ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕಿಯ ಪಾತ್ರ ಕಾರ್ಯಕ್ರಮದ ವರದಿ
74 ನೇ ಸ್ವಾತಂತ್ರ್ಯದ ನಿಮಿತ್ತ, ಭಾರತದ ಅತಿ ದೊಡ್ಡ ಶಿಕ್ಷಕ ಸಂಘಟನೆ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಆಯೋಜಿಸಿದ್ದ ವೆಬಿನಾರ್‌ನಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕಿಯ ಪಾತ್ರ ಎಂಬ ವಿಷಯವನ್ನು ಕುರಿತು ದಿನಾಂಕ 8-8-2020 ರ ಶನಿವಾರ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರು ಭಾಗವಹಿಸಿ, ದಕ್ಷಿಣ ಭಾರತದ ಆರು ರಾಜ್ಯಗಳಾದ ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ ಹಾಗೂ ತಮಿಳುನಾಡಿನ ಎಲ್ಲ ಶಿಕ್ಷಕರನ್ನು ಕುರಿತು ಮಾತನಾಡುತ್ತಾ, ನಮ್ಮ ದೇಶದಲ್ಲಿ ಶಿಕ್ಷಣ ಪಡೆದ ಯಾರನ್ನೇ ನೀವು ವಿಚಾರಿಸಿದರೂ ಅವರು ತಮ್ಮ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ವೃತ್ತಿ ನಮ್ಮ ಶಿಕ್ಷಕರದ್ದು ಎಂದು ಉತ್ತರಿಸುತ್ತಾರೆ. ಮಾಜಿ ರಾಷ್ಟ್ರಪತಿಗಳಾಗಿದ್ದ ದಿವಂಗತ ಅಬ್ದುಲ್ ಕಲಾಂರವರನ್ನು ಇದೇ ಪ್ರಶ್ನೆ ಕೇಳಿದ್ದಾಗ, ಅವರು ತಮ್ಮ ಶಿಕ್ಷಕರು ಹಾಗೂ ವಿಜ್ಞಾನ ಶಿಕ್ಷಕರನ್ನು ನೆನಪಿಸಿಕೊಂಡರು. ನಮ್ಮ ತಂದೆಯವರು ಸರ್ಕಾರಿ ನೌಕರಿಯಲ್ಲಿ ಇದ್ದುದರಿಂದ ನಾನು ಬೇರೆ-ಬೇರೆ ಊರಿನಲ್ಲಿ ಶಿಕ್ಷಣ ಪಡೆಯಬೇಕಾಗುತ್ತಿತ್ತು. ಹೀಗಾಗಿ ನನಗೆ ಇಂದಿಗೂ ಪ್ರತಿಶಾಲೆಯ ಒಬ್ಬಿಬ್ಬ ಶಿಕ್ಷಕರ ಹೆಸರು ನೆನಪಿದೆ ಎಂದು ಶಿಕ್ಷಕರ ಮಹತ್ವವನ್ನು ಕುರಿತು ಹೇಳಿದರು.
ಮುಂದುವರೆದು ನಮ್ಮ ಸಂಸ್ಕೃತಿಯಲ್ಲಿ ತಾಯಿ-ತಂದೆಯರ ನಂತರದ ಸ್ಥಾನ ಗುರುಗಳಿಗಿದೆ. ಮಗು ಹೆಚ್ಚು ಕಾಲ ಶಾಲೆಯಲ್ಲಿ ಕಳೆಯುವುದರಿಂದ ಮಗುವಿಗೆ ತಂದೆ-ತಾಯಿಗಿಂತ, ಶಿಕ್ಷಕರೇ ಹತ್ತಿರದವರಾಗುತ್ತಾರೆ. ಮಗುವಿನ ಮೇಲೆ ಶಿಕ್ಷಕರ ಪ್ರಭಾವವೇ ಹೆಚ್ಚು. ಅದಕ್ಕೆ ಶಿಕ್ಷಕರ ಮಾತೇ ವೇದವಾಕ್ಯವಾಗುತ್ತದೆ ಎನ್ನುತ್ತಾ, ಅದಕ್ಕಾಗೇ ಸಮಾಜದಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ನಮ್ಮ ಪ್ರಧಾನಿ ಮೋದಿಯವರಂತೂ ಭಾರತದ ಪ್ರತಿ ಮಗುವಿಗೂ ಉತ್ತಮವಾದ ಶಿಕ್ಷಣ ಸಿಗಬೇಕೆಂಬ ಕನಸು ಕಂಡಿದ್ದಾರೆ. ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದರು. ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ, ಒಂದು ಪರಿವಾರಕ್ಕೇ ಶಿಕ್ಷಣ ನೀಡಿದಂತೆ ಎಂದು ತಿಳಿದಿದ್ದ ಅವರು ಗುಜರಾತನ್ನು ಬಿಟ್ಟು ಬರುವಾಗ ತಮ್ಮ ಉಳಿಕೆಯ 21 ಲಕ್ಷಕ್ಕೂ ಹೆಚ್ಚು ಹಣವನ್ನು ಸಚಿವಾಲಯದ ಡಿ ಗುಂಪಿನ ನೌಕರರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟರು. ಇಂದು ಶಿಕ್ಷಣ ಕ್ಷೇತ್ರದಲ್ಲಿ ಶೇಕಡಾ ೭೩ರಷ್ಟು ಶಿಕ್ಷಕಿಯರೇ ಇದ್ದಾರೆ. ಅದು ಶೇಕಡಾ ೧೦೦ ಆಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಭಾಷಣದ ಕೊನೆಯಲ್ಲಿ ಸಭಿಕರು ಕೇಳಿದ ಅನೇಕ ಪ್ರಶ್ನೆಗಳನ್ನು ಶಾಂತವಾಗಿ ಆಲಿಸಿ, ಸಮರ್ಪಕ ಉತ್ತರ ನೀಡಿದರು. ವೆಬಿನಾರ್‌ನ ಪ್ರಾರಂಭದಲ್ಲಿ ಶ್ರೀಮತಿ ತಿಲಕರವರು ಸರಸ್ವತಿ ವಂದನೆ ಮಾಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪೋಷಕರಾದ ಶ್ರೀಮತಿ ಆರ್ ಸೀತಾಲಕ್ಷ್ಮಿಯವರು ಪ್ರಾಸ್ಥಾವಿಕ ಭಾಷಣ ಮಾಡಿದರು. ಮಹಿಳಾ ವಿಭಾಗದ ಪ್ರಮುಖರಾದ ಶ್ರೀಮತಿ ವಾಸುಕಿಯವರು ಮಾನ್ಯ ಮಂತ್ರಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಮಹಾಸಂಘದ ಮಹಿಳಾ ಕಾರ್ಯದರ್ಶಿ ಗಳಾದ ಶ್ರೀಮತಿ ಡಿ.ಕೆ ಮಮತಾರವರು ಕಾರ್‍ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ವಿಜಯಲಕ್ಷ್ಮಿಯವರು ವಂದನಾರ್ಪಣೆ ಮಾಡಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.