ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳ ಸಹಯೋಗದಲ್ಲಿ ಕಳೆದ 12 ವರ್ಷಗಳಿಂದ ಹೊರತರಲಾಗುತ್ತಿರುವ ಈ ಯುಗಾದಿ ಹೊಸವರ್ಷದ ಕ್ಯಾಲೆಂಡರ್ ಮುದ್ರಣವು ಶ್ಲಾಘನೀಯವಾದ ಕಾರ್ಯ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಈ ಕಾರ್ಯ ಮಾಡಿಸಲು ಮುಂದಿನ ದಿನಗಳಲ್ಲಿ ಒಂದು ಪ್ರಯತ್ನ ಮಾಡೋಣ ಹೀಗೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಯುತ ಚಿದಾನಂದ ಪಾಟೀಲರು ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭ ಹಾರೈಕೆಗಳೊಂದಿಗೆ ಹಿತನುಡಿ ನುಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರಜಿಲ್ಲೆ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳು ಸಂಯುಕ್ತವಾಗಿ ಹೊರತಂದ ಯುಗಾದಿ ಹೊಸವರ್ಷದ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದಿನಾಂಕ 9-4-2019 ರ ಸಂಜೆ 4 ಗಂಟೆಗೆ ಸಂಘದ ಕಾರ್ಯಾಲಯ ಯಾದವಸ್ಮೃತಿಯಲ್ಲಿ ಒಂದು ಸರಳ ಸಮಾರಂಭದಲ್ಲಿ ಸಂಘದ ರಾಜ್ಯ ಕೋಶ್ಯಾಧ್ಯಕ್ಷರಾದ ಶ್ರೀಯುತ ಜೆ.ಎಂ ಜೋಷಿ, ರಾಜ್ಯ ಮಹಿಳಾ ಪ್ರಮುಖ್ ಶ್ರೀಮತಿ ಜಿ.ಎನ್ ವಾಸುಕಿ ಅವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಿತು. ಜೆ.ಎಂ. ಜೋಷಿಯರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಈ.ಎನ್ ವಾಸುಕಿ ಅವರು ನಿರೂಪಣೆ ಮಾಡಿದರು. ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲೆಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿ ಸಮಿತಿಯ ಶಿಕ್ಷಕ ಬಂಧುಗಳು ಹಾಜರಿದ್ದರು.
ವರದಿ : ಶ್ರೀಮತಿ ಜಿ.ಎನ್ ವಾಸುಕಿ