ಹುಬ್ಬಳ್ಳಿ: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಕಲಿಸುವಂತಾಗಬೇಕೆಂದು ಆರ್‌ಎಸ್‌ಎಸ್‌ನ ಪ್ರಾಂತ ಕಾರ್ಯಕಾರಣಿ ಸದಸ್ಯರಾದ ರವೀಂದ್ರ ಜೀ ಹೇಳಿದರು.
ನಗರದ ಪಿ.ಸಿ ಜಾಬಿನ್ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ತವ್ಯಬೋಧ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾಷಣ ಮಾಡಿದರು. ವಿದ್ಯಾರ್ಥಿಗಳಿಗೆ ಮಾನ-ಅಪಮಾನ, ಲಾಭ-ನಷ್ಟದ ಬಗ್ಗೆ ಅನುಭವವಾಗುವಂತೆ ಪಾಲಕರು ಆರಂಭದ ಹತ್ತು ವರ್ಷಗಳೊಳಗೆ ತರಬೇತಿ ನೀಡಬೇಕು ಎಂದು ಹೇಳಿದರು.
ಇಂದಿನ ದಿನಮಾನದಲ್ಲಿ ಶ್ರೇಣಿಕೃತ ಸಮಾಜ, ವರ್ಗಭೇಧಗಳಿಂದ ಸಮಾಜ ಹಾಳಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಅಷ್ಟೆ ಅಲ್ಲದೇ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಬೇಕು, ಶರೀರದ ಶಕ್ತಿ ಬೆಳೆಸುವ ಸಾಮರ್ಥ್ಯದ ಜೊತೆಗೆ ಬೌದ್ಧಿಕ ಶಕ್ತಿಯನ್ನು ಅವರಲ್ಲಿ ಹೆಚ್ಚಿಸಬೇಕು ಎಂದು ಹೇಳಿದರು.
ಮಕ್ಕಳಿಗೆ ಸತ್ಯ ಹೇಳಲು ಧೈರ್ಯವಿಲ್ಲದೇ, ಸುಳ್ಳು ಹೇಳಲು ಮನಸ್ಸಿಲ್ಲದ, ಸಂಧರ್ಭಗಳನ್ನು ಪಾಲಕರು ಅವರುಗಳ ಮಕ್ಕಳ ಬಾಲ್ಯದಲ್ಲಿ ಸೃಷ್ಟಿಸಬಾರದು. ಮಕ್ಕಳಿಗೆ ಸತ್ಯವನ್ನು ಧೈರ್ಯದಿಂದ ಹೇಳುವಂತೆ ಯಾವಾಗಲೂ ಪ್ರೇರೇಪಿಸಬೇಕು ಎಂದು ಹೇಳಿದರು. ಕೋಟಿ ಕೋಟಿ ಹಣ ಲಪಟಾಯಿಸಿದರಷ್ಟೆ ಭ್ರಷ್ಟಾಚಾರವಲ್ಲ 10 ರೂ. ಬಸ್‌ನಲ್ಲಿ ಟಿಕೇಟ್ ತೆಗೆಸದಿದ್ದರೂ ಅದು ಭ್ರಷ್ಟಾಚಾರವಾಗುತ್ತದೆ ಎಂಬ ಅರಿವನ್ನು ಶಿಕ್ಷಕರು ಮತ್ತು ಪಾಲಕರು ಸಮಾಜಕ್ಕೆ ತಿಳಿಸಬೇಕಾಗಿದೆ ಎಂದರು.
ಶಿಕ್ಷಣವನ್ನು ಯಾರಿಂದ ಯಾರು ಬೇಕಾದರೂ ಕಲಿಯಬಹುದು. ಆದರೆ ಸಂಸ್ಕಾರವನ್ನು ಯಾರಿಂದ ಯಾರು ಕಲಿಯಲಿಕ್ಕೆ ಆಗಲ್ಲ, ಅದು ಮೇಲ್ವರ್ಗದಿಂದ ಕೆಳವರ್ಗದವರೆಗೆ ಸಂಸ್ಕಾರದ ಅರಿವು ಮೂಡಿಸಬೇಕಾಗಿದೆ ಎಂದರು. ಶಕ್ತಿಯ ಜೊತೆಜೊತೆಗೆ ಶೀಲವನ್ನು ಮಕ್ಕಳಲ್ಲಿ ಬೆಳಸಬೇಕು, ಗುಣ, ಶೀಲ, ಸಂಸ್ಕಾರ ಎನ್ನುವುದು ಕಿರಿಯರಿಂದ ಹಿರಿಯರು-ಪಾಲಕರು ನಿರೀಕ್ಷೆ ಮಾಡುತ್ತಾರೆ. ಆದರೆ ಇವು ಉತ್ಪಾದನೆಯಲ್ಲ. ಒಳ್ಳೆಯಗುಣ, ಶಿಸ್ತು, ಪ್ರಾಮಾಣಿಕತೆ ಎನ್ನುವುದು ಹಿರಿಯರಿಂದ ಬರುವಂತಹದ್ದು ಎಂದು ತಿಳಿಸಿದರು.
ಪ್ರತಿಯೊಬ್ಬರಲ್ಲಿ ಜವಾಬ್ದಾರಿ, ರಾಷ್ಟ್ರೀಯತೆಯನ್ನು ಹೆಚ್ಚಿಸುವಂತಹ ಕಾರ್ಯವನ್ನು ಕೆಆರ್‌ಎಂಎಸ್‌ಎಸ್‌ನಂತಹ ಸಂಘಟನೆಗಳು ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರತಿಯೊಬ್ಬರು ತಮ್ಮ-ತಮ್ಮ ಕರ್ತವ್ಯದ ಬಗ್ಗೆ ಎಚ್ಚರ ವಹಿಸುವುದರ ಜೊತೆಗೆ ಭಾರತದ ರಾಷ್ಟ್ರೀಯತೆಗೆ ಆಧಾರ ಈ ದೇಶದ ಸಂಸ್ಕೃತಿ ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು. ಶಿಕ್ಷಣ ಸಂಸ್ಕೃತಿಯಲ್ಲಿ ಬದಲಾವಣೆಯಾಗಿದ್ದು, ರಾಷ್ಟ್ರೀಯತೆ ಎನ್ನುವುದು ಭಾವನಾತ್ಮಕವಾಗಿದ್ದರೆ ಮತ್ತು ವೈಚಾರಿಕತೆಯಲ್ಲಿದ್ದರೆ ಸಾಲದು, ಅದು ಕಾರ್ಯರೂಪದಲ್ಲಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಲಿಂಗರಾಜ ಹೊರಕೇರಿ ಅಧ್ಯಕ್ಷೀಯ ಭಾಷಣ ಮಾಡಿದರು, ಡಾ. ಗುರುನಾಥ ಬಡಿಗೇರ ಪ್ರಾಸ್ತಾವಿಕ ನುಡಿ ನುಡಿದರು, ಪ್ರೊ.ಎಸ್. ಟಿ. ಮಿಶಿ, ಕೆಆರ್‌ಎಂಎಸ್‌ಎಸ್‌ನ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಉಪಸ್ಥಿತರಿದ್ದರು. ಬಸವರಾಜ ದೇವರಮನಿ ಶಿಕ್ಷಕರಿಗೆ ಸಂಕಲ್ಪ ಭೋದನೆ ಮಾಡಿದರು, ಬೀರೇಶ್ ತಿರಕಪ್ಪನವರ ಶಾಂತಿಮಂತ್ರ ಹೇಳಿದರು. ವಿವಿಧ ಶಾಲಾ ಕಾಲೇಜುಗಳ ಬೋಧಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶ್ರೀಮತಿ ಅನಸೂಯಾ ಮತ್ತು ಜ್ಯೋತಿ ಕದಂ ಸರಸ್ವತಿ ವಂದನೆ ಮಾಡಿದರು, ಶ್ರೀಧರ ಪಾಟೀಲ ಕುಲಕರ್ಣಿ ಸ್ವಾಗತ ಪರಿಚಯ ಮಾಡಿದರು, ಡಾ. ಸಿ.ವಿ ಮರಿದೇವರಮಠ ನಿರೂಪಿಸಿದರು, ಡಾ. ರಾಜಕುಮಾರ ಪಾಟೀಲ ವಂದಿಸಿದರು.