ಶಿಕ್ಷಕರ ಸಂಪರ್ಕಕ್ಕೆ ಪೂರ್ಣ ಸಮಯ ಕೊಡಿ – ಕಾರ್ಯಕರ್ತರಿಗೆ ಶ್ರೀ ಮಹೇಂದ್ರಕಪೂರ್ ಕರೆ

ಶಿಕ್ಷಕ ಸಂಘದ ಬೆನ್ನೆಲುಬೇ ಸದಸ್ಯತ್ವ. ಆದ್ದರಿಂದ ಶಿಕ್ಷಕ ಸಂಘದ ಕಾರ್ಯಕರ್ತರು ಪ್ರತಿವರ್ಷವೂ ಸಂಘಕ್ಕೆ ಶಿಕ್ಷಕರ ಸದಸ್ಯತ್ವವನ್ನು ಮಾಡಿಸುವ ಬಗ್ಗೆ ಗಮನಹರಿಸಬೇಕು, ಆ ಮೂಲಕ ಶಿಕ್ಷಕರ ಸಂಪರ್ಕದಲ್ಲಿ ನಿರಂತರವಾಗಿ ಇರಬೇಕು, ಅದಕ್ಕಾಗಿ ತಮ್ಮ ಪೂರ್ಣ ಸಮಯವನ್ನು ಕೊಟ್ಟು ಶಿಕ್ಷಕರ ಸಂಪರ್ಕ, ಅಭಿಯಾನಗಳನ್ನು ಕೈಗೊಳ್ಳಬೇಕು. ನಿರಂತರ ಪ್ರವಾಸ ಮಾಡಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಮಹೇಂದ್ರ ಕಪೂರ್‌ರವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕರ್ತರಿಗೆ ಕರೆ ನೀಡಿದರು. ದಿನಾಂಕ 26-2-2017 ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಸಮಾರೋಪದ ನುಡಿಗಳನ್ನಾಡುತ್ತ ಶ್ರೀ ಕಪೂರ್ ಅವರು ಶಿಕ್ಷಕ ಸಂಘದಲ್ಲಿ ಶಿಕ್ಷಕಿಯರು ಹೆಚ್ಚು ಕ್ರಿಯಾಶೀಲರಾಗಬೇಕೆಂದು ನುಡಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರಾಗಿ 2019 ರವರೆಗೆ ನಿಯುಕ್ತರಾದ ವಿಧಾನ ಪರಿಷತ್ ಸದಸ್ಯ ಶ್ರೀ ಅರುಣಶಹಾಪುರ ಹಾಗೂ ಎ.ಬಿ.ಆರ್.ಎಸ್.ಎಂ.ನ ರಾಷ್ಟ್ರೀಯ ಕಾರ್ಯಕಾರಿಣಿ ಮಹಿಳಾ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಮಮತಾರವರನ್ನು ಸಭೆ ಅಭಿನಂದಿಸಿತು.

26-2-2017 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕಾರಿಣಿಯ ಜೊತೆಗೇ ಕರ್ನಾಟಕ ರಾಜ್ಯಮಹಾವಿದ್ಯಾಲಯಗಳ ಒಕ್ಕೂಟದ ಸಭೆಯೂ ನಡೆದುದು ವಿಶೇಷ. ಸಭೆಯ ಆರಂಭದಲ್ಲಿ ಜಿಲ್ಲೆಗಳ ಪ್ರತಿನಿಧಿಗಳ ಪರಿಚಯದೊಂದಿಗೆ ಜಿಲ್ಲೆಗಳು ನಡೆಸಿದ ಕಾರ್ಯಚಟುವಟಿಕೆಗಳ ವರದಿಯನ್ನು ನೀಡಲಾಯಿತು. ಕರ್ನಾಟಕ ರಾಜ್ಯ ಮಹಾವಿದ್ಯಾಲಯದ ಅಧ್ಯಕ್ಷರಾದ ಪ್ರೊ|| ರಘು ಅಕ್ಮಂಚಿಯವರು ಸಂಘದ ಗುರಿ, ಉದ್ದೇಶಗಳ ಪರಿಚಯ ಮಾಡಿಕೊಟ್ಟರು.

ಇತ್ತೀಚೆಗೆ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕುರಿತು ಕ.ರಾ.ಮಾ.ಶಿ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ಸಿಂಧನಕೇರ ಅವರು ಮಾಹಿತಿ ನೀಡಿದರು. ಶ್ರೀ ವೃಷಭೇಂದ್ರ ಸ್ವಾಮಿಯವರು ಚುನಾವಣೆ ನಡೆದ ಬಗ್ಗೆ ವಿಶ್ಲೇಷಣೆ ನೀಡಿದರು. ನಂತರ ಮಾತನಾಡಿದ ಶ್ರೀಯುತ ಅರುಣಶಹಾಪುರರು ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ, ಆದರೆ ಶಿಕ್ಷಕ ಸಂಘದ ಚಟುವಟಿಕೆಗಳು ನಿರಂತರ, ಸಂಘದ ಕೆಲಸ ಮುಂದುವರೆಸಲು ಮುಂದೆಯೂ ಎಲ್ಲಾ ಶಿಕ್ಷಕರೂ ಒಂದಾಗಿರುವಂತೆ, ತುಮಕೂರಿನಲ್ಲಿ ಸಮಾವೇಶವನ್ನು ಏರ್ಪಡಿಸುವಂತೆ ಸಲಹೆ ನೀಡಿದರು.

ನಂತರದ ಅವಧಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಚಿದಾನಂದ ಪಾಟೀಲರು ಮಾರ್ಚ್‌ನಲ್ಲಿ ಬರುವ ಯುಗಾದಿ ಹಬ್ಬವನ್ನು ಹೊಸ ವರ್ಷವಾಗಿ ಆಚರಿಸಬೇಕು. ಯುಗಾದಿ ಹೊಸವರ್ಷವೆಂಬ ಜಾಗೃತಿಯನ್ನು ಶಿಕ್ಷಕರು, ವಿದ್ಯಾರ್ಥಿಗಳು, ಹಾಗೂ ಪೋಷಕರಲ್ಲಿ ಮೂಡಿಸಬೇಕು. ಅದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ಇದರೊಂದಿಗೆ ಭಾಗವಹಿಸಿದ್ದ ಸದಸ್ಯರು ಫೇಸ್‌ಬುಕ್, ವಾಟ್ಸ್ಯಾಪ್‌ಗಳಲ್ಲಿ ಸಂದೇಶ ಕಳುಹಿಸುವುದು, ಶಾಲೆಗಳಿಗೆ ಶುಭ ಸಂದೇಶ ಕಳುಹಿಸುವುದು, ಕರಪತ್ರ ಹಂಚುವುದು, ಬ್ಯಾನರ್ ಹಾಕುವುದು ಹಾಗೂ ತರಗತಿಗಳಲ್ಲಿ ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟುಮಾಡಿ ಅಂಚೆ ಕಾರ್ಡಿನಲ್ಲಿ ಶುಭಾಶಯ ಸಂದೇಶ ಬರೆದು ಕಳುಹಿಸುವಂತೆ ಪ್ರೇರೇಪಿಸಬೇಕು ಎಂಬ ಸಲಹೆಗಳನ್ನು ನೀಡಿದರು.

ಶಿಕ್ಷಕರಿಗೆ ನೀಡುತ್ತಿರುವ ವಿಶೇಷ ವೇತನವು ತತ್ಸಮಾನ ಹುದ್ದೆಯವರಿಗೆ ಕೈತಪ್ಪಿದೆ. ಈ ಬಗ್ಗೆ ಸಂಘ ಪ್ರಯತ್ನಿಸಿ ಕೊನೆಯ ಹಂತ ತಲುಪುತ್ತಿದೆ. ಈಗ ನಮ್ಮ ಪ್ರಯತ್ನ ಮುಂದುವರೆಯಬೇಕು ಎಂದು ತಿಳಿಸಲಾಯಿತು. ಅದಕ್ಕಾಗಿ 28-2-2017ರಂದು ದೈಹಿಕ ಶಿಕ್ಷಕ ಸಂಘ ನಡೆಸುವ ಕಾರ್ಯಾಗಾರದಲ್ಲಿ ನಮ್ಮ ಸಂಘದ ಪ್ರತಿನಿಧಿಗಳು ಭಾಗವಹಿಸಿ ನಾವು ಮಾಡಿರುವ ಪ್ರಯತ್ನಗಳ ಬಗ್ಗೆ ತಿಳಿಸುವಂತೆ ಸೂಚಿಸಲಾಯಿತು. ಸಂಘದ ಪ್ರಯತ್ನದ ಬಗ್ಗೆ ಎಲ್ಲಾ ಶಿಕ್ಷಕರಿಗೆ ಪತ್ರ ಬರೆದು ತಿಳಿಸಬೇಕೆಂದು ನಿರ್ಧರಿಸಲಾಯಿತು. 2008 ರ ನಂತರ ನೇಮಕಾತಿ ಆದವರಿಗೆ ವಿಶೇಷ ವೇತನ ನೀಡುತ್ತಿರಲಿಲ್ಲ. ಇವರಿಗೂ ಈ ಸೌಲಭ್ಯ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಈ ಆದೇಶದೊಂದಿಗೆ 2008 ರ ನಂತರ ನೇಮಕಗೊಂಡವರಿಗೂ ವಿಶೇಷ ವೇತನ ನೀಡುವಂತೆ ಬಿ.ಇ.ಓ, ಡಿಡಿಪಿಐ, ಶಿಕ್ಷಣ ಸಚಿವರಿಗೆ ಮನವಿ ಮಾಡುವಂತೆ ತೀರ್ಮಾನಿಸಲಾಯಿತು.

ಮುಂದಿನ ಶೈಕ್ಷಣಿಕ ವರ್ಷದಿಂದ ಕನಿಷ್ಠಕಲಿಕಾ ಅಂಶ ಜಾರಿಗೆ ಬರುವುದರಿಂದ ಈಗಿರುವ ಸಿಸಿಇ ಸಹಜವಾಗಿ ಪಕ್ಕಕ್ಕೆ ಹೋಗುತ್ತದೆ. ಈ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಗಳ ಕಾರ್ಯಕ್ರಮಗಳನ್ನು ಏರ್ಪಡಿಸುವ ಬಗ್ಗೆ ಸೂಚನೆ ನೀಡಲಾಯಿತು.

ರಾಜ್ಯಾಧ್ಯಕ್ಷರಾದ ಶ್ರೀಯುತ ಶಿವಾನಂದ ಸಿಂಧನಕೇರ ಅವರು ಶಿಕ್ಷಕ್ ಸಮ್ಮಾನ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಎ.ಬಿ.ಆರ್.ಎಸ್.ಎಂ ರಾಷ್ಟ್ರಮಟ್ಟದಲ್ಲಿ ಮೂವರು ಸಾಧಕರನ್ನು ಪ್ರತಿ ವರ್ಷ ಗುರುತಿಸಿ ಸನ್ಮಾನಿಸುತ್ತದೆ. ಒಂದು ಲಕ್ಷ ರೂ ನಗದು, ಬೆಳ್ಳಿಪದಕ, ಪ್ರಶಂಸಾ ಪತ್ರಗಳನ್ನು ಸನ್ಮಾನ ಒಳಗೊಂಡಿರುತ್ತದೆ. ಈ ವರ್ಷ ಶಿಕ್ಷಕ ಸಮ್ಮಾನ್ ಕರ್ನಾಟಕದ ಬೆಂಗಳೂರಿನಲ್ಲಿ ಜುಲೈ ತಿಂಗಳಿನಲ್ಲಿ ನಡೆಯುತ್ತದೆ. ಶಿಕ್ಷಕರಿಂದ ಸಂಗ್ರಹವಾದ ಹಣದಿಂದ ನಡೆಯುವ ಕಾರ್ಯಕ್ರಮ ಇದು. ಪ್ರತಿ ಶಿಕ್ಷಕರಿಂದ 101 ರೂ. ಗಳನ್ನು ಮಾತ್ರ ಸಂಗ್ರಹಿಸಬೇಕು ಎಂಬ ಮಾಹಿತಿಯೊಂದಿಗೆ ಪ್ರತಿ ಜಿಲ್ಲೆಗಳಿಂದ ನಿಧಿ ಸಂಗ್ರಹದ ಗುರಿಯನ್ನು ನಿಗದಿಪಡಿಸಲಾಯಿತು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ 50 ವರ್ಷಗಳನ್ನು ಪೂರೈಸುತ್ತಿದ್ದು ಈ ವಿಶೇಷ ಸಂದರ್ಭಕ್ಕಾಗಿ ರಾಜ್ಯಮಟ್ಟದ ವಿಶೇಷ ಸಮಾರಂಭವನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಬೇಸಿಗೆ ರಜೆಯಲ್ಲಿ ಸಂಘಟನೆಯ ದೃಷ್ಟಿಯಿಂದ ಕಾರ್ಯಕರ್ತರು ಎಂಟು ದಿನಗಳ ಸಮಯವನ್ನು ಬೇರೆ ಜಿಲ್ಲೆಗಳ ಪ್ರವಾಸಕ್ಕಾಗಿ ವಿನಿಯೋಗಿಸುವಂತೆ ಸಲಹೆ ನೀಡಿದರು. ಮಹಿಳಾ ಕಾರ್ಯಕರ್ತರೂ ಈ ಪ್ರವಾಸದಲ್ಲಿ ಭಾಗಿಗಳಾಗಲಿದ್ದಾರೆ ಎಂದ ಅವರು ಕಾರ್ಯಕರ್ತರು ಪ್ರವಾಸದ ವಿವರವನ್ನು ನೀಡುವಂತೆ ಸೂಚಿಸಿದರು.

ಶಿಕ್ಷಕ ಸಮಾಚಾರ ನಮ್ಮೆಲ್ಲರ ಪತ್ರಿಕೆ. ಚಂದಾದಾರರಾಗುವ ಮೂಲಕ ಮತ್ತು ಚಂದಾವನ್ನು ಸಕಾಲದಲ್ಲಿ ನವೀಕರಿಸುವ ಮೂಲಕ ಪತ್ರಿಕೆಯ ಆರ್ಥಿಕತೆಯನ್ನು ಉತ್ತಮಗೊಳಿಸಲು ನೆರವಾಗಬೇಕು. ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ವರದಿ ಹಾಗೂ ಚಿತ್ರಗಳನ್ನು ಶಿಕ್ಷಕ ಸಮಾಚಾರಕ್ಕೆ ಕಳುಹಿಸಬೇಕು. ಇದರಿಂದ ನಮ್ಮೆಲ್ಲ ಕಾರ್ಯಕ್ರಮಗಳ ಪರಿಚಯ ಎಲ್ಲರಿಗೂ ಆಗಲಿದೆ. ಸಂಘದ ಚಟುವಟಿಕೆಗಳ ಬೆಳವಣಿಗೆಗೆ ನೆರವಾಗಲಿದೆ. ಜೊತೆಗೆ ವೈಚಾರಿಕ ಲೇಖನಗಳ, ಸಾಹಿತ್ಯಕ ಬರವಣಿಗೆಗಳನ್ನು ಕಳುಹಿಸಬೇಕು. ಪತ್ರಿಕೆಯ ಉತ್ತಮಿಕೆಗಾಗಿ ಒಳ್ಳೆಯ ಸಲಹೆಗಳನ್ನು ನೀಡುವಂತೆ ಶಿಕ್ಷಕ ಸಮಾಚಾರದ ಸಹಸಂಪಾದಕರಾದ ನಾಗರಾಜ್ ಮನವಿ ಮಾಡಿದರು.

ಕ.ರಾ.ಮಾ.ಶಿ. ಸಂಘದ ಮಾರ್ಗದರ್ಶಕರಾದ ಪ್ರೊ|| ಬಾಲಕೃಷ್ಣಭಟ್‌ರವರು ಮಾತನಾಡಿ ಶಿಕ್ಷಕ ಸಂಘದ ಸಾಧನೆಗಳು ಬಹಳ. ಶಿಕ್ಷಕ ಸಮಾಚಾರದ ಏಳಿಗೆಗಾಗಿ ಹಾಗೂ ಸಂಘದ ಇತರ ಚಟುವಟಿಕೆಗಳಲ್ಲಿ ನಾವು ಎಷ್ಟು ಕಾಣಿಕೆ ನೀಡಿದ್ದೇವೆ. ನಮ್ಮ ಪಾತ್ರ ಎಷ್ಟು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಗುರುವಂದನೆ, ಸಂಕಲ್ಪದಿನ, ಯುಗಾದಿ ಹೊಸವರ್ಷಾಚರಣೆ ಈ 3 ಕನಿಷ್ಠ ಕಾರ್ಯಕ್ರಮಗಳ ಆಚರಣೆಯಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಮಧ್ಯಾಹ್ನದ ಅವಧಿ ವಿಧಾನ ಪರಿಷತ್ ಸದಸ್ಯ ಶ್ರೀ ಅರುಣ ಶಹಾಪೂರರೊಂದಿಗೆ ಸಂವಾದ. ಇದರಲ್ಲಿ ಕಾರ್ಯಕರ್ತರು ಶಿಕ್ಷಣ ಕ್ಷೇತ್ರದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಪಠ್ಯಪುಸ್ತಕ ಪರಿಷ್ಕರಣೆ, ಮುಖ್ಯಶಿಕ್ಷಕರಿಗೆ Exgratia ನೀಡದಿರುವುದು, ಬಿ ವೃಂದದ ಅಧಿಕಾರಿಗಳ ಬಡ್ತಿ,  KEA ಗೆ ತಿದ್ದುಪಡಿ ತಂದು ಶಿಕ್ಷಕರು, ಶಿಕ್ಷಕ ಪ್ರತಿನಿಧಿಗಳು, ಶಿಕ್ಷಕರ ದಮನ ಮಾಡಲು ಹೊರಟಿರುವ ಸರ್ಕಾರದ ಬಗ್ಗೆ, ಹೀಗೆ ಎಲ್ಲ ವಿಷಯಗಳ ಕುರಿತು ಶಿಕ್ಷಕರಿಗೆ ಸವಿವರ ತಿಳುವಳಿಕೆ ನೀಡಬೇಕು. ಹೋರಾಟದ ಅವಶ್ಯಕತೆಯೂ ಬರಬಹುದು ಎಂದು ನಿರ್ಧರಿಸಲಾಯಿತು.

ಸಂಘದ ಕಾರ್ಯದರ್ಶಿಗಳಾದ ಶ್ರೀ ಸಂದೀಪ್‌ಬೂದಿಹಾಳ್ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.

Highslide for Wordpress Plugin