ಹೃದಯದ ಭಾಷೆ ಕಲಿಸಿ – ಹೃದಯವಂತರನ್ನಾಗಿಸಿ : ಭಾವೀ ಶಿಕ್ಷಕರಿಗೆ ಸ್ವಾಮಿ ವೀರೇಶಾನಂದರ ಕಿವಿ ಮಾತು

‘ವಿದ್ಯಾ ವಿಹೀನ: ಪಶುಃ, ವಿದ್ಯಾ ರಾಜಸ್ವ, ಪೂಜ್ಯತೇ ನತು ಧನಂ. ವಿದ್ಯೆಯೇ ಶ್ರೀಮಂತಿಕೆ, ಹಣ ಎಂದೆಂದಿಗೂ ಅಲ್ಲ. ಆದ್ದರಿಂದ ಪ್ರಶಿಕ್ಷಣಾರ್ಥಿಗಳು , ಶಿಕ್ಷಕರು ಹಣದ ಹಿಂದೆ ಹೋಗದೆ ಆದರ್ಶಮುಖಿಗಳಾಗಬೇಕು. ಇಲ್ಲವಾದರೆ ಸಮಾಜಕ್ಕೆ ಏನನ್ನೂ ಕೊಡಲು ಸಾಧ್ಯವಿಲ್ಲ. ಸಮಾಜದಲ್ಲಿ ಆದರ್ಶಗಳನ್ನು ಹುಡುಕಲು ಹೊರಟರೆ ನಿರಾಶೆಯಾಗುತ್ತದೆ. ಮೇಷ್ಟ್ರು ಬಡವ ನಾದರೆ ಶ್ರೀಮಂತ ಶಿಷ್ಯನನ್ನು ರೂಪಿಸಬಲ್ಲ. ಶ್ರೀಮಂತನಾದರೆ ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರು ಹಣದ ಹಿಂದೆ ಹೋಗದೆ ಯಾವತ್ತೂ ಆದರ್ಶಮುಖಿಗಳಾಗೋಣ ಎಂದು ತುಮಕೂರಿನ ಶ್ರೀರಾಮಕೃಷ್ಣ-ವಿವೇಕಾನಂದ ಯೋಗಾಶ್ರಮದ ಸ್ವಾಮಿ ವೀರೇಶಾನಂದರು ಶಿಕ್ಷಕರಿಗೆ ಕರೆ ನೀಡಿದರು.

IMG_20170819_105745

IMG_20170819_105729

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಮಹಿಳಾ ವಿಭಾಗ ಹಾಗೂ ಬೆಂಗಳೂರಿನ ವಿಜಯ ಶಿಕ್ಷಕರ ಮಹಾವಿದ್ಯಾಲಯ ದಿನಾಂಕ 19-8-2017 ರಂದು ವಿಜಯ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೌಲ್ಯಾಧಾರಿತ ಬೋಧನೆ ಮತ್ತು ನೀತಿ ಸಂಹಿತೆಗಳು ವಿಚಾರ ಸಂಕಿರಣದ ಉದ್ಘಾಟನಾ ಭಾಷಣ ಮಾಡಿದ ಸ್ವಾಮೀಜಿ ಶಿಕ್ಷಕನಿಗೆ ಅಕಸ್ಮಾತ್ ಅಹಂಕಾರವಿದ್ದರೂ ಅಸಹಾಯಕತೆ ಇರಬಾರದು. ಈಗ ಶಿಕ್ಷಕರು ಅಸಹಾಯಕ ಮುಖಚರ್ಯೆ ಪ್ರದರ್ಶಿಸುತ್ತಿದ್ದಾರೆ. ಅದು ಬಿಟ್ಟು ಆದರ್ಶಮುಖಿಗಳಾದರೆ ಊಹಿಸಲಾರದ ಅದ್ಭುತಗಳನ್ನು ಮಾಡಬಹುದು. ಶಿಕ್ಷಕ ಪುರುಷ ಸರಸ್ವತಿಯಾಗಿ ವಿದ್ಯಾರ್ಥಿಗಳನ್ನು ಆಯಸ್ಕಾಂತದಂತೆ ಆಕರ್ಷಿಸಬೇಕು. ಆಗ ಅವನು ನೀಡುವ ಕೊಡುಗೆ ಸಮಾಜದಲ್ಲಿ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದರು.

ಸ್ವಾಮೀಜಿ ಮುಂದುವರಿದು ಪ್ರಶಿಕ್ಷಣಾರ್ಥಿಗಳು ಶಿಕ್ಷಕನ ಉದ್ಯೋಗವನ್ನು ತಪಸ್ಸೆಂದು ಭಾವಿಸಬೇಕು. ಸ್ವಪ್ರೇರಣೆಯಿಂದ ಈ ವೃತ್ತಿಯನ್ನು ಆರಿಸಿಕೊಳ್ಳಿ ಎಂದು ಹಿತವಚನ ನುಡಿದರು. ಶಿಕ್ಷಕ ಯಾವತ್ತೂ ತನ್ನ ಮಾನಸಿಕ ಸ್ಥಿತಿಯನ್ನು ಕೆಳಗಿಳಿಸಿ ಕೊಳ್ಳಬಾರದು. ಅನ್ಯಾಯ ಮಾರ್ಗದಲ್ಲಿ ಗೆಲ್ಲುವುದಕ್ಕಿಂತ ನ್ಯಾಯಮಾರ್ಗದಲ್ಲಿ ಸೋತರೂ ಪರವಾಗಿಲ್ಲ ಎಂಬಂತೆ ನಡೆದುಕೊಂಡು ಶಿಷ್ಯರಲ್ಲಿ ಆ ಮನೋಭಾವ ಬೆಳೆಸಬೇಕು. ಮಕ್ಕಳಿಗೆ ಜೀವನವೇ ಪಠ್ಯ, ಇತಿಹಾಸವಾಗಬೇಕು ಎಂದ ಅರು ಮೈಸೂರು ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಗಳ ಹಿಂದಿನ ಸಾಲಿನ ಹುಡುಗರು ನಾವು… ಕವನವನ್ನು ವಿಶ್ಲೇಷಿಸಿ ಶಿಕ್ಷಕ ತರಗತಿಯ ಕಡೆಯ ಬೆಂಚಿನ ವಿದ್ಯಾರ್ಥಿಗಳನ್ನೂ ಮುಂದಕ್ಕೆ ತರಬೇಕು. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಲಿಸಿ, ಆ ಮೂಲಕ ಜೀವನವನ್ನು ಕಟ್ಟಿಕೊಡಬೇಕು ಎಂದು ಕಿವಿ ಮಾತು ಹೇಳಿದರು.

‘Knowledge is power’ ಎಂಬಂತೆ ಶಿಕ್ಷಕರಿಗೆ ಎಲ್ಲಾ ವಿಷಯಗಳಲ್ಲೂ ಆಸಕ್ತಿ ಇರಬೇಕು. ಕೇವಲ ತನ್ನ ಬೋಧನೆಯ ವಿಷಯಕ್ಕೆ ಮಾತ್ರ ಸೀಮಿತವಾಗಿರಬಾರದು. ಎಲ್ಲದಕ್ಕಿಂತ ಮುಖ್ಯವಾಗಿ ಪ್ರತಿ ಶಿಕ್ಷಕನೂ ನೈತಿಕ ಶಿಕ್ಷಣದ ಶಿಕ್ಷಕನೂ (Moral Education Teacher) ಆಗಿರಬೇಕು. ಕಲಿಯಲು ಆಸಕ್ತಿಯುಳ್ಳವನೇ ಕಲಿಸಲು ಯೋಗ್ಯ ಎಂಬಂತೆ ಅಧ್ಯಾಪಕರು ನಿರಂತರ ಅಧ್ಯಯನದಲ್ಲಿ ತೊಡಗಬೇಕು. ಶಿಕ್ಷಕ ತಾನೂ ಕಲಿತು ಶಿಷ್ಯರಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಬದ್ಧರಾಗಿರಬೇಕು. ಅಧ್ಯಾಪಕ ಅಂತರಂಗ ಪ್ರಪಂಚ, ಬಹಿರಂಗ ಪ್ರಪಂಚಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಸಮಾಜದ ಭಾವನೆಗಳಿಗೆ, ನೋವು ನಲಿವುಗಳಿಗೆ ಸ್ಪಂದಿಸುವ ಹೃದಯದ ಭಾಷೆಯನ್ನು ಕಲಿಸಿ ಹೃದಯವಂತರನ್ನಾಗಿಸಬೇಕು ಎಂದು ಸ್ವಾಮೀಜಿ ಶಿಕ್ಷಕ ವೃಂದಕ್ಕೆ ಕರೆ ನೀಡಿದರು. ಸಮಯವು ಸಾರ್ವತ್ರಿಕ ಸಾಧನ. ಶಿಕ್ಷಕರು ಸಮಯ ಪ್ರಜ್ಞೆಯನ್ನು ರೂಢಿಸಿಕೊಂಡು, ಪಾಲಿಸಿ, ಶಿಷ್ಯರಿಗೆ ಕಲಿಸುವ ಅಗತ್ಯವನ್ನು ಸ್ವಾಮೀಜಿ ಒತ್ತಿ ಹೇಳಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪೋಷಕರಾದ ಪ್ರೊ || ಕೃ. ನರಹರಿಯವರು ಅಧ್ಯಕ್ಷೀಯ ಭಾಷಣದಲ್ಲಿ ಐದು ರೀತಿಯ ಮೌಲ್ಯಗಳಾದ ವೈಯುಕ್ತಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು, ಕೌಟುಂಬಿಕ ಮೌಲ್ಯಗಳು, ಆಧ್ಯಾತ್ಮಿಕ ಮೌಲ್ಯಗಳು ಹಾಗೂ ರಾಷ್ಟ್ರೀಯ ಮೌಲ್ಯಗಳನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೈಗೂಡಿಸಬೇಕು. ನಮ್ಮ ಜೀವನವೇ ಮೌಲ್ಯಗಳಿಗೆ ಆದರ್ಶವಾಗಿರಬೇಕು ಎಂದು ನುಡಿದರು.

ವಿಜಯ ಕಾಲೇಜಿನ ಪ್ರಶಿಕ್ಷಣಾರ್ಥಿ ಕು. ರಂಜಿನಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಜಿ. ಎನ್. ವಾಸುಕಿ, ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಸ್ವಾಗತಿಸಿದರು. ಡಾ|| ವಿ.ಡಿ. ಭಟ್ ವಂದನಾರ್ಪಣೆ ಯನ್ನು ಸಲ್ಲಿಸಿದರು. ಸಮಾರಂಭದಲ್ಲಿ ವಿಜಯ ಶಿಕ್ಷಕರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ವಿಜಯಕುಮಾರಿ, ಬಿ. ಹೆಚ್. ಇ. ಎಸ್.ನ ಜಂಟಿ ಕಾರ್ಯದರ್ಶಿ ಡಾ|| ಕೆ.ಎಸ್. ಸಮೀರಸಿಂಹ, ಕಾಲೇಜಿನ ಉಪಪ್ರಾಂಶುಪಾಲರಾದ ಡಾ|| ಮೀನ, ಸಹ ಪ್ರಾಧ್ಯಾಪಕರಾದ ಸುರೇಶ್, ಪ್ರವೀಣ್, ಆರ್. ವಿ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ|| ಭಾಸ್ಕರ್ ; ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶಿವಾನಂದ ಸಿಂಧನಕೇರ, ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ, ಜಿ. ಎಸ್. ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ನಂ. ನಾಗಲಕ್ಷಿ, ವಿಚಾರಸಂಕಿರಣದ ಸಂಚಾಲಕರು ಪ್ರಾಸ್ತಾವಿಕ ನುಡಿ ಗಳನ್ನಾಡಿದರು. ಶ್ರೀಮತಿ ಮಾಲಿನಿ, ನಿವೃತ್ತ ಮುಖ್ಯ ಶಿಕ್ಷಕರು, ಬಿಬಿಎಂಪಿ ಪ್ರೌಢಶಾಲೆ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.

* * *

IMG_20170819_145151

IMG_20170819_122552

ವಿಚಾರಸಂಕಿರಣದ ಮೊದಲ ಅವಧಿಯಲ್ಲಿ ಎಂ. ಇ. ಎಸ್. ಶಿಕ್ಷಕರ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ|| ಗಣೇಶ ಭಟ್ ಮೌಲ್ಯಾಧಾರಿತ ಬೋಧನೆಯ ಬಗ್ಗೆ ವಿಶ್ಲೇಷಿಸಿದರು. ಮೌಲ್ಯಗಳು ಮನುಷ್ಯರಲ್ಲಿ ಮಾತ್ರವೇ ಅಲ್ಲ, ಪ್ರಾಣಿಗಳಲ್ಲಿಯೂ ಕಂಡುಬರುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ಇರುವೆ, ಜೇನು ನೊಣ, ಹಸು. ಮೌಲ್ಯಗಳಿಗೆ ಜೀವಂತಸಾಕ್ಷಿ ಮಹಾತ್ಮಾಗಾಂಧಿ, ಮದರ್ ತೆರೆಸಾ ಮುಂತಾದವರು. ಈಗ ಮಾನವನನ್ನು ಬಂಡವಾಳ (Capital) ಎಂದು ಪರಿಗಣಿಸಲಾಗಿದ್ದು ಅದರ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಮೌಲ್ಯಗಳಲ್ಲಿನ ಎರಡು ವಿಧಗಳಾದ ನಿಮಿತ್ತ (Instrumental) ಮತ್ತು ವಾಸ್ತವಿಕ (Intrinsic) ಮೌಲ್ಯಗಳ ಮಾಹಿತಿ ನೀಡಿದರು. ಮಾನವ ಬಂಡವಾಳವನ್ನು ಪುಷ್ಟೀಕರಿಸುವ ಅಂಶಗಳನ್ನು ತಿಳಿಸಿದರು. ಕರುಣೆ ತೋರಿಸುವುದು, ತೊಂದರೆಯಲ್ಲಿದ್ದಾಗ ಸಹಾಯ ಮಾಡುವುದು ಅತ್ಯಂತ ಮುಖ್ಯ ಮೂಲಭೂತ ಮೌಲ್ಯ ಎಂದು ತಿಳಿಸಿದರು. ಶಿಕ್ಷಕರು ಮೌಲ್ಯವನ್ನು ಬೋಧಿಸುವಾಗ ಅಹಂ (Ego) ಇರಬಾರದು. ಸಾಧ್ಯವಾದಷ್ಟೂ ಸರಳವಾಗಿರಬೇಕು. ಬೀಜಕ್ಕೆ ಸರಿಯಾದ ಪೋಷಣೆಯನ್ನು ಶಿಕ್ಷಕರು ಕೊಡಬೇಕು. ಗಣಿತಗಳನ್ನು ಕಲಿಯುವುದನ್ನು ಕುರಿತು ಕಲಿಸುವುದು ಶಿಕ್ಷಕನ ಜವಾಬ್ದಾರಿ ಎಂದು ಪ್ರತಿಪಾದಿಸಿದರು. ಉತ್ತಮ ಸ್ನೇಹಿತ, ಸಹಕಾರ, ಸುಖದುಃಖ, ಮಾನವ ಸಹೋದರತ್ವ, ಶಿಕ್ಷಣದ ಗುಣಲಕ್ಷಣಗಳು, ಕ್ರಿಯಾತ್ಮಕ ಸಮಾಜ ಈ ಎಲ್ಲಾ ಅಂಶಗಳೂ ಮೌಲ್ಯಗಳೇ ಎಂದು ತಿಳಿಸುತ್ತ ಡಾ|| ಗಣೇಶಭಟ್ಟರು ಶಿಕ್ಷಕನ ಪಾತ್ರವನ್ನು ನಟ, ಲೇಖಕ, ವ್ಯವಸ್ಥಾಪಕ, ಪೋಷಕ ಮುಂತಾಗಿ ಗುರುತಿಸಿ ಒಟ್ಟಾರೆ ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಹೊರತರುವ ಪ್ರತಿಭೆಯನ್ನು ಶಿಕ್ಷಕ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.

ಈ ಅವಧಿಯ ಅಧ್ಯಕ್ಷ ಭಾಷಣವನ್ನು ಮಾಡುತ್ತ ವಿಜಯ ಕಾಲೇಜಿನ ಪ್ರಾಧ್ಯಾಪಕರಾದ ಡಾ|| ಶಿವಯ್ಯನವರು ಶಿಕ್ಷಕರು ತಮಗೆ ದೊರಕುವ ಅವಕಾಶವನ್ನು ಬಳಸಿಕೊಳ್ಳಬೇಕು. ಹಸಿವೂ ಒಂದು ಮುಖ್ಯವಾದ ಮೌಲ್ಯ. ಹಸಿದವನಿಗೇ ಅದರ ಬೆಲೆ ಗೊತ್ತು. ಸೋಲು, ಸಾಂತ್ವನಗಳೂ ಒಂದು ರೀತಿಯಲ್ಲಿ ಹೇಗೆ ಮೌಲ್ಯಗಳಾಗುತ್ತವೆ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿ. ಆರ್. ಶಾಲೆಯ ಮುಖ್ಯ ಶಿಕ್ಷಕಿ ರಮ್ಯ ನಿರ್ವಹಿಸಿದರು.

* * *

ಮಧ್ಯಾಹ್ನದ ಅವಧಿಯಲ್ಲಿ ಆರ್. ವಿ. ಇನ್ಸ್ಟಿಟ್ಯೂಟ್ ಆಫ್ ಮೇನೇಜ್‌ಮೆಂಟಿನ ನಿರ್ದೇಶಕರಾದ ಡಾ||. ಟಿ.ವಿ. ರಾಜುರವರು ನೀತಿಸಂಹಿತೆಗಳು ಕುರಿತು ವಿಚಾರ ವಿನಿಮಯ ಮಾಡಿದರು. ತರಗತಿಯಲ್ಲಿ ಶಿಕ್ಷಕರು ಕೆಲವೊಂದು ಸಂಹಿತೆಗಳನ್ನು ಅಳವಡಿಸಿಕೊಳ್ಳಬೇಕು. ಆಗ ನಿಜವಾದ ಶಿಕ್ಷಕನಾಗುತ್ತಾನೆ. ಪಡೆದ ಜ್ಞಾನವನ್ನು ಬೇರೆಯವರಿಗೆ ಹಂಚುವವರಿಗೆ ಶಿಕ್ಷಕರಾಗುವ ಅರ್ಹತೆ ಇರುತ್ತದೆ. ಸಾಧನೆಯನ್ನು ನಮ್ಮ ವ್ಯಕ್ತಿತ್ವದ ಪರಿಪಕ್ವತೆಯಲ್ಲಿ ತೋರಿಸಿದಾಗ ಅದು ಸಾಧನೆಯ ಮೊತ್ತವಾಗುತ್ತದೆ ಎಂದರು. ಶಿಕ್ಷಕರಲ್ಲಿರಬೇಕಾದ ಪ್ರಬುದ್ಧತೆಗಳನ್ನು ಡಾ|| ರಾಜುರವರು ಹೀಗೆ ಗುರುತಿಸಿದರು. ಸಾಮಾಜಿಕ, ದೈಹಿಕ, ಸಹನಶಿಲ, ವಯೋಮಾನ, ಭಾವನಾತ್ಮಕ, ಆಧ್ಯಾತ್ಮಿಕ ಪ್ರಬುದ್ಧತೆಗಳು. ಶಿಕ್ಷಕರಲ್ಲಿರಬೇಕಾದ 3D ಗಳು : Dedication, Devotion and Determination.. ಅಂತೆಯೇ ವಿನಯವಂತಿಕೆ, ಮಾನವೀಯತೆ, ಸಂತೋಷ ಭಾವನೆಗಳೆಂಬ 3 ಊಗಳಿರಬೇಕು. ಇವುಗಳನ್ನು ಅಳವಡಿಸಿ ಕೊಂಡವರು ಯಶಸ್ವೀ ಶಿಕ್ಷಕರಾಗಬಹುದು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಆರ್. ವಿ. ಶಿಕ್ಷಕರ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ|| ಭಾಸ್ಕರ್‌ರವರು ಮೌಲ್ಯಗಳು ಪರಸ್ಪರ ತಾಕಲಾಟದಲ್ಲಿ ತೊಡಗುತ್ತವೆ. ಇದುವರೆಗಿನ ವಿಚಾರಗಳನ್ನು ಮನನ ಮಾಡಿಕೊಂಡು ಶಿಕ್ಷಕರು ತಮ್ಮದೇ ನಿರ್ಧಾರಕ್ಕೆ ಬರಬೇಕು ಎಂದು ತಿಳಿಸಿದರು. ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲರು ಮಾತನಾಡಿ ಸಂಘಟನೆಯ ಅಗತ್ಯತೆ, ನಮ್ಮ ಶಿಕ್ಷಕಸಂಘದ ವಿಶೇಷತೆ, ಶಿಕ್ಷಕ ಸಮಾಚಾರ ಪತ್ರಿಕೆಯ ಬಗ್ಗೆ ಮಾಹಿತಿ ನೀಡಿದರು.

ಈ ಅವಧಿಯ ಅತಿಥಿಗಳನ್ನು ವಿಜಯ ಶಿಕ್ಷಕರ ಮಹಾ ವಿದ್ಯಾಲಯದ ಸಹಪ್ರಾಧ್ಯಾಪಕರಾದ ಸುರೇಶ್ ಮಾಡಿಕೊಟ್ಟರು. ವಿ. ಆರ್. ಶಾಲೆಯ ಶಿಕ್ಷಕಿ ವಿಜಯಲಕ್ಷ್ಮಿ ವಂದನೆಗಳನ್ನು ಸಲ್ಲಿಸಿದರು. ಲಾರೆಲ್ ಶಾಲೆಯ ಗಾಯಿತ್ರಿ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

* * *

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ|| ಆರ್. ಎಸ್. ಭಾರತೀಶರಾವ್, ಪ್ರಾಂಶುಪಾಲರು, ಆದರ್ಶ ಕಾಲೇಕು ಇವರು ಶಿಕ್ಷಣ ಮತ್ತು ಮೌಲ್ಯ ಒಂದು ನಾಣ್ಯದ ಎರಡು ಮುಖವಿದ್ದಂತೆ. ಮೌಲ್ಯವಿಲ್ಲದ ಶಿಕ್ಷಣ ವ್ಯರ್ಥ. ಶಿಕ್ಷಣ ಜೀವನಕ್ಕೋ, ಬದುಕಿಗೋ ಎಂಬ ಜಿಜ್ಞಾಸೆಯಲ್ಲಿದ್ದೇವೆ. ಬದುಕಿಗೆ ಶಿಕ್ಷಣ ಕೊಡುತ್ತಿದ್ದೇವೆ, ಜೀವನಕ್ಕಲ್ಲ ; ಮಕ್ಕಳಿಗೆ ಬೇಕಾದ ಶಿಕ್ಷಣ ನೀಡುವಲ್ಲಿ ಸೋತಿದ್ದೇವೆ. ಜ್ಞಾನ ಸಂಗ್ರಹ, ಜ್ಞಾನ ವಿಸರ್ಜನೆ ಹಾಗೂ ಜ್ಞಾನದ ಆವಿಷ್ಕಾರ ಆಗಬೇಕು. ಶಿಕ್ಷಕರು ಸಂಶೋಧನೆ, ಬರವಣಿಗೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ||. ಕೆ. ಎಸ್. ಸಮೀರಸಿಂಹರವರು ಇಂದು ಮೌಲ್ಯಗಳ ಬಗ್ಗೆ ಮಾಹಿತಿ ನೀಡುವ ಕೆಲಸವಾಯಿತು. ಮುಂದಿನ ದಿನಗಳಲ್ಲಿ ಅದರ ಮೌಲ್ಯಮಾಪನದ ಕಾರ್ಯವೂ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಎಲ್ಲಾ ಕಾರ್ಯಕ್ರಮಗಳ ಅಂಶಗಳ ಕ್ರೋಢೀಕರಣವನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ|| ಮೀನ ಮಾಡಿದರು.

ಸಮಾರಂಭದ ಅತಿಥಿಗಳನ್ನು ವಾಸವಿ ವಿದ್ಯಾನಿಕೇತನ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ಯಾಮಲ ಸ್ವಾಗತಿಸಿ ಪರಿಚಯಿಸಿದರು. ಕಾರ್ಯಕ್ರಮವನ್ನು ಸರ್ಕಾರೀ ಪ್ರಾಢಶಾಲೆಯ ಶಿಕ್ಷಕರಾದ ಡಾ|| ವಿ.ಡಿ. ಭಟ್ ನಿರೂಪಿಸಿದರು. ಶ್ರೀಮತಿ ಮಾಯಾಪ್ರಭುರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಡಾ|| ರಾಮಚಂದ್ರರವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ವಿಚಾರ ಸಂಕಿರಣದಲ್ಲಿ ವಿಜಯ ಶಿಕ್ಷಕರ ಮಹಾವಿದ್ಯಾಲಯ ಹಾಗೂ ಆಕ್ಸ್‌ಫರ್ಡ್ ಶಿಕ್ಷಕರ ಮಹಾವಿದ್ಯಾಲಯದ 150 ವಿದ್ಯಾರ್ಥಿ ಗಳೊಂದಿಗೆ ಹಲವಾರು ಶಾಲೆಯ ಶಿಕ್ಷಕರು ಮತ್ತು ಶಿಕ್ಷಕ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ : ರಂಗನಾಥ್ ಆರ್. ಪ್ರಶಿಕ್ಷಣಾರ್ಥಿ, ಪ್ರಥಮ ಬಿ.ಇ.ಡಿ., ವಿಜಯಾ ಶಿಕ್ಷಕರ ಮಹಾವಿದ್ಯಾಲಯ

Highslide for Wordpress Plugin