ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಅಲ್ಲಿನ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಕರ್ತವ್ಯವಿದೆಯೆಂದು ಬೋಧನಾ ಕಾರ್ಯ ಮಾಡಿ, ಪಠ್ಯ ಮುಗಿಸುವುದಲ್ಲ. ಬದಲಿಗೆ ಪರಿಣಾಮಕಾರಿಯಾದ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು, ವಿದ್ಯಾರ್ಥಿಗಳ ಮಟ್ಟಕ್ಕಿಳಿದು, ಸಂಪೂರ್ಣವಾಗಿ ಬೋಧನೆಯಲ್ಲಿ ತಲ್ಲಿನರಾಗಿ ಪಾಠ ಮಾಡಿದರೆ, ಅದು ವಿದ್ಯಾರ್ಥಿಗಳಿಗೆ ಮನ ಮುಟ್ಟಲು ಸಾಧ್ಯವಾಗುತ್ತದೆಯೆಂದು ಸಂಪನ್ಮೂಲ ಶಿಕ್ಷಕ ಶಿವಕಾಂತ ಚಿಮ್ಮಾ ಹೇಳಿದರು.
ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘವು ನಗರದ ಆಳಂದ ರಸ್ತೆಯ ಶೆಟ್ಟಿಕಾಂಪ್ಲೆಕ್ಸ್ನ ಎದುರುಗಡೆಯಿರುವ ಶಾರದಾ ವಿವೇಕ ಮಹಿಳಾ ಪದವಿ ಕಾಲೇಜ್ನಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜಯಂತಿ ಹಾಗೂ ಕರ್ತವ್ಯ ಸಂಕಲ್ಪ ದಿವಸವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿ ಇಡೀ ಯುವ ಸಮೂಹದ ಚೇತನಾ ಶಕ್ತಿಯಾದ ವಿವೇಕಾನಂದರವರ ಸಂದೇಶವನ್ನು ಎಲ್ಲಾ ಯುವಕರು ಅಳವಡಿಸಿಕೊಳ್ಳಬೇಕು. ನೇತಾಜಿ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಮಹನೀಯರ ಬಗ್ಗೆ ತಿಳಿದುಕೊಂಡು ನಿಮ್ಮ ಜೀವನದಲ್ಲಿ ಅವರ ತತ್ತ್ವಗಳನ್ನು ಅನುಷ್ಠಾನಗೊಳಿಸಿ ಉನ್ನತವಾದ ಸಾಧನೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಂಕಲ್ಪದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ವಿದ್ಯಾರ್ಥಿಗಳಿಗೆ ಮಹನೀಯರ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಸಂಜೀವಕುಮಾರ ಪಾಟೀಲ, ಕಾಲೇಜಿನ ಪ್ರಾಚಾರ್ಯ ಹಣಮಂತರಾಯ ಗುಡ್ಡೇವಾಡಿ ಉಪನ್ಯಾಸಕರಾದ ಸಂತೋಷಕುಮಾರ ಕಣ್ಣಿ, ಚನ್ನವೀರಪ್ಪ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.