ಸಂಕಲ್ಪ ದಿನ – ಬೆಂಗಳೂರು ಉತ್ತರ ಜಿಲ್ಲೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ದಿನಾಂಕ 23-1-2021 ಶನಿವಾರ ಮಧ್ಯಾಹ್ನ 2 ಗಂಟೆಗೆ ರಾಜ್ಯದ ಕೇಂದ್ರ ಕಛೇರಿ ಯಾದವಸ್ಮೃತಿಯಲ್ಲಿ ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಷ್ ಚಂದ್ರಬೋಸ್‌ರವರ ತತ್ವ, ಸಿದ್ಧಾಂತಗಳ ಸ್ಮರಣೆಗಾಗಿ ಸಂಕಲ್ಪ ದಿನವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀಮತಿ ಸೀತಾಭಟ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಬೆಂಗಳೂರು ಉತ್ತರ ವಲಯ-3ರ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕೂಡಿಗಿರವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ಕ.ರಾ.ಮಾ.ಶಿ ಸಂಘದ ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ ಜೋಷಿರವರು ಸಂಕಲ್ಪ ದಿನದ ಮಹತ್ವ ಮತ್ತು ಸಂಘದ ಕಾರ್ಯಚಟುವಟಿಕೆಗಳನ್ನು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ಸಂಘದ ಹಿರಿಯರು, ಮಾರ್ಗದರ್ಶಕರು ಹಾಗೂ ಕಾರ್ಯಾಲಯ ಪ್ರಮುಖರೂ ಆದ ಶ್ರೀ ಜಿ.ಎಸ್ ಕೃಷ್ಣಮೂರ್ತಿರವರು ಮುಖ್ಯ ಭಾಷಣಕಾರರಾಗಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಹೇಗೆ ಉಳಿಸಿ, ಬೆಳೆಸಿ ದೇಶದಲ್ಲಿ ಬದಲಾವಣೆ ತರಬೇಕಾದರೆ ಅದು ಶಿಕ್ಷಣ ಮತ್ತು ಶಿಕ್ಷಕರ ಮುಖಾಂತರ ಎಂದು ಮನದಟ್ಟು ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕ.ರಾ.ಮಾ.ಶಿ. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲರು ಶಿಕ್ಷಕರು ತಮ್ಮ ಕರ್ತವ್ಯದ ಮುಖೇನ ಸಮಾಜಕ್ಕೆ ಹೇಗೆ ಮಾದರಿಯಾಗಬೇಕು ಎಂಬುದನ್ನು ತಿಳಿಸಿದರು. ಬೆಂಗಳೂರು ಉತ್ತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಂಗಪ್ಪರವರು ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಎಸ್. ಜಿ. ತಾಂಬೆ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ಬೆಂಗಳೂರು ಉತ್ತರವಲಯ-೩ರ ಕಾರ್ಯದರ್ಶಿಯಾದ ಶ್ರೀ ಎಂ.ವಿ ಗಂಗಾಧರ, ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಸುಮಂಗಲಾ ಹೆಗಡೆಯವರು ಶಾಂತಿ ಮಂತ್ರವನ್ನು ಹೇಳುವುದರ ಮೂಲಕ ಕಾರ್ಯಕ್ರಮ ಸಂಪನ್ನವಾಯಿತು.

ವರದಿ : ಶ್ರೀ ಎಂ.ವಿ ಗಂಗಾಧರ್, ಕಾರ್ಯದರ್ಶಿ, ಬೆಂಗಳೂರು

Highslide for Wordpress Plugin