ಕಾರ್‍ಯಕಾರಿಣಿ ಮತ್ತು ಸಾಮಾನ್ಯ ಸಭೆ ವರದಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್‍ಯಕಾರಿಣಿ ಸದಸ್ಯರ ಸಭೆ ಮತ್ತು ಸಾಮಾನ್ಯ ಸಭೆ ದಿನಾಂಕ 30-11-2020 ರ ಭಾನುವಾರದಂದು ಬೆಂಗಳೂರಿನ ಕೇಂದ್ರ ಕಛೇರಿ ಯಾದವಸೃತಿ, ಶೇಷಾದ್ರಿಪುರಂನಲ್ಲಿ ಜರುಗಿತು.

ಈ ಕಾರ್‍ಯಕ್ರಮಕ್ಕೆ ಎ.ಬಿ.ಆರ್.ಎಸ್.ಎಮ್ ನ ಸಂಘಟನಾ ಮಂತ್ರಿಗಳಾದ ಶ್ರೀಯುತ ಮಹೇಂದ್ರ ಕಪೂರ್‌ರವರು, ಎ.ಬಿ.ಆರ್.ಎಸ್.ಎಮ್. ನ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀಯುತ ಕೃ ನರಹರಿಯವರು, ರಾಷ್ಟ್ರೀಯ ಪ್ರಧಾನ ಕಾರ್‍ಯದರ್ಶಿಗಳಾದ ಶ್ರೀಯುತ ಶಿವಾನಂದ ಸಿಂಧನಕೇರರವರು, ರಾಜ್ಯಾಧ್ಯಕ್ಷರು, ಕಾರ್‍ಯದರ್ಶಿಗಳು, 17 ಜಿಲ್ಲೆಗಳಿಂದ ಜಿಲ್ಲಾ ಪ್ರತಿನಿಧಿಗಳು ಭಾಗವಹಿಸಿದ್ದರು. ಶಾರದೆಯ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡುವುದರೊಂದಿಗೆ ಕಾರ್‍ಯಕ್ರಮದ ಶುಭಾರಂಭವಾಯಿತು.

ಸರಸ್ವತಿವಂದನೆಯನ್ನು ರಾಜ್ಯದ ಉಪಾಧ್ಯಕ್ಷರಾದ ಕೊಟ್ರಪ್ಪನವರು ಮಾಡಿದರು. ಸಭಾ ಉಪಸ್ಥಿತರನ್ನು ಸಹ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಂಗಾಧರ್ ಆಚಾರಿಯವರು ಸ್ವಾಗತಿಸಿದರು. ಕಾರ್‍ಯದರ್ಶಿಗಳ ವರದಿಯನ್ನು ಮಂಡನೆ ಮಾಡಿ, ಒಪ್ಪಿಗೆ ಪಡೆಯಲಾಯಿತು. ವರ್ಷದ ವಾರ್ಷಿಕ ಯೋಜನೆಯನ್ನು ಶ್ರೀಯುತ ಜೆ.ಎಂ. ಜೋಷಿಯವರು ಸಭೆಯ ಮುಂದೆ ಪ್ರಸ್ತುತ ಪಡಿಸಿ, ಒಪ್ಪಿಗೆಯನ್ನು ಪಡೆದರು. ನಂತರದ ಅವಧಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದಿರುವ ಕಾರ್‍ಯಕ್ರಮಗಳ ಜಿಲ್ಲಾವಾರು ವರದಿಯನ್ನು ಜಿಲ್ಲಾಧ್ಯಕ್ಷರು ನೀಡಿದರು. ಶ್ರೀಯುತ ಶಿವಾನಂದ ಸಿಂಧನಕೇರಾರವರು ಮುಂಬರುವ ಕಾರ್‍ಯಕ್ರಮಗಳ ಬಗ್ಗೆ ಸಭೆಗೆ ತಿಳಿಸಿದರು.

ನಂತರ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ನೂತನ ಶಿಕ್ಷಕ ಪ್ರತಿನಿಧಿಗಳನ್ನು ಕಾರ್‍ಯಕ್ರಮಕ್ಕೆ ಸ್ವಾಗತಿಸಲಾಯಿತು. ನಂತರ ದಕ್ಷಿಣ ಕ್ಷೇತ್ರಿಯ ಪ್ರಮುಖರಾದ ಶ್ರೀಯುತ ಬಾಲಕೃಷ್ಣ ಭಟ್‌ರವರು ಶಿಕ್ಷಕ ಸಂಘದ ಕಾರ್‍ಯಚಟುವಟಿಕೆಗಳ ವಿವರವನ್ನು ನೂತನ ಪ್ರತಿನಿಧಿಗಳಿಗೆ ನೀಡಿದರು. ನೂತನವಾಗಿ ಆಯ್ಕೆಯಾಗಿರುವ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಎ.ಬಿ.ಆರ್.ಎಮ್.ಎಸ್.ನ ಸಂಘಟನಾ ಮಂತ್ರಿಗಳಾದ ಶ್ರೀಯುತ ಮಹೇಂದ್ರಕಪೂರ್‌ರವರು ಶಿಕ್ಷಕ ಪ್ರತಿನಿಧಿಗಳು ಶಿಕ್ಷಕ ಸಂಘದ ಜೊತೆ ಹೊಂದಾಣಿಕೆಯಿಂದ ಸೇವೆ ಮಾಡಬೇಕು, ದೇಶದ ವಿವಿಧ ಭಾಗಗಳಲ್ಲಿ ಪ್ರತಿನಿಧಿಗಳು ಸಂಘಟನೆಯ ಜೊತೆಜೊತೆಯಾಗಿ ಹೇಗೆ ಸೇವೆ ಸಲ್ಲಿಸುತ್ತಿದ್ದಾರೆಂಬುದನ್ನು ಸವಿವರವಾಗಿ ಸಭೆಗೆ ತಿಳಿಸಿದರು. ಕೊನೆಯದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರಿಯ ಕಾರ್‍ಯವಾಹರಾದಂತಹ ಶ್ರೀಯುತ ತಿಪ್ಪೇಸ್ವಾಮಿಯವರು ಶಿಕ್ಷಕ ಸಂಘಟನೆಯ ಪ್ರಮುಖರು ಹಾಗು ಶಿಕ್ಷಕ ಪ್ರತಿನಿಧಿಗಳು ಸಮಾಜದೆದುರಿಗೆ ಹೇಗಿರಬೇಕು? ಸಮಾಜ ಇವರಿಂದ ಬಯಸುವುದೇನು? ಶೈಕ್ಷಣಿಕ ಕ್ಷೇತ್ರದ ಬದಲಾವಣೆಯಲ್ಲಿ ಶಿಕ್ಷಕ ಪ್ರತಿನಿಧಿಗಳು ಮತ್ತು ಶಿಕ್ಷಕ ಸಂಘಟನೆಯ ಕಾರ್‍ಯಕರ್ತರ ಪಾತ್ರವೇನೆಂಬುದನ್ನು ಸಭೆಗೆ ತಿಳಿಸಿದರು. ನಂತರ ವಂದನಾರ್ಪಣೆಯೊಂದಿಗೆ ಆ ಅವಧಿ ಸಮಾಪ್ತಿಯಾಯಿತು.

ಮಧ್ಯಾಹ್ನದ ಊಟದ ನಂತರ ಶಿಕ್ಷಕ ಸಂಘಟನೆಯ ಆನ್‌ಲೈನ್ ಸದಸ್ಯತ್ವ ಹೇಗೆ ಪಡೆಯಬೇಕೆಂಬುದರ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಲಾಯಿತು. ಕೋವಿಡ್ ಸಂಧರ್ಭದಲ್ಲಿಯೂ ಸಹ ಸಂಘಟನೆ ಸಕ್ರಿಯವಾಗಿ ಕಾರ್‍ಯನಿರ್ವಹಿಸುತ್ತಿದ್ದು, ಸಂಘಟನೆಗೆ ಸದಸ್ಯತ್ವವೇ ಬಲವಾಗಿರುವುದರಿಂದ ಆನ್ಲೈನ್ ಸದಸ್ಯತ್ವದಲ್ಲಿ ಸಕ್ರಿಯವಾಗಿ ಕಾರ್‍ಯಕರ್ತರು ಭಾಗವಹಿಸಲು ಕರೆ ನೀಡಲಾಯಿತು. ನಂತರದ ಸಮಾರೋಪ ಸಮಾರಂಭದಲ್ಲಿ ಶ್ರೀಯುತ ಮಹೇಂದ್ರ ಕಪೂರ್‌ರವರು ದೇಶದ ಅನ್ಯ ರಾಜ್ಯದಲ್ಲಿ ಸದಸ್ಯತ್ವ ಹೇಗೆ ನಡೆಯುತ್ತಿದೆ, ಚೈತನ್ಯ ತುಂಬಿದ ಸದಸ್ಯತ್ವ ಮಾಡುವುದು ಹೇಗೆ ಎಂದು ಸಭೆಗೆ ತಿಳಿಸಿದರು.

ನಂತರದ ಅವಧಿಯಲ್ಲಿ ಸಂಘಟನೆಯ ಕಾರ್‍ಯಾಧ್ಯಕ್ಷರಾದ ಶ್ರೀಯುತ ಅರುಣ್‌ಶಹಾಪೂರ್‌ರವರು ಶಿಕ್ಷಕರ ಮುಂದಿರುವ ಸಮಸ್ಯೆಗಳು ಹಾಗೂ ಸಮಾಧಾನಗಳೇನು ಎಂಬುದರ ಬಗ್ಗೆ ಸವಿವರ ಚರ್ಚೆ ನಡೆಯಿತು. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆಯೂ ವಿವರ ನೀಡಿದರು. ಶಿಕ್ಷಕರು ತಮಗೆ ಬಂದಿರುವ ಸಮಸ್ಯೆಗಳನ್ನು ಯಾವ ರೀತಿಯಾಗಿ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂಬುದರ ಬಗ್ಗೆಯೂ ವಿವರ ನೀಡಿದರು.

ನಂತರ ಶಾಂತಿಮಂತ್ರದೊಂದಿಗೆ ಕಾರ್‍ಯಕಾರಿಣಿ ಮುಕ್ತಾಯಗೊಂಡಿತು.

Highslide for Wordpress Plugin