ಶಿಕ್ಷಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲಿ

ಮಕ್ಕಳ ಉಜ್ವಲ ಭವಿಷ್ಯರೂಪಿಸುವ ಶಿಕ್ಷಕರು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು. ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ತಾಲೂಕಿನ ಶಿಕ್ಷಕರಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ನಾಗರೀಕರ ಪಾತ್ರ ವಿಷಯ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದಾರಿ ದೀಪವಾಗುವ ನಿಟ್ಟಿನಲ್ಲಿ ಶಿಕ್ಷಕರು ಕ್ರಿಯಾಶೀಲರಾಗಬೇಕು. ರಾಷ್ಟ್ರದ ಉತ್ಥಾನಕ್ಕೆ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಮಕ್ಕಳಲ್ಲಿ ಭಯ, ಆತಂಕಗಳನ್ನು ದೂರ ಮಾಡಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಸ್ವಯಂ ಶಿಸ್ತು, ಉತ್ತಮಕಲ್ಪನಾ ಶಕ್ತಿ, ವಿಮರ್ಶಾತ್ಮಕ ಚಿಂತನೆ ಬೆಳೆಸಬೇಕು ಎಂದು ಸಲಹೆ ನೀಡಿದರು.

ಮಕ್ಕಳಲ್ಲಿ ಜೀವನಕೌಶಲ್ಯ ಬೆಳೆಸಲು ಶಿಕ್ಷಕರು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗುವಂತೆ ಶಿಕ್ಷಕರು ಮತ್ತು ಪಾಲಕರು ಉತ್ತೇಜಿಸಬೇಕು. ಮಕ್ಕಳ ಕೈಗೆ ಮೊಬೈಲ್‌ಗಳ ಬದಲಾಗಿ ಪಂಚತಂತ್ರ, ಚಂದಮಾಮ, ತೆನಾಲಿ ರಾಮಕೃಷ್ಣರ ಕಥೆ ಮತ್ತು ರಾಮಾಯಣ- ಮಹಾಭಾರತದಂತಹ ಪುಸ್ತಕಗಳನ್ನು ನೀಡಿ ಅವರ ಮನಸ್ಸನ್ನು ಅರಳುವಂತೆ ಮಾಡಬೇಕಿದೆ ಎಂದರು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯಾಧ್ಯಕ್ಷ ಡಾ|| ಎಹ್.ಎನ್.ಪಿ ವಿಠಲ್, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಓಬಯ್ಯ, ರಾಷ್ಟ್ರೋತ್ಥಾನ ಪ್ರೌಢಶಾಲೆ ಮುಖ್ಯಶಿಕ್ಷಕ ಆರ್.ಕೊಟ್ರಪ್ಪ, ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎ. ಗುಂಡಾಚಾರ್ ಸೇರಿ ತಾಲೂಕಿನ 65 ಶಿಕ್ಷಕರು ಭಾಗವಹಿಸಿದ್ದರು. ಸಂಜೆ ವಿದ್ಯಾರ್ಥಿ ನಿಲಯದಲ್ಲಿ ರಾಷ್ಟ್ರ ನಿರ್ಮಾಣದ ನಾಗರಿಕರ ಪಾತ್ರ ವಿಷಯದ ಬಗ್ಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಸಲಾಯಿತು. ಯುವಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪೋಷಕರು ಭಾಗವಹಿಸಿದ್ದರು.

Highslide for Wordpress Plugin