ಶಿಕ್ಷಕರಿಂದ ವಿದ್ಯಾರ್ಥಿಗಳ ಆತ್ಮ ಸಾಕ್ಷಾತ್ಕಾರ – ಶಿಕ್ಷಾಭೂಷಣ ಡಾ|| ಚಿ.ಮೂ. ಅಭಿಮತ

ಶಿಕ್ಷಾಭೂಷಣ ತೃತೀಯ ಅಖಿಲ ಭಾರತೀಯ ಶಿಕ್ಷಕ ಸಮ್ಮಾನ: ವರದಿ

ವ್ಯಕ್ತಿತ್ವ ವಿಕಾಸದ ಒಂದು ಪ್ರಭಾವಶಾಲೀ ಮಾಧ್ಯಮ ಶಿಕ್ಷಣ ಕ್ಷೇತ್ರ. ಅಷ್ಟೇ ಅಲ್ಲ, ಇದು ವ್ಯಕ್ತಿಯ ಭವಿಷ್ಯ ನಿರ್ಮಾಣದೊಂದಿಗೆ ರಾಷ್ಟ್ರದ ಭವಿಷ್ಯವನ್ನೂ ನಿರ್ಮಿಸುವ ಕ್ಷೇತ್ರ. ಅದರಿಂದ ಇದನ್ನು ಮಾಹಿತಿ ಕೇಂದ್ರ ಭೂಮಿಕೆಯಿಂದ ಹೊರಗೆ ತರಬೇಕಾಗಿದೆ. ಸಮಾಜಕ್ಕೆ ನಾವು ಕೊಡಬೇಕಾದುದರ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಮಾಡುವಂತೆ ಶಿಕ್ಷಣವನ್ನು ನೀಡಬೇಕು. ದಿನಾಂಕ 10-9-2017 ರಂದು ನಗರದ ಶಿಕ್ಷಕರ ಸದನದಲ್ಲಿ ನಡೆದ ತೃತೀಯ ಅಖಿಲ ಭಾರತೀಯ ಶಿಕ್ಷಕರ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಸುರೇಶ್ (ಭೈಯ್ಯಾಜಿ) ಜೋಷಿ, ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಈ ಮಾತುಗಳನ್ನು ಮುಂದುವರೆಸುತ್ತಾ ಪ್ರಕೃತಿ ಮನುಷ್ಯನನ್ನು ಬೆಳೆಸುತ್ತದೆ. ಅದು ಒಂದು ಸಹಜ ಕ್ರಿಯೆ. ಆದರೆ ಗುಣವನ್ನು ನಾವೇ ಬೆಳೆಸಿಕೊಳ್ಳಬೇಕು. ಅದಕ್ಕೆ ಮಾರ್ಗದರ್ಶನ ಮಾಡುವುದು ನಾವು ಪಡೆಯುವ ಶಿಕ್ಷಣ, ಒಂದು ಸ್ವಸ್ಥ ವಾತಾವರಣವನ್ನು ನಿರ್ಮಿಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದರು.

Shikshak samman (3)

Shikshak samman (1)

Shikshak samman

Shikshak samman (2)

ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಹಾಸಂಘವು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶೈಕ್ಷಿಕ ಸಂಘದ ಸಹಯೋಗದೊಂದಿಗೆ ನಡೆಸಿದ ಈ ಕಾರ್ಯಕ್ರಮದಲ್ಲಿ ಸಮ್ಮಾನಿತರಾದವರು ಕರ್ನಾಟಕದ ಡಾ|| ಎಂ. ಚಿದಾನಂದಮೂರ್ತಿ, ಹರಿಯಾಣದ, ಪ್ರೊ|| ಸತೀಶ್‌ಚಂದ್ರ ಮಿತ್ತಲ್ (ಇತಿಹಾಸಕಾರರು ಮತ್ತು ಲೇಖಕರು) ರಾಜಾಸ್ಥಾನದ ಪ್ರೊ|| ದಯಾನಂದ ಭಾರ್ಗವ್ (ಶಿಕ್ಷಣ ತಜ್ಞರು ಮತ್ತು ಲೇಖಕರು).

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶಿವಾನಂದ ಸಿಂಧನಕೇರ ಅವರಿಂದ ಸ್ವಾಗತ ಮತ್ತು ಪರಿಚಯದ ನುಡಿಗಳ ನಂತರ ಎ.ಬಿ.ಆರ್.ಎಸ್.ಎಂ ನ ಪ್ರಧಾನ ಕಾರ್ಯದರ್ಶಿಗಳಾದ ಜೆ.ಪಿ ಸಿಂಘಾಲ್ ಸಂಘದ ಧ್ಯೇಯೋದ್ದೇಶಗಳನ್ನು ಪರಿಚಯಿಸುವುದರೊಂದಿಗೆ ಶೈಕ್ಷಿಕ ಫೌಂಡೇಶನ್‌ನ ಸ್ಥಾಪನೆಯ ಉದ್ದೇಶವನ್ನೂ ತಿಳಿಸುವ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಶಿಕ್ಷಣವನ್ನು ಕೇಂದ್ರವಾಗಿಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ಸಂಘವು ನಡೆಸುತ್ತಿದೆಯೆಂದು ಹೇಳಿ ಅವುಗಳ ವಿವರವನ್ನು ನೀಡಿದರು. ರಾಷ್ಟ್ರ-ಶಿಕ್ಷಾ-ಶಿಕ್ಷಕ- ಸಮಾಜ ಎಲ್ಲವೂ ಪರಸ್ಪರ ಅವಲಂಬಿತವಾಗಿರುವುದರಿಂದ ಅಭಿವೃದ್ಧಿ ಕಾರ್ಯವು ಎಲ್ಲ ಕಡೆಯಿಂದಲೂ ನಡೆಯುವುದೆಂದು ತಿಳಿಸಿದರು. ಭಾರತೀಯ ಸಂಸ್ಕಾರದಲ್ಲಿ ರಾಷ್ಟ್ರೀಯತೆ ಎನ್ನುವುದು ಅಂತರ್ಗತವಾಗಿರುತ್ತದೆ. ಆದುದರಿಂದ ಶಿಕ್ಷಣ ನೀಡುವಲ್ಲಿ ಇದಕ್ಕೆ ಮಹತ್ವ ನೀಡಲೇಬೇಕು ಎಂಬುದನ್ನು ಸಂಘವು ತನ್ನ ಚಟುವಟಿಕೆಗಳಲ್ಲಿ ಅಗತ್ಯವಾಗಿ ಸೇರಿಸಿಕೊಂಡಿದೆ ಎಂದರು. ಸಮಾಜದ ವಿಭಿನ್ನ ವರ್ಗಗಳನ್ನು ಭೇಟಿ ಮಾಡಿ ಐಕ್ಯತೆ ತರುವುದು, ಸಾಮಾಜಿಕ ಸಾಮರಸ್ಯ ತರುವುದು, ಶಿಕ್ಷಕರಿಗೆ ಜೀವನ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಾ ಗುರುವಂದನಾ, ಕರ್ತವ್ಯ ಬೋಧಾ, ಹೊಸ ವರ್ಷಾಚರಣೆಯಂತ ಕಾರ್ಯಕ್ರಮಗಳ ಮೂಲಕ ರಾಷ್ಟ್ರ ಭಾವದ ಅರಿವು ಮೂಡಿಸುವುದು ಸಂಘದ ಉದ್ದೇಶವೆಂದರು. ಕಳೆದ ಮೂರು ವರ್ಷಗಳಿಂದ ಪ್ರಾರಂಭ ವಾಗಿರುವ ಶೈಕ್ಷಿಕ್ ಫೌಂಡೇಶನ್ ಮೂಲಕ ಅಸಾಧಾರಣ ಕಾರ್ಯ ಮಾಡುತ್ತಿರುವ, ಸ್ವಯಂ ಪ್ರಚಾರದಿಂದ ದೂರವಿರುವ ಮೂವರು ಶಿಕ್ಷಕರನ್ನು ದೇಶಾದ್ಯಂತ ಗುರುತಿಸಿ, ಸನ್ಮಾನಿಸಿ, ಆ ಮೂಲಕ ಅವರ ಜೀವನ ದೃಷ್ಟಿಯಿಂದ ಸಮಾಜಕ್ಕೆ ಮಾರ್ಗದರ್ಶನ ದೊರಕಿಸುವುದು ತಮ್ಮ ಯೋಜನೆ ಎಂಬುದನ್ನು ಸ್ಪಷ್ಟಪಡಿಸಿದರು. ಅಸಾಧಾರಣ ಶಿಕ್ಷಕರೆಂದು ಗುರುತಿಸುವಾಗ ಯಾರದೇ, ಯಾವುದೇ ಪ್ರಭಾವಕ್ಕಾಗಲಿ, ಒತ್ತಡಕ್ಕಾಗಲಿ ಅವಕಾಶ ನೀಡದೆ, ಅವರ ಕಾರ್ಯ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.

ಸಮ್ಮಾನಿತರಾದ ಡಾ|| ಎಂ ಚಿದಾನಂದಮೂರ್ತಿಯವರು ಹಿಂದೂ ಧರ್ಮದ ಉದಾತ್ತ ವಿಚಾರಗಳಾದ ದಯೆ, ದಾನ, ತಪ, ಶೀಲ ಮುಂತಾದುವನ್ನು ಕುರಿತು ಪ್ರಸ್ತಾಪಿಸಿ, ಅಂತಹ ಧರ್ಮಕ್ಕೆ ತಾವೆಲ್ಲರೂ ಸೇರಿದುದು ಹೆಮ್ಮೆಯ ವಿಚಾರವೆಂದು ಹೇಳಿ ರಾಷ್ಟ್ರಪ್ರೇಮವನ್ನು ಹೊಂದಿದ ನಿಜವಾದ ಭಾರತೀಯರಾಗೋಣವೆಂಬ ಆಶಯವನ್ನು ವ್ಯಕ್ತಪಡಿಸಿದರು.

ಶಿಕ್ಷಕನಾದವನು ವಿದ್ಯಾರ್ಥಿಗಳಿಗೆ ಆತ್ಮಸಾಕ್ಷಾತ್ಕಾರ ಮಾಡಿಸುವುದರಿಂದಲೇ ಆತ ವಿಶ್ವಗುರು ಎನಿಸಿಕೊಳ್ಳುತ್ತಾನೆ. ಭಾರತೀಯ ಶಿಕ್ಷಕ ಸಮಾಜದ ಬಗ್ಗೆ ಇಡೀ ಜಗತ್ತಿನಲ್ಲಿ ಗೌರವವಿದೆಯೆಂದು ಹೇಳಿದ ಪ್ರೊ|| ಸತೀಶ್ ಚಂದ್ರ ಮಿತ್ತಲ್ ಶಿಕ್ಷಣದ ಕುರಿತು ಅರವಿಂದ, ವಿವೇಕಾನಂದ, ದಯಾನಂದರು, ಶ್ರದ್ಧಾನಂದರು ಪ್ರಸ್ತಾಪಿಸಿರುವ ವಿಚಾರಗಳನ್ನು ಉದ್ಧರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ|| ವಿಮಲ್ ಪ್ರಸಾದ ಅಗರ್‌ವಾಲ್ (ರಾಷ್ಟ್ರೀಯ ಅಧ್ಯಕ್ಷರು, ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ) ಶಿಕ್ಷಕ ಸಮ್ಮಾನ ಮಾಡುವುದು ಎಲ್ಲರಿಗೂ ಕಲಿಯಲು, ಕಲಿಸಲು ಪ್ರೇರಣೆ ನೀಡುವ ಉತ್ತಮ ಕಾರ್ಯವೆಂದು ಹೇಳಿ, ಸಂಸ್ಥೆಯು ಹಮ್ಮಿಕೊಳ್ಳುವ ಕಾರ್ಯಕ್ರಮ ಗಳಲ್ಲಿ ರಾಷ್ಟ್ರೀಯ ಭಾವನೆಯನ್ನು ಜಾಗೃತ ಗೊಳಿಸುವುದು, ಶಿಕ್ಷಕರು ತಮ್ಮ ಕರ್ತವ್ಯಗಳ ಬಗ್ಗೆ ಚಿಂತನೆ ಮಾಡುವಂತೆ ಪ್ರೇರಣೆ ನೀಡುವುದೂ ಸೇರಿದೆಯೆಂದು ಹೇಳಿದರು.

ಸಮಾರಂಭದ ದಿವ್ಯಸಾನಿಧ್ಯ ವಹಿಸಿದ್ದ ಬೆಂಗಳೂರು ರಾಮಕೃಷ್ಣಮಠದ ಪೂಜ್ಯಸ್ವಾಮಿ ಮಂಗಳನಾಥಾನಂದರು ಆಶೀರ್ವಚನದ ನುಡಿಗಳನ್ನಾಡುತ್ತ ಅಧ್ಯಾಪನ ಮಾಡುವುದು ಒಂದು ಆಧ್ಯಾತ್ಮಕ ಕ್ರಿಯೆ, ನಿತ್ಯ ಜೀವನದಲ್ಲಿ ಬರುವ ಹೋರಾಟಗಳನ್ನು ಎದುರಿಸುವಂತೆ, ಚಾರಿತ್ರ್ಯ ನಿರ್ಮಿಸುವ ಶಿಕ್ಷಣದ ಅಗತ್ಯವಿದೆಯೆಂದರು, ಶಿಕ್ಷಕ ರಾಷ್ಟ್ರ ರಕ್ಷಕ ನಾಗುತ್ತಾನೆಂದರು. ಮೊದಲಿಗೆ ಶಿಕ್ಷಕರು ಉತ್ತಮ ಚಾರಿತ್ರ್ಯವನ್ನೂ ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಈ ಚಾರಿತ್ರ್ಯ ನಿರ್ಮಾಣಕ್ಕೇ ಹೆಚ್ಚು ಮಹತ್ವ ನೀಡಬೇಕೆಂದು ಹೇಳುತ್ತಿದ್ದರು. ಸಂಸ್ಕರಣಗೊಳ್ಳದಿದ್ದ ಜ್ಞಾನದಿಂದ ಯಾವ ಪ್ರಯೋಜನವೂ ಇಲ್ಲ. ವಿದ್ಯಾರ್ಥಿಯ ಒಳಗಿನ ಶಕ್ತಿಯನ್ನು ಸಂಪೂರ್ಣವಾಗಿ ಹೊರಗೆ ತರುವಂತೆ ಶ್ರಮಿಸಿ ಅವನ/ಅವಳ ಪ್ರತಿಭೆಯನ್ನು ಬೆಳೆಸುವುದೇ ಶಿಕ್ಷಕನ ಗುರಿಯಾಗಿರುತ್ತದೆ. ಪರಿಪೂರ್ಣತೆ ಬರುವವರೆಗೆ ಶಿಕ್ಷಣ ಮುಗಿಯುವುದಿಲ್ಲ. ಭಾರತೀಯರು ವಿಶ್ವಕ್ಕೆ ಮಾದರಿಯಾದಂತಹ ಸಂಸ್ಕೃತಿಯ ಪಾಠವನ್ನು ತೋರಿದವರು ಗುರು. ತನ್ನ ಸ್ಥಾನದಿಂದ ಹಿರಿಯರೆನಿಸಿಕೊಳ್ಳವುದಿಲ್ಲ ವ್ಯಕ್ತಿತ್ವದಿಂದ ಮಾತ್ರ ಹಿರಿತನ ಬರಲು ಸಾಧ್ಯ ಎಂದು ಹೇಳಿ ಶಿಕ್ಷಕರ ಜವಾಬ್ದಾರಿಯನ್ನು ವಿವರಿಸಿದರು.

ಸಮಾರಂಭದಲ್ಲಿ ಗಣ್ಯರಾದ ಕೃ. ನರಹರಿ, ಮಹೇಂದ್ರಕಪೂರ್, ಬಾಲಕೃಷ್ಣ ಭಟ್, ಓಂಪಾಲ್ ಸಿಂಗ್, ಮಹೇಂದ್ರಕುಮಾರ್, ಭಜರಂಗ್ ಮಜೇಜಿ, ಮೋಹನ್ ಪುರೋಹಿತ್, ಜಿ.ಆರ್. ಜಗದೀಶ್, ರಾಮಚಂದ್ರಗೌಡ, ಬಾಲಮುಕುಂದ್ ಮುಂತಾದವರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಹಿಳಾ ಪ್ರಮುಖರಾದ ಮಮತಾ ನಿರೂಪಣೆ ಮಾಡಿದ ಕಾರ್ಯಕ್ರಮ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಸಂಘದ ರಘು ಅಕಮಂಜಿಯವರ ವಂದನಾರ್ಪಣೆಯ ನಂತರ ವಂದೇ ಮಾತರಂ ಗೀತೆಯೊಂದಿಗೆ ಸಂಪನ್ನವಾಯಿತು.

ವರದಿ : ನಂ. ನಾಗಲಕ್ಷ್ಮಿ, ನಿವೃತ್ತ ಉಪನ್ಯಾಸಕಿ

Highslide for Wordpress Plugin