ಜೇವರ್ಗಿ: ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಕರಿಗೆ ನೀಡುವ ವೇತನದಂತೆ ರಾಜ್ಯ ಸರ್ಕಾರ ತನ್ನ ಅಧೀನದ ಶಿಕ್ಷಕರಿಗೂ ಸಮಾನ ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜೇವರ್ಗಿ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ದೇಶದ ಬಹುತೇಕ ರಾಜ್ಯಗಳ ಕೇಂದ್ರ ಸರ್ಕಾರ ನಡೆಸುವ ಕೇಂದ್ರಿಯ ವಿದ್ಯಾಲಯ, ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಕರಿಗೆ ನೀಡುವ ವೇತನವನ್ನು ರಾಜ್ಯ ಸರ್ಕಾರದ ಅಧೀನ ಶಾಲೆಗಳ ಶಿಕ್ಷಕರಿಗೂ ನೀಡುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಇದನ್ನು ಜಾರಿಗೆ ತರುವಂತೆ ಮಾಧ್ಯಮಿಕ ಶಿಕ್ಷಕರು ಒತ್ತಾಯಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ೬ನೇ ವೇತನ ಆಯೋಗ ಕರ್ನಾಟಕ ಸರ್ಕಾರಿ ನೌಕರರಿಗೂ ಶೇ 30 ರಷ್ಟು ವೇತನ ಹೆಚ್ಚಳ ಮಾಡಲು ವರದಿ ನೀಡಿದೆ ಎಂದು ಹೇಳಲಾಗುತ್ತಿದ್ದರೂ ಕೇಂದ್ರ ಹಾಗೂ ರಾಜ್ಯದ ಶಿಕ್ಷಕರ ವೇತನದಲ್ಲಿ ಶೇ. 67 ರಷ್ಟು ವ್ಯತ್ಯಾಸವಿದೆ. ಆದ್ದರಿಂದ ಶಿಕ್ಷಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನಡೆಸುವ ಶಾಲೆಗಳ ಶಿಕ್ಷಕರಿಗೆ ನೀಡುವ ವೇತನವನ್ನು ರಾಜ್ಯ ಸರ್ಕಾರ ನಡೆಸುವ ಶಾಲೆಗಳ ಶಿಕ್ಷಕರಿಗೂ ನೀಡಲು ಮನವಿಪತ್ರದ ಮೂಲಕ ಆಗ್ರಹಿಸಲಾಯಿತು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಜೋಶಿ, ವಿಭಾಗ ಪ್ರಮುಖ ಮಹೇಶ ಬಸರಕೋಡ, ಎಸ್. ಬಸಣ್ಣ, ಬಸವರಾಜ ಹದಗಲ್, ಪಂಡಿತ ನೆಲ್ಲಗಿ, ಧನಸಿಂಗ್ ರಾಠೋಡ, ಅಮೋಘಪ್ಪ, ಮಲ್ಲಿಕಾರ್ಜುನ, ಎಸ್.ಎಸ್. ಗೊಂಬಿಮಠ, ಎಸ್.ಆರ್ ಪರಸಗೊಂಡ, ಸಿದ್ದಪ್ಪ ಕಕ್ಕಳಮೇಲಿ ಉಪಸ್ಥಿತರಿದ್ದರು.