ಸಂಘಟನೆ ಎಂಬುದು ಕೇವಲ ಗುಂಪು ಕಟ್ಟುವುದಲ್ಲ. ಸಂಘಟಕ ಎಂದರೆ ಎಲ್ಲರನ್ನು ಜೊತೆಗೆ ಕೊಂಡೊಯ್ಯಬೇಕು ಎಲ್ಲ ಕಾರ್ಯಗಳಲ್ಲೂ ಎಲ್ಲರನ್ನು ತೊಡಗಿಸಿಕೊಂಡು ಎಲ್ಲರನ್ನು ನಮ್ಮೊಂದಿಗೆ ಬೆಳೆಸುತ್ತಾ ಹೋಗಬೇಕು ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಸಂಘಟನಾ ಮಂತ್ರಿಗಳಾದ ಶ್ರೀಯುತ ಮಹೇಂದ್ರ ಕಪೂರ್‌ಜಿರವರು ದಿನಾಂಕ 2 ಮತ್ತು 3 ಫೆಬ್ರವರಿ 2019 ರಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ರಾಷ್ಟ್ರೀಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ಮುಂಬೈ ಮಹಾನಗರದ ಲೋಯರ್ ಪರೇಲ್‌ನಲ್ಲಿರುವ ಯಶವಂತ ಭವನದಲ್ಲಿ ದೇಶದ 17 ರಾಜ್ಯಗಳಿಂದ 80 ಪ್ರತಿನಿಧಿಗಳು ಈ ಕಾರ್ಯಕಾರಿಣಿಯಲ್ಲಿ ಉಪಸ್ಥಿತರಿದ್ದರು.
ವಿವಿಧ ರಾಜ್ಯಗಳಿಂದ ಬಂದಿದ್ದ ಪ್ರತಿನಿಧಿಗಳು ವಿಭಾಗವಾರು ಭೈಠಕ್‌ಗಳಲ್ಲಿ ತಮ್ಮ ರಾಜ್ಯಗಳಲ್ಲಿರುವ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು. ಉದಾ- ದೆಹಲಿಯಲ್ಲಿ ಶಿಕ್ಷಕರಿಗೆ ಕೇವಲ ವರ್ಷಕ್ಕೆ ೮ ದಿನ ಮಾತ್ರ ಸಾಂದರ್ಭಿಕ ರಜೆಗಳಿವೆ. ಅದು ಮುಗಿದಲ್ಲಿ ವೈದ್ಯಕೀಯ ಪ್ರಮಾಣಪತ್ರ ನೀಡಿ ರಜೆ ಪಡೆಯಬೇಕು. ಇದರ ವಿಪರ್ಯಾಸ ಹೇಗೆಂದರೆ ತನ್ನದೇ ಮದುವೆಗಾಗಿ ರಜೆ ಪಡೆಯಬೇಕಾದ ಶಿಕ್ಷಕ ಆಹ್ವಾನ ಪತ್ರಿಕೆಯ ಜೊತೆ ವೈದ್ಯಕೀಯ ಪ್ರಮಾಣಪತ್ರವನ್ನೂ ನೀಡಬೇಕು. ಹೀಗೆ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ವಿಭಾಗಗಳಲ್ಲಿ ಬಂದ ಸಮಸ್ಯೆಗಳ ಪರಿಹಾರಕ್ಕಾಗಿ ಆಲೋಚನೆಗಳನ್ನು ಮಾಡಲಾಯಿತು. ಆರ್ ಟಿ ಇ ಹಾಗೂ ಖಾಸಗಿ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ಕೊಡುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆಗೆ ಕಾರಣವೆಂಬುದು ಎಲ್ಲ ರಾಜ್ಯಗಳ ಅಭಿಪ್ರಾಯ.
ಮಹೇಂದ್ರ ಕುಮಾರ್‌ರವರು ಶಾಶ್ವತ ಜೀವನ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಬಗ್ಗೆ ತಿಳಿಸಿದರು. ಮಹೇಂದ್ರ ಕಪೂರ್‌ರವರು ಮುಂದಿನ ಶೈಕ್ಷಣಿಕ ವರ್ಷದ ವಾರ್ಷಿಕ ಯೋಜನೆಯ ಬಗ್ಗೆ ತಿಳಿಸಿದರು. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಮಹಾಮಂತ್ರಿ ಶ್ರೀ ಶಿವಾನಂದ ಸಿಂಧನಕೇರಾ, ದಕ್ಷಿಣ ಪ್ರಾಂತೀಯ ಮಂತ್ರಿ ಶ್ರೀ ಬಾಲಕೃಷ್ಣಭಟ್, ಪೋಷಕರಾದ ಶ್ರೀ ಹೆಚ್ ನಾಗಭೂಷಣ ರಾವ್, ಮಹಿಳಾ ವಿಭಾಗದ ಸಹಕಾರ್ಯದರ್ಶಿ ಶ್ರೀಮತಿ ಡಿ.ಕೆ ಮಮತಾ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಯುತ ಸಂದೀಪ್ ಬೂದಿಹಾಳ್, ಪ್ರಧಾನ ಕಾರ್ಯದರ್ಶಿ ಶ್ರೀ ಚಿದಾನಂದ ಪಾಟೀಲ್, ಉಪಾಧ್ಯಕ್ಷರಾದ ಶ್ರೀ ಗಂಗಾಧರಾಚಾರಿ, ಮಹಿಳಾ ಪ್ರಮುಖರಾದ ಶ್ರೀಮತಿ ಜಿ ಎನ್ ವಾಸುಕಿ ಕರ್ನಾಟಕದಿಂದ ಭಾಗವಹಿಸಿದ್ದರು.