ಶ್ರೀ ಕೃ. ನರಹರಿಯವರು ಶಾಸಕರಾಗಿದ್ದಾಗ ಶಾಸಕರ ಭವನದ ಎಲ್.ಹೆಚ್ ಕೊಠಡಿ ನಮ್ಮಂತಹ ಶಿಕ್ಷಕರುಗಳಿಗೆ ಬೆಂಗಳೂರಿಗೆ ಬಂದಾಗ ಮನೆಯಾಗಿತ್ತು. ಅಲ್ಲದೇ ಸ್ವತಃ ಅವರೇ ಮೆಜಿಸ್ಟಿಕ್ಗೆ ಬಂದು ಶಿಕ್ಷಕರನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಮಾಡಿಸಿ, ಸಮಸ್ಯೆ ಬಗೆಹರಿಸಿ ವಾಪಾಸು ಊರಿಗೆ ಹೋಗಲು ಬಸ್ಚಾರ್ಜ್ಗೆ ಹಣ ಇದೆಯಾ ಎಂದು ಶಿಕ್ಷಕರಿಗೆ ಕೇಳುತ್ತಿದ್ದರು. ಒಂದು ವೇಳೆ ಇಲ್ಲವೆಂದರೆ ಅವರೇ ಕೊಟ್ಟು ಕಳುಹಿಸುತ್ತಿದ್ದರು. ಇಂತಹ ಅಪರೂಪದ ಶಾಸಕರನ್ನು ನಾವು ಜೀವನದಲ್ಲಿ ಕಂಡೆವು ಅವರ ಜೀವನ ಶೈಲಿ ಮಾದರಿಯಾಗಿದೆ. ನಮ್ಮೆಲ್ಲರಿಗೆ ಅವರ ಮಾರ್ಗದರ್ಶನ ಮತ್ತು ಪ್ರಭಾವ ಕೂಡ ಲಭಿಸಿದೆ ಎಂದು ಹಿರಿಯ ಕಾರ್ಯಕರ್ತರಾದ ಕರಿಯಪ್ಪನವರು ಚಿತ್ರದುರ್ಗದ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ದಿನಾಂಕ 11-11-2018 ರಂದು ನಡೆದ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಕಾರ್ಯಕಾರಿಣಿ ಸಭೆಯಲ್ಲಿ ತಿಳಿಸಿದರು.
ಸರಸ್ವತಿ ವಂದನೆಯೊಂದಿಗೆ ಸಭೆ ಪ್ರಾರಂಭವಾಗಿ ಸಭಾ ವೇದಿಕೆಯನ್ನು ಶ್ರೀ ಎ. ಗಂಗಾಧರಾಚಾರಿ, ಸಹ ಪ್ರಧಾನ ಕಾರ್ಯದರ್ಶಿಗಳು ಸಭೆಗೆ ಪರಿಚಯಿಸಿ ಸ್ವಾಗತಕೋರಿದರು. ಸ್ಥಳೀಯ ಸಂಘದ ಹಿರಿಯ ಮತ್ತು ಪ್ರಮುಖರನ್ನು ಶ್ರೀ ವೃಷಭೇಂದ್ರಸ್ವಾಮಿ, ರಾಜ್ಯ ಕಾರ್ಯದರ್ಶಿಗಳು ಸಭೆಗೆ ಪರಿಚಯಿಸಿ ಸ್ವಾಗತಕೋರಿದರು.
ಸಭೆಯ ಮೊದಲ ಅವಧಿಯಲ್ಲಿ ಆ ದಿನದ ಸಭೆಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲರು ತಿಳಿಸಿದರು. ನಂತರ ಸಭೆಗೆ ವ್ಯಕ್ತಿಗತವಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರಮುಖರು ಪರಿಚಯಿಸಿಕೊಂಡರು ಹಾಗೂ ಎರಡನೇ ಅವಧಿಯಲ್ಲಿ ಸಭೆಯಲ್ಲಿ ಭಾಗವಹಿಸಿದ ವಿವಿಧ ಜಿಲ್ಲೆಯ ಅಧ್ಯಕ್ಷರುಗಳು ಅವರವರ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ವರದಿಗಳನ್ನು ಸಭೆಯಲ್ಲಿ ಮಂಡಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್ರವರು ವರ್ಷದಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಮತ್ತು ಶೈಕ್ಷಣಿಕ ಸಮ್ಮೇಳನ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಿದರು.
ಮೂರನೇ ಅವಧಿಯಲ್ಲಿ ಪ್ರಸ್ತುತ ಇರುವ ಶಿಕ್ಷಕರ ಸಮ್ಮೇಳನಗಳ ಬಗ್ಗೆ ಪ್ರಶ್ನೋತ್ತರ ವೇಳೆಯನ್ನು ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಶಹಾಪುರ್, ವಿಧಾನಪರಿಷತ್ ಸದಸ್ಯರು ನಡೆಸಿಕೊಟ್ಟರು ಹಾಗೂ ರಾಜ್ಯ ಶೈಕ್ಷಣಿಕ ಸಮ್ಮೇಳನವನ್ನು ದಿನಾಂಕ ೧೮.೧೨.೨೦೧೮ ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಕೊನೆಯ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಹಿರಿಯ ಕಾರ್ಯಕರ್ತರಾದ ಶ್ರೀ ಟಿ. ರಾಜಶೇಖರ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧ್ಯಕ್ಷರುಗಳಾದ ಶ್ರೀ ರಂಗಪ್ಪ, ಶ್ರೀ ಕರಿಯಪ್ಪ ಶ್ರೀ, ಮಹೇಶ್ವರಪ್ಪರವರು ಗಳಿಂದ ಶ್ರೀ ಕೃ. ನರಹರಿಯರಿಗೆ, ಶ್ರೀ.ಕೃಷ್ಣಮೂರ್ತಿಯವರಿಗೆ ಹಾಗೂ ಶ್ರೀ.ನಾಗಭೂಷಣ್ ರಾವ್ ಮತ್ತು ಶ್ರೀಮತಿ ಸೀತಾಲಕ್ಷ್ಮಿಯವರಿಗೆ ಸನ್ಮಾನಿಸಲಾಯಿತು. ಶ್ರೀ ರಂಗಪ್ಪ ಮತ್ತು ಕರಿಯಪ್ಪನವರು ಮಾತನಾಡಿ ಶ್ರೀ ಕೃ. ನರಹರಿಯವರು ಸಂಘ ಕಟ್ಟಿ ಬೆಳೆಸಿದ ಬಗ್ಗೆ, ಶಿಕ್ಷಕರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ ಬಗ್ಗೆ ಮತ್ತು ಅವರ ತ್ಯಾಗ ಮನೋಭಾವದ ಕುರಿತು ಅವರಿಗಾದ ಕೆಲವು ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು. ಅದೇ ರೀತಿ ಇನ್ನೋರ್ವ ಹಿರಿಯರಾದ ಶ್ರೀ ಕೃಷ್ಣಮೂರ್ತಿಯವರು ತಮ್ಮ ಜೀವನವನ್ನು ಶಿಕ್ಷಕ ಸಂಘಕ್ಕೆ ಮುಡುಪಾಗಿಟ್ಟಿದ್ದು ಮತ್ತು ಶ್ರೀ ನಾಗಭೂಷಣ ರಾವ್, ಶ್ರೀಮತಿ ಸೀತಾಲಕ್ಷ್ಮಿ ರವರು ಶಿಕ್ಷಕ ಸಂಘ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ ರೀತಿಯನ್ನು ಸಭೆಗೆ ತಿಳಿಸಿದರು.
ಅಂತಿಮವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಸಿಂಧನಕೇರರವರು ಎ.ಬಿ.ಆರ್.ಎಸ್.ಎಂ ಇಂದೋರ್ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಹಾಗೂ ಶಿಕ್ಷಾಭೂಷಣ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ಸಂಘಟನೆಯನ್ನು ಮುಂಬರುವ ದಿನಗಳಲ್ಲಿ ಬೆಳೆಸುವ ದೃಷ್ಟಿಯಿಂದ ಮಾರ್ಗದರ್ಶನ ಮಾಡಿದರು.
ಕೊನೆಗೆ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಂದ್ರರವರು ವಂದನಾರ್ಪಣೆ ಸಲ್ಲಿಸಿದರು. ಸಭೆಯು ಯಶಸ್ವಿಯಾಗಲು ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಶ್ರೀ ಆರ್. ಮಲ್ಲಿಕಾರ್ಜುನಯ್ಯ ಮತ್ತು ರಾಜ್ಯ ಕಾರ್ಯದರ್ಶಿಯಾದ ವೃಷಬೇಂದ್ರಸ್ವಾಮಿಯವರು ಸ್ಥಳೀಯ ಕಾರ್ಯಕರ್ತರ ಸಹಕಾರದಿಂದ ಎಲ್ಲಾ ವ್ಯವಸ್ಥೆ ಕಲ್ಪಿಸಿದರು.
-ವರದಿ: ಗಂಗಾಧರಾಚಾರಿ, ಸಹಪ್ರಧಾನ ಕಾರ್ಯದರ್ಶಿ