ದಿನಾಂಕ 23-12-2018 ರ ಭಾನುವಾರ ಅದೊಂದು ಮಹತ್ವಪೂರ್ಣ ದಿನ. ಯಾದವಸ್ಮೃತಿಯ ಶಿಕ್ಷಕ ಸಂಘದ ಕಾರ್ಯಾಲಯದಲ್ಲಿ ವಾಸಿಸುತ್ತಿರುವ ನಮ್ಮ ಪೂರ್ಣಾವಧಿ ಹಿರಿಯ ಕಾರ್ಯಕರ್ತರಾದ ಶ್ರೀ ಜಿ.ಎಸ್ ಕೃಷ್ಣಮೂರ್ತಿಯವರ ಬಹುಕಾಲದ ಕನಸು ನನಸಾದ ದಿನ. (ಹಲವು ತಿಂಗಳುಗಳಿಂದ ಅವರ ಕನಸನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಲೇ ಇದ್ದರು ನಮ್ಮ ಕೃಷ್ಣಮೂರ್ತಿ)
ಶಿಕ್ಷಕ ಸಂಘಕ್ಕೆ ಕೃಷ್ಣಮೂರ್ತಿಯವರ ಪ್ರವೇಶವಾದದ್ದು 1980 ರ ದಶಕದ ಪ್ರಾರಂಭದಲ್ಲಿ. ಅಂದಿನಿಂದ ಅವರು ಸಹಯೋಗಿಗಳಾಗಿ ಶಿಕ್ಷಕ ಸಂಘದಲ್ಲಿ ಸಕ್ರಿಯವಾಗಿ ಕೆಲಸಮಾಡಿ ಸಂಘದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದವರು. ಹಲವರು ನಾವೆಲ್ಲಾ ಒಂದೇ ಕುಟುಂಬದ ಸದಸ್ಯರು ಇಂದಲ್ಲದೆ ಅಂದಿನ ನಮ್ಮ ಸಹಯೋಗಿ ದಿವಂಗತ ಡಿ.ಎ ಸತ್ಯನಾರಾಯಣನೊಂದಿಗೆ ಕೃಷ್ಣಮೂರ್ತಿ ಮತ್ತು ನಾನು ಈ ಎಲ್ಲ ಕುಟುಂಬಗಳ ಮನೆಗಳಿಗೂ ಹೋಗಿ ಬಂದು ಅವರೆಲ್ಲಾ ನಮ್ಮನ್ನು ಅವರ ಕುಟುಂಬದ ಸದಸ್ಯರೆಂದೇ ಇಂದಿಗೂ ಭಾವಿಸಿರುವುದು ಶಿಕ್ಷಕ ಸಂಘದ ಕಾರ್ಯಶೈಲಿಯ ವಿಶೇಷತೆ.
ಕೃಷ್ಣಮೂರ್ತಿ ಹೆಚ್‌ಎ.ಎಲ್ ಶಾಲೆಯಲ್ಲಿ ಗಣಿತ, ವಿಜ್ಞಾನದ ಅಧ್ಯಾಪಕರು ಸಹವರ್ತಿ ಶಿಕ್ಷಕರಿಗೆಲ್ಲಾ ಅನೇಕ ರೀತಿಯ ಸಲಹೆ ಸಹಕಾರಗಳನ್ನು ನೀಡುತ್ತಿದ್ದ ಅಚ್ಚುಮೆಚ್ಚಿನ ಗೆಳೆಯರು. ಇವರೊಂದಿಗೆ ಮತ್ತು ಇವರ ನಂತರ ನಿವೃತ್ತರಾದ ಅವರಿಗೆಲ್ಲಾ ಇವರ ಮೂಲಕವೇ ಶಿಕ್ಷಕ ಸಂಘದ ಪರಿಚಯ.
80 ರ ದಶಕದಿಂದ ಇಂದಿನವರೆಗೆ ಕಾವೇರಿಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ. ಶಿಕ್ಷಕ ಸಂಘದಲ್ಲೂ ಅಂದಿನ ಅನೇಕರು ಹಲವು ಕಾರಣಗಳಿಂದ ಇಂದು ಸಕ್ರಿಯರಾಗಿಲ್ಲ. ಅವರ ಜಾಗವನ್ನು ಹಲವರು ತುಂಬಿದ್ದಾರೆ. ನದಿ ನಿರಂತವಾಗಿ ಹರಿಯುತ್ತಲೇ ಇದೆ. ಅದು ಎಂದಿಗೂ ಬತ್ತದು. ಹಳೆಬೇರು, ಹೊಸಚಿಗುರು ಕೂಡಿರಲು ಮರ ಸೊಬಗು ಎಂದ ಡಿ.ವಿ.ಜಿ ಯವರು ನುಡಿಯಂತೆ ಕೃಷ್ಣಮೂರ್ತಿಯವರ ಕನಸೂ ಇದೇ ಆಗಿತ್ತು. ಅಂದಿನ ಎಲ್ಲ ಹಿರಿಯ ಕಾರ್ಯಕರ್ತರನ್ನು ಇಂದಿನ ಹೊಸ ಪೀಳಿಗೆ ಯುವಕರೊಂದಿಗೆ ಜೋಡಿಸಬೇಕು ಪರಸ್ಪರರಲ್ಲಿ ಬಾಂಧವ್ಯ ಬೆಸೆಯಬೇಕು ಎಂಬ ಈ ಕನಸನ್ನು ಹಲವು ದಿನಗಳಿಂದ ನನ್ನೊಂದಿಗೆ ಹಂಚಿಕೊಳ್ಳುತ್ತಲೇ ಇದ್ದರು. ನಾನೂ ಈ ಕನಸನ್ನು ಹಲವಾರು ಬಾರಿ ಕಂಡಿದ್ದೆ. ಯಾವುದಕ್ಕೂ ಕಾಲ ಕೂಡಿಬರಬೇಕು. ಆ ಕಾಲ ಕೂಡಿಬಂದ ದಿನ ಡಿಸೆಂಬರ್ 23ರ ಭಾನುವಾರ.
80-90 ರ ದಶಕದ ಬೆಂಗಳೂರು ನಗರದ ಅನೇಕ ಕಾರ್ಯಕರ್ತರು ಅಂದು ಬೆಳ್ಳಿಗ್ಗೆ 10-30 ೦ರಿಂದಲೇ ಶೇಷಾದ್ರಿಪುರದಲ್ಲಿರುವ ಯಾದವಸ್ಮೃತಿಯಲ್ಲಿ ಸೇರತೊಡಗಿದರು. ಇವರೊಂದಿಗೆ ಜಿ.ಎಸ್.ಕೆ. ಅವರ ಎಲ್ಲಾ ನಿವೃತ್ತ ಸಹೋದ್ಯೋಗಿಗಳು. 11.30ಕ್ಕೆ ಸಂಘದ ಸ್ಥಾಪಕರಲೊಬ್ಬರೂ ಇಂದಿನ ಮಹಾಪೋಷಕರೂ ಆದ ಶ್ರೀ ನರಹರಿಯವರ ಅಧ್ಯಕ್ಷತೆಯಲ್ಲಿ ಒಂದು ಪುಟಾಣಿ ಸಮಾರಂಭ. 85 ವರ್ಷದ ತರುಣ, ಹಿಂದಿನ ಬೆಂಗಳೂರು ನಗರದ ಖಜಾಂಚಿ ಶ್ರೀ ಜಯತೀರ್ಥರಾಯರಿಂದ ಸುಶ್ರಾವ್ಯ ದೇವತಾ ಪ್ರಾರ್ಥನೆ. ನಂತರ ಹೆಚ್.ಎನ್.ಆರ್.ರವರಿಂದ ಸಭೆಯ ಉದ್ದೇಶ ಹಾಗೂ ವೇದಿಕೆಯಲ್ಲಿದ್ದ ಶ್ರೀ ವಿ.ಜಿ ಹೆಗಡೆ, ಶ್ರೀ ಜಿ.ಎಸ್.ಕೆ ಹಾಗೂ ಶ್ರೀ ಕೃ. ನರಹರಿಯವರ ಸ್ವಾಗತ ಮತ್ತು ಪರಿಚಯ. ಹಿರಿಯ ಕಿರಿಯ ಕಾರ್ಯಕರ್ತರೆಲ್ಲಾ ತಮ್ಮ ಸ್ವ-ಪರಿಚಯ ಮಾಡಿಕೊಡುತ್ತಾ ಶಿಕ್ಷಕ ಸಂಘದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.
ಕಾಕತಾಳೀಯವೆಂಬಂತೆ ಅದೇ ತಾನೇ ಸಹಸ್ರ ಚಂದ್ರದರ್ಶನ ಮಾಡಿದ್ದ ಜಿ.ಎಸ್.ಕೃಷ್ಣಮೂರ್ತಿ ಅವರನ್ನು ಮೈಸೂರು ಪೇಟ ತೊಡಿಸಿ ಶ್ರೀ ನರಹರಿಯವರು ಸನ್ಮಾನಿಸಿ, ಸಂಘಕ್ಕೆ ಅವರು ನೀಡಿದ ಸೇವೆಯನ್ನು ಸ್ಮರಿಸಿದರು. ಕೃಷ್ಣಮೂರ್ತಿಯವರ ಸ್ನೇಹಪರತೆ, ಉದಾರತೆ, ಸಹಜ ಪರಿಶ್ರಮ, ಶಿಕ್ಷಕ ಸಂಘದ ಬೆಳವಣಿಗೆಯ ಬಗೆಗಿನ ಕಾಳಜಿಗಳನ್ನು ಅನೇಕರು ಸ್ಮರಿಸಿ ಅವರಿಗೆ ದೀರ್ಘಾಯುಷ್ಯವನ್ನು ಕೋರಿದರು.
ಕೃಷ್ಣಮೂರ್ತಿಯವರು ತಮ್ಮ ಕೃತಜ್ಞತಾ ಭಾಷಣದಲ್ಲಿ ಸಂಘಕ್ಕೆ ನಾನು ಕೊಟ್ಟದ್ದಕ್ಕಿಂತ, ಪಡೆದದ್ದೇ ಹೆಚ್ಚು, ನನ್ನ ಜೀವನದಲ್ಲಿ ನನ್ನ ಸಂಘ ಸ್ನೇಹಿತರು, ಸಹೋದ್ಯೋಗಿ ಮಿತ್ರರು ನಾನು ವಾಸಿಸುತ್ತಿರುವ ಕಾರ್ಯಾಲಯದ ಬಂಧುಗಳು ಹೀಗೆ ಬಹುದೊಡ್ಡ ಪರಿವಾರ ಸಿಕ್ಕಿದ್ದೇ ಒಂದು ಸೌಭಾಗ್ಯ. ನಾವೆಲ್ಲಾ ಸಂಘವನ್ನು ಬೆಳೆಸಲು ಶ್ರಮ ವಹಿಸಿದ್ದೇವೆ. ಆದರೂ ಅದು ಇನ್ನೂ ದೇಶೋವಿಶಾಲವಾಗಿ ಹೆಮ್ಮರದಂತೆ ಬೆಳೆಯಬೇಕಿದೆ. ಅದಕ್ಕಾಗಿ ಮತ್ತೊಮ್ಮೆ ಹಿರಿಯ ಕಿರಿಯರೆಲ್ಲಾ ಒಟ್ಟಾಗಿ ಕೈ ಜೋಡಿಸೋಣ, ಮತ್ತೆ ಮತ್ತೆ ಹೀಗೇ ಸೇರೋಣ ಎಂದು ನುಡಿದರು.
ಎಲ್ಲರೂ ಸಹಭೋಜನದಲ್ಲಿ ಪಾಲ್ಗೊಂಡು ಹಳೆಯ ನೆನಪುಗಳನ್ನು ಮತ್ತೊಮ್ಮೆ ಮಗದೊಮ್ಮೆ ಕೆದಕುತ್ತಾ, ಇಂಥದೊಂದು ಕಾರ್ಯಕ್ರಮವನ್ನು ಮಾಡಿ ನಮ್ಮೆಲ್ಲರನ್ನೂ ಒಟ್ಟಾಗಿ ಸೇರಿಸಿ ಶಿಕ್ಷಕ ಸಂಘದ ಹಳೆಯ ಸಿಹಿ ನೆನಪುಗಳನ್ನು ಮೆಲುಕಿಸುವಂತೆ ಮಾಡಿದ ಜಿ.ಎಸ್.ಕೆ ಅವರಿಗೆ ಕೃತಜ್ಞತೆಗಳನ್ನು ಸೂಚಿಸುತ್ತಾ ತೆರಳಿದರು.