ಶಾಲಾ ಶಿಕ್ಷಣದಲ್ಲಿ ಚಿತ್ರಕಲೆ ವಿಷಯ ಅವಶ್ಯಕತೆ- ವಿಷಯವಾಗಿ ದಿನಾಂಕ 4-11-2018 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗು ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ಒಂದು ದಿನದ ಕಾರ್ಯಕ್ರಮವಾಗಿ ಚಿಂತನ-ಮಂಥನ ಕಾರ್ಯಕ್ರಮ ನಡೆಸಲಾಯಿತು.
ಆರಂಭದಲ್ಲಿ ಚಿತ್ರಕಲಾ ಶಿಕ್ಷಕರು ರಚಿಸಿರುವ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಪ್ರದರ್ಶನವನ್ನು ಮಾಧ್ಯಮಿಕ ಶಿಕ್ಷಕ ಸಂಘದ ಹಿರಿಯ ಮಾರ್ಗದರ್ಶಕರಾದ ಶ್ರೀಯುತ ಜಿ.ಎಸ್. ಕೃಷ್ಣಮೂರ್ತಿಯವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನಪರಿಷತ್ ಹಾಲಿ ಸದಸ್ಯರು ಮತ್ತು ಮಾಜಿ ಸಭಾಪತಿಗಳು ಆದ ಶ್ರೀಯುತ ಪುಟ್ಟಣ್ಣನವರು ಚಿತ್ರಕಲಾ ಶಿಕ್ಷಕರ ಅವಶ್ಯಕತೆ ಬಗ್ಗೆ ಮಾತನಾಡಿ ಶಾಲಾ ಶಿಕ್ಷಣದಲ್ಲಿ ಚಿತ್ರಕಲಾ ಶಿಕ್ಷಣ ಕಡ್ಡಾಯಗೊಳಿಸಲು ಎಲ್ಲಾ ಶಿಕ್ಷಕ ಪ್ರತಿನಿಧಿ ಶಾಸಕರೊಂದಿಗೆ ಪ್ರಯತ್ನಿಸುವುದಾಗಿ ಹೇಳಿದರು. ನಂತರ ಆರಂಭವಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ABRSM ನ ಪ್ರಧಾನಕಾರ್ಯದರ್ಶಿಯವರಾದ ಶ್ರೀ ಶಿವಾನಂದ ಸಿಂಧನಕೇರರವರು, ಮಾಧ್ಯಮಿಕ ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್ರವರು, ಕಾರ್ಯಾಧ್ಯಕ್ಷರಾದ ಶ್ರೀ ಅರುಣ್ ಶಹಾಪುರರವರು, ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಚಿದಾನಂದ ಪಾಟೀಲ್ರವರು, ಸಹ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಗಂಗಾಧರ್ರವರು ಹಾಗೂ ಚಿತ್ರಕಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಅವಟಿಯವರು, ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಅಪ್ಪಾಸಾಹೇಬ ಗಾಣಿಗೊರರವರು ಹಾಗೂ ಇನ್ನಿತರ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖಾ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ರವರು – ಶಾಲಾ ಶಿಕ್ಷಣದಲ್ಲಿ ಚಿತ್ರಕಲೆ ಕುರಿತು ತಯಾರಿಸಲಾದ ಸಾಕ್ಷ್ಯಚಿತ್ರವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣದಲ್ಲಿ ಚಿತ್ರಕಲೆಯ ಅವಶ್ಯಕತೆ ಇದ್ದೇ ಇರಬೇಕೆಂದು ಅನೇಕ ಉದಾಹರಣೆಗಳ ಮುಖಾಂತರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವಭಾಷೆಯಾದ ಚಿತ್ರಕಲೆಯು ಇತರೆ ವಿಷಯಗಳಿಗೆ ಪೂರಕವಾದ ಉಪಯುಕ್ತ ವಿಷಯವಾಗಿದೆ ಎಂದು ಹೇಳಿದರು. ಒಂದು ಚಿತ್ರವು ಸಾವಿರ ಪದಗಳಿಗೆ ಸಮವೆಂದು ತಮ್ಮ ಅನಿಸಿಕೆ ತಿಳಿಸಿದರು. ಒಂದು ಶಾಲೆಯ ಒಳ್ಳೆಯ ಗುರುತಿಸುವಿಕೆ ಒಬ್ಬ ಚಿತ್ರಕಲಾ ಶಿಕ್ಷಕನ ಇರುವಿಕೆಯಿಂದ ತಿಳಿಯುತ್ತದೆ ಎಂದು ತಿಳಿಸಿದರು. ಮಕ್ಕಳಲ್ಲಿ ಅಡಗಿರುವ ಸುಪ್ತವಾದ ಕೌಶಲ್ಯ ಹೊರಹಾಕಲು ಚಿತ್ರಕಲೆ ಸಹಕಾರಿಯಾಗಿದೆ ಎಂದು ಹೇಳಿ ತಮ್ಮಿಂದ ಎಲ್ಲಾ ಸಹಾಯ-ಸಹಕಾರ ಈ ಶಿಕ್ಷಣಕ್ಕೆ ಇದ್ದೇ ಇರುತ್ತದೆ ಎಂಬ ವಿಶ್ವಾಸದ ನುಡಿಗಳನ್ನಾಡಿದರು.
ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರು ಮತ್ತು ಮಾನ್ಯ ಶಾಸಕರು ಆದ ಶ್ರೀ ಅರುಣ್ ಶಹಪೂರ್ರವರು ಶಾಲಾ ಶಿಕ್ಷಣದಲ್ಲಿ ಚಿತ್ರಕಲೆ ಕಡ್ಡಾಯ ವಿಷಯವಾಗಬೇಕು. ಇದಕ್ಕಾಗಿ ಪಠ್ಯಪುಸ್ತಕ ರಚನೆಯಾಗಬೇಕು. ಚಿತ್ರಕಲಾ ಶಿಕ್ಷಕರ ನೇಮಕಾತಿ ಪ್ರಾಥಮಿಕ ಹಂತದಿಂದ ಕಡ್ಡಾಯವಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಚಿತ್ರಕಲಾ ಶಿಕ್ಷಣ ಮತ್ತು ಚಿತ್ರಕಲಾ ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ ಒಂದು ತಜ್ಞರ ಸಮಿತಿ ರಚಿಸಲು ಎಲ್ಲಾ ಶಿಕ್ಷಕ ಕ್ಷೇತ್ರದ ಪ್ರತಿನಿಧಿ ಶಾಸಕರೊಂದಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ABRSM ನ ಪ್ರಧಾನಕಾರ್ಯದರ್ಶಿಯವರಾದ ಶ್ರೀ ಶಿವಾನಂದ ಸಿಂಧನಕೇರರವರು ಚಿತ್ರಕಲಾ ಶಿಕ್ಷಣ ಮತ್ತು ಚಿತ್ರಕಲಾ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾಧ್ಯಮಿಕ ಶಿಕ್ಷಕ ಸಂಘ ಸದಾ ಚಿತ್ರಕಲಾ ಶಿಕ್ಷಕರೊಂದಿಗೆ ಇರುತ್ತದೆ ಎಂದು ಭರವಸೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್ರವರು ಚಿತ್ರಕಲಾ ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ ಇಲಾಖೆ ಹಾಗೂ ಸರ್ಕಾರದ ಗಮನ ಸೆಳೆಯಲು ನಮ್ಮ ಸಂಘಟನೆ ಸದಾ ನಿಮ್ಮೊಂದಿಗಿರುತ್ತದೆ ಎಂದು ಚಿತ್ರಕಲಾ ಶಿಕ್ಷಕರಿಗೆ ಭರವಸೆ ನೀಡಿದರು.
ಚಿತ್ರಕಲಾ ಶಿಕ್ಷಣ ವಿಷಯದ ಸಾರ್ವಜನಿಕ ಶಿಕ್ಷಣ ಇಲಾಖಾ ಆಯುಕ್ತಾಲಯದ ಸಹಾಯಕ ನಿರ್ದೇಶಕರಾದ ಶ್ರೀಯುತ ಕಂಠಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರಕಲಾ ಶಿಕ್ಷಣ ಅಭಿವೃದ್ಧಿಗೆ ಚಿತ್ರಕಲಾ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು. ಇಲಾಖಾ ಕಾರ್ಯಕ್ರಮಗಳನ್ನು ಸರಿಯಾಗಿ ನಿರ್ವಹಿಸಿ ಚಿತ್ರಕಲಾ ಶಿಕ್ಷಣ ಹಾಗೂ ಶಿಕ್ಷಕರ ಅನಿವಾರ್ಯತೆಯನ್ನು ಇಲಾಖೆ ಮತ್ತು ಸರ್ಕಾರದ ಗಮನಕ್ಕೆ ಬರುವಂತೆ ಮಾಡಬೇಕೆಂದು ಕಿವಿಮಾತು ಹೇಳಿದರು.
ರಾಜ್ಯ ಚಿತ್ರಕಲಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಅವಟಿಯವರು ಮಾತನಾಡಿ ಚಿತ್ರಕಲಾ ಶಿಕ್ಷಣ ಕಡ್ಡಾಯಗೊಳಿಸಲು ಹಾಗೂ ಚಿತ್ರಕಲಾ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ಮತ್ತು ಚಿತ್ರಕಲಾ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಇಲಾಖೆ ಮತ್ತು ಸರ್ಕಾರದೊಂದಿಗೆ ವ್ಯವಹರಿಸಲು ಮಾಧ್ಯಮಿಕ ಶಿಕ್ಷಕ ಸಂಘದ ಹಾಗೂ ಶಿಕ್ಷಕ ಕ್ಷೇತ್ರ ಶಾಸಕರ ಸಹಕಾರಕ್ಕಾಗಿ ಮನವಿ ಮಾಡಿಕೊಂಡರು. ಚಿತ್ರಕಲಾ ಶಿಕ್ಷಕರ ಸಮಸ್ಯಾ ಪಟ್ಟಿಯನ್ನು ಶ್ರೀ ಅರುಣ್ಶಹಪೂರ್ರವರಿಗೆ ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.
ಕಲಾ ಶಿಕ್ಷಣ ಮತ್ತು ಕಲಾ ಶಿಕ್ಷಕರ ಸಮಗ್ರ ಅಭಿವೃದ್ಧಿಗೆ ಒಂದು ಆಯೋಗ ರಚಿಸಲು ಸರ್ಕಾರಕ್ಕೆ ಒತ್ತಡ ತರಬೇಕೆಂದು ಸಹ ಮನವಿ ಮಾಡಿಕೊಂಡರು.
ಒಟ್ಟು 22 ಜಿಲ್ಲೆಗಳಿಂದ 65 ಚಿತ್ರಕಲಾ ಶಿಕ್ಷಕ ಸಂಘದ ಪ್ರಮುಖ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು. ಮುಕ್ತಾಯ ಕಾರ್ಯಕ್ರಮವಾಗಿ ಸಹ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಗಂಗಾಧರ್ರವರು ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು.