ಪರಿಷ್ಕೃತ ಪಠ್ಯಪುಸ್ತಕ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಮಧ್ಯೆ ಚರ್ಚೆಯ ನಂತರ ಜಾರಿ ಮಾಡಲು ಒತ್ತಾಯ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ), ರಾಜ್ಯ ಸರ್ಕಾರವು ಉದ್ದೇಶಿಸಿರುವ ಪರಿಷ್ಕೃತ ಪಠ್ಯವನ್ನು ಜಾರಿ ಮಾಡುವ ಮೊದಲು, ನಾಡಿನ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಅಭಿಪ್ರಾಯ ಪಡೆಯುವಂತೆ ಒತ್ತಾಯಿಸುತ್ತದೆ.

ಎನ್.ಸಿ.ಎಫ್. 2005 ಕೆ.ಸಿ.ಎಫ್. 2007 ರ ನಂತರ ಎನ್‌ಸಿಎಫ್ 2012 ಬರುವ ಹಂತದಲ್ಲಿದ್ದಾಗ ಪ್ರಸ್ತುತ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರಕಟವಾಗಿದೆ. ಈ ಹಂತದಲ್ಲಿ ೨೦೦೫ ಎನ್.ಸಿ.ಎಫ್ ಆಧಾರಿತ ಪರಿಷ್ಕೃತ ಪಠ್ಯವನ್ನು 2017 ಜೂನ್‌ನಲ್ಲಿ ಜಾರಿ ಮಾಡಲು ಹೊರಟಿರುವುದು ಶಿಕ್ಷಕ ಸಮುದಾಯದಲ್ಲಿ ಮತ್ತು ಶಿಕ್ಷಣ ತಜ್ಞರಲ್ಲಿ ಆತಂಕ ಮತ್ತು ಗೊಂದಲವನ್ನು ಉಂಟುಮಾಡಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಈ ಕೆಳಗಿನ ಒತ್ತಾಯವನ್ನು ಮಾಡುತ್ತದೆ.

• ಪರಿಷ್ಕೃತ ಪಠ್ಯಪುಸ್ತಕ ಡಿ.ಎಸ್.ಇ.ಆರ್.ಟಿ.ಸಿ, ಸಿ.ಟಿ.ಇ. ಡಯಟ್ ಮತ್ತು ಶಿಕ್ಷಕರ ವಿಷಯ ವೇದಿಕೆಗಳಲ್ಲಿ ಚರ್ಚಿಸಿ ಅಭಿಪ್ರಾಯಗಳನ್ನು ಪಡೆದು ಅವುಗಳನ್ನು ಅನುಪಾಲಿಸಿ ಜಾರಿಗೊಳಿಸಬೇಕು.

• ಈ ಮಧ್ಯದಲ್ಲಿ ಮಾಧ್ಯಮಗಳಲ್ಲಿ ಸಿ.ಬಿ.ಎಸ್.ಸಿ ಪಠ್ಯವನ್ನು ನೇರವಾಗಿ ಕನ್ನಡಕ್ಕೆ ಅನುವಾದಿಸಿ ಜಾರಿಮಾಡಲಾಗುವುದು ಎನ್ನುವ ವಿಷಯ ಶಿಕ್ಷಕರಲ್ಲಿ ಮತ್ತೊಂದು ಗೊಂದಲವನ್ನು ಉಂಟುಮಾಡಿದೆ.

• ಈಗಿರುವ ಪಠ್ಯದಲ್ಲಿರುವ ಲೋಪದೋಷಗಳೇನು? ಎನ್ನುವ ಪಟ್ಟಿಯನ್ನು ಶಿಕ್ಷಕರ ಮಧ್ಯದಲ್ಲಿ ಚರ್ಚೆಗೆ ಬಿಡಬೇಕು.

• ಪರಿಷ್ಕೃತ ಪಠ್ಯಕ್ಕೆ ಶಿಕ್ಷಕರನ್ನು ಮಾನಸಿಕವಾಗಿ ಸಿದ್ದಮಾಡಲು ತರಬೇತಿ ಅವಶ್ಯಕ. ಆದರೆ ಇಲ್ಲಿಯವರೆಗೆ ಯಾವುದೇ ತರಹದ ಮಾಹಿತಿಯನ್ನು ಮತ್ತು ತರಬೇತಿಯನ್ನು ನೀಡದೆ ಪರಿಷ್ಕೃತ ಪಠ್ಯಪುಸ್ತಕ ಜಾರಿ ಮಾಡಲು ಹೊರಟಿರುವುದು ಆತುರದ ಕ್ರಮವಾಗಿದೆ.

• ಪಠ್ಯಪುಸ್ತಕ ಪರಿಶೀಲನಾ ಸಮಿತಿ ಸಲ್ಲಿಸಿರುವ ಕರುಡು ವರದಿಯನ್ನು ಮುದ್ರಿಸಲು ಸರ್ಕಾರ ಈಗಾಗಲೇ ಟೆಂಡರ್ ಕರೆದಿದೆ. ಅದರಲ್ಲಿನ ಅಂಶಗಳ ಕುರಿತು ಶಿಕ್ಷಣ ತಜ್ಞರು, ಶಿಕ್ಷಕರ ವಿಷಯ ವೇದಿಕೆಗಳು, ಶಿಕ್ಷಕರ ಸಮಾಲೋಚನಾ ಸಭೆಗಳಲ್ಲಿ ಮತ್ತು ಸಂಪನ್ಮೂಲ ವ್ಯಕ್ತಿಗಳ ಮಧ್ಯದಲ್ಲಿ ಚರ್ಚೆ ಮಾಡಬೇಕೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಸರಕಾರವನ್ನು ಒತ್ತಾಯಿಸಿ ಮೇಲಿನ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ತಲುಪಿಸಲು ಜಿಲ್ಲಾಧಿಕಾರಿಗಳಿಗೆ ಸಂಸದರಾದ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಧಾನ ಕಾರ್ಯದರ್ಶಿ ಸಂದೀಪ ಬೂದಿಹಾಳ, ಜಿಲ್ಲಾಧ್ಯಕ್ಷ ಶ್ರೀಧರ ಪಾಟೀಲ ಕುಲಕರ್ಣಿ ಮನವಿ ಸಲ್ಲಿಸಿದರು. ಶಿಕ್ಷಕರಾದ ಶಿವಾನಂದ ನಾಗೂರ, ಬಸವರಾಜ ದಳವಾಯಿ, ಬಸವರಾಜ ದೇವರಮನಿ, ಚಂದ್ರು ಪಾಟೀಲ, ಹರೀಶ ಜೋಶಿ ಉಪಸ್ಥಿತರಿದ್ದರು.

ಸಂದೀಪ ಬೂದಿಹಾಳ, ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ

Highslide for Wordpress Plugin