ಶಿಕ್ಷಣದಲ್ಲಿ ಹೊಸ ಪ್ರಯೋಗಗಳು

ಸರಕಾರ ಮಾಡುತ್ತದೆಂದು ಭರವಸೆಯನ್ನಿಟ್ಟುಕೊಂಡು ಕಾಯುವ ಬದಲಿಗೆ ಸಮಾಜದ ಎಲ್ಲಾ ವ್ಯಕ್ತಿಗಳು ಸಮಾಜದ ಉದ್ಧಾರಕ್ಕಾಗಿ ಬದ್ಧತೆಯಿಂದ ಕಾರ್‍ಯ ನಿರ್ವಹಿಸಬೇಕಿದೆ. ರಾಜಸ್ತಾನದ ಒಂದು ಹಳ್ಳಿಯ ಪಾಠಶಾಲೆಯಲ್ಲಿ ಶಿಕ್ಷಕರ ಅಭಾವವಿದ್ದುದರಿಂದ ಆ ಹಳ್ಳಿಯ ವಿದ್ಯಾವಂತ ನಿರುದ್ಯೋಗಸ್ಥ ಹೆಣ್ಣು ಮಕ್ಕಳು ವೇತನವನ್ನೂ ಪಡೆಯದೇ ಮಕ್ಕಳಿಗೆ ಬೋಧಿಸುತ್ತಿರುವ ಉದಾಹರಣೆಯನ್ನು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ, ದಿಲ್ಲಿಯ ಸಂಘಟನಾ ಮಂತ್ರಿಯಾಗಿರುವ ಶ್ರೀ ಮಹೇಂದ್ರ ಕಪೂರ್‌ಜೀಯವರು ಬೆಂಗಳೂರಿನ ಮೈಂಡ್ ಟ್ರೀ ಸಾಪ್ಟ್‌ವೇರ್ ಕಂಪನಿಯಲ್ಲಿ ಅನೇಕ NGO ಗಳೊಂದಿಗೆ ದಿನಾಂಕ 29-4-2019 ರಂದು ನಡೆದ ಸಭೆಯಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಶ್ರೀ ಮಹೇಂದ್ರ ಕಪೂರ್‌ಜೀರವರ ಕರ್ನಾಟಕ ಭೇಟಿಯ ನಿಮಿತ್ತ ಮೈಂಡ್ ಟ್ರೀ ಸಾಪ್ಟ್‌ವೇರ್ ಕಂಪನಿಯ ಸಹಯೋಗದೊಂದಿಗೆ ಶಿಕ್ಷಣ, ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಉನ್ನತಿಗಾಗಿ ಶ್ರಮಿಸುತ್ತಿರುವ ಉತ್ತಮ NGO ಗಳೊಂದಿಗೆ ಸಭೆಯನ್ನು ಏರ್ಪಡಿಸಿತ್ತು. ಜನನಿ ಟ್ರಸ್ಟ್‌ನ ಶ್ರೀ ದೇವರಾಜುರವರು ಇನ್ನೊಬ್ಬರನ್ನು ಪರಿವರ್ತನೆ ಮಾಡುವ ಕೆಲಸ ಮಾಡುವ ಬದಲು ಹಾಗು ಮೊದಲು ನಾವು ಬದಲಾಗಬೇಕು ಎಂದು ಹೇಳಿದರು. ತಮ್ಮ ತಂದೆ-ತಾಯಿಯ ಹೆಸರಿನಲ್ಲಿ ಪ್ರತಿಯೊಬ್ಬರು ಒಂದೊಂದು ಸಸಿಗಳನ್ನು ನೆಟ್ಟು ಅವುಗಳ ಪಾಲನೆ-ಪೋಷಣೆ ಮಾಡಬೇಕು. ಶಿಕ್ಷಕ ಮತ್ತು ಪಾಲಕರು ಕೇವಲ ಬೋಧಕರಾಗದೇ ಸಾಧಕರಾಗಬೇಕು. ಆಗಲೇ ವಿದ್ಯಾರ್ಥಿಗಳು ಅವರನ್ನು ನೋಡಿ ತಮ್ಮ ಜೀವನದಲ್ಲೇನಾದರೂ ಸಾಧಿಸುತ್ತಾರೆ ಎಂದು ತಿಳಿಸಿದರು.

ಗುಬ್ಬಚ್ಚಿ ಎಂಬ ಹೆಸರಿನ NGO, ಶಾಲಾ ಅವಧಿಯ ಮಧ್ಯದಲ್ಲಿಯೇ ಶಾಲೆಯನ್ನು ಬಿಡುವ ಮಕ್ಕಳನ್ನು ಹುಡುಕಿ ಅವರನ್ನು ವಾಪಸ್ಸು ಶಾಲೆಗೆ ಸೇರಿಸುವ ಕೆಲಸವನ್ನು ಮಾಡುತ್ತದೆ. ಶಿಕ್ಷಕರು ಶಾಲೆಯಲ್ಲಿ ಬೋಧನಾ ಕಾರ್‍ಯವನ್ನಲ್ಲದೇ ಅನ್ಯ ಕಾರ್‍ಯಗಳನ್ನು ನಿಭಾಯಿಸುತ್ತಿರುವ ಬಗ್ಗೆ ಆಶ್ಚರ್ಯವನ್ನು ವ್ಯಕ್ತಪಡಿಸಿದರಲ್ಲದೇ ಶಿಕ್ಷಕರಿಗೆ ಬೋಧನಾ ಕಾರ್‍ಯವನ್ನಲ್ಲದೇ ಮತ್ಯಾವ ಅನ್ಯ ಕಾರ್‍ಯವನ್ನು ನೀಡಬಾರದೆಂದು ಹೇಳಿದರು.

ಸುವಿದ್ಯಾ ಎಂಬ NGO ಪ್ರಾಥಮಿಕ ಶಾಲೆಯ ಮಕ್ಕಳ ಸಂಖ್ಯೆಗನುಗುಣವಾಗಿ ಮೂರು ವಿದ್ಯಾರ್ಥಿಗಳಿಗೆ ಒಂದರಂತೆ ಟ್ಯಾಬ್ ನೀಡುವ ಕಾರ್‍ಯವನ್ನು ಮಾಡುತ್ತಿದ್ದಾರೆ. ಟ್ಯಾಬ್‌ನಲ್ಲಿ ಶಿಕ್ಷಕರಿಗೆ ಅನುಕೂಲವಾಗುವಂತಹ ಬೋಧನಾ ವಿಧಿಗಳು, ಪಠ್ಯಕ್ರಮಕ್ಕೆ ಸಹಾಯಕವಾಗುವಂತಹ ಬೋಧನಾ ಸಲಕರಣೆಗಳು, ಮಕ್ಕಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ಕಲಿಕಾ ಸಾಮಗ್ರಿಗಳು ಇರುವಂತೆ ನೋಡಿಕೊಂಡು ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಹಾಯಕರಾಗುತ್ತಿರುವುದಾಗಿ ತಿಳಿಸಿದರು.

ಶಿಕ್ಷಣ ಪೌಂಡೇಷನ್ ಎಂಬ NGO ರಾಮನಗರ ಜಿಲ್ಲೆಯ ಕನಕಪುರ ತಾಲ್ಲೋಕನ್ನು ತಮ್ಮ ಕಾರ್‍ಯ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡು ಬಡ ಮಕ್ಕಳ ವೈದ್ಯರಾಗುವ ಕನಸನ್ನು ನನಸು ಮಾಡುವಲ್ಲಿ ಸಹಕರಿಸುತ್ತಿರುವುದಾಗಿ ತಿಳಿಸಿದರು. ಬಡ ಹಾಗೂ ಪ್ರತಿಭಾವಂತ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕರಿಸುತ್ತಿರುವುದಾಗಿ ತಿಳಿಸಿದರು.

ಮೈಂಡ್ ಟ್ರೀ ಕಂಪನಿಯವರು ಗ್ರೀನ್ ಸ್ಕೂಲ್ ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಶಾಲಾ ಪರಿಸರವನ್ನು ಹಸಿರುಗೊಳಿಸುವ ಮತ್ತು ಅನಾರೋಗ್ಯ ಬಡ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ.

ಈ ಎಲ್ಲಾ NGO ಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜೊತೆಗೂಡಿ ಸಮಾಜದಲ್ಲಿ ಒಳ್ಳೆಯ ಪರಿವರ್ತನೆ ತರುವ ಪ್ರಯತ್ನ ಮಾಡುವ ಆಶಯ ವ್ಯಕ್ತಪಡಿಸಿದರು.

ಅ.ಭಾ.ರಾ.ಶೈ. ಮಹಾಸಂಘದ ಮಹಾಮಂತ್ರಿಗಳಾದ ಶ್ರೀ ಶಿವಾನಂದ ಸಿಂದನಕೇರಾರವರು ಸಂಘದ ಧ್ಯೇಯ ವಾಕ್ಯವಾದ ರಾಷ್ಟ್ರ ಹಿತದಲ್ಲಿ ಶಿಕ್ಷಣ, ಶಿಕ್ಷಣದ ಹಿತದಲ್ಲಿ ಶಿಕ್ಷಕ, ಶಿಕ್ಷಕನ ಹಿತದಲ್ಲಿ ಸಮಾಜವೆಂಬುದನ್ನು ಹೇಳುತ್ತಾ ತಮ್ಮ ಪ್ರಸ್ತಾವನಾ ಭಾಷಣವನ್ನು ಮಾಡಿದರು.

ಕ.ರಾ.ಮಾ.ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಅರುಣ್ ಶಹಾಪುರ್‌ರವರು ಶಿಕ್ಷಣ ಕ್ಷೇತ್ರದ ಪ್ರಸ್ತುತ ಸಮಸ್ಯೆಗಳು, ಅವುಗಳನ್ನು ಪರಿಹರಿಸುವಲ್ಲಿ ನಾವೆಲ್ಲರೂ ಹೇಗೆ ಒಂದಾಗಿ ಕೆಲಸ ಮಾಡಬಹುದೆಂಬುದನ್ನು ಸವಿಸ್ತಾರವಾಗಿ ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಕ.ರಾ.ಮಾ.ಶಿ.ಸಂಘದ ರಾಜ್ಯ ಪ್ರಧಾನ ಕಾರ್‍ಯದರ್ಶಿಗಳಾದ ಶ್ರೀ ಚಿದಾನಂದ್ ಆ.ಕೇ. ಪಾಟೀಲ್‌ರವರು ಎಲ್ಲಾ NGOಗಳ ಪರಿಚಯವನ್ನು ಸಭೆಗೆ ಮಾಡಿಸಿದರು. ಸಹಕಾರ್‍ಯದರ್ಶಿಗಳಾದ ಶ್ರೀ ಗಂಗಾಧರ್‌ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಅ.ಭಾ.ರಾ.ಶೈ.ಮಹಾಸಂಘದ ಮಹಿಳಾ ವಿಭಾಗದ ಸಹಕಾರ್‍ಯದರ್ಶಿಯವರಾದ ಶ್ರೀಮತಿ ಮಮತಾ ಡಿ.ಕೆ ರವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ವಂದನಾರ್ಪಣೆ ಮಾಡಿದರು.

Highslide for Wordpress Plugin