ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಶಾಸಕ ನೆಹರು ಓಲೇಕಾರ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಜಿಲ್ಲಾ ಘಟಕ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-2019ರ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂರರಿಂದ ಹದಿನೆಂಟು ವರ್ಷ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಉದ್ದೇಶವನ್ನು ಹೊಸ ಶಿಕ್ಷಣ ನೀತಿ ಹೊಂದಿದೆ. ಜ್ಞಾನ ಮಾತ್ರವಲ್ಲದೆ ಸ್ವಾವಲಂಬಿ ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು ಕಲಿಸಲು ಪ್ರೇರಕವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಮಾತನಾಡಿ ಭಾರತ ಕೇಂದ್ರಿತ ವ್ಯವಸ್ಥೆಯೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಮಾಜವನ್ನು ಒಂದು ಸುಸ್ಥಿತ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ್ದಾಗಿದೆ. ವಿಶ್ವದ ಇಂದಿನ ಅಗತ್ಯಗಳಿಗೆ ತಕ್ಕಂತೆ ನಮ್ಮ ಶಿಕ್ಷಣ ಕ್ರಮಗಳಲ್ಲಿ ಬದಲಾವಣೆಯಾಗಬೇಕಾದ ಅವಶ್ಯವಿತ್ತು ಎಂದು ತಿಳಿಸಿದರು.
ವಿಶೇಷ ಉಪನ್ಯಾಸಕ ಸಂದೀಪ ಬೂದಿಹಾಳ ಮಾತನಾಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಿದೆ. ಶಿಕ್ಷಣ ಎಂಬುದು ಕೇವಲ ಹೂಡಿಕೆಯಾಗಬಾರದು. ಇದನ್ನು ಕೇವಲ ವ್ಯವಹಾರ ದೃಷ್ಟಿಯಿಂದ ನೋಡದೆ ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ತಯಾರಿಸುವ ದೃಷ್ಟಿಯಿಂದ ನೋಡಬೇಕು. ಈ ದೃಷ್ಟಿಯಿಂದ ಹೊಸ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗಿದೆ ಎಂದರು.
ಡಿಡಿಪಿಐ ಅಂದಾನೆಪ್ಪ ವಡಗೇರಿ ಮಾತನಾಡಿ, ಶಿಕ್ಷಣದ ಸಮಗ್ರ ಬದಲಾವಣೆ ಪೂರ್ವ ಪ್ರಾಥಮಿಕ ಹಂತದಿಂದಲೇ ಪ್ರಾರಂಭಗೊಳ್ಳುವುದು ಉತ್ತಮ. ಹೊಸ ಶಿಕ್ಷಣ ನೀತಿಯಿಂದ ದೇಶದಲ್ಲಿ ಬಹಳಷ್ಟು ಬದಲಾವಣೆ ತರಲು ಅವಕಾಶವಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಜಾಯಿತಿ ಸದಸ್ಯ ಸಿದ್ದರಾಜ ಕಲಕೋಟಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಸ್.ಎಸ್ ನಿಸ್ಸಿಮಗೌಡ್ರ, ಕೆ.ಪಿ ಬ್ಯಾಡಗಿ, ಪುಕಜೆ ಓಲಾಕಾರ್, ನಾಗರಾಜ ದ್ಯಾಮನಕೊಪ್ಪ, ಎಚ್‌ಡಿ ಗಂಟೇರ ಇದ್ದರು. ಮಲ್ಲಿಕಾರ್ಜುನ ಶಾಂತಗಿರಿ ಕಾರ್ಯಕ್ರಮ ನಿರೂಪಿಸಿದರು.