ವಿಷಯ ತಜ್ಞರ ಕಾರ್ಯಾಗಾರ

ದಿನಾಂಕ 30-4-2017 ರಂದು ವಿಜಯ ಟೀಚರ್‍ಸ್ ಕಾಲೇಜ್, ಜಯನಗರ, ಬೆಂಗಳೂರು ಇಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಒಂದು ದಿನದ ವಿಷಯ ತಜ್ಞರ ಕಾರ್ಯಾಗಾರ ನಡೆಯಿತು. ಪೂಜನೀಯ ಶ್ರೀ ಕೈವಲ್ಯಾನಂದ ಸ್ವಾಮೀಜಿ, ಶ್ರೀ ಶಿವಾನಂದ ಮಠ, ಘೋಡಗೇರಿ, ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನ್ಯ ವಿಧಾನಸಭಾ ಸದಸ್ಯರು ಮತ್ತು ಮಾಜಿ ಶಿಕ್ಷಣ ಮಂತ್ರಿಗಳು, ಶ್ರೀ ಬಾಲಕೃಷ್ಣ ಭಟ್, ಮಾಜಿ ವಿಧಾನಪರಿಷತ್ ಸದಸ್ಯರು, ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ, ಅ.ಭಾ.ರಾ.ಶೈ.ಸಂಘ, ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಮಾನ್ಯ ಮುಖ್ಯ ಸಚೇತಕರು, ವಿರೋಧ ಪಕ್ಷ, ವಿಧಾನಪರಿಷತ್ ಮತ್ತು ಕ.ರಾ.ಮಾ.ಶಿ.ಸಂಘದ ಮಾರ್ಗದರ್ಶಕರು, ಬೆಂಗಳೂರು, ಶ್ರೀ ಜಿ.ಆರ್. ಜಗದೀಶ್, ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಗಳು, ವಿದ್ಯಾಭಾರತಿ, ಬೆಂಗಳೂರು, ಶ್ರೀ ಅರುಣ್ ಶಹಾಪೂರ, ವಿಧಾನಪರಿಷತ್ ಸದಸ್ಯರು, ರಾಜ್ಯ ಕಾರ್ಯಾಧ್ಯಕ್ಷರು, ಕ.ರಾ.ಮಾ.ಶಿ.ಸಂಘ ಬೆಂಗಳೂರು ರವರು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಿರೂಪಣೆಯನ್ನು ಕ.ರಾ.ಮಾ.ಶಿ. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ್ ಕೆ. ಪಾಟೀಲ್‌ರವರು ನಿರ್ವಹಿಸಿದರು. ಶ್ರೀಮತಿ ರೋಹಿಣಿರವರ ಸರಸ್ವತಿ ವಂದನೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ವಾಸುಕಿಯವರು ಗಣ್ಯರನ್ನು ಹಾಗೂ ಸಭಿಕರನ್ನು ತುಂಬು ಹೃದಯದಿಂದ ಸ್ವಾಗತಿಸಿದರು. ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.

workshop4

workshop5

ಅರುಣ್ ಶಹಪೂರ್‌ರವರು ವಿಷಯ ತಜ್ಞರ ಕಾರ್ಯಾಗಾರದ ಉದ್ದೇಶವನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು. ದೇಶವೇ ಮೆಚ್ಚಿದಂತಹ ಪಠ್ಯವಸ್ತುವಿನ ಪರಿಷ್ಕರಣೆ ಮಾಡಲಾಗುತ್ತಿದೆ, ಯಾವುದೇ ನುರಿತ ಶಿಕ್ಷಣ ತಜ್ಞರ ಸಲಹೆಯನ್ನು ಕೇಳದೇ ಪರಿಷ್ಕರಣೆ ಮಾಡುತ್ತಿರುವುದರ ಉದ್ದೇಶವನ್ನು, ಹಾಗೂ ಈ ಹಿಂದೆ ಪಠ್ಯವಸ್ತು ಬದಲಾವಣೆಯಲ್ಲಿ ಕಾರ್ಯನಿರ್ವಹಿಸಿದ ವಿಷಯ ತಜ್ಞರ ಜೊತೆ ಚರ್ಚೆ ಮಾಡುವುದೇ ಈ ಕಾರ್ಯಾಗಾರದ ಉದ್ದೇಶವೆಂದು ತಿಳಿಸಿದರು.

ಮಾಜಿ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಉದ್ಘಾಟನಾ ಭಾಷಣದಲ್ಲಿ ಈ ಹಿಂದೆ ಪಠ್ಯವಸ್ತು ರಚನಾ ಸಮಿತಿಯ ಮುಖ್ಯ ಸಂಯೋಜಕರಾದ ದಿವಂಗತ ಪ್ರೊ|| ಜೆ.ಎಸ್. ಮುಡಂಬಡಿತ್ತಾಯರವರನ್ನು ಸ್ಮರಿಸುತ್ತಾ ಪಠ್ಯಪುಸ್ತಕ ರಚನಾ ಸಮಯದಲ್ಲಿ ಅವರು ನಿರ್ವಹಿಸಿದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಎನ್.ಸಿ.ಎಫ್ 2005 ರ ಬಗ್ಗೆಯೂ ಸಹ ಮಾಹಿತಿ ನೀಡಿದರು. ಶ್ರೀ ಜಿ.ಆರ್ ಜಗದೀಶ್ ರವರು ಶಿಕ್ಷಣದ ಆರಂಭ ಉಪನಿಷತ್ತುಗಳ ಕಾಲದಿಂದಲೇ ಪ್ರಾರಂಭವಾಗಿದೆಯೆಂದು ಹಾಗೂ ಕಠೋಪನಿಷತ್ತಿನ ಬಗ್ಗೆಯೂ ಹೇಳಿದರು. ಪಠ್ಯಪುಸ್ತಕ ರಚನಾ ಸಮಯದಲ್ಲಿ ಭಾರತೀಯತೆಯ ಬಗ್ಗೆ ಚಿಂತನೆ ಮಾಡಬೇಕೆಂದು ಹೇಳಿದರು.

ಶ್ರೀ ಕೈವಲ್ಯಾನಂದ ಸ್ವಾಮೀಜಿಯವರು ತಮ್ಮ ಪ್ರವಚನದಲ್ಲಿ ಶಿಕ್ಷಕರ ಮಹತ್ವದ ಬಗ್ಗೆ ಹೇಳುತ್ತಾ, ಯಾವಯಾವಾಗ ದೇಶ ಸಂಕಷ್ಟದಲ್ಲಿ ಸಿಲುಕಿತ್ತೋ, ಆಗೆಲ್ಲಾ ಒಬ್ಬ ಶಿಕ್ಷಕನಿಂದಲೇ ಸಂಕಷ್ಟ ದೂರವಾಗಿದೆಯೆಂದು ಹೇಳಿದರು. ಸಮರ್ಥ ರಾಮದಾಸ, ವಿದ್ಯಾರಣ್ಯ, ಆಚಾರ್ಯ ಚಾಣಕ್ಯರ ಉದಾಹರಣೆಯನ್ನು ಸಹ ಸಭಿಕರಿಗೆ ನೀಡಿದರು. ಸಮಾಜದಲ್ಲಿ ಶಿಕ್ಷಣ ಕ್ಷೇತ್ರ ಕೆಟ್ಟರೆ ದುರಸ್ತಿ ಮಾಡುವುದು ಬಹಳ ಕಷ್ಟದ ಕೆಲಸವೆಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಭಾರತೀಯತೆಯನ್ನು ಬಿತ್ತುವ ಕೆಲಸವನ್ನು ಪ್ರತಿಯೊಬ್ಬ ಶಿಕ್ಷಕರೂ ತಮ್ಮ ಆದ್ಯ ಕರ್ತವ್ಯವೆಂದು ತಿಳಿಯಬೇಕೆಂದು ಹೇಳಿದರು.

ಶ್ರೀ ಕ್ಯಾಪ್ಟನ್ ಗಣೇಶರವರು ರಾಷ್ಟ್ರನಿರ್ಮಾಣದಲ್ಲಿ ಶಿಕ್ಷಕರ ಕರ್ತವ್ಯ ಬಹಳ ಮಹತ್ತರವಾದುದೆಂದು ತಿಳಿಸಿದರು. ಸರಿಯಾದ ಲಕ್ಷ್ಯವಿದ್ದರೆ ಗುರಿಯ ಸಫಲತೆಗೆ ತೊಂದರೆಯಾಗದೆಂದು ಹೇಳಿದರು. ಶ್ರೀ ವರದರಾಜುರವರು ವಂದನಾರ್ಪಣೆ ಮಾಡುವುದರೊಂದಿಗೆ ಉದ್ಘಾಟನಾ ಸಭೆಗೆ ಇತಿಶ್ರೀ ಹಾಡಲಾಯಿತು.

workshop3

workshop2

workshop1

ಎರಡನೇ ಅವಧಿಯಲ್ಲಿ ವಿಜಯ ಟೀಚರ್‍ಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿಜಯಕುಮಾರಿಯವರು ಪಠ್ಯವಸ್ತುವಿನ ಬದಲಾವಣೆ ಮಾಡಲು ಎರಡು ಉದ್ದೇಶವಿರಬೇಕು 1. ಬೋಧನೆಯ ವಿಧಾನದಲ್ಲಿ ಪರಿವರ್ತನೆ 2. ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯದ ನಿರ್ಮಾಣ. ಆದರೆ ಇಂದು ಆಗುತ್ತಿರುವ ಪಠ್ಯವಸ್ತುವಿನ ಪರಿಷ್ಕರಣೆಯ ಉದ್ದೇಶವೇನೆಂದು ಯಾವ ಶಿಕ್ಷಣ ತಜ್ಞರಿಗಾಗಲೀ ಹಾಗೂ ಶಿಕ್ಷಕರಿಗಾಗಲೀ ಗೊತ್ತಾಗುತ್ತಿಲ್ಲವೆಂದು ಹೇಳಿದರು. ಅವರು ತಾವು ಸಹ ಈ ಹಿಂದೆ ಪಠ್ಯವಸ್ತುವಿನ ರಚನಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ತಮ್ಮ ಅನುಭವ ಗಳನ್ನು, ಪ್ರೊ. ಮುಡಂಬಡಿತ್ತಾಯರವರ ಕಾರ್ಯವೈಖರಿಯನ್ನು ಸ್ಮರಿಸಿಕೊಂಡರು. ನಂತರ ವಿಷಯ ತಜ್ಞರು ತಾವು ನಿರ್ವಹಿಸಿದ ರಚನಾ ಕಾರ್ಯವನ್ನು ಸ್ಮರಿಸುತ್ತಾ, ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು. ಹಾಗೂ ತರಗತಿಯಲ್ಲಿ ಭಾರತೀಯತೆಯನ್ನು ಮಕ್ಕಳಲ್ಲಿ ಹೇಗೆ ಬೆಳೆಸಬೇಕೆಂಬುದರ ಬಗ್ಗೆಯೂ ಸಲಹೆಯನ್ನು ನೀಡಿದರು.

ಮುಂದೆಯೂ ಈ ರೀತಿಯ ವಿಷಯ ತಜ್ಞರ ಕಾರ್ಯಾಗಾರ ಮಾಡಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು. ಕಾರ್ಯಾಗಾರದಲ್ಲಿ 150 ಶಿಕ್ಷಣ ತಜ್ಞರು ಕ್ರಿಯಾಶೀಲರಾಗಿ ಭಾಗವಹಿಸಿದ್ದು ಅತ್ಯಂತ ಸಂತೋಷದಾಯಕ ವಿಷಯವಾಗಿತ್ತು.

Highslide for Wordpress Plugin