ಸಂಘಟಿತ ಕಾರ್ಯದಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಶಿಕ್ಷಕ ಮನಸ್ಸು ಮಾಡಿದರೇ ಸಮಾಜದ ಪರಿವರ್ತನೆ ಮಾಡಬಹುದು ಎಂದು ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಹಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ ಹೇಳಿದರು.
ನಗರದ ಜಗಜ್ಯೋತಿ ಬಸವೇಶ್ವರ ಪದವಿಪೂರ್ವ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ಮಾಧ್ಯಮಿಕ ಶಾಲಾ ಶಿಕ್ಷಕ ಸಂಘ ಹಮ್ಮಿಕೊಂಡಿದ್ದ ಶಿಕ್ಷಕರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
ಮಾಧ್ಯಮಿಕ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೋರಾಟಗಳನ್ನು ಮಾಡುತ್ತಾ ಬಂದಿದೆ. ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಿಕ್ಷಕರು ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಅರುಣ ಶಹಾಪರ ಮಾತನಾಡಿ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗೆ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ. ವಿವಿಧ ಸಮಿತಿ ರಚಿಸುವ ಮೂಲಕ ನಿರಂತರ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳಬೇಕಿದೆ. ಸಂಘಟನೆಗಳು ಚಳುವಳಿಗೆ ಸೀಮಿತಗೊಳ್ಳದೆ ಶಿಕ್ಷಕರೊಂದಿಗೆ ನಿರಂತರ ಒಡನಾಟ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ವಹಿಸುವ ಪಾತ್ರ ಕುರಿತು ಆಗಾಗ್ಗೆ ಚಿಂತನ-ಮಂಥನ ನಡೆಯುತ್ತಿರಬೇಕು ಎಂದರು.
ಸಂಘಟನೆಯು ರಾಜ್ಯ ಘಟಕದ ಅಧ್ಯಕ್ಷ ಸಂದೀಪ ಬೂದಿಹಾಳ, ಜಗಜ್ಯೋತಿ ಬಸವೇಶ್ವರ ಸಂಸ್ಥೆಯ ಆಡಳಿತಾಧಿಕಾರಿ ಎಲ್.ಬಿ ಪಾಟೀಲ, ಬೆಳಗಾವಿ ವಿಭಾಗದ ಸಂಘಟನಾ ಸಂತೋಷ ಹೊನ್ನಳ್ಳಿ ಇದ್ದರು.
ಪದಾಧಿಕಾರಿಗಳ ಆಯ್ಕೆ
ಮಾಧ್ಯಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆರ್.ಎಸ್. ತುಂಗಳ್ (ಅಧ್ಯಕ್ಷ), ಎಂ.ಹೆಚ್. ಜಾಧವ (ಪ್ರಧಾನ ಕಾರ್ಯದರ್ಶಿ) ಸಿ ಎ ಬಗಲಿ (ಸಂಘಟನಾ ಕಾರ್ಯದರ್ಶಿ) ಸುವರ್ಣಾ ಕೊಳೂರ (ಮಹಿಳಾ ಪ್ರಮುಖರು) ಜಿ. ಕೆ ಕುಲಕರ್ಣಿ (ಖಜಾಂಚಿ), ಎ.ಎಸ್ ಬಿರಾದಾರ, ಪ್ರಭುಗೌಡ ಕುಂಟರೆಡ್ಡಿ, ರಂಜಿತಾ ರಾಠೋಡ, ಎಂ.ಬಿ ಅಂಕಲಗಿ(ಉಪಾಧ್ಯಕ್ಷರು), ಗುರುರಾಜ ಕುಲಕರ್ಣಿ, ಅಂಬರೀಶ ಬಿರಾದಾರ, ಎಸ್.ಬಿ ಅವಟಿ, ಪಿ.ಬಿ ಕಾಡಯ್ಯನಮಠ (ಕಾರ್ಯದರ್ಶಿ), ಕಾರ್ಯಕಾರಿಣಿ ಸದಸ್ಯರನ್ನಾಗಿ ಆರ್.ಸಿ. ಬಿರಾದಾರ, ಎಸ್.ಎಂ ಕರ್ನಾಳ, ಎಸ್.ಸಿ ಗಾಯಕವಾಡ, ಪಿ.ಡಿ ಲಮಾಣಿ, ಬಿ.ಎಲ್. ಅಪರಾಜರ, ಎಸ್.ಎ ಇನಾಮದಾರ, ಬಿ.ಎಸ್ ಶಾಂತಪ್ಪನವರ, ಎಸ್.ಎಸ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.