ಶಿಕ್ಷಕನಿಂದ ಗುರುವಿನೆಡೆಗೆ ಪಯಣ – ಶ್ರೀ ರಘುನಂದನ
ಹುಬ್ಬಳ್ಳಿ: ಇದು ಆಧುನಿಕ ಯುಗ. ಹಿಂದಿಗಿಂತಲೂ ಇಂದು ಹೆಚ್ಚು ಸವಾಲಾಗಿ ಸ್ವೀಕರಿಸಬೇಕಿದೆ. ಹೀಗಾಗಿ ಶಿಕ್ಷಕನಿಗೂ ಕೌಶಲ್ಯಪೂರ್ಣ ಚಿಂತನೆಗೆ ನೆರವು ಬೇಕಾಗುತ್ತದೆ. ಆ ಕಾರಣಕ್ಕಾಗಿ ಅಧ್ಯಯನ, ಅಧ್ಯಾಪನ, ಭವಿಷ್ಯದ ಚಿಂತನೆ, ದೇಶದ ಸಂಸ್ಕೃತಿಯ ಅರಿವು, ಮಾನವೀಯ ಮೌಲ್ಯಗಳ ಆಚರಣೆ ಹೀಗೆ ಅನೇಕ ರೀತಿಯಲ್ಲಿ ಶಿಕ್ಷಕ ಸಿದ್ಧನಾಗಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ KRMSS ಮಹಾ ವಿದ್ಯಾಲಯಗಳ ಶಿಕ್ಷಕ ಸಂಘಗಳು ವಿಜಯನಗರ ಕಾಲೇಜಿನಲ್ಲಿ ಏರ್ಪಡಿಸಿದ್ದ ಕರ್ತವ್ಯ ಬೋಧ ದಿವಸದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಜ್ಞಾ ಪ್ರವಾಹ ಸಂಘಟನೆಯ ದಕ್ಷಿಣ ಭಾರತದ ಸಂಯೋಜಕರಾದ ಶ್ರೀ ರಘುನಂದನ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು.
ಶಿಕ್ಷಕರಿಗೆ ಇಂದು ಹಲವು ಒತ್ತಡಗಳಿವೆ. ವಿದ್ಯಾರ್ಥಿಗಳ, ಸಂಸ್ಥೆಯ, ಸರ್ಕಾರದ, ಪೋಷಕರ ಹಲವು ರೀತಿಯ ಮನೋಭಾವಗಳನ್ನು ಆತ ಅರಿತುಕೊಳ್ಳಬೇಕಿದೆ. ಆ ಮನೋಭಾವಗಳನ್ನು ಸಮಸ್ಯೆಗಳನ್ನಾಗಿ ಸ್ವೀಕರಿಸದೇ ಸವಾಲನ್ನು ಕಂಡು ಅದಕ್ಕೆ ಚಿಕಿತ್ಸೆ ನೀಡುವ ಮನೋವಿಜ್ಞಾನಿಯಾಗಿ, ದಾರ್ಶನಿಕನಾಗಿ ಆತ ಸಿದ್ಧನಾದರೆ ರಾಷ್ಟ್ರರಕ್ಷಕ, ರಾಷ್ಟ್ರ ಪ್ರವರ್ತಕನಾಗಿ ಆತ ಉತ್ತಮ ಸಮಾಜ ನಿರ್ಮಾಣಕ್ಕೆ ದಾಂಗುಡಿಯಿಡಬಹುದು. ಅತ್ಯುತ್ತಮ ವ್ಯಕ್ತಿತ್ವ ನಿರ್ಮಾಣದತ್ತ ಗಮನ ಹರಿಸುವುದರಿಂದ ಅತ್ಯುತ್ತಮ ಗುರುಪರಂಪರೆಗೆ ದಾಖಲಾಗಬಹುದು. ಇದರಿಂದ ಆರೋಗ್ಯಪೂರ್ಣ ಸಮಾಜ, ಸ್ವಾಭಿಮಾನ ಸಂಪನ್ನ ವ್ಯಕ್ತಿತ್ವ ನಿರ್ಮಾಣವಾಗಿ ಆದರ್ಶ ರಾಷ್ಟ್ರ ಕಟ್ಟುವಿಕೆಗೆ ತನ್ನ ಕೊಡುಗೆಯನ್ನು ಶಿಕ್ಷಕ ನೀಡುತ್ತಾನೆ.
ಶಿಕ್ಷಕರು ನುಡಿದದ್ದನ್ನು ಆಚರಣೆಗೆ ತಂದಾಗ ಆಚಾರ್ಯನಾಗುತ್ತಾನೆ. ತಾನು ತಿಳಿದುಕೊಂಡಿರುವ ವಿದ್ಯೆಯ ನಶಿಸಿ ಹೋಗಲು ಬಿಡದೆ, ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ವಿದ್ಯಾರ್ಥಿಯನ್ನು ಚಿಂತನೆ ಮಾಡಲು ಪ್ರೇರೇಪಿಸುವುದು. ವಿದ್ಯಾರ್ಥಿಯನ್ನು ಆಂತರಿಕ ಪಯಣಕ್ಕೆ ಸಿದ್ಧ ಮಾಡುವುದು. ಅವರು ಮುಂದಿನ ಹಂತಕ್ಕೆ ತಲುಪಲು ಪ್ರೇರಣೆ ನೀಡುವುದು. ತನ್ನ ಮೇಲ್ಪಂಕ್ತಿ ವ್ಯಕ್ತಿತ್ವದ ಮೂಲಕ ಆದರ್ಶವಾಗುವುದು ಈ ರೀತಿಯ ಅನೇಕ ಮೌಲ್ಯಗಳನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
KRMSS ರಾಜ್ಯ ಅಧ್ಯಕ್ಷರಾದ ಡಾ. ರಘು ಅಕಮಂಚಿ ಶಿಕ್ಷಕರಿಗೆ ಕರ್ತವ್ಯ ಬೋಧದ ಪ್ರತಿಜ್ಞೆಯನ್ನು ಬೋಧಿಸಿದರು. ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷರಾದ ಸಂದೀಪ ಬೂದಿಹಾಳರವರು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ಜಿ. ಕೆ. ಬಡಿಗೇರ, ಡಾ. ಜಗದೀಶ ಬರಗಿ, ಡಾ. ಬಿ. ಎಸ್. ತಲ್ಲೂರ, ಡಾ. ವಾಯ್. ಎಮ್. ಭಜಂತ್ರಿ, ಡಾ. ಹೆಚ್. ವ್ಹಿ. ಬೆಳಗಲಿ, ಡಾ. ಲಿಂಗರಾಜ ಹೊರಕೇರಿ, ಡಾ. ಮಹೇಶ ಹೊರಕೇರಿ, ಅಭಿಷೇಕ ಕುಬಸದ, ಪುಂಡಲೀಕ ಕವಳಕಟ್ಟಿ, ಬಸವರಾಜ ದೇವರಮನಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಗುಲ್ಬರ್ಗ ಜಿಲ್ಲೆ 5 ಸ್ಥಳಗಳಲ್ಲಿ, ಬೆಳಗಾಂನ 4, ಧಾರವಾಡದ 4 ಕಡೆ, ತುಮಕೂರಿನ 2 ಕಡೆ, ಮೈಸೂರಿನ 2 ಕಡೆ ಹಾಗೂ ಬೆಂಗಳೂರಿನ 3 ಸ್ಥಳಗಳಲ್ಲಿ ಕರ್ತವ್ಯಬೋಧದಿವಸ್‌ನ್ನು ದಿನಾಂಕ 12-1-2019 ರಿಂದ 23-1-2019 ರವರೆಗೆ ಆಚರಿಸಲಾಯಿತು. ಒಟ್ಟು ರಾಜ್ಯದ 20 ಸ್ಥಳಗಳಲ್ಲಿ ಯಶಸ್ವಿಯಾಗಿ ಕರ್ತವ್ಯಬೋಧ ದಿವಸ್ ಆಚರಿಸಲಾಯಿತು.