ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಬೆಂಗಳೂರು ಉತ್ತರ ಜಿಲ್ಲಾ ಘಟಕವು ದಿನಾಂಕ 14-1-2018 ರ ಭಾನುವಾರದಂದು ವಿ.ಐ.ಪಿ ಶಾಲೆ, ಟಿ. ದಾಸರಹಳ್ಳಿ ಇಲ್ಲಿ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷಚಂದ್ರ ಬೋಸರ ಜಯಂತಿ ನಿಮಿತ್ತ ಸಂಕಲ್ಪ ದಿನಾಚರಣೆಯನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ವಿ.ಐ.ಪಿ ಶಾಲೆಯ ವಿದ್ಯಾರ್ಥಿನಿಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್.ಜಿ ತಾಂಬೆಯವರು ವೇದಿಕೆ ಮೇಲಿನ ಗಣ್ಯರನ್ನು ಸ್ವಾಗತಿಸಿ ಪರಿಚಯಿಸಿದರು. ನಂತರ ಗಣ್ಯರೆಲ್ಲರೂ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು. ಗೌರವ ಅಧ್ಯಕ್ಷರಾದ ಶ್ರೀ ಜೆ.ಎಂ. ಜೋಶಿಯವರು ಪ್ರಾಸ್ತಾವಿಕ ನುಡಿಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ವಿ.ಐ.ಪಿ ಶಾಲೆಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗಳನ್ನು ಹಾಡಿದರು.
ಹಿರಿಯರು ಹಾಗೂ ಸಂಘದ ಮಹಾಪೋಷಕರೂ ಆದ ಪ್ರೊ. ಕೃ. ನರಹರಿಯವರು ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯ ಕುರಿತು ಮಾತನಾಡಿ ಎಲ್ಲ ಶಿಕ್ಷಕರಿಗೆ ಸಂಕಲ್ಪ ವನ್ನು ಬೋಧಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಪ್ರಮೋದ್ ಜಿ. ಇವರು ಸ್ವಾಮಿ ವಿವೇಕಾನಂದ ಮತ್ತು ಸುಭಾಷ್‌ಚಂದ್ರಬೋಸರ ಹೋರಾಟ ಮತ್ತು ಅವರ ಸಂದೇಶಗಳ ಕುರಿತು ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ವಿ.ಐ.ಪಿ ಶಾಲೆಯ ಅಧ್ಯಕ್ಷರೂ ಆದ ಶ್ರೀ ವೆಂಕಟೇಶ್ವರ ಅವರು ಮಾತನಾಡಿ ಇಂಥಹ ಭವ್ಯವಾದ ಕಾರ್ಯಕ್ರಮವು ನಮ್ಮ ಶಾಲೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಅಲ್ಲದೇ ಈ ತರಹ ಕಾರ್ಯಕ್ರಮಗಳಿಂದ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಶ್ರೀ ಅನಿಲ ಜೋಶಿಯವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವು ಶ್ರೀ ನಾರಾಯಣಭಟ್ಟರ ಶಾಂತಿಮಂತ್ರದೊಂದಿಗೆ ಮುಕ್ತಾಯವಾಯಿತು. ಶ್ರೀ ಸಿದ್ದೇಗೌಡರು ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸುಮಾರು ೫೦ ಜನ ಶಿಕ್ಷಕ/ ಶಿಕ್ಷಕಿಯರು ಭಾಗವಹಿಸಿದ್ದರು.
ವರದಿ : ಎಸ್.ಜಿ ತಾಂಬೆ, ಬೆಂಗಳೂರು ಉತ್ತರ ಜಿಲ್ಲೆ ಅಧ್ಯಕ್ಷರು