಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎನ್ನವರು ಗುರುಬೋಧನ ಇಲ್ಲದೇ ಮುಂದಿನ ಪಾಠವೇ ಇಲ್ಲ.

ಮುಂಬರುವ ಪೀಳಿಗೆಯ ರೂವಾರಿಗಳಾದ ನಾವು ಶಿಕ್ಷಕರು ವೃತ್ತಿ ನೈಪುಣ್ಯತೆ ಪಡೆದು, ವಿದ್ಯಾರ್ಥಿಗಳಿಗೆ ಮಾದರಿ (ರೋಲ್ ಮಾಡೆಲ್). ಈ ದೃಷ್ಟಿಯಿಂದ ಅಖಿಲಭಾರತೀಯ ರಾಷ್ಟ್ರೀಯ ಶೈಕ್ಷಿಕ ಸಂಘವು ಇಡೀ ದೇಶದಲ್ಲಿ ಜನವರಿ ೧೨ ರಂದಿನ ವಿವೇಕಾನಂದರ ಜನ್ಮದಿನದಿಂದ ೨೩ ರಂದಿನ ಸುಭಾಷ್‌ಚಂದ್ರ ಬೋಸರ ಜನ್ಮದಿನದ ನಡುವಿನ ಸಮಯದಲ್ಲಿ, ಎಂದಾದರೊಂದು ದಿನ ಆರಿಸಿಕೊಂಡು ಎಲ್ಲ ಶಿಕ್ಷಕರೂ ಪ್ರಾಮಾಣಿಕವಾಗಿ ತಮ್ಮನ್ನು ತಾವು ತಮ್ಮ ವೃತ್ತಿಗೆ ಕಾಯಾ ವಾಚಾ ಮನಸಾ ಸಮರ್ಪಿಸಿಕೊಳ್ಳುವ ಸಂಕಲ್ಪ ತೊಡಲು ಕರೆನೀಡಿರಿ. ಸಂಕಲ್ಪ ಆಗುವ ವ್ಯಕ್ತಿತ್ವವನ್ನು ಪಡೆದು ಇಡೀ ಸಮಾಜಕ್ಕೆ ಸುದೃಷ್ಟಿ ಕೊಡುವ ದಾರಿ ದೀಪಗಳಾಗುವ ಸಂಕಲ್ಪ ಮಾಡಬೇಕು.

ಡಾ|| ಸುಭಾಷ್ ಚಂದ್ರಬೋಸ್, ಹಾಗೂ ವಿವೇಕಾನಂದರ ಜನ್ಮ ಜಯಂತಿಯ ಈ ಶುಭ ಸಂದರ್ಭದಲ್ಲಿ ಕಾಯಾವಾಚಾ ಮನಸಾ ರಾಷ್ಟ್ರ ಪುನರ್‌ನಿರ್ಮಾಣದ ಸಂಕಲ್ಪವನ್ನು ತೊಡೋಣ.

ಸದೃಢ ಸಮಾಜದ ಸತ್ಕಾರ್ಯ ಕಾರ್ಯರೂಪಗೊಳಿಸಲು ತೆಗೆದುಕೊಳ್ಳಬೇಕಾದ ಸಂಕಲ್ಪದಿನದ ಆಯೋಜನೆ ಹೇಗಿರಬೇಕು? ಎನ್ನುವುದರ ಬಗ್ಗೆ ವಿಚಾರ ಮಾಡೋಣ.

ಸಂಕಲ್ಪ ದಿನ ಅಥವಾ ಕರ್ತವ್ಯ ಬೋಧನೆ ದಿವಸವನ್ನು ಅಖಿಲ ಭಾರತೀಯ ಶೈಕ್ಷಿಕ್ ಮಹಾಸಂಘದ ಆಶ್ರಯದಲ್ಲಿ ದೇಶದಾದ್ಯಂತ ಆಚರಿಸಲಾಗುತ್ತಿದೆ.

ಶಿಕ್ಷಕರಿಗೆ ಕರ್ತವ್ಯ ಬೋಧನೆ ಒಂದೇ ಅಲ್ಲ ಸಮಾಜದ ಮೇಲಿನ ಅವರ ಕರ್ತವ್ಯವನ್ನು ಜಾಗೃತಗೊಳಿಸಲು ಸಹಾಯವಾಗುವ ಹಾಗೂ ಪ್ರೇರಣೆಯಾಗುವಂತಾಗುವ ಈ ಕಾರ್ಯಕ್ರಮದ ರೂಪುರೇಖೆ ದೇಶದಾದ್ಯಂತ ಒಂದೇ ರೀತಿ ಇರಬೇಕೆಂದು ಕೆಲವು ಯೋಜನೆಗಳನ್ನು ರೂಪಿಸಲಾಗಿದೆ.

1. ಪ್ರತಿ ನಗರ ಅಥವಾ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ವಿದ್ಯಾಲಯಗಳಲ್ಲಿ ಸಂಕಲ್ಪದಿನ ಆಚರಿಸಬೇಕು.
2. ತಾಲ್ಲೂಕುಗಳಲ್ಲಿ ವಲಯಶಃ ಪ್ರಯತ್ನ ಪೂರ್ವಕವಾಗಿ ಮಾಡಬೇಕು. ವಿಶ್ವವಿದ್ಯಾಲಯಗಳು, ಮಹಾವಿದ್ಯಾಲಯಗಳು ಸೇರಿ ಮಾಡಬಹುದು.
3. ಶಿಕ್ಷಣ ಕ್ಷೇತ್ರದಲ್ಲಿನ ಶಿಕ್ಷಣ ತಜ್ಞರು, ಸಂತರು ಇತರ ಆದರ್ಶ ವ್ಯಕ್ತಿಗಳ ನೇತೃತ್ವದಲ್ಲಿ ಕನಿಷ್ಠ ೨ ಗಂಟೆ ಕಾರ್ಯಕ್ರಮವನ್ನು ನಡೆಸಬೇಕು.
4. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರೆ ಸಂಘಟನೆಯ ವಿಚಾರಗಳನ್ನು ಇವರಿಗೆ ಮನವಿರಿಕೆ ಮಾಡಬಹುದು.
5. ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಕೂಡ ಈ ಕಾರ್ಯಕ್ರಮದಲ್ಲಿ ಜೋಡಿಸಬಹುದು.
6. ಶಿಕ್ಷಕ ಕಾರ್ಯಕರ್ತ ಸಭಾ ನಿರೂಪಣೆಗೆ ಮೊದಲೇ ಆಯೋಜಿಸಿದ್ದರೆ, ಕಾರ್ಯಕ್ರಮ ಕಾರ್ಯಕರ್ತ ಪರಿಣಾಮಕಾರಿಯಾಗುವುದು.
7. ಕಾರ್ಯಕ್ರಮ ಮುಕ್ತಾಯದ ನಂತರ ಕಾಪಿ ಅಥವಾ ಟೀ ವ್ಯವಸ್ಥೆ ಇದ್ದರೆ ಅನೌಪಚಾರಿಕ ಸಮಯದಲ್ಲಿ ಶಿಕ್ಷಕರು ಪರಸ್ಪರ ಆತ್ಮೀಯತೆಯನ್ನು ಬೆಳೆಸಿಕೊಳ್ಳಬಹುದು.
8. ವೇದಿಕೆಯಲ್ಲಿ ಅತಿ ಕಡಿಮೆ ಜನರಿರಬೇಕು ಮುಖ್ಯ ಅತಿಥಿಗೆ ಮಾತ್ರ ಮಾಲಾರ್ಪಣೆ ಮಾಡಬೇಕು.
9. ಭಾರತ್ ಮಾತಾ, ಸರಸ್ವತೀ ಚಿತ್ರಗಳ ಮುಂದೆ ದೀಪ ಹಚ್ಚುವುದು ಅವಶ್ಯ.
10. ಸ್ವಾಮಿವಿವೇಕಾನಂದ ಹಾಗೂ ಸುಭಾಷ್‌ಚಂದ್ರ ಬೋಸ್‌ರವರ ಚಿತ್ರಪಟ ಇಡಬೇಕು ಹಾಗೂ ಅವರ ಘೋಷವಾಕ್ಯವನ್ನು ಸಭಾಂಗಣದಲ್ಲಿ ಇಟ್ಟರೆ ಒಳಿತು.
11. ಕಾರ್ಯಕ್ರಮದ ಪ್ರಚಾರ ದೃಷ್ಟಿಯಿಂದ ಮಾಧ್ಯಮದವರನ್ನು ಕರೆಯಬೇಕು ಹಾಗೂ ಫೋಟೊ ಸಮೇತ ವರದಿ ಕಳುಹಿಸಬೇಕು.
12. ವೇದಿಕೆಯ ಮೇಲೆ ಎ.ಬಿ.ಆರ್.ಎಸ್.ಎಂ ಬ್ಯಾನರ್ ಇರಲೇಬೇಕು.
13. ಕೇಂದ್ರೀಯ ಕಾರ್ಯಾಲಯಕ್ಕೆ ಫೋಟೋ ಸಮೇತ ವರದಿಯನ್ನು ಮೇಲ್ ಹಾಗೂ ಪತ್ರ ಮುಖೇನ ಕಳುಹಿಸಬೇಕು.

ತಮ್ಮ ತಮ್ಮ ರಾಜ್ಯ/ಜಿಲ್ಲೆ, ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಲು ತಾವು ನೆರವಾಗಬೇಕೆಂದು ವಿನಂತಿ.

ಸಂಕಲ್ಪ

ಸರ್ವಶಕ್ತಿವಂತನಾದ ಭಗವಂತನನ್ನು ಹಾಗೂ ನಮ್ಮ ಹಿಂದಿನ ಶ್ರೇಷ್ಠ ಗುರುಪರಂಪರೆಯನ್ನು ಸ್ಮರಿಸುತ್ತಾ ತ್ಯಾಗ, ಸೇವೆ, ಕರ್ಮಠತೆಗಳ ಸಾಕಾರಮೂರ್ತಿಯಾಗಿ ನಾಡಿನ ಜನತೆಗೆ, ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂಬ ರಾಷ್ಟ್ರೀಯ ಕರ್ತವ್ಯದ ಕರೆ ನೀಡಿದ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯ ಈ ಪವಿತ್ರ ಸಂದರ್ಭದಲ್ಲಿ ನಾನು ಹೀಗೆ ಸಂಕಲ್ಪ ಮಾಡುತ್ತೇನೆ.

ಶಿಕ್ಷಕ ವೃತ್ತಿಯು ಶ್ರೇಷ್ಠವಾದ ವೃತ್ತಿ ಯೆಂದು ಪ್ರಜ್ಞಾಪೂರ್ವಕವಾಗಿ ತಿಳಿದೇ ನಾನು ಈ ವೃತ್ತಿಯನ್ನು ಸ್ವೀಕರಿಸಿದ್ದೇನೆ. ನನ್ನ ವೃತ್ತಿಯಲ್ಲಿ ನೈಪುಣ್ಯವನ್ನು ಗಳಿಸಿಕೊಳ್ಳಲು ಸದಾ ಕಾರ್ಯತತ್ಪರನಾಗಿ, ನನ್ನ ಸ್ವಂತ ಜೀವನದ ಆದರ್ಶದ ಮೂಲಕ, ನನ್ನ ವಿದ್ಯಾರ್ಥಿಗಳಲ್ಲಿ ಸದ್ಗುಣಗಳನ್ನು ಮೂಡಿಸಿ ಅವರನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ನನ್ನ ಹೊಣೆಗಾರಿಕೆಯನ್ನು ನಾನು ಕಾಯಾ, ವಾಚಾ ಮನಸಾ ನಿರ್ವಹಿಸಲು ವಚನ ಬದ್ಧನಾಗಿದ್ದೇನೆ.

ಆರ್. ಸೀತಾಲಕ್ಷ್ಮಿ , ರಾಷ್ಟ್ರೀಯ ಮಹಿಳಾ ಕಾರ್ಯದರ್ಶಿ, ಎ.ಬಿ.ಆರ್.ಎಸ್.ಎಂ.

Highslide for Wordpress Plugin