ರಾಷ್ಟ್ರೀಯ ಶಿಕ್ಷಣ ನೀತಿ-ಒಂದು ವಿಚಾರ ಸಂಕಿರಣ

ಈಗಿನ ಶಿಕ್ಷಣ ಪದ್ಧತಿಯಲ್ಲಿ ನಮ್ಮ ಮಕ್ಕಳು ಜ್ಞಾನಕ್ಕಾಗಿ ಓದುವುದಕ್ಕಿಂತ ಉದ್ಯೋಗಕ್ಕಾಗಿಯೇ ಓದುತ್ತಾರೆ. ಇದೇ ಕಾರಣಕ್ಕೆ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ಬದಲಾಯಿಸುವ ಅಂಶಗಳು ಹೊಸ ಶಿಕ್ಷಣ ನೀತಿಯಲ್ಲಿವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಹಾಗೂ ಪಪೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಶಿಕ್ಷಣ ನೀತಿ -2020’ ಕುರಿತ ವಿಚಾರ ಸಂಕಿರಣ ಹಾಗೂ ಮುಖ್ಯಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶವನ್ನು ಉತ್ಕೃಷ್ಟದ ಕಡೆಗೆ ಕೊಂಡೊಯ್ಯವ ಮತ್ತು ಮಕ್ಕಳಲ್ಲಿ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಶುವಿಹಾರ ಗುರುಕುಲ ಮಾದರಿಯಂತೆ ಮಕ್ಕಳ ಮೇಲೆ ಒತ್ತಡ ಹೇರದೆ ಅವರಾಗಿಯೇ ರಾಷ್ಟ್ರೀಯತೆ ಕಲಿಯುವಂತ ಹಲವು ಮಹತ್ವದ ಅಂಶಗಳಿವೆ. ಇದೊಂದು ಮಾದರಿ ನೀತಿ’ ಎಂದರು.

‘ಇದರ ಮಹತ್ವ ಅರಿತಿರುವ ಪ್ರಧಾನಿ ಮೋದಿ ಅವರು ಈಗಾಗಲೇ ಬಜೆಟ್‌ನಲ್ಲಿ ಶಿಕ್ಷಣಕ್ಕೆ ನೀಡುತ್ತಿದ್ದ ಅನುದಾನವನ್ನು ಶೇ. 6 ರಷ್ಟು ಹೆಚ್ಚಿಸಿದ್ದಾರೆ. ಈ ಮೂಲಕ ಶಿಕ್ಷಣ ಸುಧಾರಣೆ ಆರಂಭವಾಗಿದೆ’ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆಗೆ ಶಿಕ್ಷಕರೇ ಬದಲಾವಣೆಯ ಮಂತ್ರದಂಡವಾಗಿದ್ದು, ಶಿಕ್ಷಕರೇ ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಮಾಡಬೇಕು ಎಂದು ಎಂಎಲ್ಸಿ ಹಾಗೂ ಎನ್‌ಇಪಿ ಅನುಷ್ಠಾನ ಕಾರ್ಯಪಡೆ ಸದಸ್ಯರಾದ ಅರುಣ್ ಶಹಾಪುರ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ದೇಶದಲ್ಲಿಯೇ ಮೊದಲ ರಾಜ್ಯವಾಗಿ ಕರ್ನಾಟಕ ಸ್ವೀಕರಿಸಿದೆ. ಹಂತ ಹಂತವಾಗಿ ಅನುಷ್ಠಾನಕ್ಕೆ ರಾಜ್ಯ ಸರಕಾರ ತಯಾರಿ ನಡೆಸಿದ್ದು, ಪ್ರಾಥಮಿಕ ಹಂತದಿಂದ ಆರಂಭದಲ್ಲೇ ಪಠ್ಯಕ್ರಮ ಮಾಡುವ ಅವಶ್ಯವಿದೆ. ಈ ನೀತಿಯನ್ನು ಜಾರಿಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಶಿಕ್ಷಕರು ಬದಲಾಗದ ಹೊರತು ಎನ್‌ಇಪಿ ಜಾರಿ ಅಸಾಧ್ಯ, ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಓದಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕಲ್ಯಾಣದ ಹುದ್ದೆ ಭರ್ತಿಯಾಗದಿದ್ದರೆ ಅಭಿವೃದ್ಧಿ ಹೇಗೆ?
ಕಲ್ಯಾಣ ಕರ್ನಾಟಕದಲ್ಲಿ ನೇಮಕಾತಿಗಳು ಸ್ಥಗಿತಗೊಂಡರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗೋದು ಹೇಗೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಹೇಳಿದರು. ಈ ಭಾಗಕ್ಕೆ ವಿಶೇಷ ಸ್ಥಾನಮಾನ 371 ಜೆ ಜಾರಿಗೊಳಿಸಲಾಗಿದೆ. ಈ ಸ್ಥಾನಮಾನ ಪ್ರಕಾರ ಯಾವುದೇ ಆರ್ಥಿಕ ತೊಂದರೆಗಳು ನೇಮಕಾತಿಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದೆ. ಆದರೆ, ಇಂದು ಶಿಕ್ಷಕರ, ಉಪನ್ಯಾಸಕರ, ಪ್ರಾಧ್ಯಾಪಕರ ಕೊರತೆಯಿದ್ದು, ಹುದ್ದೆಗಳು ಭರ್ತಿ ಮಾಡಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮುಂದಾಗಬೇಕು. ಜತೆಗೆ ಈ ಭಾಗದ ಜಿಇಆರ್ ಹೆಚ್ಚಳಕ್ಕೆ ಮುಂದಾಗಬೇಕು ಎಂದರು.

ಪ್ರಸ್ತುತ ಶಿಕ್ಷಣದಲ್ಲಿ ಕೌಶಲ್ಯತೆಯಿಲ್ಲ. ಆದರೆ, ಹೊಸ ಶಿಕ್ಷಣ ನೀತಿಯಲ್ಲಿ ಕೌಶಲ್ಯಕ್ಕೆ ಮಹತ್ವ ಕೊಟ್ಟು, ಉತ್ಕೃಷ್ಟ ಜ್ಞಾನ, ಕೌಶಲ್ಯ ಹೆಚ್ಚಳಕ್ಕೆ ಮತ್ತು ಮಾನವೀಯ ಮೌಲ್ಯಗಳನ್ನು ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ. ಗುಣಮಟ್ಟ ಮತ್ತು ಶ್ರೇಷ್ಠತೆಗೆ ಮಹತ್ವ ನೀಡಲಾಗಿದೆ. ಸ್ವೀಕಾರ, ಸಂಸ್ಕಾರ, ಆವಿಷ್ಕಾರ ಮತ್ತು ಪರಿಷ್ಕಾರದ ತತ್ವಗಳು ನೀತಿಯಲ್ಲಿ ಒಳಗೊಂಡಿದೆ ಎಂದು ಎಬಿಆರ್‌ಎಸ್‌ಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ. ಶಿವಾನಂದ ಸಿಂಧನಕೆರಾ ಅವರು ಹೇಳಿದರು.

ಜಿ.ಎಂ. ವಿಜಯಕುಮಾರ, ಜಂಟಿ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಮಾತನಾಡುತ್ತ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಗುವಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶಿಕ್ಷಣ ನೀತಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ನವಭಾರತ ನಿರ್ಮಾಣಕ್ಕೆ ಕಾರಣ ಆಗೋಣ ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ಶಶೀಲ್ ನಮೋಶಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಸಂದೀಪ ಬೂದಿಹಾಳ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಪಿ ಯು ಕಾಲೇಜ್ ಪ್ರಾಚಾರ್ಯರಾದ ಶ್ರೀಶೈಲ, ವಿಭಾಗ ಪ್ರಮುಖ ಮಹೇಶ ಬಸರಕೋಡ, ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜುಕುಮಾರ ಪಾಟೀಲ್ ಪಾಲ್ಗೊಂಡರು. ಜಿಲ್ಲೆಯ ವಿವಿಧ ಶಾಲೆ, ಕಾಲೇಜುಗಳ ಮುಖ್ಯಶಿಕ್ಷಕರು, ಪ್ರಾಂಶುಪಾಲರು ಕೂಡ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Highslide for Wordpress Plugin