ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಶ್ರೀ ಜೆ. ಪಿ. ಸಿಂಘಾಲರವರ ದೃಷ್ಟಿಕೋನ

ದಿನಾಂಕ 6-9-2020 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು “ರಾಷ್ಟ್ರೀಯ ಶಿಕ್ಷಣ ನೀತಿ 2020” ಎಂಬ ವಿಷಯದ ಬಗ್ಗೆ ವಿಚಾರಸಂಕಿರಣವನ್ನು ಆನ್‌ಲೈನ್‌ನಲ್ಲಿ ಏರ್ಪಡಿಸಿತ್ತು. ಮುಖ್ಯ ವಕ್ತಾರರಾಗಿ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಧ್ಯಕ್ಷರಾದ ಶ್ರೀ ಜೆ.ಪಿ ಸಿಂಘಾಲ್‌ಜೀಯವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಜೆ.ಪಿ.ಸಿಂಘಾಲ್‌ಜಿಯವರ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಈ ಕೆಳಗಿನಂತೆ ವರದಿ ಮಾಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಉಪಸ್ಥಿತ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಎಲ್ಲ ಮಹಾನುಭಾವರಿಗೆ ನಮಸ್ಕಾರವನ್ನು ಸಲ್ಲಿಸುತ್ತಾ, ಈ ವಿಷಯದ ಬಗ್ಗೆ ನನ್ನ ಅನುಭವಗಳ ಆಧಾರದ ಮೇಲೆ ತಮ್ಮೊಂದಿಗೆ ಮಾತನಾಡುತ್ತಿರುವುದು ನನ್ನ ಸೌಭಾಗ್ಯ. 1986 ರಲ್ಲಿ ಒಂದು ಶಿಕ್ಷಣ ನೀತಿ ಬಂದಿತ್ತು, 1992 ರಲ್ಲಿ ಅದರಲ್ಲಿ ಕೆಲವು ಸಂಶೋಧನೆಗಳನ್ನು ಮಾಡಿ ಕೆಲವು ಸುಧಾರಣೆಗಳನ್ನು ಮಾಡಲಾಯಿತು. ಅದರೆ 34 ವರ್ಷಗಳ ನಂತರ ಬಂದ ಶಿಕ್ಷಣ ನೀತಿಯೇ ರಾಷ್ಟ್ರೀಯ ಶಿಕ್ಷಣ ನೀತಿ 2020. ಏಕೆ ಈ ನೀತಿಯು ದೇಶಕ್ಕೆ ಅತೀ ಜರೂರಾಗಿತ್ತು ? 1986 ರಿಂದ 2020 ರವರೆಗೆ ಅನೇಕ ಬದಲಾವಣೆಗಳಾಗಿವೆ. ಅವು ರಾಜಕೀಯ ಬದಲಾವಣೆಗಳಾಗಿರಬಹುದು, ಆರ್ಥಿಕ ಬದಲಾವಣೆಗಳಾಗಿರಬಹುದು, ಸಾಮಾಜಿಕ ಬದಲಾವಣೆಗಳಾಗಿರಬಹುದು, ತಂತ್ರಜ್ಞಾನದಲ್ಲಿನ ಬದಲಾವಣೆಗಳಾಗಿರಬಹುದು. ಈ ಎಲ್ಲ ಬದಲಾವಣೆಗಳನ್ನು ನಾವು ತಲುಪಬೇಕಾಗಿತ್ತು. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಯು ಈ ಎರಡು ಶಿಕ್ಷಣ ನೀತಿಗಳ ನಡುವಿನ ಎಲ್ಲ ಬದಲಾವಣೆಗಳಿಗೆ ಉತ್ತರವಾಗಿ ಹೊರಹೊಮ್ಮಿದೆ. ಈ ಬದಲಾವಣೆಗಳು ಅನೇಕ ಸವಾಲುಗಳನ್ನೂ ಹುಟ್ಟುಹಾಕುತ್ತವೆ. ಭಾರತದ ಶಿಕ್ಷಣ ನೀತಿಯು ಸವಾಲುಗಳಿಂದ ಕೂಡಿದೆ. ಇಲ್ಲಿನ ಶಿಕ್ಷಣದ ಗುಣಮಟ್ಟವು ಅಷ್ಟೊಂದು ಉತ್ತಮವಾಗಿಲ್ಲ. ಏಕೆಂದರೆ ಇದರಲ್ಲಿ ಸಾಕಷ್ಟು ವಾಣಿಜ್ಯೀಕರಣವಿದೆ, ವಿಭಾಗೀಕರಣವಿದೆ. ಮೂಲತಃ ಇದರಲ್ಲಿ ಅಂತರ್ಗತತೆ ಇಲ್ಲ, ದೊಡ್ಡ ಪ್ರಮಾಣದ ಜನರನ್ನು ತಲುಪುವುದು ಸುಲಭಸಾಧ್ಯವಾಗಿಲ್ಲ. ಸಮಾನತೆಯ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿಲ್ಲ. ಹೀಗೆ ಭಾರತದಲ್ಲಿನ ವ್ಯವಸ್ಥೆಯ ಬಗ್ಗೆ ಅನೇಕ ವಿಷಯಗಳನ್ನು ಬೇರೆ-ಬೇರೆ ವ್ಯಕ್ತಿಗಳು ಉಲ್ಲೇಖಿಸುತ್ತಿರುತ್ತಾರೆ. ಇಂತಹ ಅನೇಕ ಸವಾಲುಗಳು ನಮ್ಮ ಮುಂದೆ ಇದ್ದದ್ದಕ್ಕಾಗಿ, ಈ ಸವಾಲುಗಳನ್ನು ಎದುರಿಸುವುದು ಹೇಗೆ ಎಂದು ಯೋಚಿಸಿದಾಗ, ಒಂದು ಉತ್ತಮ ನೀತಿಯ ದಸ್ತಾವೇಜನ್ನು ತಯಾರು ಮಾಡುವುದು, ಅದರಲ್ಲಿ ಈ ಎಲ್ಲ ಪರಿವರ್ತನೆಗಳನ್ನು ಹಾಗೂ ಸವಾಲುಗಳನ್ನು ಸರಿಯಾದ ಕ್ರಮದಲ್ಲಿ ಮೆಟ್ಟಿನಿಲ್ಲಬಹುದಾಗಿರಬೇಕು. ನಾನು ABRSM ನ ಸದಸ್ಯನಾಗಿ ಶಿಕ್ಷಣ ನೀತಿಯ ಚೌಕಟ್ಟನ್ನು ತಯಾರಿಸುವಾಗ ಶ್ರೀ ಕಸ್ತೂರಿ ರಂಗನ್ ರವರ ಮತ್ತು ಅದಕ್ಕೂ ಮೊದಲು ಶ್ರೀ ಸುಬ್ರಮಣ್ಯಂ ರವರ ಅಧ್ಯಕ್ಷತೆಯಲ್ಲಿನ ಡ್ರಾಫ್ಟಿಂಗ್ ಕಮೀಟಿಯಲ್ಲಿ ಅನೇಕ ಸದಸ್ಯರೊಂದಿಗೆ ಚರ್ಚಿಸುವ ಅವಕಾಶಗಳು ಒದಗಿದವು. ಅನೇಕಾನೇಕ ಬಾರಿ ಚರ್ಚಿಸಲಾಗಿ, ಮಹಾಸಂಘದ, ಶಿಕ್ಷಕರ, ಸಮಾಜದ ಹಾಗೂ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಈ ಕಮೀಟಿಯ ಮುಂದೆ, ಸರಕಾರದ ಮತ್ತು ಶಾಸನದ ಮುಂದೆ ಇಟ್ಟೆವು. ನಮ್ಮ ಅಧಿಕಾಧಿಕ ಮಾತುಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಯಿತು ಎಂದು ಹೇಳಲು ನಮಗೆ ಸಂತೋಷವಾಗುತ್ತಿದೆ. ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದಿಂದ ನಾವು ಧ್ವನಿ ಎತ್ತಿದ ವಿಷಯಗಳು ಈ ಕಮೀಟಿಯಿಂದ ಒಪ್ಪಿಕ್ಕೊಳ್ಳಲ್ಪಟ್ಟವು. ಏಕೆಂದರೆ ಅವೆಲ್ಲವೂ ತಾರ್ಕಿಕವಾಗಿದ್ದವು ಹಾಗೂ ತಮ್ಮಂತಹ ಮಹಾನುಭಾವರ ಅನುಭವಗಳ ಆಧಾರದ ಮೇಲೆ ರಚಿಸಲ್ಪಟ್ಟಿದ್ದವಾಗಿದ್ದವು. ಅನೇಕ ಬಾರಿ ನಮಗೆ ಮಾತನಾಡಲು ಅವಕಾಶಗಳು ದೊರೆತವು. ಈ ನೀತಿಯ ದೃಷ್ಟಿಕೋನಗಳೇನಾಗಿರಬೇಕೆಂದು ಯೋಚಿಸುತ್ತಿರುವಾಗ, ನಮಗೆ ಕೆಲವು ಮೂಲ ಸಮಸ್ಯೆಗಳು ಎದುರಾದವು. ಈ ನೀತಿಯು ಸಮಗ್ರ ಶಿಕ್ಷಣವನ್ನು ಒದಗಿಸಲೇಬೇಕಾಗಿತ್ತು. ಇದನ್ನು ವಿಭಾಗೀಕರಣಾಧಾರಿತ ಶಿಕ್ಷಣದಿಂದ ಸಮಗ್ರ ಶಿಕ್ಷಣದೆಡೆಗೆ ಕೊಂಡೊಯ್ಯುಬೇಕಾಗಿತ್ತು, ಸರ್ವಾಂಗೀಣ ವಿಕಾಸಕ್ಕಾಗಿ ಶಿಕ್ಷಣವಿರಬೇಕಾಗಿತ್ತು. ಈಗಿನ ಶಿಕ್ಷಣವು ಸರ್ವಾಂಗೀಣ ವಿಕಾಸವನ್ನು ಮಾಡುತ್ತಿಲ್ಲ. ಬಹು ಶಿಸ್ತಿನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿತ್ತು. ಅದರಲ್ಲಿ ಮತ್ತೊಂದು ಅತ್ಯಂತ ಮಹತ್ವವಾದ ಅಂಶವೇನೆಂದರೆ ಇಲ್ಲಿಯವರೆಗೆ ಭಾರತದಲ್ಲಿ ನೀಡುತ್ತಿರುವ ಶಿಕ್ಷಣವು ಮೆಕಾಲೆ ಶಿಕ್ಷಣ ನೀತಿಯನ್ನಾಧರಿಸಿತ್ತು ಅಥವಾ ಪಾಶ್ಚಾತ್ಯ ಶಿಕ್ಷಣ ನೀತಿಯನ್ನಾಧರಿಸಿತ್ತು. ಅದನ್ನೇ ನಾವು ಅನುಸರಿಸುತ್ತಿದ್ದೆವು. ಈಗ ಇದನ್ನು ಮೆಕಾಲೆ ಕೇಂದ್ರಿತ ಶಿಕ್ಷಣದಿಂದ, ಪಾಶ್ಚಾತ್ಯ ಕೇಂದ್ರಿತ ಶಿಕ್ಷಣದಿಂದ ಭಾರತ ಕೇಂದ್ರಿತ ಶಿಕ್ಷಣವನ್ನಾಗಿ ಪರಿವರ್ತಿಸಬೇಕಾಗಿತ್ತು. ನಮ್ಮ ಆಲೋಚನೆಯಲ್ಲಷ್ಟೇ ಭಾರತ ಕೇಂದ್ರಿತವಾಗಿರದೇ ನಮ್ಮ ಕರ್ಮದಲ್ಲಿ, ನಮ್ಮ ಬುದ್ಧಿಶಕ್ತಿಯಲ್ಲಿ. ನಮ್ಮ ಚೇತನದಲ್ಲಿ ಮತ್ತು ನಮ್ಮ ನಡವಳಿಕೆಯಲ್ಲಿಯೂ ಭಾರತ ಕೇಂದ್ರಿತವಾಗಿರಬೇಕು. ಭಾರತೀಯ ಮೌಲ್ಯಗಳು, ಭಾರತೀಯ ಸಂಸ್ಕೃತಿ, ಭಾರತೀಯ ಅಂಶಗಳು, ಭಾರತೀಯ ವೈಜ್ಞಾನಿಕ ಮಾತುಗಳನ್ನು ಇದರಲ್ಲಿ ಅಳವಡಿಸಿಕೊಳ್ಳಬೇಕಾಗಿತ್ತು. ಇಂತಹ ದೃಷ್ಟಿಯನ್ನು ಇಟ್ಟುಕೊಳ್ಳಲಾಯಿತು. ಅಲ್ಲದೇ ಮಾನ್ಯ ಪ್ರಧಾನಮಂತ್ರಿಗಳು ’ನಾವು ಜಗತ್ತಿಗೆ ಒಂದು ಜ್ಞಾನದ ಶಕ್ತಿಶಾಲಿ ಆಕರವಾಗಬೇಕು’ ಹಾಗೂ ಭಾರತವು ವಿಶ್ವ ಗುರುವಿನ ಸ್ಥಾನವನ್ನು ಪಡೆಯಬೇಕು. ಭಾರತವು ವಿಶ್ವ ಗುರುವಿನ ಸ್ಥಾನದಲ್ಲಿತ್ತು ಎಂದು ಹೇಳುವ ಬದಲು ವಿಶ್ವ ಗುರುವಿನ ಸ್ಥಾನದಲ್ಲಿದೆ ಎಂದು ಹೇಳುವಂತಾಗಬೇಕು, ಎಂದು ಹೇಳಿದ ಮಾತನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗಿತ್ತು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಗ್ರ ಶಿಕ್ಷಣ, ಅಂತರ್ಗತ ಶಿಕ್ಷಣ, ಸಮಾನ ಶಿಕ್ಷಣ ಈ ಎಲ್ಲವುಗಳನ್ನು ಒಳಗೊಂಡ ಶಿಕ್ಷಣ ನೀತಿಯನ್ನು ರೂಪಿಸಲಾಯಿತು. ಇದು ಅತ್ಯಂತ ಸಮಗ್ರ ಹಾಗೂ ಐತಿಹಾಸಿಕ ದಾಖಲೆಯಾಯಿತು. ನವ ಭಾರತದ ನಿರ್ಮಾಣಕ್ಕಾಗಿ ಈ ಶಿಕ್ಷಣ ನೀತಿಯು ಅಡಿಪಾಯವಾಗಬಹುದೆಂದು ಅರಿತು ಇದರ ಕಾರ್ಯವನ್ನು ಪ್ರಾರಂಭಿಸಿದೆವು. ಈ ದಾಖಲೆಯಲ್ಲಿ 27 ಅಧ್ಯಾಯಗಳಿವೆ. ಅದರಲ್ಲಿ 9 ದಾಖಲೆಗಳು ಶಾಲಾ ಶಿಕ್ಷಣಕ್ಕೆ ಮೀಸಲು, ೧೧ ಅಧ್ಯಾಯಗಳು ಉನ್ನತ ಶಿಕ್ಷಣಕ್ಕೆ ಮೀಸಲು ಹಾಗೂ 7 ಅಧ್ಯಾಯಗಳು ಇತರೆಗೆ ಮೀಸಲಾಗಿವೆ. ಇದೊಂದು ಸಮಗ್ರ ದಾಖಲೆಯಾಗಿರವುದರಿಂದ ಇದನ್ನು ಅಕ್ಷರಕ್ಷರವಾಗಿ ಓದಿ ತಿಳಿದುಕೊಳ್ಳಲು ಪ್ರಯತ್ನಿಸಿರಿ ಹಾಗೂ ಇದನ್ನು ಯಾವ ರೀತಿ ಕಾರ್ಯಗತಗೊಳಿಸಬಹುದೆಂಬ ಬಗ್ಗೆಯೂ ಯೋಚಿಸಿರಿ. ಈ ಸಂದರ್ಭದಲ್ಲಿ ನಾನು ಕರ್ನಾಟಕ ರಾಜ್ಯ ಸರಕಾರಕ್ಕೆ ಹಾಗೂ ಒಐಅ ಯವರಾದ ಶ್ರೀ ಅರುಣ ಶಹಾಪುರರವರಿಗೆ ಶುಭಾಶಯಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ. ಇವರು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ. ಈ ಬಗ್ಗೆ ನಾನು ಅನೇಕ ಕಡೆಗಳಲ್ಲಿ ಹೇಳಿಕೊಂಡಿರುವೆನು. ನಾನು ಹಿಮಾಚಲ ಪ್ರದೇಶ ಸರ್ಕಾರದೊಂದಿಗೆ ಮಾತನಾಡುವಾಗಲೂ, ಗೋಷ್ಟಿಯಲ್ಲಿ ಮಂತ್ರಿಗಳು, ಸದಸ್ಯರುಗಳೊಂದಿಗೆ ಮಾತನಾಡುವಾಗಲೂ ಈ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲು ಕರ್ನಾಟಕ ಸರಕಾರವು ತಯಾರಿಸಿದ ಮಾದರಿಯು ಅತ್ಯುತ್ತಮವಾಗಿರುವುದರ ಬಗ್ಗೆ ಹೇಳಿರುತ್ತೇನೆ. ನಾವು ಅನೇಕ ಅಂಶಗಳನ್ನು ಕೊಡುತ್ತಿದ್ದರೂ ಪ್ರಾರಂಭದಲ್ಲಿ ಈ ಮಾದರಿಯನ್ನು ಅಳವಡಿಸಿಕೊಳ್ಳಲು ಉತ್ತಮವಾಗಿದೆ ಎಂದು ಹೇಳಿರುತ್ತೇನೆ.
ಕರ್ನಾಟಕ ಸರಕಾರವು ಈ ನಿಟ್ಟಿನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದೆ. ಅರುಣ್ ಶಹಾಪುರರಂತಹ ಶಿಕ್ಷಕರ ಪ್ರತಿನಿಧಿಗಳು ಇಲ್ಲಿರುವುದು ಹಾಗೂ ಇದರ ಅನುಷ್ಠಾನದ ಬಗ್ಗೆ ನಮಗೆ ಸಂತೋಷವಿದೆ.

ನಾವು ಚೌಕಟ್ಟನ್ನು ನಿರ್ಮಿಸುವಾಗ ಶಾಲೆಗಳಲ್ಲಿ ಶಿಕ್ಷಣದ ಬೇಡಿಕೆಯನ್ನು ಅರ್ಥೈಸಿಕೊಂಡು ಕಲಿಯುವುದರ ಮೇಲೆ, ಪ್ರಜಾಪ್ರಭುತ್ವೀಕರಣದ ಮೇಲೆ, ಉತ್ತಮ ಆಡಳಿತದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದನ್ನು ಎತ್ತಿಹಿಡಿದಿದ್ದೇವೆ. ಒಂದು ಸಮೀಕ್ಷೆಯ ಪ್ರಕಾರ 5 ನೇ ತರಗತಿಯ ವಿದ್ಯಾರ್ಥಿಯು 2ನೇ ತರಗತಿಯ ಪುಸ್ತಕವನ್ನು ಓದಲು ಅಸರ್ಥನಾಗಿದ್ದಾನೆ. 4-5 ನೇ ತರಗತಿಯ ವಿದ್ಯಾರ್ಥಿಯು 2ನೇ ತರಗತಿಯ ಗಣಿತದ ಲೆಕ್ಕಗಳನ್ನು ಬಿಡಿಸಲು ಅಸಮರ್ಥನಾಗಿದ್ದಾನೆ ಎಂದು ಹೇಳಲಾಗಿದೆ. ಶೈಕ್ಷಣಿಕವಾಗಿ ಓದು-ಬರಹ ಹಾಗೂ ಲೆಕ್ಕದಲ್ಲಿ ನಾವು ತುಂಬಾ ಹಿಂದೆ ಉಳಿದಿದ್ದೇವೆ. ಅಂದರೆ ಶಿಕ್ಷಣದ ಗುಣಮಟ್ಟವು ಉತ್ತಮವಾಗಿಲ್ಲ, ಕಲಿಕಾ ಪ್ರಕ್ರಿಯೆಯು ತುಂಬಾ ಕಳಪೆಯಾಗಿದೆ. ವಿದ್ಯಾರ್ಥಿಗಳ ತಿಳುವಳಿಕೆ ಮಟ್ಟ ತುಂಬಾ ಕಳಪೆಯಾಗಿದೆ. ಈ ಶಿಕ್ಷಣ ಸತ್ಯಾಂಶಗಳ ಮೇಲೆಯೇ ಈ ನೀತಿಯು ಕೇಂದ್ರೀಕೃತವಾಗಿದೆ. ಆದ್ದರಿಂದ ಈ ನೀತಿಯ ಮೂಲ ಬೇಡಿಕೆಯು ಹೇಗೆ ವಿದ್ಯಾರ್ಥಿಯ ತಿಳುವಳಿಕೆ ಮಟ್ಟವನ್ನು ಹೆಚ್ಚಿಸಬೇಕು, ತಿಳುವಳಿಕೆಯನ್ನು ಹೇಗೆ ಬೆಳೆಸಬೇಕು, ಪರಿಕಲ್ಪನೆಗಳನ್ನು ತಿಳಿದುಕೊಳ್ಳುವುದು, ನಿರ್ಣಾಯಕ/ವಿಮರ್ಶಾತ್ಮಕ ಅರ್ಥೈಸಿಕೊಳ್ಳುವಿಕೆ, ತಾರ್ಕಿಕ ಯೋಚನಾ ಶಕ್ತಿ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಕೌಶಲ್ಯಾಭಿವೃದ್ಧಿ, ಮೌಲ್ಯ ಶಿಕ್ಷಣದ ಮೇಲೆ ಆಧರಿತವಾಗಿದೆ.

ವಿದ್ಯಾರ್ಥಿಗಳಿಗೆ ಇವುಗಳನ್ನು ಅರ್ಥೈಸಿಕೊಳ್ಳುವಂತೆ ಸಹಕರಿಸಿದರೆ 2025  ರ ವರೆಗೆ ಶೇಕಡಾ 100 ರಷ್ಟು ಸಾಕ್ಷರತೆ ಮತ್ತು ಗಣಿತಜ್ಞತೆ ಹೊಂದಲು ಈ ನೀತಿ ಸಹಕಾರಿಯಾಗುವುದು. ಈ ಕಾರ್ಯವನ್ನೇ ಮೊದಲು ಮಾಡಬೇಕಾಗಿದೆ. ವಿದ್ಯಾರ್ಥಿಗಳನ್ನು ಗಣಿತ, ಭಾಷಾ ಕೌಶಲ್ಯಗಳಲ್ಲಿ ಯೋಗ್ಯರನ್ನಾಗಿ ಮಾಡುವ ಮಾತು ಇದರಲ್ಲಿ ಉಲ್ಲೇಖಿತವಾಗಿದೆ. ಎರಡನೇಯದಾಗಿ ಕಂಠಪಾಠ ಮಾಡುವ ಪದ್ಧತಿಯಿಂದ ಅರ್ಥೈಸಿಕೊಂಡು ಓದುವ ಪದ್ಧತಿಯು ರೂಢಿಗತವಾಗಬೇಕು. ವಿಷಯದ ಮೇಲೆ ಪ್ರಭುತ್ವ ಸಾಧಿಸಬೇಕು. ವಿದ್ಯಾರ್ಥಿಯು ತನ್ನೆಲ್ಲ ಶ್ರಮ ಹಾಗೂ ಸಮಯವನ್ನು ಬಾಯಿಪಾಠ ಮಾಡುವುದರಲ್ಲಿ ಕಳೆಯುತ್ತಿದ್ದ. ಈಗ ವಿಷಯವಸ್ತುವಿನ ಮೇಲೆ ಪ್ರಭುತ್ವ ಸಾಧಿಸಬೇಕಾಗಿದೆ. ಹಾಗೂ ಈ ಮೂಲಕವೇ ಹೆಚ್ಚು ಅಂಕಗಳನ್ನು ಪಡೆಯಬೇಕಾಗಿದೆ. ಒಂದು ಚರ್ಚೆಯಲ್ಲಿ ಅಃSಇ ಯ ವಿದ್ಯಾರ್ಥಿಗೆ ಶೇಕಡಾ 100% ರಷ್ಟು ಅಂಕಗಳು ಬಂದಿರುವುದು, ಗಣಿತಕ್ಕಷ್ಟೇ ಅಲ್ಲದೇ ಹಿಂದಿ ಹಾಗೂ ಇತಿಹಾಸದಲ್ಲಿಯೂ 100 ಕ್ಕೆ 100 ರಷ್ಟು ಅಂಕಗಳು ಬಂದಿರುವುದರ ಬಗ್ಗೆ ಬೆಳಕು ಬೀರಿದಾಗ ಅನೇಕ ವಿದ್ಯಾರ್ಥಿಗಳು ಇಂದು ಈ ತರಹದ ಅಂಕಗಳನ್ನು ಗಳಿಸುತ್ತಿರುವುದು ಬೆಳಕಿಗೆ ಬಂತು. ಇದು ಇಲಿ ಓಟಕ್ಕೆ ಉದಾಹರಣೆಯಾಗಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಈ ರೀತಿಯ ಅಂಕಗಳು ಬರುತ್ತಿರುವುದನ್ನು ಕಂಡು ರಾಜ್ಯ ಮಂಡಳಿಗಳೂ ಈ ಇಲಿ ಓಟದಲ್ಲಿ ಭಾಗವಹಿಸಹತ್ತಿದವು. ಕಂಠಪಾಠ ಮಾಡಿ ಹೆಚ್ಚು ಅಂಕಗಳಿಸುವುದು ಹೆಚ್ಚಾಯಿತು. ಇದನ್ನು ತಡೆಯುವುದು ಅವಶ್ಯಕವಾಗಿದೆ. ಅದಕ್ಕಾಗಿಯೇ ನಾವು ಬಾಯಿಪಾಠ ಮಾಡುವ ಪದ್ಧತಿಯನ್ನು ಕೈಬಿಟ್ಟು ಅರ್ಥೈಸಿಕೊಂಡು ಓದುವುದರ ಕಡೆಗೆ ಹೆಚ್ಚು ಒತ್ತು ಕೊಡಹತ್ತಿದೆವು. ವಿದ್ಯಾರ್ಥಿಗಳ ಮೆದುಳಿನಲ್ಲಿ ಅರ್ಥೈಸಿಕೊಳ್ಳುವ ಮನೋಭಾವ ಬೆಳೆಸಬೇಕಿದೆ. ಆದರೆ ಹೇಗೆ? ಅದಕ್ಕಾಗಿ ಮೊದಲಿಗೆ ಈ ವ್ಯವಸ್ಥೆಯನ್ನು ಬದಲಿಸಬೇಕು, ನಮ್ಮ ಶಾಲೆಗಳ ಶೈಕ್ಷಣಿಕ ವ್ಯವಸ್ಥೆ ಅಂದರೆ ಮೊದಲು ನಮ್ಮಲ್ಲಿ 10+2 ಯೋಜನೆ ಇತ್ತು, ಈಗ 5+3+3+4 ಯೋಜನೆಯನ್ನು ತರಲಾಗಿದೆ. ಈ ವ್ಯವಸ್ಥೆಯಲ್ಲಿ ಒಂದು ಮಗು 3 ವರ್ಷ ವಯಸ್ಸಾದಾಗ ಶಾಲೆಗೆ ಹೋಗಿ ಔಪಚಾರಿಕ ಶಿಕ್ಷಣ ಪಡೆಯಲು ಅರ್ಹನಾಗುತ್ತಾನೆ. ಮೊದಲ 5 ವರ್ಷಗಳನ್ನು ತಳಹದಿಯ ಮಟ್ಟವೆಂದು ಕರೆಯಲಾಗಿ, ಮೊದಲ 3 ವರ್ಷಗಳು ಮತ್ತು 1ನೇ, 2ನೇ ತರಗತಿಯು ಕೂಡಿದ್ದಾಗಿರುತ್ತದೆ. ಮುಂದಿನ 3 ವರ್ಷಗಳು 3ನೇ, 4ನೇ, ಮತ್ತು 5ನೇ ತರಗತಿಗಳಾಗಿರುತ್ತವೆ. ಮುಂದಿನ ೩ವರ್ಷಗಳು 6ನೇ, 7ನೇ, ಮತ್ತು 8ನೇ ತರಗತಿಗಳಾಗಿರುತ್ತವೆ. ಮುಂದಿನ 4ವರ್ಷಗಳು 9ನೇ, 10ನೇ, 11ನೇ ಮತ್ತು 12ನೇ ತರಗತಿಗಳಾಗಿರುತ್ತವೆ. ಮೊದಲಿನ ಮಟ್ಟಕ್ಕೆ ತಳಹದಿಯ ಮಟ್ಟ, ಎರಡನೇಯದಕ್ಕೆ ಪೂರ್ವಸಿದ್ಧತಾ ಮಟ್ಟ, ಮೂರನೇಯದಕ್ಕೆ ಪ್ರಾಥಮಿಕ ಮಟ್ಟ, ನಾಲ್ಕನೇಯದಕ್ಕೆ ಪ್ರೌಢ ಮಟ್ಟವೆಂದು ಕರೆಯಲಾಗಿದೆ. ಈ ರಚನೆಯನ್ನಷ್ಟೇ ಬದಲಾಯಿಸಲಿಲ್ಲ ಜೊತೆಗೆ ಶಿಕ್ಷಣಶಾಸ್ತ್ರವನ್ನು, ಪಠ್ಯಕ್ರಮವನ್ನು ಬದಲಾಯಿಸುವುದು ಅವಶ್ಯಕವಾಗಿತ್ತು. ಇದರ ಉದ್ದೇಶವು ಸದರಿ ಮಟ್ಟದ ಮಗುವಿನ ಕಲಿಕೆಗೆ ಈ ಅಂಶಗಳು ಪೂರಕವಾಗಿರಬೇಕು. ಆಯಾ ಮಟ್ಟಕ್ಕನುಗುಣವಾಗಿ ಶಿಕ್ಷಣಶಾಸ್ತ್ರವು, ಆಯಾ ಮಟ್ಟಕ್ಕನುಗುಣವಾಗಿ ಪಾಠ್ಯಕ್ರಮವು, ಆಯಾ ಮಟ್ಟಕ್ಕನುಗುಣವಾಗಿ ನಮ್ಮ ವಿಷಯಗಳು ಇರುವಂತೆ ಪ್ರಯತ್ನಿಸಲಾಗಿದೆ. ಇಲ್ಲಿ ಉದ್ದೇಶವು ಶಿಶು ಕೇಂದ್ರಿತ ಶಿಕ್ಷಣದ ವ್ಯವಸ್ಥೆಯನ್ನು ತರುವುದಾಗಿದೆ. ಇಲ್ಲಿ ನಾಲ್ಕೂ ಮಟ್ಟಗಳ ಶಿಕ್ಷಣಶಾಸ್ತ್ರ, ಪಾಠ್ಯಕ್ರಮ ಬೇರೆ-ಬೇರೆಯಾಗಿರುತ್ತದೆ.

ತಳಹದಿಯ ಮಟ್ಟದಲ್ಲಿ ಚಟುವಟಿಕೆ ಆಧರಿತ ಬೋಧನೆಗೆ ಮಹತ್ವ ಕೊಡುತ್ತಿದ್ದು ಆಟಕ್ಕೆ ಪ್ರೋತ್ಸಾಹಿಸುವಂತಿರುತ್ತದೆ. ಪೂರ್ವಸಿದ್ಧತಾ ಮಟ್ಟದಲ್ಲಿ ಚಟುವಟಿಕೆ ಹಾಗೂ ಆಟದ ಜೊತೆಗೆ ಸಂಶೋಧನಾತ್ಮಕ ಕಲಿಕೆಗೆ ಹಾಗೂ ಚರ್ಚಾತ್ಮಕ ಕಲಿಕಾ ವಿಧಾನಕ್ಕೆ ಪ್ರೋತ್ಸಾಹವಿರುತ್ತದೆ. ಪ್ರಾಥಮಿಕ ಮಟ್ಟದಲ್ಲಿ ಅರ್ಥೈಸಿಕೊಳ್ಳುವುದಕ್ಕೆ ಮಹತ್ವ ನೀಡಲಾಗಿದೆ ಹಾಗೂ ಅನುಭವದಿಂದ ಕಲಿಕೆಯನ್ನು ಪ್ರೋತ್ಸಾಹಿಸಲಾಗಿದೆ. ಅವರಿಗೆ ಅಮೂರ್ತ ಪರಿಕಲ್ಪನೆಯನ್ನು ಕೊಡಲಾಗುವುದು. ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಪ್ರಾಮುಖ್ಯತೆ ಕೊಡಲಾಗುವುದು. ಪ್ರೌಢಶಾಲಾ ಮಟ್ಟದಲ್ಲಿ ವಿಷಯಾಧಾರಿತ ಕಲಿಕೆ ಇದ್ದು, ಇಲ್ಲಿ ಅವರಿಗೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅವರ ಮಟ್ಟಕ್ಕೆ ತಕ್ಕಂತಹ ಶಿಕ್ಷಣಶಾಸ್ತ್ರ ಹಾಗೂ ಪಠ್ಯಕ್ರಮವನ್ನು ಇಲ್ಲಿ ಅಳವಡಿಸಲಾಗುವುದು. ಹೀಗೆ ನಾಲ್ಕೂ ಮಟ್ಟಗಳಲ್ಲಿ ಬೇರೆ-ಬೇರೆ ಪಠ್ಯಕ್ರಮವಿದ್ದು ಇದು ಆವಶ್ಯಕತೆಗನುಸಾರವಾಗಿ ಇರುವುದಲ್ಲದೇ ಆನಂದ ತುಂಬುವಂತಿರುತ್ತದೆ. ಇದನ್ನು ಮಕ್ಕಳು ಆಸ್ವಾದಿಸುವಂತಿರುತ್ತದೆ. ಕಲಿಕೆಯು ಬರೀ ಕಲಿಕೆಯಾಗಿರದೇ ಆನಂದಭರಿತವೂ ಆಗಿರುತ್ತದೆ. ಈ ರೀತಿಯಾದಂತಹ ಶಿಕ್ಷಣ ನೀತಿಯು ಬರಲಿದ್ದು ಇದು ಬೇರೆ-ಬೇರೆ ರಾಜ್ಯಗಳಲ್ಲಿ ಬೇರೆ-ಬೇರೆಯಾಗಿರುತ್ತದೆ.

ಇದರಲ್ಲಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ನಮ್ಯತೆಯಿರುತ್ತದೆ. ವಿದ್ಯಾರ್ಥಿಗೆ ತನ್ನ ಇಷ್ಟಕ್ಕೆ ತಕ್ಕಂತಹ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಹತ್ತನೇಯ ತರಗತಿಯ ನಂತರ ವಿಜ್ಞಾನ ವಿಷಯ ಓದಬೇಕಾದರೆ ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ ಓದಬೇಕೆಂಬ ನಿರ್ಬಂಧವಿಲ್ಲ. ಅನೇಕಾನೇಕ ವಿಷಯಗಳಿರುತ್ತವೆ. ಮಕ್ಕಳು ತಮಗಿಷ್ಟವಿರುವ, ತಮಗೆ ಆಸಕ್ತಿಯಿರುವ ವಿಷಯಗಳನ್ನು ಆರಿಸಿಕೊಳ್ಳಬಹುದು. ಭಾರತದ ಕಲೆಯನ್ನು ಪ್ರೋತ್ಸಾಹಿಸುವ ಪ್ರಯತ್ನವಿದೆ. ಭಾರತದ ಆಟಗಳಿಗೆ ಹೆಚ್ಚು ಒತ್ತು ಕೊಡಲಾಗುವುದು. ಭಾರತದ ಹಳ್ಳಿಗಳಲ್ಲಿರುವ ಆಟ-ಪಾಠಗಳ ಪರಿಚಯವೂ ಆಗುವುದು ಮತ್ತು ದೈಹಿಕವಾಗಿ ಆರೋಗ್ಯಪೂರ್ಣ ಮತ್ತು ಸದೃಢರಾಗಬೇಕು.

ಇಲ್ಲಿಯವರೆಗೆ ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಮುಖ್ಯ ವಿಷಯಕ್ಕೆ ಹೊರತಾಗಿದ್ದವು. ಇವನ್ನು ಮುಖ್ಯ ವಿಷಯಕ್ಕೆ ಜೋಡಿಸದೇ ಪ್ರತ್ಯೇಕವಾಗಿ ಇಡಲಾಗುತ್ತಿತ್ತು. ಒಬ್ಬ ವಿದ್ಯಾರ್ಥಿಯು ವೃತ್ತಿಪರ ಕೋರ್ಸನ್ನು ಮಾಡಿದರೆ ಕೆಲಸ ಸಿಗುತ್ತಿರಲಿಲ್ಲ. ಗಣಿತ-ವಿಜ್ಞಾನ ವಿಷಯಗಳನ್ನು ಓದಿದ ವಿದ್ಯಾರ್ಥಿಗಳಿಗೆ ಹೆಚ್ಚು ಮಹತ್ವ ಕೊಡಲಾಗುತ್ತಿತ್ತು. ಆದರೆ ಹೊಸ ಶಿಕ್ಷಣ ನೀತಿ ೨೦೨೦ ರಲ್ಲಿ ಎಲ್ಲರಿಗೂ ಸಮಾನ ಪ್ರಾಮುಖ್ಯತೆಯಿದ್ದು ಯಾವುದರಲ್ಲಿಯೂ ಅಂತರವಿರುವುದಿಲ್ಲ. ವಿದ್ಯಾರ್ಥಿಯು ಬೇಕಾದರೆ, ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಲಿ, ವೃತ್ತಿಪರ ಕೋರ್ಸನ್ನು ಕಲಿಯಲಿ, ಆಟ-ಪಾಠಗಳನ್ನು ಆರಿಸಿಕೊಳ್ಳಲಿ ಎಲ್ಲಕ್ಕೂ ಸಮಾನ ಮಹತ್ವವಿರುತ್ತದೆ. ಯಾವುದೇ ಅಂತರವಿರುವುದಿಲ್ಲ. ೬ನೇ ತರಗತಿಯಿಂದಲೇ ವಿದ್ಯಾರ್ಥಿಯು ವೃತ್ತಿಪರ ಕೋರ್ಸನ್ನು ಕಲಿಯಲೇಬೇಕಾಗುತ್ತದೆ. ಇದರಿಂದ ಅವನು ಸ್ಥಾನೀಯ ಉದ್ಯೋಗವನ್ನು ಕಲಿತುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಯನ್ನು ಕಲಾ ವಿದ್ಯಾರ್ಥಿ, ವಿಜ್ಞಾನದ ವಿದ್ಯಾರ್ಥಿ, ವಾಣಿಜ್ಯ ವಿದ್ಯಾರ್ಥಿಯೆಂದು ಬೇರ್ಪಡಿಸಲಾಗುವುದಿಲ್ಲ. ಇಲ್ಲಿ ವಿಜ್ಞಾನ ಓದುವ ವಿದ್ಯಾರ್ಥಿ ಕಲಾ ವಿಷಯವನ್ನು ಓದುವ ವಿದ್ಯಾರ್ಥಿಗಿಂತ ಉತ್ತಮನು ಎಂಬ ಭೇದ-ಭಾವವು ಅಳಿಸಿ ಹೋಗುತ್ತದೆ. ಇಲ್ಲಿ ಯಾವುದೇ ನಿರ್ಬಂಧವಿಲ್ಲದೇ ಒಬ್ಬ ವಿದ್ಯಾರ್ಥಿಯು ತನಗೆ ಆಸಕ್ತಿಯಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಇಲ್ಲಿಯವರೆಗೆ ಅಂಕಪಟ್ಟಿಯಲ್ಲಿ/ಪ್ರಮಾಣಪತ್ರದಲ್ಲಿ ಎಷ್ಟು ಅಂಕಗಳು ಬಂದಿವೆ, ಎಷ್ಟು ದಿನ ಶಾಲೆಗೆ ಬಂದಿರುವರು, ಟೀಕೆ-ಟಿಪ್ಪಣಿ (ರಿಮಾರ್ಕ) ಇವೆಲ್ಲ ನಮೂದಾಗಿರುತ್ತಿದ್ದವು. ಇದು ಮಗುವಿನ ನಿಜವಾದ ಪ್ರಗತಿಯನ್ನು ಹೇಳುವುದಿಲ್ಲ. ಮಗುವಿನ ತಿಳುವಳಿಕೆಯ/ಅರಿವಿನ ಪ್ರಗತಿ ಎಷ್ಟಾಯಿತು? ತಾತ್ವಿಕ ಪ್ರಗತಿ ಎಷ್ಟಾಯಿತು? ಪರಿಕಲ್ಪನಾ ತಿಳುವಳಿಕೆ ಪ್ರಗತಿ ಎಷ್ಟಾಯಿತು? ವಿಮರ್ಶಾತ್ಮಕ ಚಿಂತನೆ ಎಷ್ಟಾಯಿತು? ದರ್ಶನದ, ಮೌಲ್ಯಗಳ ಜ್ಞಾನವನ್ನು ಎಷ್ಟು ಗ್ರಹಣ ಮಾಡಿದರು? ಇದರ ಮಾಹಿತಿಯು ಅದರಲ್ಲಿ ಇರುತ್ತಿರಲಿಲ್ಲ. ಈಗ ೩೬೦ ಡಿಗ್ರಿ ಬಹು ಆಯಾಮಗಳುಳ್ಳ ಸಮಗ್ರ ಪ್ರಗತಿ ಪತ್ರವನ್ನು ಕೊಡಲಾಗುವುದು.ಇದರಲ್ಲಿ ಮೇಲಿನ ಅಂಶಗಳು ಒಳಗೊಂಡಿರುತ್ತವೆ. ಇದರಲ್ಲಿ ಸ್ವ ಮೌಲ್ಯಮಾಪನ, ಸಹಪಾಠಿ ಮೌಲ್ಯಮಾಪನ, ಶಿಕ್ಷಕರಿಂದ ಮೌಲ್ಯಮಾಪನ ಮಾಡಿದ ವಿವರವಿರುತ್ತದೆ. ಈ ಪ್ರಗತಿ ಪತ್ರವು ಪಾಲಕರಿಗೆ ಮಗುವಿನ ಆಸಕ್ತಿಗಳನ್ನು ತಿಳಿದುಕೊಳ್ಳುವ ಒಂದು ಐತಿಹಾಸಿಕ ದಾಖಲೆಯಾಗಿರುತ್ತದೆ. ಮಗುವಿನ ಆಸಕ್ತಿ, ಯಾವ ದಿಶೆಯೆಡೆಗೆ ಹೋಗಬಯಸುತ್ತಾನೆ ಎಂಬ ಬಗ್ಗೆ ತಿಳಿದುಕೊಳ್ಳಲು ಸುಲಭವಾಗಿರುತ್ತದೆ. ಇದು ಮಹತ್ವಪೂರ್ಣ ಹಾಗೂ ಪರಿಣಾಮಕಾರಿಯಾಗಿ ಸಿದ್ಧವಾಗುವುದು.

ಶಾಲೆಯ ಭೌತಿಕ ಸೌಲಭ್ಯಗಳ ಬಗ್ಗೆ, ಕಟ್ಟಡದ ಬಗ್ಗೆ ನೋಡಿದಾಗ ಎಲ್ಲ ಶಾಲೆಗಳೂ ಉತ್ತಮ ಮೂಲ ಸೌಕರ್ಯಗಳನ್ನು ಹೊಂದಿಲ್ಲ. ಕೆಲವು ಶಾಲೆಗಳಲ್ಲಿ ಸಂಪನ್ಮೂಲಗಳ ಅಭಾವವಿದೆ. ಕೆಲವು ಕಡೆ ಶಿಕ್ಷಕರಿದ್ದಾರೆ, ಕೆಲವು ಕಡೆಗಳಲ್ಲಿ ಕೊರತೆಯಿದೆ. ಕೆಲವು ಶಿಕ್ಷಕರು ಸಕ್ಷಮರಾಗಿದ್ದಾರೆ, ಕೆಲವು ಶಿಕ್ಷಕರು ಸಕ್ಷಮರಾಗಿಲ್ಲ, ಕೆಲವು ಕಡೆ ಆಟದ ಮೈದಾನವಿಲ್ಲ, ಕ್ರೀಡಾ ಸಾಮಗ್ರಿಗಳಿಲ್ಲ, ಮತ್ತೆ ಕೆಲವು ಕಡೆ ಗ್ರಂಥಾಲಯವಿಲ್ಲ, ಕಂಪ್ಯೂಟರ್ ಇಲ್ಲ, ಅಧುನಿಕ ತಂತ್ರಜ್ಞಾನವಿಲ್ಲ. ಇಂತಹ ಅನೇಕ ಸಂಪನ್ಮೂಲಗಳ ಕೊರತೆಯು ಇದ್ದು, ಇದನ್ನು ನೀಗಿಸಲು ಒಂದು ಹೊಸ ಯೋಜನೆ ತರಲಾಗಿದೆ. ಅದು ಶಾಲಾ ಸಂಕೀರ್ಣವನ್ನು ನಿರ್ಮಾಣ ಮಾಡುವುದು. ಕೆಲವು ಶಾಲೆಗಳು ಉತ್ತಮ ಸೌಲಭ್ಯಗಳನ್ನು ಹೊಂದಿದ್ದು ಅಲ್ಲಿನ ಕಾರ್ಯಕ್ಷಮತೆಯೂ ಉತ್ತಮವಾಗಿದ್ದರೆ ೫ ರಿಂದ ೧೦ ಕಿ.ಮೀ. ಅಂತರದಲ್ಲಿರುವ ಇತರ ಕೆಲವು ಶಾಲೆಗಳನ್ನು ಅದರೊಂದಿಗೆ ಸೇರಿಸುವುದು. ಇಲ್ಲಿ ಸಂಪನ್ಮೂಲಗಳ, ಶಿಕ್ಷಕರ ಹಾಗೂ ಇತರ ಸೌಲಭ್ಯಗಳ ವಿನಿಮಯದ ಕಾರ್ಯವಾಗುತ್ತದೆ. ಅಲ್ಲದೇ ಇವರು ಕೆಲವು ಪರಿಣಾಮಕಾರಿ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಂಟಿಯಾಗಿ ಮಾಡುತ್ತಾರೆ. ವೈಯಕ್ತಿಕವಾಗಿ ಮಾಡಲಾಗದ ಕೆಲವು ಕಾರ್ಯಕ್ರಮಗಳನ್ನು ಸಂಯುಕ್ತವಾಗಿ ಮಾಡಬಹುದು. ಇದರಿಂದ ಉತ್ತಮ ಶಿಕ್ಷಕರಿಂದ ಹಿಡಿದು ಎಲ್ಲ ಶ್ರೇಷ್ಠ ಸೌಲಭ್ಯಗಳು ಎಲ್ಲ ಶಾಲೆಗಳಿಗೆ ಪ್ರಾಪ್ತವಾಗುತ್ತವೆ. ಈ ಪ್ರಕಾರದ ವ್ಯವಸ್ಥೆಯನ್ನು ಸರಕಾರದ ಸಹಕಾರದಲ್ಲಿ ಮಾಡಬಹುದಾಗಿದೆ ಆದ್ದರಿಂದ ಈ ಪ್ರಕಾರದ ವ್ಯವಸ್ಥೆಯನ್ನು ಮಾಡುವುದರ ಬಗ್ಗೆ ಹೆಚ್ಚು ಒತ್ತು ನೀಡಲಾಯಿತು.

ವಿದ್ಯಾರ್ಥಿಗಳ ಉತ್ತಮ ಪ್ರದರ್ಶನದ ಮೌಲ್ಯಮಾಪನಕ್ಕಾಗಿ ಹಾಗೂ ಅಭಿವೃದ್ಧಿಗಾಗಿ ಇದರಲ್ಲಿ ನಿರಂತರ ಟೈಕಿಂಗ್ ವ್ಯವಸ್ಥೆಯಿರುತ್ತದೆ. ಇದರಿಂದ ಮಕ್ಕಳ ತಿಳುವಳಿಕೆ ಮಟ್ಟವನ್ನು ನಿರಂತರವಾಗಿ ತಿಳಿಯಬಹುದು. ಇದರಿಂದ ಮಕ್ಕಳು ಟ್ಯೂಷನ್ನಿನ ಮೇಲೆ ಸಾಕಷ್ಟು ಹಣ ಖರ್ಚು ಮಾಡುವುದು ತಪ್ಪುತ್ತದೆ. ವಿಷಯಗಳನ್ನು ಅರ್ಥ ಮಾಡಿಕೊಳ್ಳದೇ ಕಂಠಪಾಠ ಮಾಡಿ ಮನನ ಮಾಡುವ ಬದಲು ವಿಷಯವನ್ನು ತಿಳಿದುಕೊಳ್ಳಲು ಪ್ರಾರಂಭಿಸುತ್ತಾನೆ. ಇದರಿಂದ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಯಾಗುವುದು. ಇದರಿಂದ ನಾವು ಬಯಸಿದ ಸಮಗ್ರ ಶಿಕ್ಷಣದ, ಗುಣಮಟ್ಟದ ಶಿಕ್ಷಣದ ಕನಸು ನನಸಾಗುತ್ತದೆ. ಇಂತಹ ಅನೇಕ ಉನ್ನತ ವಿಚಾರಗಳು ಇದರಲ್ಲಿ ಅಡಗಿವೆ.

ಮತ್ತೊಂದು ಪ್ರಮುಖ ವಿಚಾರವು ಸಮಾನತೆ, ಅಂತರ್ಗತ ಶಿಕ್ಷಣ, ಹಾಗೂ ಸಂಸ್ಕಾರಯುತ ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದೆ. ನಾವು ನೀಡುವ ಶಿಕ್ಷಣವು ಎಲ್ಲರಿಗೂ ಲಭ್ಯವಾಗುತ್ತಿಲ್ಲ. ಕೆಲವರಿಗೆ ಸಿಗುತ್ತಿದೆ ಕಲವರಿಗಿಲ್ಲ, ಕೆಲವರಿಗೆ ಲಾಭವಾಗಿದೆ ಕೆಲವರಿಗಿಲ್ಲ. ಆದ್ದರಿಂದ ಎಲ್ಲರಿಗೂ ಸಮಾನ ರೂಪದಲ್ಲಿ ಗುಣಮಟ್ಟದ ಶಿಕ್ಷಣವು ಪ್ರಾಪ್ತವಾಗುವ ಸಮಾನ ಅಧಿಕಾರವು ಸಿಗುವ ವ್ಯವಸ್ಥೆಯಾಗಬೇಕಾಗಿದೆ. ಇದರ ಮೇಲೆ ಹೆಚ್ಚು ಒತ್ತು ನೀಡಲಾಯಿತು. ದೇಶದಲ್ಲಿ ನೆಲೆಸುವ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಶಿಕ್ಷಣವನ್ನು, ಸಂಸ್ಕಾರಪೂರ್ಣ ಶಿಕ್ಷಣವನ್ನು ಸಮಾನ ರೂಪದಲ್ಲಿ ಪಡೆಯುವಂತಾಗಬೇಕೆಂಬ ವ್ಯವಸ್ಥೆಯನ್ನು ಈ ನೀತಿಯಲ್ಲಿ ಮಾಡಲಾಗಿದೆ. ಇದರಲ್ಲಿ ಸಾಮಾಜಿಕ-ಆರ್ಥಿಕ ಅನಾನುಕೂಲತೆಗಳಿರುವ ವ್ಯಕ್ತಿ ಅಥವಾ ಸಮೂಹಗಳನ್ನು ಅನ್ಯ ಸಮೂಹಗಳ ಮೂಲಕ ಸಮಾನತೆ, ಕ್ಷಮತೆ ತರುವ ಪ್ರಯತ್ನವಿದೆ. 2030 ರ ವರೆಗೆ ನಾವು ಶೇಕಡಾ ೧೦೦ರಷ್ಟು ದಾಖಲಾತಿಯನ್ನು ಮಾಡಬಲ್ಲವರಾಗಬೇಕು. ಇದಕ್ಕಾಗಿ ಶಿಕ್ಷಣವು ಸುಲಭವಾಗಬೇಕು, ಸುಲಭವಾಗಿ ಉಪಲಬ್ಧವಾಗಬೇಕು, ಸಮಾನ ಅವಕಾಶಗಳು ಲಭ್ಯವಾಗಬೇಕು ಇಂತಹ ಬಿಂದುಗಳನ್ನು ಈ ಶಿಕ್ಷಣ ನೀತಿಯಲ್ಲಿ ಜೋಡಿಸಲಾಗಿದೆ.

ಇಲ್ಲಿ ನಾವು ಅನೇಕ ಅಸಮಾನತೆಗಳನ್ನು ನೋಡುತ್ತೇವೆ. ಲಿಂಗ ಅಸಮಾನತೆಯಲ್ಲಿ ಪುರುಷರಿಗೆ ಸಿಗುವಷ್ಟು ಅವಕಾಶಗಳು ಮಹಿಳೆಯರಿಗೆ ಸಿಗಲಿಕ್ಕಿಲ್ಲ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಸಮಾನತೆಯೂ ಇರಬಹುದು. ಪರಿಶಿಷ್ಟ ಜಾತಿಗಳಾಗಿರಬಹುದು, ಪರಿಶಿಷ್ಟ ಪಂಗಡಗಳಿರಬಹುದು, ಇತರೆ ಹಿಂದುಳಿದ ವರ್ಗಗಳಿರಬಹುದು ಇವರು ಆರ್ಥಿಕವಾಗಿ ಹಿಂದುಳಿದಿರಬಹುದು ಅವರು ಈ ಸಮಾನತೆಯ ಲಾಭವನ್ನು ಪಡೆಯುವಲ್ಲಿ ವಂಚಿತರಾಗಿರಬಹುದು. ಭೌಗೋಳಿಕವಾಗಿಯೂ ಅಸಮಾನತೆಗಳಿರಬಹುದು. ಕೆಲವರು ಹಳ್ಳಿಗಳಲ್ಲಿ ವಾಸವಾಗಿದ್ದರೆ, ಕೆಲವರು ದೊಡ್ಡ ನಗರಗಳಲ್ಲಿ ವಾಸವಾಗಿರುತ್ತಾರೆ ಮತ್ತೆ ಕೆಲವರು ಕುಗ್ರಾಮಗಳಲ್ಲಿ ವಾಸವಿರುತ್ತಾರೆ. ಇಂತಹ ಸಂದರ್ಭದಲ್ಲಿ ನಗರ ಪ್ರದೇಶದವರು ಹೆಚ್ಚು ಸೌಲಭ್ಯವನ್ನು ಪಡೆಯುತ್ತಾರೆ. ಚಿಕ್ಕ ಹಳ್ಳಿಗಳಲ್ಲಿರುವವರಿಗೆ ಇದು ಲಭ್ಯವಾಗಲಿಕ್ಕಿಲ್ಲ. ಮಾನಸಿಕ ಅಥವಾ ಶಾರೀರಿಕ ಅಂಗವೈಕಲ್ಯದ ಅಸಮಾನತೆಯೂ ಇರಬಹುದು. ಇದು ಭಿನ್ನತೆಯನ್ನು ಹುಟ್ಟುಹಾಕಬಹುದು. ಕೆಲವು ಬಾರಿ ವಲಸೆ ಹೋಗುವುದರಿಂದಲೂ ಅಸಮಾನತೆ ಎದುರಾಗಿ ಸೌಲಭ್ಯಗಳಿಂದ ವಂಚಿತರಾಗಬಹುದು. ಆದ್ದರಿಂದ ಈ ಎಲ್ಲ ಅಸಮಾನತೆಗಳ ಮೇಲೆ ವಿಶೇಷ ಚಿಂತನ ಮಾಡುವ, ಹೆಚ್ಚು ಗಮನ ಕೊಡುವ ಅಗತ್ಯವಿದೆ.

ಈ ಗುಂಪನ್ನು ನಾವು ವಿಶೇಷ ಅನಾನುಕೂಲಗಳ ಗುಂಪು ಎಂದು ಪರಿಗಣಿಸಿದಾಗ ಈ ಗುಂಪಿಗೆ ಸಕಲ ಸೌಲಭ್ಯಗಳನ್ನು, ಹೆಚ್ಚಿನ ಶಿಷ್ಯವೇತನವನ್ನು, ಹಣದ ನೇರ ವರ್ಗಾವಣೆ ಮಾಡುವ ಕಾರ್ಯಗಳಾಗಬೇಕು. ಇವರಿಗಾಗಿ ಪರ್ಯಾಯ ಶಾಲೆಗಳ ವ್ಯವಸ್ಥೆಯಾಗಬೇಕು. ಇವರಿಗಾಗಿ ವಿಶೇಷ ಪ್ರಕಾರದ ಯೋಜನೆಗಳನ್ನು ಜಾರಿಗೆ ತರಬಹುದು. ಇದೆಲ್ಲದರ ಮೂಲ ಉದ್ದೇಶವು ಎಲ್ಲರಿಗೂ ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ಲಭಿಸುವುದೇ ಆಗಿದೆ. ಸಮಾನ ಶಿಕ್ಷಣ ಪಡೆಯಲು ಸೂಚನಾ ಮಾಧ್ಯಮಗಳ ಉಪಯೋಗವಾಗಬೇಕು.

ಸಂಶೋಧನೆಗಳ ಪ್ರಕಾರ ಒಂದು ಮಗುವು ತನ್ನ ಮಾತೃಭಾಷೆಯಲ್ಲಿ ಅತ್ಯಂತ ಆನಂದಭರಿತವಾಗಿ ಶಿಕ್ಷಣ ಪಡೆಯಲು ಬಯಸುತ್ತದೆ. ಸುಲಭವಾಗಿ ಗ್ರಹಿಸುತ್ತದೆ ಹಾಗೂ ಜ್ಞಾನವು ಹೆಚ್ಚುತ್ತದೆ. ಆದ್ದರಿಂದ ೫ನೇ ತರಗತಿಯ ವರೆಗೆ ಶಿಕ್ಷಣವು ಮಾತೃಭಾಷೆಯಲ್ಲಿ ಅಥವಾ ಸ್ಥಾನಿಕ ಭಾಷೆಯಲ್ಲಿಯೇ ದೊರೆಯಬೇಕು. ಇಲ್ಲಿ ಭಾಷೆಯ ಪ್ರಶ್ನೆಯು ಉದ್ಭವಿಸುವುದಿಲ್ಲ, ಬೋಧನಾ ಮಾಧ್ಯಮದ ಮೇಲೆ ಒತ್ತು ನೀಡಲಾಗಿದೆ. ಇಲ್ಲಿಯವರೆಗೆ ಕಂಠಪಾಠ ಮಾಡಿ ವಿಷಯ ಗ್ರಹಿಸುವುದನ್ನು ಮಗುವು ಬಿಡಬೇಕು. ಈ ವಿಕಲ್ಪವು ೮ನೇ ತರಗತಿ ಹಾಗೂ ಉನ್ನತ ಶಿಕ್ಷಣದವರೆಗೂ ಸಿಗುವಂತಾಗಬೇಕು. ಇದರೊಂದಿಗೆ ತ್ರಿಭಾಷಾ ಸೂತ್ರವು ಜಾರಿಯಲ್ಲಿರುತ್ತದೆ. ಇದರಲ್ಲಿ ಎರಡು ಭಾಷೆಗಳು ಭಾರತೀಯ ಭಾಷೆಗಳಾಗಿರಬೇಕು (22 ಭಾಷೆಗಳಲ್ಲಿನ ಯಾವುದಾದರೂ) ಮತ್ತು ಮೂರನೇಯ ಭಾಷೆಯು ಯಾವುದಾದರೂ ಭಾಷೆಯಾಗಿರ ಬಹುದಾಗಿದೆ. ರಾಜ್ಯಗಳು ತಮಗೆ ಇಷ್ಟವಿರುವ ಯಾವುದೇ ಭಾಷೆಗಳನ್ನು ಆಯ್ಕೆಮಾಡಿಕೊಳ್ಳಬಹುದು. ಈ ಶಿಕ್ಷಣ ನೀತಿಯಿಂದ ಆಗುವ ಮತ್ತೊಂದು ಉಪಯೋಗವೆಂದರೆ ಶ್ರೀಮಂತ-ಬಡವ, ಶಿಕ್ಷಿತ-ಅಶಿಕ್ಷಿತ ಪಾಲಕರ ಮಕ್ಕಳು ಉತ್ತಮ ಶಾಲೆಗಳಲ್ಲಿ ಓದಲಾಗುತ್ತಿರಲಿಲ್ಲ. ಕೂಲಿ ಕಾರ್ಮಿಕರ, ರೈತರ ಮಕ್ಕಳು ಹೆಚ್ಚಿನ ಶುಲ್ಕದಿಂದಾಗಿ ಉತ್ತಮ ಶಾಲೆಗಳಿಗೆ ಹೋಗಲಾಗುತ್ತಿರಲಿಲ್ಲ. ಈ ಎಲ್ಲ ಅಸಮಾನತೆಗಳೂ ಬಗೆಹರಿದು ಅವರೂ ಲಾಭವನ್ನು ಪಡೆಯುವಂತಾಗುತ್ತದೆ. ಶಾಲೆಬಿಟ್ಟ ಮಕ್ಕಳ ಸಮಸ್ಯೆಯೂ ಒಂದು ದೊಡ್ಡ ಸಮಸ್ಯೆಯಾಗಿದೆ. 2017 ರಲ್ಲಿ ಶಾಲೆಬಿಟ್ಟ ಮಕ್ಕಳ ಸಂಖ್ಯೆಯು 3.22 ಕೋಟಿಯಷ್ಟಿತ್ತು. ಒಂದೇ ವರ್ಷದಲ್ಲಿ 6 ರಿಂದ 17 ವರ್ಷದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ ಬಿಟ್ಟರು. ಆದರೆ ಶಾಲೆಬಿಟ್ಟ ಮಕ್ಕಳು ಇರಲೇಬಾರದೆಂದು ಒತ್ತಡ ಹೇರಲಾಯಿತು. ಈಗ 2030 ರ ವರೆಗೆ ನಾವು ಶೇಕಡಾ 100 ರಷ್ಟು ದಾಖಲಾತಿ ಮಾಡುತ್ತೇವೆಂದು ಅಂದುಕೊಂಡಿದ್ದರೆ ಈ ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯು ಕಡಿಮೆಯಗುತ್ತಾ ಹೋಗಬೇಕು ಸಂಪೂರ್ಣ ನಿಲ್ಲಬೇಕು. ಇದಕ್ಕಾಗಿ ಆನಂದದಾಯಕ ಶಿಕ್ಷಣ ನೀಡುವುದು, ಪಾಠ್ಯಕ್ರಮವನ್ನು ಆನಂದದಾಯಕವಾಗಿಸುವುದು ಮತ್ತು ಆಸಕ್ತಿದಾಯಕವಾಗಿಸುವ ಕೆಲಸ ಮಾಡಲಾಗಿದೆ. ಜೊತೆಗೆ ನಮ್ಮ ಬಿಸಿ ಊಟದ ವ್ಯವಸ್ಥೆಯನ್ನು ಸುಧಾರಿಸ ಬೇಕಾಗಿದೆ, ಹೆಚ್ಚು ವೃತ್ತಿಪರಗೊಳಿಸಬೇಕಾಗಿದೆ ಹಾಗೂ ಉತ್ತಮ ಗೊಳಿಸಬೇಕಾಗಿದೆ. ಖಾಸಗಿ ಸಂಸ್ಥೆಯಡಿಯಲ್ಲಿ ನಡೆಯುವ ಶಾಲೆಗಳಲ್ಲೂ ಕೂಡ ಸಂಸ್ಥೆಯ ಅಥವಾ ಓಉಔಗಳ ಸಹಕಾರದಿಂದ ಬಿಸಿ ಊಟದ ವ್ಯವಸ್ಥೆಯಾಗಬೇಕಾಗಿದೆ ಎಂದು ಶಿಫಾರಸು ಮಾಡಲಾಗಿದೆ. ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಬೆಳಗಿನ ಉಪಹಾರವನ್ನೂ ಕೊಡುವ ಚಿಂತನೆ ಮಾಡಲಾಗಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಶಿಕ್ಷಕರು ಹೆಚ್ಚು ಗೌರವಿಸಲ್ಪಡಬೇಕು ಅವರು ಹೆಚ್ಚು ಸನ್ಮಾನಿತರಾಗಬೇಕು ಮತ್ತು ಅವರಿಗೆ ಬೆಲೆಕೊಡುವಂತಾಗಬೇಕು. ಅವರು ಹೆಚ್ಚು ಸಶಕ್ತರಾಗಬೇಕು. ಶಿಕ್ಷಕರನ್ನು ಹೆಚ್ಚು ಸಾಮರ್ಥ್ಯರನ್ನಾಗಿ ಮಾಡಬೇಕಾಗಿದೆ. ನಮ್ಮ ಸಮಾಜ, ನಮ್ಮ ದೇಶ, ನಮ್ಮ ಸರಕಾರವು ಶಿಕ್ಷಕರಿಗೆ ಗುರುವಿನ ಗೌರವವನ್ನು ಕೊಡಬೇಕೆಂಬ ಅಂಶವನ್ನು ಇದರಲ್ಲಿ ಸೇರಿಸಲಾಗಿದೆ. ಶಿಕ್ಷಕರನ್ನು ಅನಾವಶ್ಯಕವಾಗಿ ವರ್ಗಾವಣೆ ಮಾಡಬಾರದು. ಉತ್ತಮ ಶಿಕ್ಷಕರಿಗೆ ಬಡ್ತಿ ನೀಡಬೇಕು. ಫಾಸ್ಟ್ ಟ್ರ್ಯಾಕ್ ಪ್ರಮೋಷನ್ನಿನ ಯೋಜನೆಗಳಿರಬೇಕು. ಅವರ ಸೇವಾ ಪರಿಸ್ಥಿತಿಗಳು ಸುಧಾರಿಸಬೇಕು. ಅವರಿಗಾಗಿ ಉತ್ತಮ ಕೊಡುಗೆಗಳಿರಬೇಕು. ಅತಿಥಿ ಶಿಕ್ಷಕರ ಬದಲಾಗಿ ಶಾಶ್ವತ ಶಿಕ್ಷಕರನ್ನು ನೇಮಿಸಿಕೊಳ್ಳಬೇಕಾಗಿದೆ. 2030 ರಲ್ಲಿ ಅಂಗನವಾಡಿಯಿಂದ ಹಿಡಿದು 12 ನೇ ತರಗತಿಯವರೆಗೆ ಎಲ್ಲ ಶಿಕ್ಷಕರು 4 ವರ್ಷಗಳ ಡಿಗ್ರಿಯನ್ನು ಪಾಸುಮಾಡಿದವರೇ ಆಗಿರುತ್ತಾರೆ. 4 ವರ್ಷಗಳ ಡಿಗ್ರಿಯನ್ನು ಮುಗಿಸದವರು ಶಿಕ್ಷಕರಾಗಲು ಅರ್ಹರಾಗಿರುವುದಿಲ್ಲ. ಎಲ್ಲ ಹಂತದ ಮಕ್ಕಳಿಗೂ ಉತ್ತಮ ಶಿಕ್ಷಿತ ಶಿಕ್ಷಿತರೇ ಲಭ್ಯವಾಗುವುದು ಇದರ ಉದ್ದೇಶವಾಗಿದೆ. ಶಿಕ್ಷಕರ ನಿರಂತರ ವೃತ್ತಿ ಅಭಿವೃದ್ಧಿಯನ್ನು ಮಾಡಬೇಕಾಗಿದೆ.

Highslide for Wordpress Plugin