ಶಿಕ್ಷಕರ ಸಾಂದರ್ಭಿಕ ರಜೆ ದಿನಗಳನ್ನು (ಸಿಎಲ್) 15 ರಿಂದ 10 ದಿನಗಳಿಗೆ ಇಳಿಸಿರುವ ನಿರ್ಧಾರ ಸೂಕ್ತವಲ್ಲ. ಈ ಮೊದಲಿದ್ದಂತೆ 15 ಸಿಎಲ್ಗಳನ್ನೇ ಮುಂದುವರೆಸಬೇಕು ಎಂದು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ಶಿಕ್ಷಕರ ಸಂಘಗಳ ಮುಖ್ಯಸ್ಥರ ಸಭೆ ಆಗ್ರಹಿಸಿದೆ.
ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ವತಿಯಿಂದ ಶಾಸಕರ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶೈಕ್ಷಣಿಕ ಅವಧಿ ಹಾಗೂ ರಜೆ ಒಂದು ಚರ್ಚೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಮಕ್ಕಳ ವಾರ್ಷಿಕ ಕಲಿಕಾ ಅವಧಿಯ ದಿನಗಳು ಮನೋ ವಿಜ್ಞಾನದ ಆಧಾರದಲ್ಲಿ ನಿಗದಿಯಾಗಬೇಕು, ಈ ದಿಸೆಯಲ್ಲಿ ಮನೋವಿಜ್ಞಾನಿಗಳನ್ನು ಒಳಗೊಂಡ ಸಮಗ್ರ ಅಧ್ಯಯನ ನಡೆಯ ಬೇಕು. ಶಿಕ್ಷಕರ ಮೇಲಿನ ಒತ್ತಡದ ಪ್ರಮಾಣ ಮತ್ತು ಅವರು ಎಷ್ಟು ಕೆಲಸ ನಿರ್ವಹಿಸಬೇಕು ಎಂಬುದನ್ನು ಪರಾಂಬರಿಸಿದ ವರದಿ ಸಿದ್ಧಪಡಿಬೇಕು ಎಂದು ಸಭೆ ನಿರ್ಣಯಿಸಿತು.
ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರಾದ ಅರುಣ ಶಹಾಪೂರರವರು ಮಾತನಾಡಿ, ಶೈಕ್ಷಣಿಕ ಹಾಗೂ ರಜೆಗಳ ಅವಧಿ ನಿರ್ಣಯವು, ಆಳುವ ಸರ್ಕಾರದ ಜೊತೆಗಿನ ಬೇಡಿಕೆ-ನೀಡಿಕೆಯ ವಿಷಯವಾಗಬಾರದು. ಇದೊಂದು ಸೂಕ್ಷ ವಿಚಾರವಾಗಿದ್ದು ವೈಜ್ಞಾನಿಕ ಆಧಾರದಲ್ಲಿ ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ವೈ. ಎ. ನಾರಾಯಣ್ ಅವರು ಅನ್ಯ ಕಾರ್ಯಗಳನ್ನು ಶಿಕ್ಷಕರಿಗೆ ನೀಡುವುದನ್ನು ತಡೆಗಟ್ಟಿ ಶಿಕ್ಷಕರ ಕತ್ತೆಚಾಕರಿ ನಿಲ್ಲಿಸಬೇಕು. ಯಾರನ್ನು ಖುಷಿಪಡಿಸಲು ಈ ಯೋಜನೆಯನ್ನು ಮುಂದು ವರೆಸಲಾಗುತ್ತದೆ ಎಂದು ಪ್ರಶ್ನಿಸಿದರು. ಹಾಲಿ ೪೫ ರಿಂದ ೫೦ ಯೋಜನೆಗಳು ಅನಗತ್ಯ ಹೊರೆಯಾಗಿವೆ. ಶಿಕ್ಷಕರ ವಿಶ್ರಾಂತಿಯ ಅವಧಿ ಕುಂಠಿತವಾಗಿದೆ. ಇದರಿಂದ ಮಕ್ಕಳ ಕಲಿಕಾ ಪ್ರಗತಿಗೂ ಧಕ್ಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳು ರಜೆ ಅನುಭವಿಸಲಿ: ಮಕ್ಕಳು ಉಲ್ಲಾಸದಿಂದ ಕಲಿಕೆಯಲ್ಲಿ ತೊಡಗಲು ರಜೆಗಳು ಅವಶ್ಯಕ, ವೃಥಾ ಅವರನ್ನು ಓದುವ ಕ್ರಿಯೆಯಲ್ಲಿ ತೊಡಗಿಸುವುದು, ಹೊರೆ ಹೆಚ್ಚಿಸುವುದು, ಒಳ್ಳೆಯ ಲಕ್ಷಣವಲ್ಲ ಎಂದು ನಿಮಾನ್ಸ್ನ ವೈದ್ಯರು ಮತ್ತು ಮಕ್ಕಳ ಕಲಿಕಾ ವಿಷಯದ ತಜ್ಞರೂ ಆದ ಡಾ. ರಾಜೇಂದ್ರ ಪ್ರತಿಪಾದಿಸಿದರು.
ಪರಿಷತ್ ಸದಸ್ಯರಾದ ಶ್ರೀಕಂಠೇ ಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ ಮಂಜುನಾಥ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಪ್ರೊ. ಸಂದೀಪ ಬೂದಿಹಾಳ, ಕೆಆರ್ಎಂಎಸ್ಎಸ್ನ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ, ಎಬಿಆರ್ಎಸ್ಎಂ ಮಹಿಳಾ ಕಾರ್ಯದರ್ಶಿ ಮಮತಾ ಡಿ. ಕೆ., ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ ಗಂಗಾಧರಾಚಾರ್ಯ, ರಾಜ್ಯ ಕಾರ್ಯದರ್ಶಿ ವೃಷಬೇಂದ್ರ ಸ್ವಾಮಿ, ರಾಜ್ಯ ಉಪಾಧ್ಯಕ್ಷ, ಬಿ.ಎಚ್ ವರದರಾಜ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಬಸವರಾಜ ಸೋಮಣ್ಣನವರ, ಗೋಪಾಲಕೃಷ್ಣ, ಮಂಗಳಾ ಮತ್ತು ಶಿಕ್ಷಕರ ಸಂಘಗಳ ರಾಜ್ಯದ ವಿವಿಧ ಜಿಲ್ಲೆ ಮುಖಂಡರು ಸಭೆಯಲ್ಲಿ ಹಾಜರಿದ್ದರು.