ದೇವರ ಬಳಿ ಬೇಡುವಾಗ ಅಹಂ ಇರಬಾರದು, ಅತಿ ವಿನಮ್ರರಾಗಿ ನಿವೇದಿಸಿಕೊಂಡಾಗ ಮಾತ್ರ ಬೇಡಿದ್ದು ಸಿಗುತ್ತದೆ ಎಂದು ಕವಿ ಕಾಳಿದಾಸನನ್ನು ಪರೀಕ್ಷಿಸಲು ಕಾಳಿಕಾದೇವಿಯು ಒಡ್ಡಿದ ಪರೀಕ್ಷೆಯ ಘಟನೆಯನ್ನು ಉದಾಹರಿಸಿ ವಿದ್ಯಾರ್ಥಿಗಳಿಗೆ ಪ್ರತಿಭೆಯ ಜೊತೆಗೆ ಸಂಸ್ಕಾರವೂ ಇರಬೇಕು. ಹೀಗೆಂದು ಬೆಂಗಳೂರು ವಿಕ್ಟೋರಿಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ಹೃದ್ರೋಗ ತಜ್ಞೆ ಡಾ|| ವಿಜಯಲಕ್ಷ್ಮಿ ಐ. ಬಾಳೇಕುಂದ್ರಿಯವರು ಹೇಳಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕವು 5-8-2018 ರಂದು ಹಮ್ಮಿಕೊಂಡಿದ್ದ 33 ನೇ ವರ್ಷದ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮತ್ತೊಬ್ಬ ಅತಿಥಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಹಕಾರ್ಯವಾಹ ಶ್ರೀ ಎನ್. ತಿಪ್ಪೇಸ್ವಾಮಿ ಅವರು ಶಿಕ್ಷಕ ಸಂಘಟನೆ ಯೊಂದು ಇಂತಹ ಅದ್ಭುತ ಹಾಗೂ ಅಚ್ಚುಕಟ್ಟಾದ ಸಮಾರಂಭವನ್ನು ತಮ್ಮ ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಿರುವ ಬಗ್ಗೆ ಮೆಚ್ಚುಗೆ ಸೂಚಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಹಾಪೋಷಕರಾದ ಶ್ರೀಯುತ ಕೃ. ನರಹರಿಯವರು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ನಾಗರೀಕರಾಗಿ ಬಾಳಬೇಕೆಂಬುದು ಈ ಸಂಘದ ಆಶಯ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ. ಚಿದಾನಂದ ಪಾಟೀಲರು ಮಕ್ಕಳಿಗೆ ಸಮಯದ ಮಹತ್ವ, ಮಾದರಿ ಪ್ರಜೆಯಾಗಿ ಬಾಳುವ ರೀತಿಯನ್ನು ತಿಳಿಹೇಳಿದರು. ಸಭೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ 5 ತಾಲ್ಲೂಕುಗಳಿಂದ ೨೬೦ ಮಂದಿ ಶಾಲಾ ಪ್ರಥಮಿಗರು ಹಾಗೂ 26 ಮಂದಿ ಶೇ. 85 ಕಿಂತ ಹೆಚ್ಚು ಅಂಕ ಗಳಿಸಿದ ಶಿಕ್ಷಕರ ಮಕ್ಕಳು ಪುರಸ್ಕರಿಸಲ್ಪಟ್ಟರು.
ಬೆಂಗಳೂರು ರಾಮಮೂರ್ತಿನಗರದ ಲೋಟಸ್ ಕನ್ವೆಷನ್ ಸೆಂಟರ್ನಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ ಜೋಷಿಯವರು ಪ್ರತಿಜ್ಞೆಯನ್ನು ಬೋಧಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜಿ ಎನ್ ವಾಸುಕಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಜಿಲ್ಲಾ ಅಧ್ಯಕ್ಷರಾದ ಶ್ರೀ ಬಿ. ಎ ಸುರೇಂದ್ರ ಅವರು ಸರ್ವರನ್ನು ವಂದಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಡಾ|| ವೆಂಕಟರಮಣ ದೇವರಭಟ್ರವರು ನಿರೂಪಣೆ ಮಾಡಿದರು.