ಮತ್ತೊಮ್ಮೆ ದೇಶವನ್ನು ಉನ್ನತ ಸ್ಥಾನಕ್ಕೇರಿಸಲು ಪ್ರತಿಯೊಬ್ಬರೂ ಸಂಕಲ್ಪ ತೊಟ್ಟು ತಮ್ಮ ತಮ್ಮ ಜವಾಬ್ದಾರಿಯನ್ನು ದೇಶದ ಭವಿಷ್ಯದ ದೃಷ್ಟಿಯಿಂದಲೇ ಕಾರ್ಯ ನಿರ್ವಹಿಸುವಂತೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಾರ್ಗದರ್ಶಕರಾದ ಕೃ. ನರಹರಿಯವರು ದಿನಾಂಕ 30-3-2018 ರಂದು ಯಾದವಸೃತಿ, ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್‍ಯಕಾರಿಣಿಯಲ್ಲಿ ಸಂಘದ ಕಾರ್‍ಯಕರ್ತರಿಗೆ ಕರೆ ನೀಡಿದರು. ಸಾಮೂಹಿಕ ಸರಸ್ವತಿ ಪ್ರಾರ್ಥನೆಯೊಂದಿಗೆ ಸಭೆಯನ್ನು ಆರಂಭಿಸಲಾಯಿತು. ಸಭಾ ವೇದಿಕೆಯ ಪ್ರಮುಖರನ್ನು ಸಭೆಗೆ ಪರಿಚಯಿಸುತ್ತಾ ಸಭಾಸದಸ್ಯರೆಲ್ಲರನ್ನು ಸಭೆಗೆ ಸಹ ಪ್ರಧಾನಕಾರ್ಯದರ್ಶಿಯವರಾದ ಶ್ರೀ ಸಂದೀಪ್ ಬೂದಿಹಾಳ್‌ರವರು ಸ್ವಾಗತಿಸಿದರು. ನಂತರ ಸಭೆಯ ಸದಸ್ಯರೆಲ್ಲರೂ ತಮಗೆ ಹಂಚಿಕೆಯಾಗಿರುವ ಜವಾಬ್ದಾರಿಯನ್ನು ಸಭೆಗೆ ತಿಳಿಸುತ್ತಾ ತಮ್ಮ ಪರಿಚಯ ಮಾಡಿಕೊಂಡರು.
ದಿನಾಂಕ 12-11-2017 ರ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಕಾರ್‍ಯಕಾರಿಣಿಯ ಸಭಾ ನಡಾವಳಿಯನ್ನು ಸಭೆಗೆ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ್ ಪಾಟೀಲ್ ರವರು ತಿಳಿಸಿದರು. ನಂತರ ದಿನಾಂಕ 12-11-2017 ರಿಂದ ಈ ಅವಧಿಯವರೆಗೆ ನಡೆಸಲಾದ ಸಂಘಟನಾ ಚಟುವಟಿಕೆಗಳ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಆಯಾ ಜಿಲ್ಲಾ ಮುಖ್ಯಸ್ಥರು ಸಭೆಗೆ ನೀಡಿದರು. ಜನವರಿಯಲ್ಲಿ ನಡೆಸಿದ ಕರ್ತವ್ಯಬೋಧ ದಿನ ಹಾಗೂ ಒಂದು ದೇಶ, ಒಂದು ಶಿಕ್ಷಣ, ಒಂದು ವೇತನದ ಸಲುವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡುವುದು ಮುಂತಾದವು ವರದಿಯಲ್ಲಿ ಪ್ರಮುಖವಾಗಿದ್ದವು.
ಸಂಘದ ಪ್ರಮುಖ ಮಾರ್ಗದರ್ಶಕರು ಹಾಗೂ ಹಿರಿಯರು ಆದ ಕೃ. ನರಹರಿಯವರ ಅಭಿನಂದನಾ ಸಮಾರಂಭದ ಸಂಕ್ಷಿಪ್ತ ಮಾಹಿತಿಯನ್ನು ಸಭೆಗೆ ಸಂಘದ ಹಿರಿಯರಾದ ಶ್ರೀ ನಾಗಭೂಷಣ್‌ರವರು ತಿಳಿಸಿತ್ತಾ ಈ ಅಭಿನಂದನಾ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಹಾಗೂ ಅಭಿನಂದನಾ ಸಮಾರಂಭದಲ್ಲಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಸಭಿಕರಿಗೂ ಧನ್ಯವಾದ ತಿಳಿಸಿದರು.
ಪಠ್ಯಪುಸ್ತಕ ಪರಿಷ್ಕರಣಾ ಸಂದರ್ಭದಲ್ಲಿ ಆದ ಅನಾಹುತಗಳು, ಓಅಇಖಖಿ ಸೂಚನೆ, ಆದೇಶಗಳನ್ನು ಮೀರಿ ರಾಜ್ಯ ಸರ್ಕಾರ ಪಠ್ಯವಿಷಯದ ವಿಷಯದಲ್ಲಿ ನಿರ್ಮಿಸಿರುವ ಗೊಂದಲದ ಬಗ್ಗೆ ಶ್ರೀ ಅರುಣ್ ಶಹಾಪೂರ್‌ರವರು ಸಭೆಗೆ ಮಾಹಿತಿ ನೀಡುತ್ತಾ 1 ರಿಂದ 10 ನೇ ತರಗತಿಯವರೆಗೆ ಎಲ್ಲಾ ವಿಷಯಗಳ ಪಠ್ಯಪುಸ್ತಕದಲ್ಲಿರುವ ನ್ಯೂನತೆಗಳನ್ನು ಸರಿಮಾಡಲಾಗದೆ ತೋರಿಕೆಯ ತಿದ್ದುಪಡಿ ಮಾಡಿ ಪಠ್ಯಪುಸ್ತಕವನ್ನು ಹೊರತಂದಿರುವುದು ದುರಂತದ ವಿಷಯವೆಂದು ಸಭೆಗೆ ತಿಳಿಸಿದರು. ಮುಂಬರುವ ಶೈಕ್ಷಣಿಕ ಅವಧಿಯಲ್ಲಾದರೂ ಈ ನ್ಯೂನತೆಗಳನ್ನು ಸರಿಪಡಿಸಲು ಸಂಘಟನೆಯ ಪ್ರಯತ್ನವನ್ನು ಸಭೆಗೆ ತಿಳಿಸಿದರು. ನಂತರದ ಅವಧಿಯಲ್ಲಿ ಶ್ರೀ ಅರುಣ್ ಶಹಾಪೂರ್, ಒಐಅ, ರವರು ಕಾಲ್ಪನಿಕ ವೇತನ ಸಮಸ್ಯೆ, ವೇತನ ತಾರತಮ್ಯ, ಪಠ್ಯ ವಿಷಯ ಗೊಂದಲ, ವರ್ಗಾವಣೆ ನಿಯಮ ಮತ್ತು ಸಡಿಲಿಕೆ ಮುಂತಾದ ವಿಷಯಗಳಲ್ಲಿ ಸಭಿಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ, ಮಾಡಬಹುದಾದ ಹೋರಾಟಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಾ ಮುಂದಿನ ದಿನಗಳಲ್ಲಿ ಹೊಸ ಸರ್ಕಾರದ ಅವಧಿಯಲ್ಲಿ ಈ ಎಲ್ಲಾ ಗೊಂದಲ-ಸಮಸ್ಯೆಗಳಿಗೆ ಪರಿಹಾರ ಪಡೆಯೋಣ ಎಂಬ ಆಶಯ ವ್ಯಕ್ತಪಡಿಸಿದರು.
1-4-2017 ರಿಂದ 31-3-2018 ರವರೆಗಿನ ಆಯವ್ಯಯವನ್ನು ರಾಜ್ಯ ಖಜಾಂಚಿ ಶ್ರೀ ಜೋಷಿಯವರು ವಿವರಗಳೊಂದಿಗೆ ಸಭೆಗೆ ವಿವರಿಸಿದರು. ದಿನಾಂಕ 1-4-2018 ರಿಂದ 31-3-2019 ರವರೆಗಿನ ಮುಂಗಡ ಆಯವ್ಯಯವನ್ನು ಅವರು ವಿವರದೊಂದಿಗೆ ಓದಿ ಹೇಳಿದರು. ಮೇಲಿನ ಆಯವ್ಯಯ ಹಾಗೂ ಮುಂಗಡ ಆಯವ್ಯಯ ವಿವರಗಳನ್ನು ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿ ಅನುಮೋದಿಸಿತು.
2018-19 ನೇ ಸಾಲಿನ ವಾರ್ಷಿಕ ಯೋಜನೆಯನ್ನು ಸಭೆಗೆ ತಿಳಿಸಲಾಯಿತು. ಸಂಘಟನಾ ಕಾರ್ಯ ವಿಸ್ತರಿಸಲು ಕೇಂದ್ರಿಯ ಪ್ರಮುಖರು, ವಿಭಾಗೀಯ ಪ್ರಮುಖರು ಜಿಲ್ಲೆಯ ಪ್ರವಾಸ ಮಾಡುವಂತೆ ನಿರ್ಣಯ ಮಾಡಲಾಯಿತು. ಜುಲೈ ತಿಂಗಳಲ್ಲಿ ವಸತಿ ಶಾಲೆಗಳ ರಾಜ್ಯಮಟ್ಟದ ಸಭೆ, ದೈಹಿಕ ಶಿಕ್ಷಕರ ಸಭೆ, ಚಿತ್ರಕಲಾ ಶಿಕ್ಷಕರ ಸಭೆ, ವಿಷಯ ಶಿಕ್ಷಕರ ಸಭೆ, ಮಹಿಳಾ ಸಮಾವೇಶ ನಡೆಸುವ ನಿರ್ಣಯ ಕೈಗೊಳ್ಳಲಾಯಿತು. ಗುರುವಂದನಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ವಿಭಾಗಾವಾರು ಅಭ್ಯಾಸವರ್ಗಗಳನ್ನೂ ಸಹ ಮಾಡುವ ನಿರ್ಣಯ ಮಾಡಲಾಯಿತು. ನವೆಂಬರ್ 2018 ರಲ್ಲಿ ಸಂಘಟನೆಗೆ 51 ವರ್ಷ ತುಂಬಿದ ಸಂದರ್ಭದಲ್ಲಿ ಮಹಾಸಮ್ಮೇಳನವೊಂದನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಣಯಿಸಲಾಯಿತು.
ಇದುವರೆಗೂ ಅಖಿಲ ಕರ್ನಾಟಕ ಶಿಕ್ಷಕ ಸಮಾಚಾರದ ಸಂಪಾದಕರಾಗಿದ್ದ ಶ್ರೀಯುತ ಎನ್. ನಾಗರಾಜರವರಿಗೆ ಸಭೆ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ ಅಭಿನಂದನೆ ತಿಳಿಸಿತು. ಶಿಕ್ಷಕ ಸಮಾಚಾರದ ಸಂಪಾದಕಿಯಾಗಿ ಶ್ರೀಮತಿ ಮಮತಾ ಡಿ.ಕೆ. ಯವರನ್ನು ಸಭೆ ಸರ್ವಾನುಮತದಿಂದ ಆಯ್ಕೆ ಮಾಡಿತು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾಗಿರುವ ಶ್ರೀ ಶಿವಾನಂದ ಸಿಂಧನಕೇರರವರನ್ನು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವ ಸಲುವಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಮುಕ್ತರನ್ನಾಗಿಸಲಾಯಿತು. ಹಾಗೂ ರಾಜ್ಯ ಮಟ್ಟದಲ್ಲಿ ಅವರ ಮಾರ್ಗದರ್ಶನ ಅತ್ಯಾವಶ್ಯಕವೆಂದು ವಿನಂತಿಸಿಕೊಳ್ಳಲಾಯಿತು.
ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ಹಿರಿಯರಾದ ಶ್ರೀಯುತ ಕೃ. ನರಹರಿ ಜಿಯವರನ್ನು ಚುನಾವಣಾ ಅಧಿಕಾರಿಯನ್ನಾಗಿ ಸಭೆ ನೇಮಿಸಿತು. ಅವರು ಅಧ್ಯಕ್ಷರ ಆಯ್ಕೆಗೆ ಚಾಲನೆ ನೀಡುತ್ತಾ ಸಭೆಯ ಎಲ್ಲಾ ಸದಸ್ಯರ, ರಾಜ್ಯ ಪದಾಧಿಕಾರಿಗಳ ಸಲಹೆ, ಕೋರಿಕೆಯಂತೆ ಶ್ರೀ ಸಂದೀಪ್ ಬೂದಿಹಾಳ್‌ರವರನ್ನು ಸರ್ವಾನುಮತದಿಂದ ಕ.ರಾ.ಮಾ.ಶಿ. ಸಂಘದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಘೋಷಿಸಿದರು. ಸಹ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಯುತ ಗಂಗಾಧರ್ ಹಾಗೂ ಮಹಿಳಾ ಪ್ರಮುಖರಾಗಿ ಶ್ರೀಮತಿ ವಾಸುಕಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭಿಕರೆಲ್ಲರಿಗೂ ಮಾಧ್ಯಮ ಪ್ರಕೋಷ್ಟದ ಪ್ರಮುಖರಾದ ಶ್ರೀಮತಿ ವಿಜಯಲಕ್ಷ್ಮಿಯವರು ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್‍ಯಕಾರಿಣಿಗೆ ಮುಕ್ತಾಯಗೊಂಡಿತು.
ವರದಿ : ಮಮತಾ ಡಿ.ಕೆ.